ಅಂಬೇಡ್ಕರ್ ಪರಿಕಲ್ಪನೆಯಲ್ಲಿ ಪ್ರಜಾಪ್ರಭುತ್ವ

Update: 2021-04-12 19:30 GMT

ಪ್ರಜಾಪ್ರಭುತ್ವಕ್ಕೆ ಸರ್ವಮನ್ನಣೆಯನ್ನು ನೀಡಿರುವ ಅಂಬೇಡ್ಕರ್ ಅವರು ಅದರ ತಿಳುವಳಿಕೆಗೆ ಆತ್ಮಸಾಕ್ಷಿಯನ್ನು ಬಯಸುತ್ತಾರೆ. ಏಕೆಂದರೆ ಆ ಮೌಲ್ಯಗಳು ಸಂವಿಧಾನದಲ್ಲಿ ಸಿಗುವುದಿಲ್ಲ. ಪ್ರಜಾಪ್ರಭುತ್ವದಿಂದಲೇ ಅದನ್ನು ಕಲಿತರೆ ಸಂವಿಧಾನವು ಮೌಲ್ಯಯುತವಾಗಿ ಸಾರ್ಥಕಗೊಳ್ಳಲಿದೆ. ಹಾಗಾದಾಗ ಮಾತ್ರ ರಾಜಕೀಯ ಸಿದ್ಧಾಂತ ಮತ್ತು ಧಾರ್ಮಿಕ ಕಟ್ಟಳೆಗಿಂತಲೂ ಮಾನವೀಯ ಮೌಲ್ಯಗಳು ಬಹಳ ಮುಖ್ಯವಾಗುತ್ತವೆ.


ಭಾರತಕ್ಕೆ ಭವಿಷ್ಯವಿಲ್ಲ. ನಿಮಗೆ ಸ್ವಾತಂತ್ರ್ಯ ಕೊಟ್ಟರೂ ಸರಿಯಾಗಿ ಆಳಲಾರಿರಿ ಎನ್ನುವ ಬ್ರಿಟಿಷರ ಮಾತುಗಳಲ್ಲಿ ಸತ್ಯಾಂಶವಿತ್ತು. ಏಕೆಂದರೆ ಚಾತುರ್ವರ್ಣ ಪದ್ಧತಿಯ ಆಡಳಿತದಿಂದಾಗಿ ಮತ್ತಷ್ಟು ವೈಷಮ್ಯವೇ ಮರುಕಳಿಸುತ್ತದೆಂಬುದು ಅವರಲ್ಲಿ ಸ್ಪಷ್ಟವಾಗಿತ್ತು. ಬುದ್ಧ, ಬಸವಣ್ಣನ ನಂತರದ ಸುಧಾರಣಾವಾದಿಗಳು ಧಾರ್ಮಿಕ ವಿಚಾರಗಳನ್ನು ಮುಂದುಮಾಡಿ ಸಾಮಾಜಿಕ ಪರಿವರ್ತನೆಗೆ ಪ್ರಯತ್ನಿಸಿದರಾದರೂ ಜನರನ್ನು ವೈಚಾರಿಕವಾಗಿ ಗಟ್ಟಿಗೊಳಿಸಲಿಲ್ಲ. ಚಾತುರ್ವರ್ಣ ಪದ್ಧತಿಯಲ್ಲಿ ನಂಬಿಕೆ ಹೊಂದಿದ್ದ ಗಾಂಧಿಯ ವಿಚಾರಗಳು ಆಧುನಿಕ ಭಾರತವನ್ನು ಮುನ್ನಡೆಸುವಲ್ಲಿ ವಿಫಲವಾದವು. ಅಂಬೇಡ್ಕರ್ ಮಾತ್ರ ಭಾರತದ ಭವಿಷ್ಯವನ್ನು ರೂಪಿಸಿದರು. ಬ್ರಿಟಿಷ್ ಆಳ್ವಿಕೆಯು ಕೊನೆಗೊಂಡ ನಂತರ ಸ್ವಾತಂತ್ರ್ಯ ಸಿಕ್ಕಿದೆ ಎಂಬ ಕಲ್ಪನೆ ರೂಢಿಸಿಕೊಂಡಿದ್ದೇವೆ. ಅದನ್ನು ಯಾವ ರೂಪದಲ್ಲಿ ಪಡೆದಿದ್ದೇವೆ ಎಂಬುದರ ಕುರಿತು ಯೋಚಿಸಿದರೆ ಕೆಲವು ಜಿಜ್ಞಾಸೆಗಳು ಹುಟ್ಟಿಕೊಳ್ಳುತ್ತವೆ. ಅದಕ್ಕೆ ಉತ್ತರಗಳು ಸಿಗುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳಿಂದ ಮಾತ್ರ ಸಾಧ್ಯ. ಸ್ವಾತಂತ್ರ್ಯಪೂರ್ವದಲ್ಲಿ ಜನರು ಮುಕ್ತ ಜೀವನಕ್ಕಾಗಿ ಏನೆಲ್ಲಾ ಕಳೆದುಕೊಂಡಿದ್ದರೋ ಅದೆಲ್ಲವನ್ನು ಪ್ರಜಾಪ್ರಭುತ್ವ ಕಲ್ಪಿಸಿಕೊಟ್ಟಿದೆ. ಆದರೆ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಬಹುತೇಕ ಜನರು ಸರಿಯಾಗಿ ಅರ್ಥೈಸಿಕೊಂಡಿಲ್ಲ. ಹೆಚ್ಚಿನವರು ಸರಕಾರವನ್ನೇ ಪ್ರಜಾಪ್ರಭುತ್ವವೆಂದೂ, ಕೆಲವರಿಗೆ ಜೈಕಾರದ ಪದವಾಗಿ ಪರಿಚಯವಿದೆ. ಸಂವಿಧಾನ ರಚಿಸಿ, ಪ್ರಜಾಪ್ರಭುತ್ವ ಜಾರಿಯಾದ ಮಾತ್ರಕ್ಕೆ ಸ್ವಯಂ ತೃಪ್ತಿ ಪಟ್ಟು ಕೂರುವ ಹಾಗಿಲ್ಲ. ಅದರ ರಕ್ಷಣೆಗೆ ನಿಲ್ಲಬೇಕು.

