​ಮಿನಿ ಪಾಕಿಸ್ತಾನ ಹೇಳಿಕೆ: ಸುವೇಂದು ಅಧಿಕಾರಿಗೆ ಮೃದು ಎಚ್ಚರಿಕೆ ನೀಡಿದ ಚುನಾವಣಾ ಆಯೋಗ

Update: 2021-04-13 16:21 GMT

ಕೋಲ್ಕತಾ: ನಂದಿಗ್ರಾಮದಲ್ಲಿ ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿರುವ ಬಿಜೆಪಿ ನಾಯಕ ಸುವೇಂದು ಅಧಿಕಾರಿಗೆ ಚುನಾವಣಾ ಆಯೋಗವು ಇಂದು ಮೃದು ಎಚ್ಚರಿಕೆಯನ್ನು ನೀಡಿದೆ.

ಮುಖ್ಯಮಂತ್ರಿ ಮಮತಾಗೆ ಚುನಾವಣಾ ಆಯೋಗವು 24 ಗಂಟೆಗಳ ಕಾಲ ಚುನಾವಣಾ ಪ್ರಚಾರಕ್ಕೆ ನಿಷೇಧ ಹೇರಿದ ಬೆನ್ನಿಗೇ ತೆಗೆದುಕೊಂಡಿರುವ ಈ ನಿರ್ಧಾರ ಕಾಕತಾಳೀಯವಾಗಿದೆ. ಮಮತಾ ಅವರು ತನಗೆ ನಿಷೇಧ ವಿಧಿಸಿರುವ ಚುನಾವಣಾ ಆಯೋಗದ ಕ್ರಮವನ್ನು ಖಂಡಿಸಿ ಕೋಲ್ಕತಾದಲ್ಲಿ ಮಂಗಳವಾರ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ್ದರು.

ಡಿಸೆಂಬರ್ ನಲ್ಲಿ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಅಧಿಕಾರಿಯ ವಿರುದ್ಧ ಮಿನಿ ಪಾಕಿಸ್ತಾನ ಎಂಬ ಹೇಳಿಕೆ ನೀಡಿದ್ದಕ್ಕೆ ದೂರು ದಾಖಲಿಸಲಾಗಿತ್ತು.
ಇತ್ತೀಚೆಗೆ ನಂದಿಗ್ರಾಮದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಅಧಿಕಾರಿ, ನೀವು ಬೇಗಂಗೆ ಮತ ನೀಡಬೇಡಿ ಎಂದು ಕರೆ  ನೀಡಿದರಲ್ಲದೆ  ಮಮತಾ ಅವರು ಅಲ್ಪಸಂಖ್ಯಾತರನ್ನು ಓಲೈಸುತ್ತಿದ್ದಾರೆ ಎಂದು ಪದೇ ಪದೇ ಆರೋಪಿಸಿದ್ದಾರೆ.

ನೀವು ಬೇಗಂಗೆ ಮತ ಹಾಕಿದರೆ ಮಿನಿ ಪಾಕಿಸ್ತಾನ ನಿರ್ಮಾಣವಾಗುತ್ತದೆ. ನಿಮ್ಮ ಪ್ರದೇಶದಲ್ಲಿ ದಾವೂದ್ ಇಬ್ರಾಹಿಂ ಬರುತ್ತಾನೆ. ನಾವು ಎಲ್ಲವನ್ನೂ ಗಮನಿಸುತ್ತೇವೆ ಎಂದು ಅಧಿಕಾರಿ ಹೇಳಿದ್ದರು. 

ಅಧಿಕಾರಿ ಮಾದರಿ ಸಂಹಿತೆಯ ಹಲವು ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ. ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಸಾರ್ವಜನಿಕವಾಗಿ ಇಂತಹ ಹೇಳಿಕೆಗಳನ್ನು ಬಳಸದಂತೆ ತಡೆಯಿರಿ ಎಂದು ಚುನಾವಣಾ ಆಯೋಗ ಅಧಿಕಾರಿಗೆ ಸಲಹೆ ನೀಡಿತು..

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News