ಅಫ್ಘಾನ್ ನಿರ್ಮಾಣದಲ್ಲಿ ಭಾರತ, ಪಾಕ್, ರಶ್ಯಕ್ಕೆ ಪ್ರಮುಖ ಪಾತ್ರ: ಬೈಡನ್

Update: 2021-04-15 15:32 GMT

ವಾಶಿಂಗ್ಟನ್, ಎ. 15: ಸುಭದ್ರ ಅಫ್ಘಾನಿಸ್ತಾನದ ಪುನರ್ ನಿರ್ಮಾಣದಲ್ಲಿ ಭಾರತ, ಪಾಕಿಸ್ತಾನ, ರಶ್ಯ, ಚೀನಾ ಮತ್ತು ಟರ್ಕಿಗಳು ಪ್ರಮುಖ ಪಾತ್ರ ವಹಿಸಬೇಕಾಗಿವೆ ಎಂದು ಅವೆುರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಹಾಗಾಗಿ, ಯುದ್ಧಗ್ರಸ್ತ ದೇಶಕ್ಕೆ ಶಾಂತಿಯನ್ನು ಮರಳಿಸುವಲ್ಲಿ ಈ ದೇಶಗಳು ಇನ್ನೂ ಹೆಚ್ಚಿನ ಪ್ರಯತ್ನಗಳನ್ನು ಮಾಡಬೇಕಾದ ಅಗತ್ಯವಿದೆ ಎಂಬುದಾಗಿ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ವರ್ಷದ ಸೆಪ್ಟಂಬರ್ 11ರ ವೇಳೆಗೆ ಅಫ್ಘಾನಿಸ್ತಾನದಲ್ಲಿರುವ ಅಮೆರಿಕದ ಎಲ್ಲ ಸೈನಿಕರು ವಾಪಸಾಗಲಿದ್ದಾರೆ.

‘‘ಅಫ್ಘಾನಿಸ್ತಾನವನ್ನು ಆಧರಿಸಲು ಹೆಚ್ಚಿನದನ್ನು ಮಾಡಬೇಕು ಎಂದು ನಾವು ಈ ವಲಯದಲ್ಲಿರುವ ದೇಶಗಳು, ಅದರಲ್ಲೂ ಮುಖ್ಯವಾಗಿ ಪಾಕಿಸ್ತಾನ, ರಶ್ಯ, ಚೀನಾ, ಭಾರತ ಮತ್ತು ಟರ್ಕಿಗಳನ್ನು ಒತ್ತಾಯಿಸುತ್ತೇವೆ. ಭವಿಷ್ಯದ ಸುಭದ್ರ ಅಫ್ಘಾನಿಸ್ತಾನವು ಈ ದೇಶಗಳ ಹಿತಾಸಕ್ತಿಗೆ ಪೂರಕವಾಗಿದೆ’’ ಎಂದು ಬುಧವಾರ ಶ್ವೇತಭವನದಿಂದ ದೇಶವನ್ನುದ್ದೇಶಿಸಿ ಟಿವಿಯಲ್ಲಿ ಮಾಡಿದ ಭಾಷಣದಲ್ಲಿ ಬೈಡನ್ ಹೇಳಿದರು.

 ಈ ವರ್ಷದ ಸೆಪ್ಟಂಬರ್ 11ರ ವೇಳೆಗೆ ಅಫ್ಘಾನಿಸ್ತಾನದಲ್ಲಿರುವ ಎಲ್ಲ ಅಮೆರಿಕನ್ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವುದಾಗಿ ಬೈಡನ್ ಈಗಾಗಲೇ ಘೋಷಿಸಿದ್ದಾರೆ. ಆ ವೇಳೆಗೆ, ಅಮೆರಿಕದ ಮೇಲೆ ಅಲ್-ಖಾಯಿದ ಭಯೋತ್ಪಾದಕರು ನಡೆಸಿದ ದಾಳಿಗೆ 20 ವರ್ಷಗಳು ಪೂರ್ಣಗೊಳ್ಳುತ್ತವೆ. ಈ ದಾಳಿಗೆ ಪ್ರತೀಕಾರವಾಗಿ ಅಮೆರಿಕವು ಅಂದಿನ ತಾಲಿಬಾನ್ ಸರಕಾರದ ನಿಯಂತ್ರಣದಲ್ಲಿದ್ದ ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿತ್ತು.