ಪ್ರಜಾತಂತ್ರವು ಕಾಲದೊಂದಿಗೆ, ಜನರೊಂದಿಗೆ ಹೊಂದಿ ಬಾಳುವ ಚಲನಶೀಲ ಗುಣ ಹೊಂದಿದೆ. ಮನುಷ್ಯಪ್ರೀತಿಯ ಸೌಂದರ್ಯವನ್ನು, ನೈತಿಕ ಜೀವನ ಕ್ರಮವನ್ನು ತಿಳಿಸುವ ಪ್ರಜಾಪ್ರಭುತ್ವದ ಆಶಯಗಳನ್ನು ತಿಳಿಯುವುದು ಈ ಹೊತ್ತಿಗೆ ಅತ್ಯಂತ ಅಗತ್ಯಗಳಲ್ಲಿ ಒಂದು. ಸಾಮಾಜಿಕ ಸುಧಾರಣೆಯನ್ನು ಬಯಸಿದ ಅಂಬೇಡ್ಕರ್ ಅವರು ದೀನ ದಲಿತರ ಯೋಗಕ್ಷೇಮ, ಲಿಂಗ ಸಮಾನತೆ, ಮುಕ್ತ ಜೀವನ, ಮಾನವ ಹಕ್ಕುಗಳು, ಸಾಮಾಜಿಕ-ಆರ್ಥಿಕ ನ್ಯಾಯ, ರಾಜಕೀಯ ನ್ಯಾಯ, ಶಾಂತಿ, ಸುರಕ್ಷತೆಯಲ್ಲಿ ಉತ್ತಮ ಜೀವನವನ್ನು ಕಲ್ಪಿಸುವ ಉದ್ದೇಶ ಹೊಂದಿದ್ದರು. ನಿರುಂಕುಶ, ಸರ್ವಾಧಿಕಾರ ಮತ್ತು ರಾಜಾಡಳಿತದಲ್ಲಿ ಈ ಹಕ್ಕುಗಳ ಜಾರಿಗೆ ಸಾಧ್ಯವಿರಲಿಲ್ಲ. ಆದರೆ ಪ್ರಜಾಪ್ರಭುತ್ವದಿಂದ ಸಾಧ್ಯವಿತ್ತು. ಅದಕ್ಕಾಗಿ ಪ್ರಜಾತಂತ್ರವನ್ನು ಆಯ್ದರು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವಗಳೇ ಪ್ರಜಾಪ್ರಭುತ್ವದ ಜೀವಾಳ. ಸ್ವಾತಂತ್ರ್ಯವಿಲ್ಲದೆ ಸಮಾನತೆ ಇರುವುದಿಲ್ಲ. ಸಮಾನತೆ ಇಲ್ಲದೆ ಭ್ರಾತೃತ್ವ ಬರುವುದಿಲ್ಲ. ಪ್ರಜಾಪ್ರಭುತ್ವ ಅಳವಡಿಸಿಕೊಂಡ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ದೇಶಗಳಲ್ಲಿ ಭ್ರಾತೃತ್ವವೇ ಜೀವಾಳ. ಇದನ್ನೇ ಬುದ್ಧ ‘ಮೈತ್ರಿ’ ಎಂದು ಕರೆದಿದ್ದಾರೆ. ಈ ಸಹೋದರತ್ವವಿಲ್ಲದ ಕಾರಣಕ್ಕೆ ಶೋಷಿತ ಸಮುದಾಯಗಳು ಶತಮಾನಗಳ ನೋವನ್ನು ಉಣ್ಣಬೇಕಾಯಿತು.

