ಅಂಬೇಡ್ಕರ್‌ಗೆ ‘ಸಂಸ್ಕೃತ ಜನಿವಾರ’ ತೊಡಿಸುವ ವಿಫಲ ಪ್ರಯತ್ನ

Update: 2021-04-16 08:31 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಅ ಂಬೇಡ್ಕರ್ ಜಯಂತಿಯಂದು ಮುಖ್ಯ ನ್ಯಾಯಮೂರ್ತಿಯೊಬ್ಬರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾರೆ ಎನ್ನುವಾಗ ಕೆಲವು ನಿರೀಕ್ಷೆಗಳಿರುತ್ತವೆ. ಅದರಲ್ಲಿ ಮುಖ್ಯವಾಗಿ, ಅಂಬೇಡ್ಕರ್ ಬಯಸಿದ ಸಮಾನತೆ, ಜಾತೀಯತೆಯ ಅಳಿವು, ದಲಿತರ ಉದ್ಧಾರ ಇವೆಲ್ಲವನ್ನೂ ಅನಿವಾರ್ಯವಾಗಿ ಪ್ರಸ್ತಾಪಿಸಲೇಬೇಕು. ಸಂವಿಧಾನದ ಕಾವಲುಗಾರನಾಗಿರುವ ಮುಖ್ಯ ನ್ಯಾಯಮೂರ್ತಿಯೊಬ್ಬರು ಅಂಬೇಡ್ಕರ್ ಕುರಿತಂತೆ ಮಾತನಾಡುವಾಗ ಅಂಬೇಡ್ಕರ್‌ರ ಈ ಕನಸುಗಳು ಎಷ್ಟರಮಟ್ಟಿಗೆ ನನಸಾಗಿವೆ ಎನ್ನುವುದನ್ನು ವಿಮರ್ಶೆಗೊಡ್ಡಬೇಕು. ಅಷ್ಟೇ ಅಲ್ಲ, ಸಂವಿಧಾನಕ್ಕೆ ಅಂಬೇಡ್ಕರ್ ಕೊಟ್ಟ ಕೊಡುಗೆಗಳನ್ನು ನೆನೆಯುತ್ತಾ, ಇಂದು ಸಂವಿಧಾನಕ್ಕೆ ಎದುರಾಗಿರುವ ಸವಾಲುಗಳನ್ನು ಯಾವ ರೀತಿಯಲ್ಲಿ ಎದುರಿಸಬಹುದು ಎನ್ನುವ ಕುರಿತಂತೆ ಮಾರ್ಗದರ್ಶನ ನೀಡಬೇಕು. ವಿಪರ್ಯಾಸವೆಂದರೆ, ಈ ವಿಚಾರಗಳನ್ನೆಲ್ಲ ಬದಿಗಿಟ್ಟು, ಅಂಬೇಡ್ಕರ್ ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿಸಲು ಬಯಸಿದ್ದರು ಎನ್ನುವ, ವರ್ತಮಾನದ ಭಾರತಕ್ಕೆ ಯಾವ ರೀತಿಯಲ್ಲೂ ಸಹಾಯ ಮಾಡದ ಚರ್ಚೆಯೊಂದನ್ನು ವೇದಿಕೆಯಲ್ಲಿ ಕೈಗೆತ್ತಿಕೊಂಡರು. ಹಿಂದಿಯನ್ನು ಈ ದೇಶದ ರಾಷ್ಟ್ರ ಭಾಷೆಯಾಗಿ ಹೇರಲು ಹುನ್ನಾರ ನಡೆಸುತ್ತಿರುವ ಹೊತ್ತಿನಲ್ಲಿ, ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಅವರು ಇನ್ನೂ ಒಂದು ಹೆಜ್ಜೆ ಮುಂದಿಟ್ಟು ‘ಸಂಸ್ಕೃತವನ್ನೇ ರಾಷ್ಟ್ರೀಯ ಭಾಷೆಯಾಗಿಸಬೇಕು’ ಎಂದು ಪರೋಕ್ಷವಾಗಿ ಒತ್ತಾಯಿಸಿದ್ದಾರೆ. ಜನರನ್ನು ದಾರಿ ತಪ್ಪಿಸಲು, ಆರೆಸ್ಸೆಸ್‌ನ ಅಜೆಂಡಾವನ್ನು ಪರೋಕ್ಷವಾಗಿ ಜನರ ಮೇಲೆ ಹೇರಲು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಯೊಬ್ಬರು ಅಂಬೇಡ್ಕರ್ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವುದು ಸಣ್ಣ ಅಪರಾಧವೇನೂ ಅಲ್ಲ. ಆದುದರಿಂದ, ಬೋಬ್ಡೆ ಹೇಳಿದ ಮಾತಿನ ಸತ್ಯಾಸತ್ಯತೆಯನ್ನು ದೇಶದ ಜನಕ್ಕೆ ಮನವರಿಕೆ ಮಾಡಿಕೊಡುವುದು ಇಂದಿನ ಅಗತ್ಯವಾಗಿದೆ.

