ಕುಂಭಮೇಳ: ಹುಂಬ ನಿರ್ಧಾರ

Update: 2021-04-15 05:20 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ದೇಶಾದ್ಯಂತ ಕೊರೋನ ಮತ್ತೆ ಸುದ್ದಿಯಾಗುತ್ತಿದೆ. ಶ್ರೀ ಸಾಮಾನ್ಯರು ಆತಂಕ ಮತ್ತು ಗೊಂದಲದಲ್ಲಿದ್ದಾರೆ. ಒಂದೆಡೆ ರಾಜಕಾರಣಿಗಳ ನೇತೃತ್ವದಲ್ಲಿ ಬೃಹತ್ ಚುನಾವಣಾ ರ್ಯಾಲಿಗಳು ನಡೆಯುತ್ತಿವೆ. ಆದರೆ ಜನಸಾಮಾನ್ಯರು ದೈನಂದಿನ ಕೂಳನ್ನು ಅರಸುತ್ತಾ ಹೋಗುವುದನ್ನು ನಿಷೇಧಿಸಲಾಗಿದೆ. ಹಗಲಲ್ಲಿ ಚುನಾವಣಾ ಸಮಾವೇಶ ನಡೆಯುತ್ತಿದ್ದರೆ ಆ ಕುರಿತಂತೆ ಯಾರಿಗೂ ಸಮಸ್ಯೆಯಿಲ್ಲ. ಆದರೆ ರಾತ್ರಿ ಹತ್ತುಗಂಟೆಯ ಬಳಿಕ ಕಾರಿನಲ್ಲೋ, ಬೈಕಿನಲ್ಲೋ ಸವಾರಿ ಹೋಗುತ್ತಿದ್ದವರನ್ನು ತಡೆದು ಅವರಿಗೆ ಇನ್ನಿಲ್ಲದ ಚಿತ್ರಹಿಂಸೆ ನೀಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಮಹಾ ಕುಂಭಮೇಳ ಕೊರೋನಾ ಕುರಿತ ಸರಕಾರದ ನಿರ್ಬಂಧಗಳನ್ನು ಅಣಕಿಸುತ್ತಿದೆ. ದೇಶಕ್ಕೆ ಲಾಕ್‌ಡೌನ್ ಎಚ್ಚರಿಕೆಯನ್ನು ನೀಡುತ್ತಿರುವ ಸರಕಾರವೇ, ಕುಂಭಮೇಳದ ಹೆಸರಿನಲ್ಲಿ ಜಾತ್ರೆ ನಡೆಸಿ, ಅಲ್ಲಿ ಲಕ್ಷಾಂತರ ಜನರು ಸೇರುವುದಕ್ಕೆ ಅವಕಾಶ ನೀಡಿದೆ. ಈ ಹಿಂದೆ ತಬ್ಲೀಗಿ ಸಮಾವೇಶವನ್ನು ‘ಕೊರೋನ ಸಮಾವೇಶ’ವಾಗಿ ಪರಿವರ್ತಿಸಿದ ಮಾಧ್ಯಮಗಳು ಕುಂಭ ಮೇಳದಲ್ಲಿ ಸೇರಿರುವ ಲಕ್ಷಾಂತರ ಜನರ ಕುರಿತಂತೆ ವೌನ ತಾಳಿವೆ.

