ಜ್ಞಾನಜ್ಯೋತಿ-ಕ್ರಾಂತಿಜ್ಯೋತಿ ಜ್ಯೋತಿಬಾ ಫುಲೆ

Update: 2021-04-10 19:30 GMT

‘ಅರಿವು ಮತ್ತು ಅಧಿಕಾರದ ಕೀಲಿ ಕೈಯೇ ಶಿಕ್ಷಣ’ ಎನ್ನುವುದು ಜ್ಯೋತಿಬಾರಿಗೆ ಸ್ಪಷ್ಟವಾಗತೊಡಗಿತ್ತು. ಇದರಿಂದಾಗಿ ಅಂದಿನ ಸಾಮಾಜಿಕ, ಧಾರ್ಮಿಕ, ರಾಜಕೀಯ ಸಿದ್ಧಾಂತಗಳೆಲ್ಲಾ ಅವರಲ್ಲಿ ಮರುಚಿಂತನೆಗೆ ತಿರುಗಿದವು. ಹೀಗೆ ಸಮಾಜ ಚಿಂತನೆಯ ಹೊಸ ಹೊಸ ಪ್ರಮೇಯಗಳ ಹುಡುಕಾಟ ಆರಂಭವಾಯಿತು. ಜಡ ಸಂಸ್ಕೃತಿಗಳ ನೆಲೆಯಲ್ಲೂ ತಲ್ಲಣಗಳು ಉಂಟಾಗಿ; ಮೂಢನಂಬಿಕೆಗಳನ್ನು ಪ್ರಶ್ನಿಸುವ ಪ್ರವೃತ್ತಿ ಜಾಗೃತವಾಯಿತು. ಜಾತಿ ಮತಗಳನ್ನು ಮೀರುವ ಮನಸ್ಸುಗಳಲ್ಲೂ ಶೈಕ್ಷಣಿಕ ಜ್ಯೋತಿ ಬೆಳಗ ಹತ್ತಿತು.


 

ತನ್ನ ಸಾಮಾಜಿಕ ಸುಧಾರಣೆಯ ಚಳವಳಿಯಲ್ಲಿ ಜ್ಯೋತಿಬಾ ರಚಿಸಿಕೊಂಡ ವ್ಯೆಹ ನೀತಿಯಲ್ಲಿ ‘ಸತ್ಯ ಶೋಧಕ ವಿವಾಹ ವಿಧಿ’ ಗಮನಾರ್ಹವಾದುದು. ಇದು ಒಂದೆಡೆ ಶೂದ್ರಾತಿ ಶೂದ್ರರಲ್ಲಿ ಆತ್ಮವಿಶ್ವಾಸ ಮತ್ತು ಮಾನವ ಹಕ್ಕಿನ ಅರಿವು ಮೂಡಿಸಿದರೆ ಇನ್ನೊಂದೆಡೆ ವಿವಾಹ ಮಂಟಪದಿಂದಲೇ ‘ಬಾಡಿಗೆಯ ಪುರೋಹಿತ ರನ್ನು’ ಇದು ಹೊರ ದಬ್ಬಿದ್ದಲ್ಲದೆ, ಅನಗತ್ಯ ವೆಚ್ಚ ಮತ್ತು ಮಡಿವಂತಿಕೆಗಳ ಕಸಿವಿಸಿಯಿಂದ ವಧು-ವರರ ಕುಟುಂಬಗಳಿಗೆ ಬಿಡುಗಡೆ ನೀಡಿತು.
ಜ್ಯೋತಿಬಾ ಅವರು ಸುಗುಣಬಾಯಿ ಮತ್ತು ಸಾವಿತ್ರಿಬಾಯಿಯವರ ನೆರವಿನಿಂದ ‘ಸ್ತ್ರೀ ಶಿಕ್ಷಣ’, ‘ದಲಿತ ಶಿಕ್ಷಣ’ ಮತ್ತು ‘ಸಾರ್ವಜನಿಕ ಶಿಕ್ಷಣ’ ಎಂಬ ತ್ರಿವಳಿ ದೀವಟಿಕೆ ಹಿಡಿದು ಹದಿನೆಂಟು ಶಾಲೆಗಳನ್ನು ತೆರೆದುದಲ್ಲದೆ ತನ್ನ ಅಧ್ಯಯನ ಶೀಲತೆ ಮತ್ತು ಲೋಕಾನುಭವದಿಂದ ಶಿಕ್ಷಣ ತಜ್ಞರಾಗಿ ರೂಪುಗೊಂಡರು.

ಅದನ್ನು ಕಂಡ ಅಂದಿನ ಆಂಗ್ಲ ಸರಕಾರ ಇವರ ಮನೆ ಬಾಗಿಲಿಗೆ ಬಂದು ಇವರನ್ನು ಸನ್ಮಾನಿಸುವಂತಾಯಿತು. ಬಹು ಹಿಂದೆಯೇ ಸಾರ್ವತ್ರಿಕ ಶಿಕ್ಷಣದ ಹಿನ್ನೆಲೆಯಲ್ಲಿ ಇವರು ನಡೆಸಿದ ಸಾರ್ಥಕ ಪ್ರಯೋಗಗಳಲ್ಲಿ ಹಗಲು ಶಾಲೆಗಳು, ರಾತ್ರಿ ಶಾಲೆಗಳು, ವಯಸ್ಕ ಶಾಲೆಗಳು, ಕೃಷಿ ತರಬೇತಿ ಕೇಂದ್ರಗಳು, ರಂಗ ತರಬೇತಿ ಶಿಬಿರಗಳು, ಜಾನಪದ ಗಾನ ತರಬೇತಿ ಶಿಬಿರಗಳು ಸಮಾಜದ ಕಣ್ಣು ತೆರೆಯಿಸಿದವು.