ದಲಿತರಿಗೆ ಪ್ರತ್ಯೇಕ ರಾಜ್ಯ, ಹಿಂದೂಕೋಡ್ ಬಿಲ್, ವಿವಾಹಕಾಯ್ದೆ, ಮೀಸಲಾತಿ, ಕಾರ್ಮಿಕ ಕಾಯ್ದೆ, ಧಾರ್ಮಿಕ ಮತ್ತು ಆಸ್ತಿ ಹಕ್ಕು, ಮಹಿಳಾ ಮೀಸಲಾತಿ, ಮೂಲಭೂತ ಹಕ್ಕುಗಳನ್ನು ಜಾರಿಗೆ ತರುವಾಗಲೂ ಪ್ರತಿರೋಧ ಒಡ್ಡಿದರು. ಆದರೂ ಹಿಂಸೆಯ ಹಾದಿಗೆ ಇಳಿಯಲಿಲ್ಲ. ಯಾರನ್ನೂ ಪ್ರೇರೇಪಿಸಲಿಲ್ಲ. ಅಂಬೇಡ್ಕರ್ ಬುದ್ಧನ ಅಹಿಂಸಾ ತತ್ವದಿಂದ ಪ್ರೇರಣೆ ಪಡೆದಿದ್ದರಿಂದ ಗಾಂಧಿಯ ಅಹಿಂಸಾ ತತ್ವವನ್ನು ಮೀರಿದ್ದರು. ಹಿಂದೂ ಧರ್ಮವನ್ನು ಕಟುವಾಗಿ ಟೀಕಿಸುತ್ತಾರಾದರೂ ಸಂವಿಧಾನದ ರಚನೆಯಲ್ಲಿ ಎಲ್ಲಾ ಧರ್ಮೀಯರೂ ಒಂದೇ ಎಂದು ಕಾನೂನಿನ ಮುಂದೆ ಸಮಾನವಾಗಿಸಿದರು. ಏಕೆಂದರೆ ಸ್ವಾತಂತ್ರ್ಯ, ಸಮಾನತೆಯ ತತ್ವ ಅವರ ಉಸಿರಾಗಿತ್ತು. ಇದಕ್ಕಾಗಿ ಎರಡು ಸಂಗತಿಗಳನ್ನು ಸ್ಪಷ್ಟಪಡಿಸುತ್ತಾರೆ. ಒಂದನೆಯದು ಸಹಮಾನವರೊಂದಿಗೆ ಜ್ಯಾತ್ಯತೀತ ಮನೋಭಾವ ಮೂಡಿಸಿ ಸಮಾನತೆಯನ್ನು ತರುವುದು, ಎರಡನೆಯದು ಸಾಮಾಜಿಕ ಅಡೆತಡೆಗಳಿಲ್ಲದೆ ಮನುಷ್ಯ ಸಂಬಂಧಗಳಲ್ಲಿ ಹೊಂದಾಣಿಕೆ ಸಾಧಿಸಿ ಮುಕ್ತವಾಗಿ ಬದುಕುವುದು.

ಆ ಮೂಲಕ ಯಾರ ಮೇಲೂ ನಿಯಂತ್ರಣ ಸಾಧಿಸದೆ, ಜನರ ಕಲ್ಯಾಣವನ್ನು ಕ್ರಮಬದ್ಧವಾಗಿಸುವ ಜೀವಪರ ತತ್ವಗಳನ್ನು, ನೈತಿಕ ಮೌಲ್ಯಗಳನ್ನು ಸಾಧಿಸುವ ನೈಜಗುರಿಯನ್ನು ಪ್ರಜಾತಂತ್ರ ಹೊಂದಿದೆ. ವಿಶ್ವದ ಇತರ ದೇಶಗಳಲ್ಲಿ ಭ್ರಾತೃತ್ವ, ಸ್ವಾತಂತ್ರ್ಯ, ಸಮಾನತೆಗಳೇ ಪ್ರಜಾಪ್ರಭುತ್ವದ ಶ್ರೇಷ್ಠವಾದ ಅಂಶಗಳೆಂದಿದ್ದಾರೆ. ಈ ಕುರಿತು ವಾಲ್ಟೆರ್ ಬಾಗೆಹಾಟ್‌ನು ‘‘ಚರ್ಚೆಯಿಂದ ಸರಕಾರ’’ ಎಂದರೆ, ಅಬ್ರಹಾಂ ಲಿಂಕನ್‌ರು ‘‘ಜನರ ಸರಕಾರ, ಜನರಿಂದ ಸರಕಾರ ಮತ್ತು ಜನರಿಗಾಗಿ ಸರಕಾರ’’ ಎಂದು ಹೇಳುತ್ತಾರೆ. ರಕ್ತಪಾತವಿಲ್ಲದೆ ಪ್ರಜೆಗಳ ಆರ್ಥಿಕ ಮತ್ತು ಸಾಮಾಜಿಕ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಸರಕಾರದ ಒಂದು ಸ್ವರೂಪ ಮತ್ತು ವಿಧಾನವೆಂದು ಅಂಬೇಡ್ಕರ್ ಅವರು ಹೇಳಿದ್ದಾರೆ. ಈ ಹೇಳಿಕೆಯನ್ನು ಗಮನಿಸಿದರೆ ಪ್ರಜಾಪ್ರಭುತ್ವವು ಚಲನಶೀಲವಾದದ್ದು, ಕಾಲಕ್ಕೆ ತಕ್ಕಂತೆ ಬದಲಾವಣೆ ಬಯಸುತ್ತದೆ ಮತ್ತು ಸನ್ಮಾರ್ಗದಲ್ಲಿ ಚಲಿಸುವಂತೆ ಮಾಡುತ್ತದೆ. ಅಹಿಂಸಾ ಮಾರ್ಗದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳಿಗಾಗಿ ಪರ-ವಿರೋಧಗಳ ಚರ್ಚೆಯಲ್ಲಿ ಮೌಲ್ಯಯುತ ವಿಷಯಗಳ ಬಗ್ಗೆ ಹೊಂದಾಣಿಕೆ ಸಾಧಿಸುವುದಾಗಿದೆ. ಈ ನಡೆಯು ಅಭಿವೃದ್ಧಿಗೆ ಪೂರಕವಾಗಿ ಜನರ ಆರ್ಥಿಕ ಭದ್ರತೆಗೂ ಅವಕಾಶವಿರುತ್ತದೆ. ಕಾನೂನಿನಡಿಯಲ್ಲಿ ಆಳುವವನು ಮತ್ತು ಆಳಿಸಿಕೊಳ್ಳುವವನ ನಡುವೆ ವ್ಯಾತ್ಯಾಸವಿಲ್ಲದೆ ಸಮಾಜದಲ್ಲಿ ನೈತಿಕ ಶಿಸ್ತಿನಿಂದ, ಕಾನೂನಿನ ತೊಡಕಿಲ್ಲದೆ ಮುಕ್ತವಾಗಿಸುತ್ತದೆ. ಜನರು ಸರ್ವವಿಧದಲ್ಲೂ ಸ್ವಾತಂತ್ರ್ಯದಿಂದ ಜೀವಿಸಲು ಅಂಬೇಡ್ಕರ್ ಅವರು ಭಾರತದ ಪ್ರಜಾಪ್ರಭುತ್ವವನ್ನು ಮೂರು ಹಂತಗಳಲ್ಲಿ ವಿವರಿಸುತ್ತಾರೆ.