‘ಕುಂಭ ಮೇಳ ಎನ್ನುವ ಬಾಹುಬಲಿ ಸಿನೆಮಾಕ್ಕೆ ಹೋಲಿಸಿದರೆ ತಬ್ಲೀಗಿ ಸಮಾವೇಶವನ್ನು ಐದು ನಿಮಿಷಗಳ ಸಣ್ಣ ಕಿರುಚಿತ್ರವಾಗಿ ಭಾವಿಸಬಹುದು. ತಬ್ಲೀಗಿ ಸಮಾವೇಶ, ಕೊರೋನದ ಕುರಿತಂತೆ ಅರಿವಿಲ್ಲದೆ ಇದ್ದ ಸಮಯದಲ್ಲಿ ನಡೆಯಿತು. ಆದರೆ ಕುಂಭ ಮೇಳ, ಕೊರೋನ ಕುರಿತಂತೆ ನಮಗೆಲ್ಲ ಅರಿವಿದ್ದೂ ನಡೆಯುತ್ತಿದೆ’ ಎಂದು ಇತ್ತೀಚೆಗೆ ಬಾಲಿವುಡ್‌ನ ಖ್ಯಾತ ನಿರ್ದೇಶಕರೊಬ್ಬರು ಟ್ವೀಟ್ ಮಾಡಿದ್ದರು. ಅವರ ಮಾತು ಅಕ್ಷರಶಃ ಸತ್ಯ. ತಬ್ಲೀಗಿ ಸಮಾವೇಶ ನಡೆಸುವಾಗ ಸಂಘಟಕರಿಗೆ ಕೊರೋನದ ಬಗ್ಗೆ ಯಾವುದೇ ಮಾಹಿತಿ ಇದ್ದಿರಲಿಲ್ಲ. ಸರಕಾರವೂ ಕೊರೋನ ಕುರಿತಂತೆ ಯಾವುದೇ ಆದೇಶ ಸೂಚನೆಯನ್ನು ನೀಡಿರಲಿಲ್ಲ. ಯಾವುದೇ ಸೂಚನೆ, ಆದೇಶಗಳನ್ನು ಉಲ್ಲಂಘಿಸಿ ತಬ್ಲೀಗಿ ಸಮಾವೇಶ ನಡೆದಿದ್ದರೆ ಅದನ್ನು ನಾವು ಸಾರಾಸಗಟಾಗಿ ಖಂಡಿಸಬಹುದಿತ್ತು. ಸಮಾವೇಶದ ಸಂಘಟಕರ ಮೇಲೆ ಪ್ರಕರಣಗಳನ್ನೂ ದಾಖಲಿಸಲಾಯಿತು. ಹಾಗೆಯೇ ಈ ಕಾರ್ಯಕರ್ತರ ಕುರಿತಂತೆ ಮಾಧ್ಯಮಗಳು ವದಂತಿಗಳನ್ನು ಬಿತ್ತಿದವು. ವೈದ್ಯರ ಮೇಲೆ ತಬ್ಲೀಗಿಗಳು ಉಗುಳಿದರು ಎಂಬಿತ್ಯಾದಿ ಹಸಿ ಸುಳ್ಳುಗಳನ್ನು ಹರಡುತ್ತಾ, ಇವರಿಂದಾಗಿಯೇ ಕೊರೋನ ಹರಡಿತು ಎಂದು ಸಾಬೀತು ಪಡಿಸಲು ಹರಸಾಹಸ ನಡೆಸಿದರು. ಆದರೆ ಅಂತಿಮವಾಗಿ, ನ್ಯಾಯಾಲಯವು ಸಂಘಟಕರ ಮೇಲಿನ ಪ್ರಕರಣಗಳನ್ನು ಕೈ ಬಿಟ್ಟಿತು. ತಬ್ಲೀಗಿಗಳ ವಿರುದ್ಧ ವದಂತಿ ಹಬ್ಬಿಸಿದ ಮಾಧ್ಯಮಗಳನ್ನು ತರಾಟೆಗೆ ತೆಗೆದುಕೊಂಡಿತು.