ಸಂಸ್ಕೃತಕ್ಕೂ ಅಂಬೇಡ್ಕರಿಗೂ ಏನು ಸಂಬಂಧ? ಅಂಬೇಡ್ಕರ್ ವ್ಯಕ್ತಿತ್ವ ರೂಪುಗೊಳ್ಳಲು, ಈ ದೇಶದ ದಲಿತರು, ಶೋಷಿತರನ್ನು ಸಂಘಟಿಸಲು, ಅವರಿಗೆ ನ್ಯಾಯ ನೀಡಲು ಸಂಸ್ಕೃತ ಎಷ್ಟರ ಮಟ್ಟಿಗೆ ನೆರವಾಗಿದೆ? ಅಂಬೇಡ್ಕರ್ ಬದುಕು ಎತ್ತರವಾಗಲು ಸಂಸ್ಕೃತದ ಕೊಡುಗೆಯಾದರೂ ಏನು? ಇಂಗ್ಲಿಷ್ ಶಿಕ್ಷಣವಿಲ್ಲದೆ ಇದ್ದಿದ್ದರೆ ಇಂದು ಅಂಬೇಡ್ಕರ್ ನಮ್ಮ ನಡುವೆ ಅಜರಾಮರವಾಗಿ ಉಳಿಯಲು ಸಾಧ್ಯವಿತ್ತೇ? ಈ ನಾಲ್ಕು ಪ್ರಶ್ನೆಗಳಿಗೆ ನಾವು ಕಂಡುಕೊಳ್ಳುವ ಉತ್ತರಗಳೇ, ಬೋಬ್ಡೆಯ ಬೇಡಿಕೆ ಎಷ್ಟು ಅಸಂಗತವಾದುದು ಎನ್ನುವುದನ್ನು ಹೇಳುತ್ತವೆ.

ಸಂಸ್ಕೃತ ಈ ದೇಶದ ಶೋಷಿತ ಸಮುದಾಯಗಳಿಗೆ ಯಾವುದೇ ಕೊಡುಗೆಗಳನ್ನು ಕೊಟ್ಟಿಲ್ಲ ಮಾತ್ರವಲ್ಲ, ಆ ಭಾಷೆ ಅವರನ್ನು ಅಸ್ಪಶ್ಯವಾಗಿ ನೋಡಿತ್ತು. ವಿದ್ಯೆಯನ್ನು ಪಡೆಯಲು ಶೂದ್ರರು, ದಲಿತರು ಅನರ್ಹರು ಎಂದು ಮನು ಘೋಷಿಸಿದ್ದು ಸಂಸ್ಕೃತದಲ್ಲೇ. ಈ ದೇಶದ ಬಹುಸಂಖ್ಯಾತರಿಂದ ದೂರ ಉಳಿದ ಕಾರಣದಿಂದಲೇ ಸಂಸ್ಕೃತ ಇಂದು ಮೃತಭಾಷೆಯೆಂದು ಕರೆಯಲ್ಪಡುತ್ತಿದೆ. ಇಂದು ಈ ಭಾಷೆ ಜನಸಾಮಾನ್ಯರ ದೈನಂದಿನ ವ್ಯವಹಾರಗಳಲ್ಲಿ ಬಿಡಿ, ಮೇಲ್‌ಸ್ತರದ ಜನರಲ್ಲೂ ಅಸ್ತಿತ್ವದಲ್ಲಿಲ್ಲ. ಅಳಿವಿನಂಚಿನಲ್ಲಿರುವ ಪ್ರಾಣಿಯನ್ನು ರಾಷ್ಟ್ರೀಯ ಪ್ರಾಣಿಯೆಂದು ಕರೆದ ಹಾಗೆ, ಅಳಿದು ಹೋಗಿರುವ ಭಾಷೆಯೊಂದನ್ನು ರಾಷ್ಟ್ರೀಯ ಭಾಷೆಯನ್ನಾಗಿಸಲು ಹೊರಟಿದ್ದಾರೆ ನ್ಯಾಯಮೂರ್ತಿ ಬೋಬ್ಡೆಯವರು. ಒಂದು ಭಾಷೆಯನ್ನು ರಾಷ್ಟ್ರೀಯ ಭಾಷೆಯೆಂದು ಕರೆಯಬೇಕಾದರೆ, ಆ ಭಾಷೆಯ ಮೂಲಕ, ಇಡೀ ದೇಶದ ಜನರು ಪರಸ್ಪರ ಸಂವಹನ ನಡೆಸಲು ಸಾಧ್ಯವಾಗಬೇಕು. ಅರ್ಚಕರ ಮಂತ್ರ ಶ್ಲೋಕಗಳಲ್ಲಷ್ಟೇ ಉಳಿದಿರುವ ಭಾಷೆಯನ್ನು ರಾಷ್ಟ್ರೀಯ ಭಾಷೆಯಾಗಿಸಿ ಅದನ್ನು ಬ್ಯಾಂಕುಗಳಲ್ಲಿ, ಸರಕಾರಿ ಕಚೇರಿಗಳಲ್ಲಿ, ಜನರು ದೈನಂದಿನ ಬದುಕಿನಲ್ಲಿ ಬಳಸುವ ಸಾಧ್ಯತೆಯನ್ನು ನಿಜವಾಗಿಸುವ ಯಾವ ಸಾಧ್ಯತೆಗಳೂ ನಮ್ಮ ಮುಂದಿಲ್ಲ.