1. ಸಾಮಾಜಿಕ ಪ್ರಜಾಪ್ರಭುತ್ವ

2. ಆರ್ಥಿಕ ಪ್ರಜಾಪ್ರಭುತ್ವ

3. ರಾಜಕೀಯ ಪ್ರಜಾಪ್ರಭುತ್ವ.

ರಾಜಕೀಯ ಪ್ರಜಾಪ್ರಭುತ್ವದ ಜೊತೆಗೆ ಸಂವಿಧಾನದ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಪ್ರಜಾಪ್ರಭುತ್ವವನ್ನು ನೀಡಿರುವುದು ಗಮನಾರ್ಹವಾದದ್ದು. ಏಕೆಂದರೆ ರಾಜಕೀಯ ಪ್ರಜಾಪ್ರಭುತ್ವವು ಬದಲಾಯಿಸುವ ಶಕ್ತಿಹೊಂದಿದೆ. ಆದರೆ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವವಿಲ್ಲದೆ ರಾಜಕೀಯ ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲ. ಸಂವಿಧಾನವನ್ನು ಒಂದು ಹಂದರ ಮಾತ್ರ ಎನ್ನುವ ಅಂಬೇಡ್ಕರ್ ಅವರು ಈ ಹಂತಗಳನ್ನು ಮನುಷ್ಯ ದೇಹದ ಅಂಗ, ಮಾಂಸಖಂಡಗಳಿದ್ದಂತೆ ಎನ್ನುತ್ತಾರೆ. ಅವುಗಳು ಬಲಗೊಂಡಷ್ಟು ದೇಹ ಗಟ್ಟಿಮುಟ್ಟಾಗಲು ಸಾಧ್ಯ. ಸಾಮಾಜಿಕ ಮತ್ತು ಆರ್ಥಿಕ ಪ್ರಜಾತಂತ್ರದಿಂದ ಪುಷ್ಟಿ ಪಡೆದು ಬೆಳೆಯುವ ರಾಜಕೀಯ ಪ್ರಜಾತಂತ್ರದ ಸಾರ್ಥಕತೆಯನ್ನು ಸಕಾರಗೊಳಿಸಲು ಸಂಸದೀಯ ಸರಕಾರವನ್ನು ಸಂವಿಧಾನದಲ್ಲಿ ಆಳವಡಿಸಲಾಗಿದೆ. ಹೀಗಾಗಿ ಸರಕಾರಕ್ಕಿಂತ ಪ್ರಜಾಪ್ರಭುತ್ವವೇ ಹೆಚ್ಚಿನದು. ಭಿನ್ನ ಧರ್ಮ, ಜಾತಿ, ಭಾಷೆ, ಸಂಸ್ಕೃತಿಗಳನ್ನು ಪ್ರತಿನಿಧಿಸುವ ಈ ವ್ಯವಸ್ಥೆಯು ಸಾಂಘಿಕ ಜೀವನದ ಒಂದು ಮಾದರಿಯಾಗಿದೆ. ಸರಕಾರದ ಯೋಜನೆ, ಆಶಯ, ಮೌಲ್ಯಗಳ ಬಗ್ಗೆ ಒಮ್ಮತದ ಅಭಿಪ್ರಾಯಗಳು ಮೂಡಿ ಕಾಯ್ದೆಗಳಾಗಲಿ, ಯೋಜನೆಗಳಾಗಲಿ ಜಾರಿಗೆ ಬರಬೇಕು. ಸಂಸದೀಯ ಸರಕಾರವನ್ನು ಜನರು ಸಹ ತನ್ನ ಹಕ್ಕು, ಬಾಧ್ಯತೆಗಳ ಮೇಲೆ ಹೇರಿದ ನಿರ್ಬಂಧವನ್ನು ವಿರೋಧಿಸುವ ಹಾಗೂ ಪ್ರಶ್ನಿಸುವ ಅಧಿಕಾರವನ್ನು ಹೊಂದಿರುತ್ತಾರೆ. ಹಕ್ಕೊತ್ತಾಯದ ಪ್ರಾಮುಖ್ಯತೆ ಬಾಧ್ಯತೆಯು ಪ್ರಜೆಗಳ ಮೇಲೆ ಇರುವ ಹಾಗೆ, ಕಾನೂನು ಪಾಲಿಸುವಲ್ಲಿ ಸಮನ್ವಯತೆಯಿರದಿದ್ದಲ್ಲಿ ಸಂಸತ್ ಸದಸ್ಯರು ಹಾಗೂ ರಾಷ್ಟ್ರಪತಿಗಳು ವಿರೋಧಿಸುವ ಅವಕಾಶವಿರುತ್ತದೆ. ಆದರೆ ತಿಕ್ಕಾಟವನ್ನು ಪ್ರಜಾತಂತ್ರವು ಬಯಸುವುದಿಲ್ಲ. ಜನರಿಗಾಗಿ ಹೊಂದಿ ಬಾಳುವ ಸಮನ್ವಯತೆಯ ಗುಣ ಸಂಸತ್ತಿನಲ್ಲಿ ಹೊಂದಿರಬೇಕಾಗುತ್ತದೆ.

