ಐಸಿಸಿ ಟ್ವೆಂಟಿ-20 ವಿಶ್ವಕಪ್: ಪಾಕಿಸ್ತಾನ ಕ್ರಿಕೆಟಿಗರಿಗೆ ವೀಸಾ ನೀಡಲು ಕೇಂದ್ರ ಸರಕಾರ ಸಜ್ಜು

Update: 2021-04-17 07:01 GMT

ಹೊಸದಿಲ್ಲಿ:  ಈ ವರ್ಷ ನಿಗದಿಯಾಗಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್ ಆತಿಥ್ಯವಹಿಸಲಿರುವ ಸ್ಥಳಗಳನ್ನು  ಅಂತಿಮಗೊಳಿಸಿರುವ ಬಿಸಿಸಿಐ ಫೈನಲ್ ಪಂದ್ಯವನ್ನು ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಯೋಜಿಸಲು ನಿರ್ಧರಿಸಿದೆ.

ದಿಲ್ಲಿ, ಮುಂಬೈ, ಚೆನ್ನೈ, ಕೋಲ್ಕತಾ, ಬೆಂಗಳೂರು, ಹೈದರಾಬಾದ್ ಹಾಗೂ ಧರ್ಮಶಾಲಾಗಳಲ್ಲೂ ವಿಶ್ವಕಪ್ ಪಂದ್ಯಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಇದೇ ವೇಳೆ, ಬಾಬರ್ ಆಝಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಅಕ್ಟೋಬರ್ ನಲ್ಲಿ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್‍ನಲ್ಲಿ ಭಾಗವಹಿಸಲು ಭಾರತಕ್ಕೆ ಪ್ರಯಾಣಿಸಲು ಯಾವುದೇ ಸಮಸ್ಯೆ ಇರುವುದಿಲ್ಲ. ನೆರೆಯ ರಾಷ್ಟ್ರ ಆಟಗಾರರಿಗೆ ವೀಸಾ ನೀಡಲು ಸರಕಾರ ಸಜ್ಜಾಗಿದೆ ಎಂದು ತಿಳಿದುಬಂದಿದೆ.

ಪಾಕಿಸ್ತಾನದ ಆಟಗಾರರಿಗೆ ವೀಸಾ ನೀಡುವ ಕುರಿತಾಗಿ ಸರಕಾರದ ನಿರ್ಧಾರದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ ಶಾ ಅವರು ಅಪೆಕ್ಸ್ ಕೌನ್ಸಿಲ್ ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪಾಕಿಸ್ತಾನ ಕ್ರಿಕೆಟ್ ತಂಡದ ವೀಸಾ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಆದಾಗ್ಯೂ ಪಾಕ್ ಕ್ರಿಕೆಟ್ ಅಭಿಮಾನಿಗಳು ಪಂದ್ಯಗಳನ್ನು ವೀಕ್ಷಿಸಲು ಗಡಿದಾಟಿ ಬರಬಹುದೇ ಎಂಬ ಕುರಿತು ಇನ್ನೂ ಸ್ಪಷ್ಟವಾಗಿಲ್ಲ ಎಂದು ಅಪೆಕ್ಸ್ ಕೌನ್ಸಿಲ್ ನ ಸದಸ್ಯರೊಬ್ಬರು ಪರಿಸ್ಥಿತಿಯ ಬಗ್ಗೆ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.

ಉಭಯ ದೇಶಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಭಾರತ ಹಾಗೂ ಪಾಕಿಸ್ತಾನ ಹಲವು ವರ್ಷಗಳಿಂದ ದ್ವಿಪಕ್ಷೀಯ ಕ್ರಿಕೆಟ್ ಸರಣಿಯನ್ನು ಆಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News