‘ಅರಿವು ಮತ್ತು ಅಧಿಕಾರದ ಕೀಲಿ ಕೈಯೇ ಶಿಕ್ಷಣ’ ಎನ್ನುವುದು ಜ್ಯೋತಿಬಾರಿಗೆ ಸ್ಪಷ್ಟವಾಗತೊಡಗಿತ್ತು. ಇದರಿಂದಾಗಿ ಅಂದಿನ ಸಾಮಾಜಿಕ, ಧಾರ್ಮಿಕ, ರಾಜಕೀಯ ಸಿದ್ಧಾಂತಗಳೆಲ್ಲಾ ಅವರಲ್ಲಿ ಮರುಚಿಂತನೆಗೆ ತಿರುಗಿದವು. ಹೀಗೆ ಸಮಾಜ ಚಿಂತನೆಯ ಹೊಸ ಹೊಸ ಪ್ರಮೇಯಗಳ ಹುಡುಕಾಟ ಆರಂಭವಾಯಿತು. ಜಡ ಸಂಸ್ಕೃತಿಗಳ ನೆಲೆಯಲ್ಲೂ ತಲ್ಲಣಗಳು ಉಂಟಾಗಿ; ಮೂಢನಂಬಿಕೆಗಳನ್ನು ಪ್ರಶ್ನಿಸುವ ಪ್ರವೃತ್ತಿ ಜಾಗೃತವಾಯಿತು. ಜಾತಿ ಮತಗಳನ್ನು ಮೀರುವ ಮನಸ್ಸುಗಳಲ್ಲೂ ಶೈಕ್ಷಣಿಕ ಜ್ಯೋತಿ ಬೆಳಗ ಹತ್ತಿತು.

ಹೀಗೆ ಜ್ಯೋತಿಬಾರ ಚಳವಳಿಯಲ್ಲಿ ಮೇಲ್ವರ್ಗದ ಕೆಲವರಾದರೂ ಭಾಗವಹಿಸಲು ಸಾಧ್ಯವಾಯಿತು. ಇದಕ್ಕೂ ಮಿಗಿಲಾಗಿ ಮೇಲ್ವರ್ಗದಲ್ಲೂ ಕುಟುಂಬ ಸುಧಾರಣೆಗೆ ಚಾಲನೆ ದೊರೆಯಿತು. ಆದರೆ ಈ ‘ಕುಟುಂಬ ಸುಧಾರಣೆ’ ಎನ್ನುವುದೇ ಸಮಾಜ ಸುಧಾರಣೆ’ ಎನ್ನುವಲ್ಲಿಗೆ ಮಿತಿಗೊಂಡಾಗ ವಂಶವಾದ ಅಳೆಯದೆನೆ; ಲಿಂಗ ಸಮಾನತೆ ಇರದ; ಕೌಟುಂಬಿಕ ಸುಧಾರಣೆಯ ಧ್ವನಿಗಳು ಸಮಾಜ ಸುಧಾರಣೆ ಎನ್ನುವ ಮರು ವ್ಯಾಖ್ಯೆ ಪಡೆದಾಗ, ಜಾತಿ ವಿನಾಶದ ಮೂಲ ಆಶಯ ಮೂಲೆ ಗುಂಪಾಯಿತು. ಇಂತಹ ಅಪಾಯಕ್ಕೆ ಒಳಗಾದ ಚರಿತ್ರೆಯ ಗತಿ ವಿಧಿಗಳೇ ಇಂದು ದಾಖಲೆಯಾಗಿ ನಮ್ಮ ಮುಂದಿದೆ.

ದಿನವಿಡೀ ಬೆವರು ಸುರಿಸಿ ಮಣ್ಣಿನಲ್ಲೇ ಮಣ್ಣಾಗುವ ‘ಉಳುವವನೇ ನೆಲದೊಡೆಯನಾಗಬೇಕು’ ಎಂಬುವುದು ಜ್ಯೋತಿಬಾ ಅವರ ಸಿದ್ಧಾಂತವಾಗಿತ್ತು. ಇದಕ್ಕಾಗಿ ಸಮಾನತೆಯ ಬಂಡಾಯದ ಬೀಜ ಬಿತ್ತಿದ ಜ್ಯೋತಿಬಾ; 1889ರಲ್ಲಿ ಮುಂಬೈಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನವನ್ನು ಜನಕ್ರಾಂತಿಯ ಆಶಯಕ್ಕೆ ಸಾಂಕೇತಿಕವಾಗಿ ಬಳಸಿಕೊಂಡರು. ಒಂದೆಡೆ ಕಾಂಗ್ರೆಸ್ ಅಧಿವೇಶನವನ್ನು ತಿರಸ್ಕರಿಸಿದ ಇವರು; ಅಂದಿನ ಅಧಿವೇಶನ ಮಂಟಪದ ಪ್ರವೇಶ ದ್ವಾರದ ಸನಿಹದಲ್ಲಿ ರೈತನ ಬೃಹದಾಕಾರದ ಪ್ರತಿಮೆಯೊಂದನ್ನು ನಿಲ್ಲಿಸಿ ಅದರಲ್ಲಿ, ‘‘ನಿಮ್ಮಲ್ಲಿ ರೈತ ಪ್ರತಿನಿಧಿಗಳೆಷ್ಟಿದ್ದಾರೆ?’’ ಎಂದು ಬರೆದು ಸವಾಲು ಒಡ್ಡಿದರು.