ಪ್ರಜಾಸತ್ತಾತ್ಮಕ ಸರಕಾರದಲ್ಲಿ ಒಂದೇ ಪಕ್ಷವು ಹೆಚ್ಚು ಕಾಲ ಆಡಳಿತದಲ್ಲಿದ್ದರೆ ಸ್ವಂತ ಹಿತಾಸಕ್ತಿಗೆ, ಅನುಕೂಲಸಿಂಧು ರಾಜಕಾರಣಕ್ಕೆ ಕಾರಣವಾಗುತ್ತದೆ. ಅದು ಪ್ರಜಾತಂತ್ರಕ್ಕೆ ಹಾನಿಯನ್ನು ಉಂಟು ಮಾಡುತ್ತದೆ. ಸುದೀರ್ಘ ಏಕಪಕ್ಷ ಆಡಳಿತವಿದ್ದರೆ ದಬ್ಬಾಳಿಕೆಯ ಸರಕಾರವಾಗುತ್ತದೆ. ಇದನ್ನು ತಪ್ಪಿಸುವುದಕ್ಕೆ ನಿಷೇಧ ಮತ (veto) ಚಲಾವಣೆಯಲ್ಲಿದೆ. ಬಹುಮತದ ಆಧಾರದ ಮೇಲೆ ಜನಪರವಲ್ಲದ ಸರಕಾರವನ್ನಾಗಲಿ, ಜನಹಿತವಲ್ಲದ ಕಾಯ್ದೆಗಳನ್ನು ತಡೆಹಿಡಿಯಬಹುದಾಗಿದೆ. ಇಲ್ಲವಾದರೆ ಉಳ್ಳವರು ಮತ್ತು ಇಲ್ಲದವರ ನಡುವಿನ ತಾರತಮ್ಯ ಉಂಟಾಗಿ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗುತ್ತದೆ. ವಂಶ ಪಾರಂಪರ್ಯವು ಎಲ್ಲಿ ಅಧಿಕಾರಕ್ಕಾಗಿ ತನ್ನ ಪ್ರಭಾವವನ್ನು ಬೀರುತ್ತದೆಯೋ ಅಲ್ಲಿ ಪ್ರಜಾಪ್ರಭುತ್ವ ಮತ್ತು ಸ್ವರಾಜ್ಯ ಬರೀ ಸುಳ್ಳು ಬೂಟಾಟಿಕೆಗಳಿಂದ ಕೂಡಿರುತ್ತದೆ. ಆಗ ಪ್ರಜೆಗಳು ಸ್ವಾತಂತ್ರ್ಯ ಕಳೆದುಕೊಳ್ಳುತ್ತಾರೆ. ಇದಕ್ಕಾಗಿ ನಿಷೇಧ ಮತ ಮುಖ್ಯವಾಗುತ್ತದೆ. ಒಂದು ಪಕ್ಷಕ್ಕೆ ಸೀಮಿತಗೊಳಿಸದೆ ಅಧಿಕಾರ ವಿಕೇಂದ್ರೀ ಕರಣಗೊಳ್ಳುವ ಸಲುವಾಗಿ ಆಡಳಿತ ಪಕ್ಷಕ್ಕೆ ಇರುವಷ್ಟೇ ಪ್ರಾಧ್ಯಾನತೆಯನ್ನು ವಿರೋಧಪಕ್ಷಗಳಿಗೂ ನೀಡಿದೆ.

