×
Ad

ಉನ್ನತ ಸಿಖ್ ರಾಜಕಾರಣಿಯ ಒತ್ತಡಕ್ಕೆ ಮಣಿದ ಕೆನಡಾದ ಯುಬಿಸಿ

Update: 2021-04-11 21:38 IST
ಪೋಟೊ ಕೃಪೆ: theprint.in

ಚಂಡಿಗಡ,ಎ.11: ಮೂಲಭೂತವಾದಿ ಸಿಖ್ ಕಾರ್ಯಕರ್ತರ ಒತ್ತಡಕ್ಕೆ ಮಣಿದು ವಾರ್ಷಿಕ ಕಾರ್ಯಕ್ರಮವೊಂದನ್ನು ರದ್ದುಗೊಳಿಸಿದ್ದಕ್ಕಾಗಿ ವ್ಯಾಪಕ ಟೀಕೆಗೊಳಗಾಗಿರುವ ಕೆನಡಾದ ವ್ಯಾಂಕೂವರ್‌ನ ಯುನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾ (ಯುಬಿಸಿ) ಈ ಬಗ್ಗೆ ತಾನು ತನಿಖೆ ನಡೆಸುವುದಾಗಿ ತಿಳಿಸಿದೆ.

ಸಿಖ್ ನಾಯಕ ಹಾಗೂ ಬ್ರಿಟಿಷ್ ಕೊಲಂಬಿಯಾದ ಮಾಜಿ ಪ್ರಧಾನಿ ಉಜ್ಜಲ್ ದೋಸಾಂಜ್ ಅವರು ವಿವಿಯು ಒತ್ತಡಕ್ಕೆ ಮಣಿದಿರುವುದನ್ನು ಆಕ್ಷೇಪಿಸಿ ಕಟುವಾದ ಶಬ್ದಗಳಲ್ಲಿ ಬರೆದಿದ್ದ ಪತ್ರಕ್ಕೆ ಸ್ಪಂದಿಸಿರುವ ಯುಬಿಸಿಯ ಡೀನ್ ಆಫ್ ಆರ್ಟ್ಸ್ ಗೇಜ್ ಅವೆರಿಲ್ ಅವರು,ಕಾರ್ಯಕ್ರಮ ನಡೆಯಲು ಅಡ್ಡಿಯಾಗಿದ್ದ ಕಾರಣಗಳನ್ನು ತಿಳಿದುಕೊಳ್ಳಲು ತನ್ನ ತಂಡವು ತನಿಖೆಯನ್ನು ನಡೆಸಲಿದೆ ಎಂದು ಭರವಸೆ ನೀಡಿದ್ದಾರೆ. ಆದರೆ ಇದರಿಂದ ತೃಪ್ತರಾಗದ ದೋಸಾಂಜ್,ತಾನು ಇನ್ನಷ್ಟು ಪರಿಪೂರ್ಣ ಉತ್ತರವನ್ನು ಬಯಸಿರುವುದಾಗಿ ವಿವಿಗೆ ತಿಳಿಸಿದ್ದಾರೆ.

ವಿವಿಯಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಹರ್ಜಿತ್ ಕೌರ್ ಸಿಧು ಸ್ಮಾರಕ ಕಾರ್ಯಕ್ರಮವು ಆನ್‌ಲೈನ್‌ನಲ್ಲಿ ಎ.7ರಂದು ನಡೆಯಬೇಕಿತ್ತು. ಕಾರವಾನ್ ಮ್ಯಾಝಿನ್‌ನ ರಾಜಕೀಯ ಸಂಪಾದಕ ಹರ್ತೋಷ್ ಸಿಂಗ್ ಬಲ್ ಅವರು ‘ಭಾರತದಲ್ಲಿ ರೈತರ ಆಂದೋಲನದ ಬಗ್ಗೆ ದೃಷ್ಟಿಕೋನಗಳು’ಕುರಿತು ಉಪನ್ಯಾಸವನ್ನು ನೀಡಲಿದ್ದರು. ತಾನು ಪಂಜಾಬಿನ ಮಾಜಿ ಡಿಜಿಪಿ ಕೆ.ಪಿ.ಎಸ್.ಗಿಲ್ ಅವರ ಸೋದರಳಿಯನಾಗಿರುವ ಹಿನ್ನೆಲೆಯಲ್ಲಿ ವಿವಿಯಲ್ಲಿನ ಸಿಖ್ ಮೂಲಭೂತವಾದಿ ಕಾರ್ಯಕರ್ತರು ತನ್ನ ಉಪನ್ಯಾಸವನ್ನು ಪ್ರತಿಭಟಿಸಿದ್ದರಿಂದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಬಲ್ ಆರೋಪಿಸಿದ್ದರು.