ಜ್ಯೋತಿಬಾರ ಈ ಸವಾಲು ಅಂದಿನ ಕಾಂಗ್ರೆಸ್ ವಕ್ತಾರರಾದ ಮೇಲ್ವರ್ಗದ ಪುರೋಹಿತಶಾಹಿ ಮತ್ತು ಭೂ ಮಾಲಕಶಾಹಿ ವಲಯದಲ್ಲಿ ಕಸಿವಿಸಿಯನ್ನು ಉಂಟು ಮಾಡಿತು. ಈ ಅಹಿಂಸಾತ್ಮಕ ಪ್ರತಿಭಟನೆಯ ಹೊಸ ಮಾದರಿಯೊಂದು ಆ ಕಾಲದಲ್ಲಿ ಕೇವಲ ವಕೀಲರು, ಡಾಕ್ಟರರು, ಭೂಮಾಲಕರ ಮಕ್ಕಳು, ವರ್ತಕರಿಗೆ ಮಾತ್ರ ‘ಬಿಡುವಿನ ಸಲ್ಲಾಪದ ಕಟ್ಟೆಯಾಗಿದ್ದ’ ಕಾಂಗ್ರೆಸ್ ಪಕ್ಷವನ್ನೇ ಒಮ್ಮೆ ನಡುಗಿಸಿತ್ತು!

ಈ ನಡುಕವೇ ಮುಂದೆ ಒಂದು ಗುಪ್ತ ‘ಅಪರಾಧಿ’ ಪ್ರಜ್ಞೆಯಾಗಿ ಗಾಂಧೀಜಿ ಬರುವವರೆಗೆ ಕಾಂಗ್ರೆಸ್ ಪಕ್ಷ ಮಂದಗತಿಯಿಂದ ಮುಂದುವರಿಯಿತು. ಅಂದಿನ ಕಾಂಗ್ರೆಸ್ ವಲಯದಲ್ಲಿದ್ದ ‘ಮಂದಗಾಮಿ’ ಮತ್ತು ‘ತೀವ್ರಗಾಮಿ’ ನೆಲೆಗಳೆರಡೂ ಜ್ಯೋತಿಬಾರ ಸವಾಲಿಗೆ ಸವಾಲೆಸೆಯದೆ ಕಕ್ಕಾಬಿಕ್ಕಿಯಾಗಿ ಬಾಲ ಮುದುಡಿಸಿತು.

ಆದರೆ ಮುಂದೆ ಗಾಂಧೀಜಿ ನೇತೃತ್ವದ ಕಾಂಗ್ರೆಸ್ 1917ರ ಚಂಪಾರಣ್ಯದ ‘ಕಾರ್ಮಿಕ ಸತ್ಯಾಗ್ರಹ’ ಮತ್ತು 1930ರ ‘ಉಪ್ಪಿನ ಸತ್ಯಾಗ್ರಹ’ಗಳೊಂದಿಗೆ ಬಡ ಜನತೆಯತ್ತ ನಡೆದುದಕ್ಕೆ ಜ್ಯೋತಿಬಾ ಅವರ ಬಂಡಾಯದ ‘ಪ್ರತಿಮೆ’ ಮತ್ತು ‘‘ನಿಮ್ಮಲ್ಲಿ ರೈತ ಪ್ರತಿನಿಧಿಗಳೆಷ್ಟಿದ್ದಾರೆ?’’ ಎಂಬ ತಾರ್ಕಿಕ ಸವಾಲೇ ಚಾರಿತ್ರಿಕ ಸಾಕ್ಷಿಯಾಗಿ ಇಂದಿಗೂ ಉಳಿದುಕೊಂಡಿದೆ.

ಜ್ಯೋತಿಬಾ ಅನ್ನದ ನೆಲೆಯಿಂದ ‘ಗದ್ದೆ’ ಮತ್ತು ‘ಗಿರಣಿಯ’ ಕಾರ್ಮಿಕರನ್ನು ಏಕಕಾಲಕ್ಕೆ ಮುಖಾಮುಖಿಯಾಗಿಸಿದ ಕೃಷಿಕರ ಸುಧಾರಕರೂ ಹೌದು. ಕಾರ್ಮಿಕ ಚಿಂತಕರೂ ಹೌದು, ಇವರ ಸತ್ಯ ಶೋಧಕರ ಗರಡಿಯಲ್ಲಿ ಪಳಗಿದ ನಾರಾಯಣ ಮೇಘಾಜಿ ಲೋಖಂಡೆ ಮಹಾರಾಷ್ಟ್ರದ ಮೊದಲ ಗಿರಣಿ ಕಾರ್ಮಿಕರ ನಾಯಕನಾಗಿ 1879ರಲ್ಲೇ ಚರಿತ್ರೆ ರಚಿಸಿದರು. ಕಾರ್ಮಿಕರ ಸ್ವಾಭಿಮಾನಕ್ಕೆ ಬೆಳಕಾದರು.

