ರಶ್ಯಾದ ಸ್ಪುಟ್ನಿಕ್ 5 ಲಸಿಕೆ ಬಳಕೆಗೆ ತಜ್ಞರ ಸಮಿತಿ ಅನುಮೋದನೆ

Update: 2021-04-12 16:47 GMT

ಹೊಸದಿಲ್ಲಿ, ಎ.12: ರಶ್ಯಾದ ಕೋವಿಡ್ ಲಸಿಕೆ ಸ್ಪುಟ್ನಿಕ್ 5 ಬಳಕೆಗೆ ತಜ್ಞರ ಸಮಿತಿ ಅನುಮೋದಿಸಿದ್ದು, ಡಿಸಿಜಿಐಯ ಅನುಮೋದನೆ ದೊರೆತರೆ ಇದು ಭಾರತದಲ್ಲಿ ಕೊರೋನ ಸೋಂಕಿನ ವಿರುದ್ಧದ ಮೂರನೇ ಲಸಿಕೆಯಾಗಿ ಬಳಕೆಯಾಗಲಿದೆ ಎಂದು ಮೂಲಗಳು ಹೇಳಿವೆ.

ಹೈದರಾಬಾದ್ ಮೂಲದ ಡಾ ರೆಡ್ಡೀಸ್ ಸಂಸ್ಥೆ ಭಾರತದಲ್ಲಿ ಉತ್ಪಾದಿಸುವ ಸ್ಪುಟ್ನಿಕ್ 5 ಲಸಿಕೆ 91.6%ದಷ್ಟು ಪರಿಣಾಮಕಾರಿಯಾಗಿದೆ. ವೈದ್ಯಕೀಯ ಪರೀಕ್ಷೆಯ 3ನೇ ಹಂತದಲ್ಲಿರುವ ಸ್ಪುಟ್ನಿಕ್ 5 ಲಸಿಕೆಯನ್ನು ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ನೀಡಬೇಕೆಂದು ಕೋರಿ ಡಾ ರೆಡ್ಡೀಸ್ ಸಂಸ್ಥೆ ಫೆಬ್ರವರಿ 19ರಂದು ಅರ್ಜಿ ಸಲ್ಲಿಸಿತ್ತು.

ಕೊರೋನ ಸೋಂಕಿನ ವಿರುದ್ಧ ದೇಹದಲ್ಲಿ ಪ್ರತಿರೋಧ ಶಕ್ತಿಯನ್ನು ಲಸಿಕೆ ಯಾವ ರೀತಿ ವೃದ್ಧಿಸುತ್ತದೆ ಎಂಬ ಬಗ್ಗೆ ಅಂಕಿಅಂಶ ಸಹಿತ ವಿವರಿಸುವಂತೆ ಮತ್ತು ಲಸಿಕೆ ಪಡೆದ ಬಳಿಕ ದೇಹದಲ್ಲಿ ಆಗುವ ಅಡ್ಡಪರಿಣಾಮಗಳ ಬಗ್ಗೆ ಮಾಹಿತಿ ನೀಡುವಂತೆ ತಜ್ಞರ ಸಮಿತಿ ಸೂಚಿಸಿತ್ತು. ಡಾ ರೆಡ್ಡೀಸ್ ಸಂಸ್ಥೆ ಸಲ್ಲಿಸಿದ ಮಾಹಿತಿಯ ಪರಿಶೀಲನೆಯ ಬಳಿಕ ಲಸಿಕೆಯ ತುರ್ತು ಬಳಕೆಗೆ ತಜ್ಞರ ಸಮಿತಿ ಅನುಮೋದನೆ ನೀಡಿದೆ. ಭಾರತದ ಪ್ರಧಾನ ಔಷಧ ನಿಯಂತ್ರಕರು ಹಸಿರು ನಿಶಾನೆ ತೋರಿದರೆ ಇದನ್ನು ದೇಶದಲ್ಲಿ ಬಳಸಬಹುದಾಗಿದೆ.

ಭಾರತದಲ್ಲಿ 18 ವರ್ಷದಿಂದ 99 ವರ್ಷದವರೆಗಿನ ಸುಮಾರು 1,600 ಜನರನ್ನು ಸ್ಪುಟ್ನಿಕ್ 5 ಪ್ರಯೋಗಕ್ಕೆ ಬಳಸಲಾಗಿತ್ತು. ತಮಗೆ ನೀಡಿರುವುದು ಲಸಿಕೆಯೇ ಅಥವಾ ಪ್ರಾಯೋಗಿಕ ಔಷಧಿಯೇ ಎಂಬ ಬಗ್ಗೆ ಪ್ರಯೋಗಕ್ಕೆ ಒಳಗಾದವರಿಗೆ ಮಾಹಿತಿ ನೀಡದೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೋವಿಯತ್ ಒಕ್ಕೂಟದ ಪ್ರಪ್ರಥಮ ಅಂತರಿಕ್ಷ ಉಪಗ್ರಹದ ಹೆಸರನ್ನೇ ರಶ್ಯ ಕೊರೋನ ಸೋಂಕಿನ ವಿರುದ್ಧದ ಲಸಿಕೆಗೆ ಇರಿಸಿದೆ. ರಶ್ಯಾದ ಗಾಮಲೆಯ ಸಂಸ್ಥೆ ಅಭಿವೃದ್ಧಿಪಡಿಸಿರುವ 2 ಡೋಸ್ ಲಸಿಕೆಯ ಒಂದು ಬಾಟಲ್‌ಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 700ರೂ. ದರವಿದೆ. ಯುಎಇ, ವೆನೆಝುವೆಲ ಮತ್ತು ಬೆಲಾರೂಸ್‌ನಲ್ಲಿ ಈ ಲಸಿಕೆ ಪರೀಕ್ಷಾ ಪ್ರಯೋಗದ ಹಂತದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News