ದೇಶವ್ಯಾಪಿ ಒಂದೇ ಪಕ್ಷ ಅಧಿಕಾರಕ್ಕೆ ಬಂದರೆ ಸರ್ವಾಧಿಕಾರಕ್ಕೆ ಕಾರಣವಾಗುತ್ತದೆ. ಕಾನೂನು ಕಾಯ್ದೆಗಳನ್ನು ತನ್ನಿಚ್ಛೆಯಂತೆ ಜಾರಿ ಮಾಡಬಹುದಾದ ಸಾಧ್ಯತೆಯಿರುತ್ತದೆ. ಅದಕ್ಕಾಗಿ ಬಹುಹಂತದ ಚುನಾವಣೆಗಳು ಅವಶ್ಯಕ. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರಕ್ಕೆ ಬಂದರೆ ಕೇಂದ್ರ ಸರಕಾರಕ್ಕೂ ಕಡಿವಾಣ ಹಾಕಿದಂತಾಗುತ್ತದೆ. ಮೂಲಭೂತ ಹಕ್ಕುಗಳ ರಕ್ಷಣೆಯಾದರೆ ಮಾತ್ರ ಆದರ್ಶ ಸಮಾಜದ ಕನಸು ನನಸಾಗಲು ಸಾಧ್ಯವಾಗುತ್ತದೆ. ಇಂತಹ ಆದರ್ಶ ಸಮಾಜದಲ್ಲಿ ಒಂದು ವರ್ಗವಾಗಲಿ, ವ್ಯಕ್ತಿಯಾಗಲಿ, ಪಕ್ಷವಾಗಲಿ ಸರಕಾರದಲ್ಲಿ ತನ್ನ ಕೈವಾಡ ತೋರಿಸಲು ಅವಕಾಶಕೊಟ್ಟರೆ ಅಂತಹ ಪ್ರಕ್ರಿಯೆಯು ಪ್ರಜಾಪ್ರಭುತ್ವದ ವಿರೋಧಿಯೂ, ವಿಧ್ವಂಸಕಾರಿಯೂ ಆಗುತ್ತದೆ. ಪ್ರಜಾಪ್ರಭುತ್ವಕ್ಕೆ ಸರ್ವಮನ್ನಣೆಯನ್ನು ನೀಡಿರುವ ಅಂಬೇಡ್ಕರ್ ಅವರು ಅದರ ತಿಳುವಳಿಕೆಗೆ ಆತ್ಮಸಾಕ್ಷಿಯನ್ನು ಬಯಸುತ್ತಾರೆ.

