ಮಾಂಡಲೆ: ಸೇನಾಡಳಿತದ ವಿರುದ್ಧ ಪ್ರತಿಭಟಿಸುತ್ತಿದ್ದವರ ಮೇಲೆ ಗುಂಡು

Update: 2021-04-15 15:25 GMT

ಯಾಂಗನ್ (ಮ್ಯಾನ್ಮಾರ್), ಎ. 15: ಮ್ಯಾನ್ಮಾರ್‌ನ ಮಾಂಡಲೆ ನಗರದಲ್ಲಿ ಗುರುವಾರ ಸೇನಾಡಳಿತದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೈದ್ಯಕೀಯ ಸಿಬ್ಬಂದಿಯ ಮೇಲೆ ಭದ್ರತಾ ಪಡೆಗಳು ಗುಂಡು ಹಾರಿಸಿವೆ. ಅದೇ ವೇಳೆ, ಸೈನಿಕರು ಸಮೀಪದ ಕಟ್ಟಡಗಳಿಗೆ ನುಗ್ಗಿ ಗುಂಡು ಹಾರಿಸಿದಾಗ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮ್ಯಾನ್ಮಾರ್‌ನ ಎರಡನೇ ಅತಿ ದೊಡ್ಡ ನಗರ ಮಾಂಡಲೆಯಲ್ಲಿ ಗುರುವಾರ ಬೆಳಗ್ಗೆ ವೈದ್ಯಕೀಯ ಸಿಬ್ಬಂದಿ ಸೇನಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು. ಆದರೆ ತಕ್ಷಣ ಅಲ್ಲಿಗೆ ಧಾವಿಸಿದ ಸೈನಿಕರು ಪ್ರತಿಭಟನಾಕಾರರನ್ನು ಚದುರಿಸುವುದಕ್ಕಾಗಿ ಅವರ ಮೇಲೆ ಗುಂಡು ಹಾರಿಸಿದರು ಎಂದು ಬಿಬಿಸಿಯ ಬರ್ಮಾ ಭಾಷೆಯ ಸುದ್ದಿ ಚಾನೆಲ್ ವರದಿ ಮಾಡಿದೆ. ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ಹಲವರನ್ನು ಬಂಧಿಸಿದರು.

 ಆದರೆ, ಸೈನಿಕರ ಗುಂಡು ಹಾರಾಟದಿಂದ ಸಂಭವಿಸಿರಬಹುದಾದ ಸಾವು-ನೋವಿನ ವಿವರಗಳನ್ನು ಬಿಬಿಸಿ ಒದಗಿಸಿಲ್ಲ. ಆದರೆ, ಪ್ರತಿಭಟನೆ ನಡೆದ ಸ್ಥಳದ ಸಮೀಪದ ಮಸೀದಿಯೊಂದರ ಆವರಣದಲ್ಲಿ ಓರ್ವ ವ್ಯಕ್ತಿ ಗುಂಡು ತಾಗಿ ಅಸು ನೀಗಿದ್ದಾರೆ ಎಂದು ‘ಖಿಟ್ ತಿಟ್’ ಮಾಧ್ಯಮ ವರದಿ ಮಾಡಿದೆ.

ಮನಬಂದಂತೆ ಗುಂಡು ಹಾರಿಸಿದ ಸೈನಿಕರು

ಇಲ್ಲಿಗೆ ಧಾವಿಸಿದ ಸೈನಿಕರು ಜನರ ಮೇಲೆ ಮನಬಂದಂತೆ ಗುಂಡು ಹಾರಿಸಲು ಆರಂಭಿಸಿದರು ಎಂದು ಪ್ರತಿಭಟನೆ ನಡೆದ ಸ್ಥಳದ ಪಕ್ಕದ ಮಸೀದಿ ಇರುವ ಸ್ಥಳದ ನಿವಾಸಿಯೊಬ್ಬರು ಹೇಳಿದರು.

‘‘ಇಲ್ಲಿ ಪ್ರತಿಭಟನೆ ನಡೆಯುತ್ತಿರಲಿಲ್ಲ. ಸೈನಿಕರು ಬಂದು ಯಾರಿಗಾಗಿಯೋ ಹುಡುಕಾಡಿದರು ಹಾಗೂ ಮನಬಂದಂತೆ ಗುಂಡು ಹಾರಿಸಿದರು. ಆಗ ಓರ್ವ ವ್ಯಕ್ತಿ ಮೃತಪಟ್ಟರು ಹಾಗೂ ನಾಲ್ವರು ಗಾಯಗೊಂಡರು’’ ಎಂದು ಅವರು ಹೇಳಿರುವುದಾಗಿ ಬಿಬಿಸಿ ಬರ್ಮಾ ಭಾಷೆಯ ಸುದ್ದಿವಾಹಿನಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News