ಸದ್ಯದ ಕುಂಭಮೇಳ, ತಬ್ಲೀಗಿ ಸಮಾವೇಶಕ್ಕಿಂತ ಭಿನ್ನವಾದುದು. ಮುಖ್ಯವಾಗಿ ತಬ್ಲೀಗಿ ಸಮಾವೇಶ ಯಾವುದೇ ಸಾರ್ವಜನಿಕ ಜಾತ್ರೆಯಾಗಿರಲಿಲ್ಲ. ಈ ಸಮಾವೇಶದಲ್ಲಿ ಸೇರಿದ ಜನರಿಗಿಂತ ನೂರು ಪಟ್ಟು ಜನರು ಕುಂಭಮೇಳದಲ್ಲಿ ಭಾಗವಹಿಸಿದ್ದಾರೆ. ಕೊರೋನ ಹೆಸರಿನಲ್ಲಿ ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಪರೋಕ್ಷ ಲಾಕ್‌ಡೌನ್‌ನ್ನು ವಿಧಿಸಿರುವ ಹೊತ್ತಿನಲ್ಲೇ, ಉತ್ತರಾಖಂಡದಲ್ಲಿ ಸರಕಾರವೇ ಕೋಟ್ಯಂತರ ಜನರನ್ನು ಸೇರಿಸಿರುವುದು ಜನರನ್ನು ಗೊಂದಲದಲ್ಲಿ ಕೆಡವಿದೆ. ಸರಕಾರದ ನಿರ್ಧಾರಗಳನ್ನು ಅನುಮಾನದಿಂದ ನೋಡುವಂತೆ ಮಾಡಿದೆ. ಕುಂಭಮೇಳದಲ್ಲಿ ಕೋಟ್ಯಂತರ ಜನರು ಸೇರಿದಾಗ ಕೊರೋನ ಹರುಡುವುದಿಲ್ಲ ಎಂದಾದರೆ, ಹೊಟೇಲ್‌ನಲ್ಲಿ, ಬಸ್‌ಗಳಲ್ಲಿ, ರೈಲಿನಲ್ಲಿ ಕೊರೋನ ಹರಡುವುದು ಹೇಗೆ ಸಾಧ್ಯ? ಕುಂಭಮೇಳ ಯಾವ ರೀತಿಯಲ್ಲೂ ಜನಸಾಮಾನ್ಯರಿಗೆ ಅನಿವಾರ್ಯವಲ್ಲ. ಜನರು ಕುಂಭ ಮೇಳ ನಡೆಯಲೇ ಬೇಕು ಎಂದು ಎಲ್ಲೂ ಆಗ್ರಹಿಸಿಲ್ಲ. ಇಷ್ಟಾದರೂ ಸರಕಾರ ಅತ್ಯಾಸಕ್ತಿಯಿಂದ ಕೋಟ್ಯಂತರ ಜನರನ್ನು ಒಂದೆಡೆ ಸೇರಿಸುತ್ತದೆಯಾದರೆ, ಸರಕಾರ ಹೇರಿರುವ ಕರ್ಫ್ಯೂಗೆ ತಲೆಬಾಗಿ, ಜನರೇಕೆ ಸಂಕಷ್ಟವನ್ನು ಅನುಭವಿಸಬೇಕು?

ತಮಾಷೆಯೆಂದರೆ, ಉತ್ತರಾಖಂಡದ ಮುಖ್ಯಮಂತ್ರಿ ರಾವತ್ ಅವರು ‘ತಬ್ಲೀಗಿ ಸಮಾವೇಶಕ್ಕೆ ಕುಂಭ ಮೇಳವನ್ನು ಹೋಲಿಸಬಾರದು’ ಎಂದಿದ್ದಾರೆ. ಅವರ ಮಾತಿನಲ್ಲಿ ಸತ್ಯವಿದ್ಯೆ. ಕುಂಭಮೇಳದಲ್ಲಿ ನಡೆಯುತ್ತಿರುವ ಅನಾಹುತಕ್ಕೆ ಹೋಲಿಸಿದರೆ ತಬ್ಲೀಗಿ ಸಮಾವೇಶ ಏನೇನು ಅಲ್ಲ. ‘‘ತಬ್ಲೀಗಿ ಸಮಾವೇಶ ಸಭಾಂಗಣದೊಳಗೆ ನಡೆದಿರುವುದು. ಕುಂಭಮೇಳ ನದಿ ದಡದಲ್ಲಿ ನಡೆಯುತ್ತಿರುವುದು’’ ಎನ್ನುವ ಪೊಳ್ಳು ಸಮರ್ಥನೆಯನ್ನೂ ರಾವತ್ ನೀಡಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಕೊರೋನ ಹರಡುವುದಿಲ್ಲ, ಕೊಠಡಿಯೊಳಗೆ ಮಾತ್ರ ಕೊರೋನ ಹರಡುತ್ತದೆಯಾದರೆ ಮೂರು ತಿಂಗಳು ಸಾರ್ವಜನಿಕ ಪ್ರದೇಶಗಳಿಗೆ ಲಾಕ್‌ಡೌನ್ ಹೇರಿ ಜನರನ್ನೇಕೆ ನಾಲ್ಕು ಗೋಡೆಗಳ ಮಧ್ಯೆ ಬಂಧಿಸಿಡಲಾಯಿತು? ಈಗಲೂ ತಡ ರಾತ್ರಿ ಹೊತ್ತು ರಸ್ತೆಗಳಲ್ಲಿ ಓಡಾಡಿದರೆ ಸಾರ್ವಜನಿಕರ ಮೇಲೆ ಪೊಲೀಸರು ಯಾಕೆ ಎರಗಿ ಬೀಳುತ್ತಿದ್ದಾರೆ? ಎಲ್ಲಕ್ಕಿಂತ ದುರಂತವೆಂದರೆ, ‘‘ಕೊರೋನದಿಂದ ಭಕ್ತರನ್ನು ಗಂಗಾ ಮಾತೆ ಕಾಪಾಡುತ್ತಾಳೆ’’ ಎಂದು ಅವರು ಹೇಳಿಕೆ ನೀಡಿರುವುದು.

ಸ್ವತಃ ಗಂಗಾಮಾತೆಯನ್ನು ಕಾಪಾಡುವುದಕ್ಕಾಗಿಯೇ ಕೇಂದ್ರ ಸರಕಾರ ಹಲವು ಸಾವಿರ ಕೋಟಿ ರೂಪಾಯಿಯನ್ನು ಸುರಿದಿದೆ. ಭಕ್ತರ ಪಾಪದ ಹೊರೆಯನ್ನು ತಾಳಲಾಗದೆ ಆಕೆ ಸಂಪೂರ್ಣ ಮಾಲಿನ್ಯಕ್ಕೀಡಾಗಿದ್ದಾಳೆ. ಗಂಗೆಯ ನೀರು ಕುಡಿಯುವುದಕ್ಕೆ ಅರ್ಹವಲ್ಲ ಎಂದು ತಜ್ಞರು ಈಗಾಗಲೇ ವರದಿಯನ್ನೂ ನೀಡಿದ್ದಾರೆ. ಭಕ್ತರು ಎಸೆದ ಹೊಲಸುಗಳಿಂದಲೂ, ಕಾರ್ಖಾನೆಗಳು ಹೊರಬಿಡುವ ತ್ಯಾಜ್ಯಗಳಿಂದಲೂ ಗಂಗೆಯ ನೀರು ವಿಷಕಾರಿಯಾಗಿದೆ. ಆಕೆಯನ್ನು ಶುದ್ಧೀಕರಿಸುವ ಪ್ರಯತ್ನ ನಡೆಯುತ್ತಿದೆಯಾದರೂ, ಸರಕಾರ ಅದರಲ್ಲಿ ಯಶಸ್ವಿಯಾಗಿಲ್ಲ. ಗಂಗೆ ಭಕ್ತರನ್ನು ರಕ್ಷಿಸುವುದಲ್ಲ, ಭಕ್ತರಿಂದ ಗಂಗೆಯನ್ನು ರಕ್ಷಿಸಬೇಕಾಗಿದೆ. ಹೀಗಿರುವಾಗ, ಕೊರೋನದಿಂದ ಭಕ್ತರನ್ನು ಗಂಗಾಮಾತೆ ರಕ್ಷಿಸುವುದಾದರೂ ಹೇಗೆ? ಕುಂಭಮೇಳದ ಸಂದರ್ಭದಲ್ಲಿ ತನ್ನ ಮೇಲೆ ನಡೆಯುವ ದೌರ್ಜನ್ಯ, ಪರಿಸರ ಮಾಲಿನ್ಯಗಳಿಗಾಗಿ ಗಂಗೆಯೇ ಭಕ್ತರನ್ನು ಶಪಿಸುವ ಸಾಧ್ಯತೆಗಳಿವೆ.

ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಹಜ್‌ಯಾತ್ರೆಗೆ ಅಲ್ಲಿನ ಸರಕಾರ ಭಾರೀ ನಿಬಂಧನೆಗಳನ್ನು ಹೇರಿತ್ತು. ಅತ್ಯಂತ ಸುವ್ಯವಸ್ಥೆಯಿಂದ ನಡೆಯುವ ಯಾತ್ರೆ ಇದಾಗಿದ್ದರೂ, ಕಳೆದ ಬಾರಿ ವಿದೇಶದ ಯಾವುದೇ ಯಾತ್ರಿಕರಿಗೆ ಹಜ್ ನಿರ್ವಹಿಸಲು ಅವಕಾಶಕೊಡಲಿಲ್ಲ. ಈ ಬಾರಿಯೂ ರಮಝಾನ್ ಉಮ್ರಾಕ್ಕೆ ಕಠಿಣ ನಿಬಂಧನೆಗಳನ್ನು ಒಡ್ಡಿದೆ. ತನ್ನ ದೇಶದ ಜನರ ಮೇಲಿನ ಕಾಳಜಿಯಿಂದ ಅಲ್ಲಿ ಸರಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಇತ್ತ ಭಾರತ ಸರಕಾರ ದುಡಿಯುವ ಜನರಿಗಷ್ಟೇ ಲಾಕ್‌ಡೌನ್, ರಾತ್ರಿ ಕರ್ಫ್ಯೂವನ್ನು ವಿಧಿಸಿ, ಕೊರೋನವನ್ನು ತಮಾಷೆಯ ವಿಷಯವನ್ನಾಗಿಸಿದೆ. ‘ಜನರು ನಿರ್ಬಂಧಗಳನ್ನು ಪಾಲಿಸಬೇಕು’ ಎಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಪದೇ ಪದೇ ಮಾಧ್ಯಮಗಳ ಮೂಲಕ ಸಾರುತ್ತಿರುತ್ತಾರೆ. ಒಂದೆಡೆ ಕೋಟ್ಯಂತರ ಜನರು ಸೇರಿ ಜಾತ್ರೆ ನಡೆಸಬಹುದಾದರೆ, ನಾವು ದೈನಂದಿನ ಅತ್ಯಗತ್ಯ ಚಟುವಟಿಕೆಗಳನ್ನು ಯಾಕೆ ಮಾಡಬಾರದು? ಎಂದು ಜನರು ಕೇಳತೊಡಗಿದ್ದಾರೆ. ಸರಕಾರದ ಆದೇಶಗಳ ಕುರಿತಂತೆಯೇ ಅವರು ನಂಬಿಕೆಗಳನ್ನು ಕಳೆದುಕೊಂಡಿದ್ದಾರೆ. ಈ ಕಾರಣದಿಂದಲೇ, ಕೊರೋನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಸಂಪೂರ್ಣ ಹೊಣೆಯನ್ನು ಸರಕಾರವೇ ಹೊರಬೇಕು. ಕೊರೋನ, ಲಾಕ್‌ಡೌನ್, ಕರ್ಫ್ಯೂ, ಸುರಕ್ಷಿತ ಅಂತರದ ಕುರಿತಂತೆ ಸರಕಾರದ ದ್ವಂದ್ವ ನಿರ್ಧಾರಗಳೇ ಈ ದೇಶವನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ. ಇಷ್ಟಾಗಿಯೂ ಪಾಠ ಕಲಿಯದ ಸರಕಾರ, ತನ್ನ ದ್ವಂದ್ವ ನೀತಿಯನ್ನು ಮುಂದುವರಿಸುತ್ತಾ, ದೇಶವನ್ನು ಇನ್ನಷ್ಟು ನಾಶದೆಡೆಗೆ ಕೊಂಡೊಯ್ಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News