ಏಕೆಂದರೆ ಆ ಮೌಲ್ಯಗಳು ಸಂವಿಧಾನದಲ್ಲಿ ಸಿಗುವುದಿಲ್ಲ. ಪ್ರಜಾಪ್ರಭುತ್ವದಿಂದಲೇ ಅದನ್ನು ಕಲಿತರೆ ಸಂವಿಧಾನವು ಮೌಲ್ಯಯುತವಾಗಿ ಸಾರ್ಥಕಗೊಳ್ಳಲಿದೆ. ಹಾಗಾದಾಗ ಮಾತ್ರ ರಾಜಕೀಯ ಸಿದ್ಧಾಂತ ಮತ್ತು ಧಾರ್ಮಿಕ ಕಟ್ಟಳೆಗಿಂತಲೂ ಮಾನವೀಯ ಮೌಲ್ಯಗಳು ಬಹಳ ಮುಖ್ಯವಾಗುತ್ತವೆ. ಮಾನವೀಯ ಸಂಬಂಧಗಳ ಮಾರ್ಗದರ್ಶಿಯಾಗಿ, ಪ್ರತಿಯೊಬ್ಬರನ್ನು ಗೌರವಯುತವಾಗಿ ಜೀವನ ನಡೆಸುವಂತೆ ಮಾಡುವುದು, ರಕ್ಷಣೆ ಕೊಡುವುದು ಪ್ರಜಾಪ್ರಭುತ್ವ ರಾಷ್ಟ್ರದ ಕರ್ತವ್ಯವಾಗಿರುತ್ತದೆ. ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ನೀತಿಗಳನ್ನು ಜನರಿಗೆ ಕೊಟ್ಟಾಗ ಪ್ರಜೆಗಳಾದ ನಾವು ಪ್ರಜಾಪ್ರಭುತ್ವಕ್ಕೆ ನೀಡಿದ್ದಾದರೂ ಏನು ಎಂಬ ಬಗ್ಗೆಯೂ ಯೋಚಿಸಬೇಕು? ಇಲ್ಲಿಂದ ಪಡೆದ ಸ್ವಾತಂತ್ರ್ಯವನ್ನು, ಕಲಿತ ನೈತಿಕ ಮೌಲ್ಯಗಳನ್ನು ಅದರ ರಕ್ಷಣೆಗೆ ಉಪಯೋಗಿಸಬೇಕೇ ಹೊರತು ಪ್ರಜಾಪ್ರಭುತ್ವದ ಆಶಯಗಳನ್ನು ಬುಡಮೇಲು ಮಾಡುವ ಶತ್ರುಗಳ ಜೊತೆಗೆ ಕೈ ಜೋಡಿಸುವುದಲ್ಲ. ಜನರಲ್ಲಿ ಒಮ್ಮತದ ಅಭಿಪ್ರಾಯವಿದ್ದರೆ ಸರ್ವಾಧಿಕಾರದಂತಹ ಸರಕಾರಗಳನ್ನು ತಪ್ಪಿಸಬಹುದು. ಇಲ್ಲವಾದರೆ ಪ್ರಜಾತಂತ್ರವನ್ನು ಇಳಿಸಿ ಸರ್ವಾಧಿಕಾರ, ಸೈನ್ಯಾಧಿಕಾರ ಸ್ಥಾಪಿಸುವುದಕ್ಕೆ ಜನರೇ ಕಾರಣವಾಗಿ ಸ್ವಾತಂತ್ರ್ಯ ಕಳೆದುಕೊಂಡಂತಾಗುತ್ತದೆ ಎಂಬುದು ಅಂಬೇಡ್ಕರ್‌ರ ಸ್ಪಷ್ಟ ನಿಲುವಾಗಿತ್ತು.

ಸಾಮಾಜಿಕ ಪ್ರಜಾಪ್ರಭುತ್ವದಲ್ಲಿ ಬಹುದೊಡ್ಡ ಪಿಡುಗು ಎಂದರೆ ಜಾತಿ ಪದ್ಧತಿ. ಮನುಷ್ಯತ್ವ ಮರೆತು ವರ್ತಿಸುವ ಈ ಪದ್ಧತಿಯೂ ಹಿಂಸಾತ್ಮಕವಾದದ್ದು. ಅದರ ಆತ್ಮವೆಂದರೆ ಹಂತ ಹಂತದ ಅಸಮಾನತೆ, ಮನುಷ್ಯ ಸತ್ತನಂತರವು ಬಿಡದ ಅಮಾನವೀಯತೆ. ಜಾತಿಪದ್ಧತಿ ಇನ್ನೂ ಜೀವಂತವಿದ್ದರೂ ಅದರ ಬೇರುಗಳನ್ನು ಕತ್ತರಿಸುವ ಏಕೈಕ ಮಾರ್ಗವೆಂದರೆ ಪ್ರಜಾಪ್ರಭುತ್ವವಾಗಿದೆ. ಆದರೆ ಅದರ ಜೀವಂತಿಕೆಯ ಕುರಿತು ಅಂಬೇಡ್ಕರ್, ‘‘ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವಿದೆ. ಆದರೆ ಅದು ತನ್ನ ಬುದ್ಧಿಶಕ್ತಿಯನ್ನು ಉಪಯೋಗಿಸುವುದನ್ನು ನಿಲ್ಲಿಸಿಬಿಟ್ಟಿದೆ. ಒಂದು ಸಂಸ್ಥೆ ಏನು ಯೋಚಿಸುತ್ತಿದೆ, ಏನು ಮಾಡುತ್ತಿದೆ ಎಂಬುದನ್ನು ವಿಮರ್ಶಿಸಲು ಅದು ತಯಾರಿಲ್ಲ. ಅದೊಂದು ದೊಡ್ಡ ಪಿಡುಗು. ಗಂಭೀರ ಕಾಯಿಲೆ. ಅದು ನಮ್ಮೆಲ್ಲರ ಮೇಲೂ ಪರಿಣಾಮ ಬೀರಿದೆ. ನಮಗೆಲ್ಲಾ ನಶೆ ಏರಿದೆ. ಪರಂಪರಾಗತವಾಗಿ ಬಂದ ಭಾರತೀಯರಿಗೆ ನಂಬಿಕೆ ಜಾಸ್ತಿ, ಬುದ್ಧಿ ಕಡಿಮೆ. ಸಾಧಾರಣವಾದ, ವಿಚಿತ್ರವಾದ, ಅಪರೂಪದ್ದನ್ನು ಮಾಡಿದರೆ ಅವನನ್ನು ಮಹಾತ್ಮನ ಪಟ್ಟಕ್ಕೆ ಏರಿಸಿಬಿಡುತ್ತಾರೆ.