ಗಿಲ್ ಪಂಜಾಬಿನಲ್ಲಿ ಉಗ್ರವಾದವನ್ನು ಅಂತ್ಯಗೊಳಿಸಿದ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಆದರೆ ಗಿಲ್ ತನ್ನ ಅಧಿಕಾರಾವಧಿಯಲ್ಲಿ ನಡೆದಿದ್ದ ಕಾನೂನುಬಾಹಿರ ಹತ್ಯೆಗಳಿಗೆ ಹೊಣೆಗಾರರಾಗಿದ್ದಾರೆ ಎನ್ನುವುದು ಸಿಖ್ ಮೂಲಭೂತವಾದಿಗಳ ಆರೋಪವಾಗಿದೆ.

ಮಾಜಿ ಸಂಸದ ಮತ್ತು ಯುಬಿಸಿಯ ಹಳೆಯ ವಿದ್ಯಾರ್ಥಿಯೂ ಆಗಿರುವ ದೋಸಾಂಜ್ ಶನಿವಾರ ವಿವಿಯ ಅಧ್ಯಕ್ಷ ಸಾಂತಾ ಜೆ.ಓನೋ ಅವರಿಗೆ ಬಹಿರಂಗ ಪತ್ರವೊಂದನ್ನು ಬರೆದು,ಕಾರ್ಯಕ್ರಮವನ್ನು ರದ್ದುಗೊಳಿಸಿರುವುದು ತನಗೆ ನೋವನ್ನುಂಟು ಮಾಡಿದೆ ಮತ್ತು ಅದು ಅತ್ಯಂತ ಕೆಟ್ಟ ನಿರ್ಧಾರವಾಗಿದ್ದು,ವಿಶ್ವದರ್ಜೆಯ ವಿವಿಗೆ ಉಚಿತವಾಗಿರಲಿಲ್ಲ ಎಂದು ತಿಳಿಸಿದ್ದರು.

 ಕಾರ್ಯಕ್ರಮವನ್ನು ರದ್ದುಗೊಳಿಸಿದರೆ ಯುಬಿಸಿಯಿಂದ ತಾನು ಪಡೆದಿರುವ ಕಾನೂನು ಪದವಿ ಪ್ರಮಾಣಪತ್ರವನ್ನು ಸುಟ್ಟುಹಾಕುವುದಾಗಿ ತಾನು ಬೆದರಿಕೆಯೊಡ್ಡಿದ್ದೆನಾದರೂ,ವ್ಯಾಂಕೂವರ್ ನಗರದ ಮಿತಿಯೊಳಗೆ ತ್ಯಾಜ್ಯಗಳನ್ನು ಸುಡಲು ಅವಕಾಶವಿಲ್ಲದ್ದರಿಂದ ಅದನ್ನು ರಿಸೈಕಲ್ ಬ್ಯಾಗ್‌ಗೆ ಎಸೆದಿರುವುದಾಗಿ ದೋಸಾಂಜ್ ಪತ್ರದಲ್ಲಿ ತಿಳಿಸಿದ್ದರು.

ಸಿಖ್ ಮೂಲಭೂತವಾದಿ ಶಕ್ತಿಗಳ ನಿರ್ಭೀತ ಟೀಕಾಕಾರರಾಗಿರುವ ದೋಸಾಂಜ್,ಸಿಕ್ಖರಿಗಾಗಿ ಪ್ರತ್ಯೇಕ ನಾಡಿಗಾಗಿ ಭಾರತವನ್ನು ವಿಭಜಿಸಲು ಪ್ರತಿಭಟನೆ ನಡೆಸುತ್ತಿರುವ ಕೆಲವು ಸಿಖ್ ಮೂಲಭೂತವಾದಿ ಶಕ್ತಿಗಳ ಒತ್ತಡಕ್ಕೆ ಮಣಿದು ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎನ್ನುವುದು ತನಗೆ ತಿಳಿದುಬಂದಿದೆ. ಶೈಕ್ಷಣಿಕ ಸ್ವಾತಂತ್ರಕ್ಕಾಗಿ ಒಮ್ಮೆ ಹೆಸರುವಾಸಿಯಾಗಿದ್ದ ಕೆನಡಾದ ವಿವಿಗಳು ಕೆಲ ಸಮಯದಿಂದ ಈ ಪ್ರತಿಷ್ಠೆಯನ್ನು ಕಳೆದುಕೊಳ್ಳುತ್ತಿವೆ ಎನ್ನುವುದು ತನ್ನ ಅನಿಸಿಕೆಯಾಗಿದೆ ಮತ್ತು ಇದಕ್ಕೆ ಯುಬಿಸಿ ಅಪವಾದವಾಗಿಲ್ಲ ಎಂದು ತನ್ನ ಪತ್ರದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News