ಈ ನಾರಾಯಣ ಲೋಖಂಡೆ 1896ರಲ್ಲಿ ಮುಂಬೈಯ ಹತ್ತು ಸಾವಿರಕ್ಕೂ ಹೆಚ್ಚು ಕಾರ್ಮಿಕರನ್ನು ಸಂಘಟಿಸಿ ಕಾರ್ಮಿಕರ ಹಕ್ಕಿಗಾಗಿ ಮುಷ್ಕರ ನಡೆಸಿದರು. ಇದಕ್ಕೆ ಜ್ಯೋತಿಬಾ ಅವರ ಸಂಪೂರ್ಣ ಮಾರ್ಗದರ್ಶನ ಮತ್ತು ಬೆಂಬಲವಿತ್ತು. ವಿಶೇಷವೆಂದರೆ ಇದರಲ್ಲಿ ಮಹಿಳೆಯರು ಕೂಡಾ ಸಕ್ರಿಯವಾಗಿ ಭಾಗವಹಿಸಿದ್ದಲ್ಲದೆ; ವೇದಿಕೆಗೆ ಬಂದು ತಮ್ಮ ಹಕ್ಕನ್ನು ಒತ್ತಾಯಿಸುವ ಪ್ರಭಾವಕಾರಿ ಭಾಷಣ ಮಾಡಿದ್ದರು. ಪರಿಣಾಮವಾಗಿ ರವಿವಾರದ ರಜೆ ಮುಂಬೈಯ ಗಿರಣಿಗಳಲ್ಲೂ ಕಾರ್ಮಿಕರ ಹಕ್ಕಾಗಿ ಮಾರ್ಪಟ್ಟಿತು. ಜ್ಯೋತಿಬಾರ ಒಳಗಿದ್ದ ಕಲಾವಿದನ ಸೃಜನಶೀಲತ್ವ ಚಿಂತನೆಯ ರೂಪದಲ್ಲಿ; ಅವರು ಬರೆದ ‘ಸುಧಾರಣೆಯ ಪಕ್ಷ’ ಎಂಬ ಚಿತ್ರಕ್ಕೆ ವಿಶಿಷ್ಟ ಮಹತ್ವವಿದೆ. ಈ ಚಿತ್ರದಲ್ಲಿ ತಲೆಯ ಮೇಲೆ ಹಣ್ಣು ತುಂಬಿದ ಮರವೊಂದನ್ನು ಹೊತ್ತು ಅದರ ಭಾರಕ್ಕೆ ಬಗ್ಗಿದ ರೈತನಿದ್ದಾನೆ. ಆದರೆ ಅದನ್ನು ಲೆಕ್ಕಿಸದ ಆತನ ಭುಜ ಹತ್ತಿ ಹಣ್ಣು ಕೊಯ್ಯಲು ಪುರೋಹಿತರು, ಪಂಡಿತರು, ಸೇಠಿಯಾಗಳು, ಸಾಹುಕಾರರು, ಸರಕಾರಿ ಅಧಿಕಾರಿಗಳು ಅಲ್ಲಿ ಪೈಪೋಟಿ ನಡೆಸುತ್ತಿದ್ದಾರೆ! ಈ ರೀತಿ ರೈತನ ಬದುಕಿನ ನುಡಿಚಿತ್ರವನ್ನು ಸಾಮಾಜಿಕ ಕ್ರಾಂತಿ ಯ ಪ್ರಭಾವಕಾರಿ ಸಾಧನವಾಗಿ ಬಳಸಿಕೊಂಡ ಕಲಾವಿದರು ಜ್ಯೋತಿಬಾ.ಮಹಾರಾಷ್ಟ್ರ ದಲ್ಲಿ ಅಪ್ಪಟ ನೆಲ ಮೂಲದ ಬಹು ಸಮು ದಾಯಗಳ ‘ಮೌನಕ್ಕೆ’ ಮಾತಾದ ಪತ್ರಿಕೆ ‘ದೀನ ಬಂಧು’. ಇದರ ಸ್ಥಾಪನೆಗೆ ಪ್ರೇರಕ ಶಕ್ತಿ ಜ್ಯೋತಿಬಾ. ಮೊದಲಿಗೆ ಪುಣೆಯಲ್ಲಿ ಕೃಷ್ಣರಾವ್ ಪಾಂಡುರಂಗ ಭಾಲೇಕರ್ ಇದನ್ನು ಮುನ್ನಡೆಸಿದರೆ, ಆನಂತರ ಮುಂಬೈಯಲ್ಲಿ ನಾರಾಯಣ ಲೋಖಂಡೆ ಇದರ ಹೊಣೆ ಹೊತ್ತರು.