ಪ್ರಜೆಗಳ ಈ ನಡೆಗಳು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತವೆ’’ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅವರ ಅಂದಿನ ಮಾತುಗಳು ಎಲ್ಲಾ ಕಾಲಕ್ಕೂ ಅನ್ವಯಿಸುತ್ತವೆ. ದೇಶದ ಭೌಗೋಳಿಕತೆ, ಪುರಾಣ, ಧರ್ಮ, ಭಾಷೆ, ಕಲೆಗಳ ಬಗ್ಗೆ ಭಾವನಾತ್ಮಕಗೊಳಿಸುವ ರಾಷ್ಟ್ರಗೀತೆ, ನಾಡಗೀತೆಗಳಿಗಿಂತಲೂ ಪ್ರಜಾಪ್ರಭುತ್ವ ಆಶಯಗಳು, ಸಂವಿಧಾನದ ಪೂರ್ವ ಪೀಠಿಕೆಯು ಹೆಚ್ಚು ಪರಿಣಾಮಕಾರಿ ಯಾಗಿವೆ. ಹೀಗಾಗಿ ಶಾಲಾ-ಕಾಲೇಜು, ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಫಲಕಗಳಾಗಿಸಿ ಪ್ರಜಾತಂತ್ರವನ್ನು ಜನರ ಹೃದಯದಲ್ಲಿ ಚಲನಶೀಲಗೊಳಿಸಬೇಕು. ಜಾಗತಿಕ ಸಂದರ್ಭದಲ್ಲಿ ಭಾರತವನ್ನು ಗಟ್ಟಿಗೊಳಿಸಬೇಕಾದರೆ ಮನುಷ್ಯ ಪ್ರೀತಿಯಿಂದ ಮಾತ್ರ ಸಾಧ್ಯ.

ಇಲ್ಲವಾದರೆ ಧರ್ಮ, ಜಾತಿ, ಸಂಸ್ಕೃತಿಗಳ ಬಗ್ಗೆ ಸದಾ ಕಿಡಿಕಾರುವ ಸನಾತನ ಧರ್ಮದ ಆಡಳಿತವನ್ನು ಮರುಸ್ಥಾಪಿಸಿಕೊಂಡಂತಾಗುತ್ತದೆ. ಪ್ರಸ್ತುತ ಕೇಂದ್ರ ಸರಕಾರದ ಧೋರಣೆಗಳು ಪ್ರಜಾಪ್ರಭುತ್ವವನ್ನು ಹಿಮ್ಮುಖಗೊಳಿಸುತ್ತಿದೆ. ಸನಾತನ ಹಿಂದುತ್ವ ಪೋಷಣೆ, ಲವ್ ಜಿಹಾದ್, ಗೋಹತ್ಯೆ, ಕೃಷಿ ಕಾಯ್ದೆ, ನಾಗರಿಕ ತಿದ್ದುಪಡಿ ಕಾಯ್ದೆ, ಖಾಸಗೀಕರಣ, ನೋಟ್‌ಬ್ಯಾನ್, ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ, ಮೂಲಭೂತ ಹಕ್ಕುಗಳಿಗೆ ಕಡಿವಾಣ, ಸುಳ್ಳುಗಳ ವೈಭವೀಕರಣ, ತಳಸಮುದಾಯ ಶೋಷಣೆ, ನ್ಯಾಯಾಲಯಗಳ ಮೇಲೆ ಪ್ರಭಾವ, ವಿರೋಧ ಪಕ್ಷಗಳ ನಿರ್ನಾಮ, ಸಂವಿಧಾನ ಬದಲಾಯಿಸುವ ಮಾತುಗಳಿಂದಾಗಿ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ವಿಷಯಗಳಿಗೆ ಧಕ್ಕೆಯಾಗುತ್ತಿದೆ. ಸಾಮಾಜಿಕ, ರಾಜಕೀಯ, ಆರ್ಥಿಕದ ವಿಷಯಗಳ ಮೇಲೂ ನೇರ ಪರಿಣಾಮ ಬೀಳುತ್ತಿದೆ. ಇಂತಹ ಸಂದಿಗ್ಧ ಕಾಲದಲ್ಲಿ ಪ್ರಜಾಪ್ರಭುತ್ವದ ನಿಲುವುಗಳಿಗೆ ಧಕ್ಕೆ ತರುತ್ತಿರುವ ವ್ಯಕ್ತಿ, ಸಂಘಟನೆ, ಪಕ್ಷ, ಸರಕಾರದ ವಿರುದ್ಧ ಪ್ರಜೆಗಳೇ ವಿರೋಧ ಪಕ್ಷವಾಗಿ ಪ್ರಶ್ನಿಸುವುದನ್ನು ಗಮನಿಸಿದರೆ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ಆಶಯಗಳು ಭವಿಷ್ಯದಲ್ಲೂ ಆಚಲವಾಗಿ ನಿಲ್ಲಬಲ್ಲದು.

Writer - ಡಾ.ಎಂ.ವೇದಾಂತ ಏಳಂಜಿ

contributor

Editor - ಡಾ.ಎಂ.ವೇದಾಂತ ಏಳಂಜಿ

contributor

Similar News