ಉತ್ತರ ಭಾರತವನ್ನು ಸಂಪೂರ್ಣವಾಗಿ ವ್ಯಾಪಿಸುತ್ತಿರುವ ಹಿಂದಿಯನ್ನೇ ದಕ್ಷಿಣ ಭಾರತೀಯರು ಸ್ವೀಕರಿಸುವುದಕ್ಕೆ ಸಿದ್ಧವಿಲ್ಲ. ಪ್ರಾದೇಶಿಕ ಭಾಷೆಗಳು ಹಿಂದಿ ಹೇರಿಕೆಯನ್ನು ಪ್ರಬಲವಾಗಿ ಪ್ರತಿರೋಧಿಸುತ್ತಿವೆ. ಇಷ್ಟಕ್ಕೂ ಹಿಂದಿ ಹೇರಿಕೆಯ ಅಗತ್ಯವಾದರೂ ಏನು? ಎಂದು ದಕ್ಷಿಣ ಭಾರತೀಯರು ಕೇಳುತ್ತಿದ್ದಾರೆ. ಹಿಂದಿಯೇತರ ರಾಜ್ಯವಾಗಿರುವ ಕೇರಳ, ಆರೋಗ್ಯ, ಅಭಿವೃದ್ಧಿ, ಸಾಕ್ಷರತೆಯಲ್ಲಿ ದೇಶದಲ್ಲೇ ಮುಂದಿದೆ. ಕರ್ನಾಟಕ, ಆಂಧ್ರ ಐಟಿ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಗಳನ್ನು ಯಾವುದೇ ಉತ್ತರ ಭಾರತೀಯ ರಾಜ್ಯಗಳು ಸಾಧಿಸಿಲ್ಲ. ತಮಿಳುನಾಡಿನ ಸೃಜನಶೀಲತೆ, ಕ್ರಿಯಾಶೀಲತೆ ವಿಶ್ವಮಾನ್ಯವಾಗಿವೆೆ. ಇವೆಲ್ಲ ಸಾಧಿಸಿದ್ದು ಪ್ರಾದೇಶಿಕ ಭಾಷೆಗಳನ್ನು, ಇಂಗ್ಲಿಷ್ ಭಾಷೆಯನ್ನು ಜೊತೆಯಾಗಿ ತನ್ನದಾಗಿಸಿಕೊಳ್ಳುವ ಮೂಲಕ. ಹಿಂದಿ ಮಾತನಾಡುವ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಹರ್ಯಾಣದಂತಹ ರಾಜ್ಯಗಳು ಅಭಿವೃದ್ಧಿಯಲ್ಲಿ, ಶಿಕ್ಷಣದಲ್ಲಿ ಸಂಪೂರ್ಣ ಹಿಂದಿವೆ. ಅವರೆಲ್ಲರೂ ದಕ್ಷಿಣ ಭಾರತವನ್ನು ತಮಗೆ ಮಾದರಿಯಾಗಿರಿಸಿಕೊಳ್ಳಬೇಕು. ಅದಕ್ಕಾಗಿ ಕಡ್ಡಾಯವಾಗಿ ಅವರು ಒಂದು ದಕ್ಷಿಣ ಭಾರತೀಯ ಭಾಷೆಯನ್ನು ಕಲಿಯಲು ಕೇಂದ್ರ ಸರಕಾರ ಸೂಚನೆ ನೀಡಬೇಕು. ಹಿಂದಿಯ ಸ್ಥಿತಿಯೇ ಹೀಗಿರುವಾಗ, ಸಂಸ್ಕೃತವನ್ನು ಭಾರತದ ಮೇಲೆ ಹೇರುವುದಕ್ಕೆ ಇರುವ ಕಾರಣಗಳಾದರೂ ಏನು? ಹೊಸದಾಗಿ ಸಂಸ್ಕೃತವನ್ನು ಕಲಿತು ಭಾರತ ಸಾಧಿಸುವುದಾದರೂ ಏನು?