ಈ ಪತ್ರಿಕೆ ರೈತ ಕಾರ್ಮಿಕರ ಧ್ವನಿಯಾಯಿತು. ಇದರಲ್ಲಿ ಜ್ಯೋತಿಬಾರ ಅಂಕಣ ಬರಹಗಳೂ ಸೇರಿದಂತೆ ಇತರ ಲೇಖನಗಳು ಪ್ರಗತಿಪರ ಚಿಂತನೆಗೆ ಹೊಸ ದಾರಿ ನಿರ್ಮಿಸಿತು. ‘ದೀನಬಂಧು’ ಪತ್ರಿಕೆ ಶ್ರಮಿಕ ಶೋಷಿತರ ಧ್ವನಿಯಾಗಿ 1875ರಲ್ಲಿ ಆರಂಭವಾದರೆ; ಇದಾಗಿ ಎಂಟು ವರ್ಷದ ಆನಂತರ ಉಳ್ಳವರ ಧ್ವನಿಯಾಗಿ ಪರಂಪರೆಯ ಶಂಖವಾಗಿ ‘ಕೇಸರಿ’ ಮತ್ತು ‘ಮರಾಠ’ ಪತ್ರಿಕೆಗಳು ಆರಂಭವಾದುವು. ಆದರೆ ಇವೆರಡು ಪತ್ರಿಕೆಗಳು ಪ್ರಗತಿಪರ ಚಿಂತಕಿಯರಾದ ತಾರಾಬಾಯಿ ಶಿಂಧೆ ಮತ್ತು ರಮಾಬಾಯಿ ಪಂಡಿತ ಮೊದಲಾದ ಸ್ವಾಭಿಮಾನಿ ಸ್ತ್ರೀಯರ ತೇಜೋವಧೆಗೆ ದಾಪುಗಾಲು ಇಟ್ಟಾಗ; ಅದನ್ನು ತಡೆದು ಅದಕ್ಕೆಲ್ಲಾ ತಾರ್ಕಿಕ ಸವಾಲೆಸೆದದ್ದು ಜೋತಿಬಾ ಅವರ ಬರಹಗಳು. ಲೋಕಮಾನ್ಯ ಬಾಲ ಗಂಗಾಧರ ತಿಲಕರು ತಮ್ಮ ಸ್ವಜಾತಿಯ ಬಂಧು ರಮಾಬಾಯಿ ಪಂಡಿತರ ಚಿಂತನೆಗಳನ್ನೇ ಚಿವುಟಿ ಅವರ ವಿರುದ್ಧ ಪತ್ರಿಕಾ ಸಮರ ಸಾರಿದಾಗ ಅದನ್ನು ತಡೆದು ಪ್ರಗತಿಪರ ಚಿಂತನೆಗೆ ಬಲವಾದವರು ಜ್ಯೋತಿಬಾ.

ತನ್ನ ಬದುಕಿನುದ್ದಕ್ಕೂ ಶ್ರಮ ಮತ್ತು ಸೃಜನಶೀಲತೆಯ ಸಾಂಗತ್ಯಕ್ಕೆ ಒತ್ತು ನೀಡಿದ ಜ್ಯೋತಿಬಾ 1852ರಲ್ಲಿ ಪುಣೆಯ ವಿದ್ಯಾರ್ಥಿಗಳಿಗೆಂದು ಮೊದಲ ‘ಸಾರ್ವಜನಿಕ ವಾಚನಾಲಯ’ ತೆರೆದದ್ದು ಇವರ ದೂರದೃಷ್ಟಿಯ ಸಂಕೇತವಾಗಿದೆ. ಇಷ್ಟಲ್ಲದೆ ಅಂದಿನ ವಸಾಹತುಶಾಹಿ ಯುಗದಲ್ಲಿ ಗುರುಮನೆಯ ಭಾಷೆಯಾಗಿ ಸಂಸ್ಕೃತ, ಆಡಳಿತ ಭಾಷೆಯಾಗಿ ಇಂಗ್ಲಿಷ್‌ಗಳು ಮೆರೆಯುತ್ತಾ ಈ ದ್ವಿಭಾಷೆಗಳನ್ನು ಬಲ್ಲವರು ಮಾತ್ರ ಎಲ್ಲಾ ಸರಕಾರಿ ಸವಲತ್ತುಗಳನ್ನು ಪಡೆಯುತ್ತಿದ್ದರು. ಈ ಸವಲತ್ತುಗಳನ್ನು ಜನ ಭಾಷೆಗಳಾದ ಮರಾಠಿಯೂ ಸೇರಿದಂತೆ ಇತರ ದೇಶೀಯ ಭಾಷೆಗಳಿಗೆ ವಿಸ್ತರಿಸಿದ ಶ್ರೇಯಸ್ಸು ಕೂಡಾ ಜ್ಯೋತಿಬಾ ಅವರ ಚಳವಳಿಗೆ ಸಲ್ಲುತ್ತದೆ.

