ಪಾಕ್ ಬೆಂಬಲವೇ ತಾಲಿಬಾನ್ ಯಶಸ್ಸಿಗೆ ಪ್ರಮುಖ ಕಾರಣ: ಅಮೆರಿಕ ಸೆನೆಟರ್ ಆರೋಪ

Update: 2021-04-16 15:53 GMT
photo: twitter(@jackreed2020)

ವಾಶಿಂಗ್ಟನ್, ಎ. 16: ಅಫ್ಘಾನಿಸ್ತಾನದ ಸಂಘರ್ಷದಲ್ಲಿ ಪಾಕಿಸ್ತಾನವು ಉಭಯ ಬಣಗಳಿಗೂ ಬೆಂಬಲ ನೀಡಿದೆ ಹಾಗೂ ತಾಲಿಬಾನ್‌ನ ಯಶಸ್ಸಿನಲ್ಲಿ ಅದು ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ಅವೆುರಿಕದ ಹಿರಿಯ ಸೆನೆಟರ್ ಹಾಗೂ ಸೆನೆಟ್ ಸಶಸ್ತ್ರ ಸೇವೆಗಳ ಸಮಿತಿಯ ಅಧ್ಯಕ್ಷ ಜಾಕ್ ರೀಡ್ ಹೇಳಿದ್ದಾರೆ.

ಸೆಪ್ಟಂಬರ್ 11ರ ವೇಳೆಗೆ ಸಂಘರ್ಷಪೀಡಿತ ಅಫ್ಘಾನಿಸ್ತಾನದಿಂದ ಎಲ್ಲ ಅಮೆರಿಕನ್ ಸೈನಿಕರನ್ನು ವಾಪಸ್ ಕರೆಸುವುದಾಗಿ ಅಮೆರಿಕ ಘೋಷಿಸಿದ ಒಂದು ದಿನದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

‘‘ತಾಲಿಬಾನ್‌ಗೆ ಪಾಕಿಸ್ತಾನದಲ್ಲಿ ಆಶ್ರಯ ನೀಡಲಾಗುತ್ತಿದೆ. ಅದನ್ನು ಕೊನೆಗೊಳಿಸಲು ಅಮೆರಿಕಕ್ಕೆ ಸಾಧ್ಯವಾಗದಿರುವುದೇ ತಾಲಿಬಾನ್ ಯಶಸ್ಸಿಗೆ ಮಹತ್ವದ ಕಾರಣವಾಗಿದೆ’’ ಎಂದು ಗುರುವಾರ ಸೆನೆಟ್‌ನಲ್ಲಿ ಮಾತನಾಡಿದ ಅವರು ಹೇಳಿದರು.

ತಾಲಿಬಾನಿಗರಿಗೆ ಪಾಕಿಸ್ತಾನವು ತನ್ನ ನೆಲದಲ್ಲಿ ಸುರಕ್ಷಿತ ಆಶ್ರಯ ನೀಡಿರುವುದು ಹಾಗೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್ ಸರ್ವಿಸಸ್ ಇಂಟಲಿಜನ್ಸ್ ಮುಂತಾದ ಸರಕಾರಿ ಸಂಸ್ಥೆಗಳು ಅದಕ್ಕೆ ನೀಡಿರುವ ಬೆಂಬಲವೇ ತಾಲಿಬಾನ್ ಯಶಸ್ಸಿನ ಹಿಂದಿನ ಪ್ರಮುಖ ಕಾರಣಗಳಾಗಿವೆ. ಪಾಕಿಸ್ತಾನವು ತಾಲಿಬಾನ್‌ಗೆ ನೀಡುತ್ತಿರುವ ಬೆಂಬಲವನ್ನು ಕೊನೆಗೊಳಿಸಲು ಅಮೆರಿಕಕ್ಕೆ ಅಸಾಧ್ಯವಾಗಿರುವುದು ತಾಲಿಬಾನ್ ವಿರುದ್ಧದ ಹೋರಾಟದಲ್ಲಿ ಅಮೆರಿಕ ಹಿನ್ನಡೆ ಅನುಭವಿಸಲು ಕಾರಣವಾಗಿದೆ ಎಂದು ರೀಡ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News