‘‘ಅಂಬೇಡ್ಕರ್ ಅವರು ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಲು ಆಗ್ರಹಿಸಿದ್ದರು. ಈ ನಿಟ್ಟಿನಲ್ಲಿ ಮನವಿಯನ್ನು ಮಂಡಿಸಲು ಇಚ್ಛಿಸಿದ್ದರು. ಇದನ್ನು ಸರ್ವ ಧರ್ಮದ ಮುಖಂಡರು ಬೆಂಬಲಿಸಿ ಸಹಿ ಹಾಕಿದ್ದರು’’ ಹೀಗೆನ್ನುತ್ತಾ ಇದು ಮುಂದೆ ಮಂಡನೆಯಾಯಿತೋ ಇಲ್ಲವೋ ಎಂದು ಗೊತ್ತಿಲ್ಲ ಎಂದು ಬೋಬ್ಡೆ ತಮ್ಮ ಭಾಷಣದಲ್ಲಿ ಹೇಳುತ್ತಾರೆ. ಒಬ್ಬ ನ್ಯಾಯಮೂರ್ತಿ ಒಂದು ಗಂಭೀರ ವಿಷಯವನ್ನು ಅಂಬೇಡ್ಕರ್ ಹೆಸರಿನಲ್ಲಿ ಪ್ರಸ್ತಾಪಿಸುವಾಗ, ಅದರ ವಿವರಗಳನ್ನು ಸಂಪೂರ್ಣವಾಗಿ ಅರಿತುಕೊಳ್ಳುವುದು ಅತ್ಯಗತ್ಯ. ಆರೆಸ್ಸೆಸ್ ವಿಶ್ವವಿದ್ಯಾನಿಲಯದಲ್ಲಿ ತರಬೇತಿ ಪಡೆದ ಪಂಡಿತರು ಪ್ರಚಾರ ಮಾಡಿಕೊಂಡು ಬಂದ ಒಂದು ಸುಳ್ಳನ್ನು ಆಧಾರವಾಗಿಟ್ಟುಕೊಂಡು ನ್ಯಾಯಮೂರ್ತಿಯೊಬ್ಬರು ಸಾರ್ವಜನಿಕ ಭಾಷಣವನ್ನು ಮಾಡುತ್ತಾರಾದರೆ, ನ್ಯಾಯಲಯದೊಳಗೆ ದೇಶದ ಹಿತಾಸಕ್ತಿಗೆ ಸಂಬಂಧಪಟ್ಟ ವಿಷಯಕ್ಕೆ ಎಷ್ಟರ ಮಟ್ಟಿಗೆ ನ್ಯಾಯವನ್ನು ನೀಡಬಲ್ಲರು? ಸಂಸ್ಕೃತವನ್ನು ಭಾರತದ ಅಧಿಕೃತ ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕು ಎಂಬ ತಿದ್ದುಪಡಿಯನ್ನು ಸಂವಿಧಾನ ರಚನಾ ಸಭೆಯ ಮುಂದಿಟ್ಟದ್ದು ಲಕ್ಷ್ಮಿಕಾಂತ್ ಮೈತ್ರಾ ಎಂಬವರು. ಆದರೆ ಇದನ್ನು ಯಾರೂ ಅಧಿಕೃತವಾಗಿ ಬೆಂಬಲಿಸಿರಲಿಲ್ಲ. ಬದಲಿಗೆ ಹಲವು ನಾಯಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ಮುಂದಿಟ್ಟಿದ್ದರು.