ವೈದಿಕ ಸಂಸ್ಕೃತಿಯು ಕಟ್ಟಿದ ಪುರಾಣಾಂತರ್ಗತ ‘ದಶಾವತಾರದ ಕಥೆ’ಗಳನ್ನು ಮುರಿದು ಕಟ್ಟಿದ ಜ್ಯೋತಿಬಾ ಇವೆಲ್ಲಾ ಆರ್ಯರ ಆಕ್ರಮಣದ ನುಡಿಗಳೆಂದು ಹೊಸ ವ್ಯಾಖ್ಯಾನ ನೀಡಿದ್ದಲ್ಲದೆ; ಸಾಮಂತಶಾಹಿ ಯುಗದಲ್ಲೂ ಪ್ರಗತಿಶೀಲನಾಗಿ ಮಿಂಚಿದ ಛತ್ರಪತಿ ಶಿವಾಜಿ ಮಹಾರಾಜರ ‘ರಾಯಗಢ ಸಮಾಧಿ’ ಉಪೇಕ್ಷೆಗೆ ಒಳಗಾಗಿದ್ದು ಅಲ್ಲಿ ಮುಳ್ಳು ಪೊದೆಗಳು ಆವೃತ್ತವಾಗಿದ್ದನ್ನು 1869ರಲ್ಲಿ ಶೋಧಿಸಿ ತೆಗೆದು; ಜನ ಸಾಮಾನ್ಯರಲ್ಲಿ ಐತಿಹಾಸಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದವರು ಜ್ಯೋತಿಬಾ. ಹೆಜ್ಜೆ ಹೆಜ್ಜೆಗೂ ಕೆಳ ವರ್ಗದವರ ಸೃಜನಶೀಲತೆಯನ್ನು ಕೊಲ್ಲುತ್ತಾ ಸೃಜನಶೀಲತೆಯ ಹೆಸರಿನಲ್ಲಿ ಅಮಾನವೀಯ ಸಂಸ್ಕೃತಿಗಳನ್ನು ವೈಭವೀಕರಿಸುತ್ತಾ ಮಾನವೀಯ ಹಕ್ಕುಗಳನ್ನು ಅಲ್ಲಗಳೆಯುವ ಮರಾಠಿ ಲೇಖಕರ ಸಮ್ಮೇಳನ 1885ರಲ್ಲಿ ಪುಣೆಯಲ್ಲಿ ನಡೆಯಿತು.

ಅದರಲ್ಲಿ ಭಾಗವಹಿಸಲು ತನಗೆ ಬಂದ ಆಮಂತ್ರಣಕ್ಕೆ ಕೃತಜ್ಞತೆ ವ್ಯಕ್ತಪಡಿಸುತ್ತಾ ‘‘ಶೂದ್ರಾತಿಶೂದ್ರರ ಶೋಷಣೆ ಮಾಡುವವರಲ್ಲಿ ನನಗೆ ವಿಶ್ವಾಸವಿಲ್ಲ’’ ಎಂದು ಸಮ್ಮೇಳನವನ್ನೇ ಬಹಿಷ್ಕರಿಸಿ; ತನ್ನ ಜನಪರ ನಿಲುವನ್ನು ವ್ಯಕ್ತಪಡಿಸಿದವರು ಜ್ಯೋತಿಬಾ. ಅವರು ಅಂದು ಎತ್ತಿದ ಬಂಡಾಯದ ಬಾವುಟ ಇಂದಿಗೂ ಮಹಾರಾಷ್ಟ್ರದಲ್ಲಿ ದಲಿತ ಸಾಹಿತ್ಯದ ರೂಪದಲ್ಲಿ ಗಟ್ಟಿಯಾಗಿ ಹಾರಾಡುತ್ತಾ ಇದೆ. ಇದನ್ನು ಬಲಗೊಳಿಸುವಲ್ಲಿ ಕೊಲ್ಲಾಪುರದ ಮಹಾರಾಜ ಛತ್ರಪತಿ ಶಾಹೂ ಹಾಗೂ ನಮ್ಮ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪಾತ್ರಗಳನ್ನು ಮರೆಯುವಂತಿಲ್ಲ.