ಈಗ ಅಫ್ಘಾನಿಸ್ತಾನದಲ್ಲಿ 2,500ಕ್ಕೂ ಅಧಿಕ ಅಮೆರಿಕ ಸೈನಿಕರಿದ್ದಾರೆ. ಬರಾಕ್ ಒಬಾಮ ಆಡಳಿತದ ವೇಳೆ ಅಲ್ಲಿ ಒಂದು ಲಕ್ಷಕ್ಕೂ ಅಧಿಕ ಅಮೆರಿಕ ಸೈನಿಕರಿದ್ದರು.

 ಅಫ್ಘಾನಿಸ್ತಾನದಲ್ಲಿ ಪ್ರಸಕ್ತ ನೆಲೆಸಿರುವ ವಿವಾದಕ್ಕೆ ಸೈನಿಕ ಪರಿಹಾರವಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. ಈ ಸಮಸ್ಯೆಗೆ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವ ಅವಶ್ಯಕತೆ ಎಂದು ಅವರು ಪ್ರತಿಪಾದಿಸಿದರು.

ಇದು ಬಹು-ತಲೆಮಾರಿನ ಯುದ್ಧವಲ್ಲ

‘‘ಅಫ್ಘಾನಿಸ್ತಾನ ಯುದ್ಧವು ಬಹು-ತಲೆಮಾರಿನ ಕಾರ್ಯಯೋಜನೆಯಲ್ಲ. ನಮ್ಮ ಮೇಲೆ ದಾಳಿ ಮಾಡಲಾಯಿತು. ನಾವು ಸ್ಪಷ್ಟ ಗುರಿಗಳನ್ನು ಇಟ್ಟು ಯುದ್ಧ ಮಾಡಿದೆವು. ಆ ಗುರಿಗಳನ್ನು ನಾವು ಸಾಧಿಸಿದ್ದೇವೆ’’ ಎಂದು ಬೈಡನ್ ಹೇಳಿದರು.

‘‘ಅಲ್-ಖಾಯಿದ ನಾಯಕ ಉಸಾಮ ಬಿನ್ ಲಾದನ್‌ನನ್ನು 2011ರಲ್ಲಿ ಅಮೆರಿಕದ ಪಡೆಗಳು ಕೊಂದವು ಹಾಗೂ ಆ ಸಂಘಟನೆಯನ್ನು ಈಗ ಅಫ್ಘಾನಿಸ್ತಾನದಲ್ಲಿ ಕೆಳ ದರ್ಜೆಗೆ ಇಳಿಸಲಾಗಿದೆ’’ ಎಂದರು.

ಮೊದಲ 3 ತಿಂಗಳಲ್ಲಿ 1,800 ನಾಗರಿಕರ ಸಾವು-ನೋವು

ಕಾಬೂಲ್ (ಅಫ್ಘಾನಿಸ್ತಾನ), ಎ. 15: ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆಗೆ ಪ್ರಯತ್ನಗಳು ನಡೆಯುತ್ತಿರುವಂತೆಯೇ, 2021ರ ಮೊದಲ ಮೂರು ತಿಂಗಳಲ್ಲಿ ಸರಕಾರಿ ಪಡೆಗಳು ಮತ್ತು ತಾಲಿಬಾನ್ ಉಗ್ರರ ನಡುವೆ ನಡೆದ ಸಂಘರ್ಷದಲ್ಲಿ ಸುಮಾರು 1,800 ನಾಗರಿಕರು ಮೃತಪಟ್ಟಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಬುಧವಾರ ತಿಳಿಸಿದೆ.

ಜನವರಿಯಿಂದ ಮಾರ್ಚ್ ತಿಂಗಳ ಕೊನೆಯವರೆಗೆ, 573 ನಾಗರಿಕರು ಹತರಾಗಿದ್ದಾರೆ ಹಾಗೂ 1,210 ಮಂದಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಅಫ್ಘಾನಿಸ್ತಾನದಲ್ಲಿರುವ ತಂಡ ವರದಿಯೊಂದರಲ್ಲಿ ಹೇಳಿದೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ದಾಖಲಾದ ಅಂಕಿಸಂಖ್ಯೆಗಳಿಗಿಂತ 29 ಶೇಕಡ ಹೆಚ್ಚಳವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News