ಅಂದಿನ ಚರ್ಚಾ ಸಭೆಯಲ್ಲಿ ದುರ್ಗಾಬಾಯಿಯವರು ‘ಹಿಂದಿಗಿಂತ ಪರ್ಷಿಯನ್ ಮಿಶ್ರಿತ ಹಿಂದೂಸ್ತಾನಿ ಹಾಗೂ ರೋಮನ್ ಅಂಕಿಗಳು ದೇಶ ಭಾಷೆಯೊಳಗೆ ಸೇರ್ಪಡಲಿ’ ಎಂದು ಅಭಿಪ್ರಾಯ ಪಟ್ಟಿದ್ದರು. ಜನಸಂಘದ ಸಂಸ್ಥಾಪಕ ಶಾಮಪ್ರಸಾದ್ ಮುಖರ್ಜಿಯವರು, ಯಾವುದೇ ಭಾಷೆ ಅಧಿಕೃತ ರಾಷ್ಟ್ರಭಾಷೆಯಾಗುವುದು ಬೇಡ ಎಂದು ಅಭಿಪ್ರಾಯಪಟ್ಟಿದ್ದರು. ಹಿಂದುತ್ವದ ಇನ್ನೋರ್ವ ನಾಯಕ ಪುರುಷೋತ್ತಮ ದಾಸ್ ಟಂಡನ್ ಅವರು, ‘ಸಂಸ್ಕೃತವು ದೇಶದ ಅಧಿಕೃತಭಾಷೆಯಾಗುವುದು ಕಾರ್ಯಸಾಧ್ಯವಲ್ಲ. ಪ್ರಾಕ್ಟಿಕಲ್ ಆಗಿ ಜಾರಿಗೊಳಿಸುವಾಗ ಅದು ವಿಫಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದರು. ಚರ್ಚೆಯ ಕೊನೆಯಲ್ಲಿ ತಾವು ಮಂಡಿಸಿದ ಪ್ರಸ್ತಾವವನ್ನು ಲಕ್ಷ್ಮೀಕಾಂತ್ ಮೈತ್ರಾ ಅವರು ಹಿಂದೆಗೆದುಕೊಂಡರು. ಅಂಬೇಡ್ಕರ್‌ಗೆ ಹಿಂದಿ ರಾಷ್ಟ್ರಭಾಷೆಯಾಗಬೇಕು ಎಂಬ ಕುರಿತು ಒಲವಿದ್ದದ್ದು ನಿಜ. ಹಾಗೆಯೇ ಅಂಬೇಡ್ಕರ್ ಸಂಸ್ಕೃತವನ್ನು ಆಳವಾಗಿ ಅಧ್ಯಯನವೂ ಮಾಡಿದ್ದರು. ಆದರೆ ಸಂಸ್ಕೃತ ಈ ದೇಶಕ್ಕೆ ಮಾಡಿದ ಹಾನಿ, ಆಘಾತಗಳ ಕುರಿತಂತೆ ಅವರಿಗೆ ತಿಳುವಳಿಕೆಯಿತ್ತು. ಅಂಬೇಡ್ಕರ್ ಜಯಂತಿಯ ದಿನ, ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳು ಚರ್ಚೆಯಾಗಬೇಕಾಗಿದೆ. ಸಂವಿಧಾನಕ್ಕೆ ಎದುರಾಗಿರುವ ಸವಾಲುಗಳ ಬಗ್ಗೆ ನ್ಯಾಯಮೂರ್ತಿಗಳು ಮಾತನಾಡಬೇಕಾಗಿದೆ. ಆದರೆ ಅವರಿಗೆ ಅದೆಲ್ಲವನ್ನೂ ಚರ್ಚಿಸುವುದು ಇಷ್ಟವಿಲ್ಲ. ಆ ಕಾರಣಕ್ಕಾಗಿಯೇ ಕಸದ ತೊಟ್ಟಿ ಸೇರಿದ್ದ ಹಳೆಯ ಚರ್ಚೆಯೊಂದನ್ನು ಹುಡುಕಿ ತೆಗೆದು, ಅದನ್ನು ಅಂಬೇಡ್ಕರ್ ಹೆಸರಲ್ಲಿ ಸಾರ್ವಜನಿಕವಾಗಿ ಪ್ರದರ್ಶಿಸುವ ವ್ಯರ್ಥ ಪ್ರಯತ್ನವೊಂದನ್ನು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News