ಜ್ಯೋತಿಬಾ ಅವರು ಚಿತ್ರಕಲೆ ಮತ್ತು ಪತ್ರಿಕೆಗಳನ್ನು ಜನಕ್ರಾಂತಿಯ ಮಾಧ್ಯಮ ವಾಗಿ ಬಳಸಿಕೊಂಡಂತೆ ರಂಗಭೂಮಿ ಮತ್ತು ಸಾಹಿತ್ಯಗಳನ್ನೂ ಸೃಜನಶೀಲವಾಗಿ ಬಳಸಿಕೊಂಡವರು. ಅದರ ಜೊತೆಗೆನೇ ಜಾನಪದ ರಂಗಭೂಮಿಯ ‘ತಮಾಷೆ’’ ಮತ್ತು ‘ಲಾವಣಿ’ ಕಲಾ ಪ್ರಕಾರಗಳು ಪರಂಪರೆಯ ಪೋಷಣೆಯಲ್ಲಿ ಮಂಡಿಯೂರಿದ್ದ ಕಾಲದಲ್ಲಿ ಅದನ್ನು ಜನ ಜಾಗೃತಿಯತ್ತ ಪರಿಷ್ಕರಿಸಿದ ರಂಗಸ್ಥಳದ ಸಾಧಕರು. ಇವರು ತನ್ನ ಸೃಜನಶೀಲ ಕೃತಿಗಳಾದ ‘ತೃತೀಯ ರತ್ನ’, ‘ಛತ್ರಪತಿ ಶಿವಾಜಿಯ ಪಾವ್ಹಡಾ’, ‘ಬ್ರಾಹ್ಮಣರ ಕುತಂತ್ರ’, ‘ಗುಲಾಮಗಿರಿ’, ‘ರೈತನ ಕಣ್ಣೀರು’, ‘ಸತ್‌ಸಾರಾ’, ‘ಸತ್ಯಶೋಧಕ ಸಮಾಜದ ವಿಧಿ’, ‘ಸಾರ್ವಜನಿಕ ಸತ್ಯ ಧರ್ಮ’, ‘ಅಖಂಡ’ ಇತ್ಯಾದಿ ರಚನೆಗಳಿಂದ ಸಾಹಿತ್ಯ ಮತ್ತು ರಂಗಭೂಮಿಗೆ ಹೊಸ ದಿಕ್ಕು ತೋರಿಸಿದವರು.

ಅಂದಿನ ದಿನಗಳಲ್ಲಿ ನೆಲಮೂಲದ ಬಹು ಸಮುದಾಯಗಳ ಶೋಷಣೆಯ ನೆಲೆಗಳನ್ನು ಕಂಡುಂಡ ಮರಾಠಿ ನೆಲದ ಮೂಲ ನಿವಾಸಿಗಳಲ್ಲಿ ಒಂದಾದ ‘ಭಂಡಾರಿ’ ಸಮಾಜದ ನಾಯಕ ತುಕಾರಾಮ ತಾತ್ಯ ಪಡವಲ್ ಅವರ ಸಾಮಾಜಿಕ ಚಿಂತನೆಯ ಶ್ರೇಷ್ಠ ಕೃತಿ ‘ಜಾತಿ ಭೇದ ವಿವೇಕ ಸಾರ’ 1861ರಲ್ಲಿ ಪ್ರಕಟವಾದಾಗ ಅದು ಸಂಪ್ರದಾಯದ ಕೋಟೆಯಲ್ಲಿ ಗಲಿಬಿಲಿ ಹುಟ್ಟಿಸಿತು. ಇದು ಸಾಮಾಜಿಕ ಸಮತೆಯನ್ನು ಪ್ರತಿಪಾದಿಸುವ ಮೊದಲ ಮರಾಠಿ ಕೃತಿಯಾಗಿದ್ದು, ಇದು ಪಂಡಿತ ಪರಂಪರೆಯ ‘ಅಘೋಷಿತ ಬಹಿಷ್ಕಾರ’ಕ್ಕೆ ಒಳಗಾಯಿತು!

ಅದಕ್ಕೆ ಸವಾಲಾಗಿ ಜ್ಯೋತಿಬಾ 1865ರಲ್ಲಿ ತಾನೇ ಅದರ ಮರು ಮುದ್ರಣ ಮಾಡಿಸಿ ಕೃತಿ ಮತ್ತು ಕೃತಿಕಾರನಿಗೆ ಗೌರವ ಸಲ್ಲಿಸಿದರು. ಅದೇ ರೀತಿ ಮರಾಠ ಸಮುದಾಯದ ಕ್ರಾಂತಿಕಾರಿ ಸಾಹಿತಿ ತಾರಾಬಾಯಿ ಶಿಂಧೆ ಅವರ ಕೃತಿ ‘ಸ್ತ್ರೀ ಪುರುಷ ತುಲನಾ’ ಅದರ ತಾತ್ವಿಕತೆಯನ್ನು ಅಂದು ಜ್ಯೋತಿಬಾ ಎತ್ತಿ ಹಿಡಿಯದೆ ಇರುತ್ತಿದ್ದರೆ; ಅದಿಂದು ಭಾರತೀಯ ಸಾಹಿತ್ಯದಲ್ಲೇ ಅಗ್ರ ಶ್ರೇಣಿಯ ಬಂಡಾಯ ಚಿಂತನೆಯಾಗಿ ಉಳಿಯುತ್ತಿರಲಿಲ್ಲ!

ಜ್ಯೋತಿಬಾ ಅವರಿಗೆ ಸ್ತ್ರೀ-ಶೂದ್ರರ ಬದುಕನ್ನು ಘನತೆಯಿಂದ ಕಟ್ಟುವ ಛಲವಿತ್ತು. ಈ ಛಲವೇ ಕ್ರಮವಾಗಿ ಸೃಜನಶೀಲಗೊಂಡು ಸ್ಥಗಿತ ಸಂಸ್ಕೃತಿಗಳ ಹುಸಿ ನೆಲೆಗಳನ್ನು ‘ಇಕ್ಕಿಮೆಟ್ಟುವ’ ಶಕ್ತಿಯಾಯಿತು. ಕಾವ್ಯವಾಯಿತು.

