ಗಡಿಯಲ್ಲಿನ ಉದ್ವಿಗ್ನತೆ ಶಮನಕ್ಕೆ ಭಾರತ ತೃಪ್ತಿ ಪಡಬೇಕು: ಚೀನಾ ಸೇನೆ

Update: 2021-04-11 17:16 GMT

ಬೀಜಿಂಗ್ (ಚೀನಾ), ಎ. 11: ಭಾರತ-ಚೀನಾ ಗಡಿಯಲ್ಲಿ ಈಗ ಉದ್ವಿಗ್ನತೆ ಕಡಿಮೆಯಾಗಿ ‘ಧನಾತ್ಮಕ ಪರಿಸರ’ ಸೃಷ್ಟಿಯಾಗಿದ್ದು, ಅದಕ್ಕೆ ಭಾರತ ತೃಪ್ತಿಪಡಬೇಕು ಎಂದು ಚೀನಾ ಸೇನೆ ಹೇಳಿದೆ. ಪೂರ್ವ ಲಡಾಖ್‌ನ ಉಳಿದ ಪ್ರದೇಶಗಳಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವುದಕ್ಕೆ ಸಂಬಂಧಿಸಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ನಡೆದ ಹೊಸ ಸುತ್ತಿನ ಮಾತುಕತೆಗಳು ಯಾವುದೇ ಪ್ರಗತಿಯಿಲ್ಲದೆ ಮುಕ್ತಾಯಗೊಂಡ ಬಳಿಕ ಚೀನಾ ಸೇನೆ ಈ ಹೇಳಿಕೆ ನೀಡಿದೆ.

ಎಪ್ರಿಲ್ 9ರಂದು ಕಾರ್ಪ್ಸ್ ಕಮಾಂಡರ್ ಮಟ್ಟದ 11ನೇ ಸುತ್ತಿನ ಮಾತುಕತೆಗಳು 13 ಗಂಟೆಗಳ ಕಾಲ ನಡೆದರೂ, ಯಾವುದೇ ಮುನ್ನಡೆ ಸಾಧ್ಯವಾಗಿಲ್ಲ.

ಮಾತುಕತೆಯ ಒಂದು ದಿನದ ಬಳಿಕ, ಶನಿವಾರ ಹೇಳಿಕೆಯೊಂದನ್ನು ನೀಡಿದ ಭಾರತೀಯ ಸೇನೆ, ಹಾಟ್ ಸ್ಪ್ರಿಂಗ್ಸ್, ಗೋಗ್ರ ಮತ್ತು ಡೆಪ್ಸಂಗ್ ಮುಂತಾದ ಪೂರ್ವ ಲಡಾಖ್‌ನ ಸಂಘರ್ಷಭರಿತ ಪ್ರದೇಶಗಳಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವುದಕ್ಕೆ ಸಂಬಂಧಿಸಿ ಸುದೀರ್ಘ ಮಾತುಕತೆ ನಡೆಯಿತು ಎಂದು ಹೇಳಿದೆ. ಈ ಪ್ರದೇಶಗಳ ಸ್ಥಿರತೆಯನ್ನು ಜಂಟಿಯಾಗಿ ಕಾಯ್ದುಕೊಂಡು ಬರಲು, ಹೊಸ ಸಂಘರ್ಷಗಳು ನಡೆಯದಂತೆ ತಡೆಯಲು ಹಾಗೂ ಪ್ರಸಕ್ತ ಚಾಲ್ತಿಯಲ್ಲಿರುವ ವಿವಾದಗಳನ್ನು ತ್ವರಿತವಾಗಿ ಬಗೆಹರಿಸಲು ಸಭೆಯಲ್ಲಿ ಒಪ್ಪಿಕೊಳ್ಳಲಾಯಿತು ಎಂದು ಅದು ಹೇಳಿದೆ.

ಚೀನಾ ನಿಯೋಗವು ‘ಪೂರ್ವ ನಿರ್ಧರಿತ ಮನಸ್ಥಿತಿ’ಯೊಂದಿಗೆ ಮಾತುಕತೆಗೆ ಬಂದಿತ್ತು ಹಾಗೂ ಇನ್ನಷ್ಟು ಸೇನಾ ವಾಪಸಾತಿ ವಿಚಾರದಲ್ಲಿ ಮುಂದುವರಿಯುವ ನಿಟ್ಟಿನಲ್ಲಿ ಯಾವುದೇ ಹೊಂದಾಣಿಕೆ ಮನೋಭಾವವನ್ನು ತೋರಿಸಲಿಲ್ಲ ಎಂದು ಭಾರತೀಯ ಸೇನೆ ಹೇಳಿದೆ.

   ನೂತನ ಸುತ್ತಿನ ಮಾತುಕತೆಗಳ ಬಗ್ಗೆ ಪತ್ರಿಕಾ ಹೇಳಿಕೆಯೊಂದನ್ನು ನೀಡಿರುವ ಚೀನಾದ ಸೇನೆ ‘ಪೀಪಲ್ಸ್ ಲಿಬರೇಶನ್ ಆರ್ಮಿ’, ಗಡಿ ಪ್ರದೇಶದಲ್ಲಿ ನೆಲೆಸಿರುವ ಉದ್ವಿಗ್ನತೆ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಭಾರತ ಅದಕ್ಕಾಗಿ ಸಂತೋಷಪಡಬೇಕು ಎಂದು ಹೇಳಿದೆ. ಅತ್ಯಂತ ಹೆಚ್ಚು ವಿವಾದಾಸ್ಪದ ಪ್ರದೇಶ ಪಂಗೊಂಗ್ ಸರೋವರದಿಂದ ಚೀನಾ ಸೇನೆಯು ಫೆಬ್ರವರಿಯಲ್ಲಿ ವಾಪಸಾಗಿರುವ ಘಟನೆಯನ್ನು ಚೀನಾ ಉಲ್ಲೇಖಿಸುತ್ತಿದೆ ಎಂಬುದಾಗಿ ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News