ವಿದ್ಯೆಯಿಲ್ಲದೆ ಮತಿ ಹೋಯಿತು
ಮತಿಯಿಲ್ಲದೆ ನೀತಿ ಹೋಯಿತು
ನೀತಿಯಿಲ್ಲದೆ ಗತಿ ಮುರಿಯಿತು
ಗತಿಯಿಲ್ಲದೆ ವಿತ್ತ ಕುಸಿಯಿತು
ವಿತ್ತವಿಲ್ಲದ ಶೂದ್ರರು ದೆಸೆಗೆಟ್ಟರು!
ಅವಿದ್ಯೆಯ ಅನರ್ಥಕ್ಕೆ ಮಿತಿಯೆಲ್ಲಿ!

ಎಂಬ ಜ್ಯೋತಿಬಾರ ಕಾವ್ಯವಾಣಿ ನಮ್ಮ ಸಾಮಾಜಿಕ ಅಸಮಾನತೆಯ ಬದುಕನ್ನು ಇಂದಿಗೂ ಮರು ಚಿಂತನೆಗೆ ಪ್ರೇರೇಪಿಸುತ್ತಿದೆ. ಮಹಾರಾಷ್ಟ್ರದ ಚರಿತ್ರೆಯಲ್ಲಿ ಕ್ರಿ.ಶ. 1132ರಲ್ಲಿ ಹುಟ್ಟಿದ ಚಕ್ರಧರ ಸ್ವಾಮಿ ‘ಮಹಾನುಭಾವ ಪಂಥ’ ಕಟ್ಟ ಬಹುಜನ ಸಮಾಜದ ಭಾಗವಾಗಿದ್ದ ಸ್ತ್ರೀ-ಶೂದ್ರರ ಸಮಾನತೆಯ ಬಂಡಾಯವೆದ್ದಾಗ ಅದನ್ನು ತಗ್ಗಿಸಲು ಭಗವದ್ಗೀತೆಯನ್ನು ಮುಂದಿಟ್ಟು ಜ್ಞಾನೇಶ್ವರರು ‘ವಾರಕಾರಿ’ ಎಂಬ ಭಕ್ತಿ ಪಂಥ ಕಟ್ಟಿ ದೇವರ ಮುಂದೆ ಎಲ್ಲರೂ ಸಮಾನರು ಎಂಬ ಆಧ್ಯಾತ್ಮಿಕ ಸಮಾನತೆಯ ಭ್ರಮಾಲೋಕ ನಿರ್ಮಿಸಿದರು.

ಆದರೆ ಅದನ್ನು ನಾಮದೇವ, ಚೋಖಾಮೇಳ, ತುಕಾರಾಮರು ಜನಮುಖಿ ಗೊಳಿಸಲು ಜೀವ ತೆತ್ತರು! ಇದೇ ರೀತಿ ಕ್ರಿ.ಶ. 1627ರಲ್ಲಿ ಹುಟ್ಟಿದ ಶಿವಾಜಿ ಕಾಡನ್ನೂ-ನಾಡನ್ನೂ ಬೆಸೆದು; ರಾಜಕೀಯ ಎಚ್ಚರ ಮೂಡಿಸಿದ್ದನ್ನು ಮನುವಾದಿ ಪೇಶ್ವೆಗಳು; ರಾಜಕೀಯ ಗುಲಾಮಗಿರಿಯಾಗಿ ಪಲ್ಲಟಿಸಿ; ಅಡ್ಡ ದಾರಿಗೆ ಸಾಗಿಸಿದರು. ಶಿವಾಜಿ ಹುಟ್ಟಿದ ಇನ್ನೂರು ವರ್ಷಗಳ ಆನಂತರ; ಅಂದರೆ ಕ್ರಿ.ಶ. 1827ರಲ್ಲಿ ಹುಟ್ಟಿದ ಜ್ಯೋತಿಬಾ ಅವರ ಸಾಮಾಜಿಕ ಜಾಗೃತಿಯನ್ನು ದಿಕ್ಕು ತಪ್ಪಿಸುವ ತಂತ್ರ ಗಾರಿಕೆಯ ಭಾಗವಾಗಿ; ‘‘ಭಾರತದ ಸ್ವಾತಂತ್ರ್ಯ ಚಳವಳಿ ಎಲ್ಲಿ? ಹೇಗೆ? ಯಾರಿಂದ? ಗತಿ ಪಡೆದಿದೆ’’ ಎಂಬ ಚರ್ಚೆಯನ್ನು ‘‘ಚರ್ಚೆಯೇ ಅಲ್ಲ’’ ಎಂದು ಅಲ್ಲಗಳೆಯದೆ; ನಮ್ಮ ಇಂದಿನ ಭಾರತದಲ್ಲಿ ಜನಕೇಂದ್ರಿತ ಸಮಾಜ ಎಲ್ಲಿ ನಿಂತಿದೆ? ಎಂಬ ಶೋಧನೆ ತುರ್ತಾಗಿ ನಡೆಯಬೇಕಾಗಿದೆ.

ಕೃಪೆ: ಜ್ಯೋತಿಬಾ ಬೆಳಕು-ಬೆರಗು

Writer - ರವಿ ರಾ. ಅಂಚನ್

contributor

Editor - ರವಿ ರಾ. ಅಂಚನ್

contributor

Similar News