ತಾಯಂದಿರನ್ನು ಕಳೆದುಕೊಂಡ ಗಂಟೆಗಳಲ್ಲೇ ಕರ್ತವ್ಯಕ್ಕೆ ಮರಳಿದ ಇಬ್ಬರು ವೈದ್ಯರು

Update: 2021-04-18 04:13 GMT
ಸಾಂದರ್ಭಿಕ ಚಿತ್ರ

ವಡೋದರ, ಎ.18: ಕೋವಿಡ್‌ಗೆ ಬಲಿಯಾದ ತಾಯಂದಿರ ಅಂತ್ಯಸಂಸ್ಕಾರ ನೆರವೇರಿಸಿದ ಇಬ್ಬರು ವೈದ್ಯರು ಮರುಕ್ಷಣವೇ ಮತ್ತೆ ಪಿಪಿಇ ಕಿಟ್ ಧರಿಸಿ ಕೋವಿಡ್-19 ಸೋಂಕಿತರ ಜೀವರಕ್ಷಣೆ ಕಾರ್ಯಕ್ಕೆ ಧುಮುಕಿದ್ದಾರೆ. ’ಕರ್ತವ್ಯ ಮೊದಲು’ ಎಂಬ ತಾಯಿಯ ಉಪದೇಶವೇ ತಮಗೆ ತಕ್ಷಣ ಕರ್ತವ್ಯಕ್ಕೆ ಮರಳಲು ಪ್ರೇರಣೆ ಎಂದು ವೈದ್ಯೆ ಡಾ.ಶಿಲ್ಪಾ ಪಟೇಲ್ ಹೇಳಿದ್ದಾರೆ.

ಶಿಲ್ಪಾ ಅವರ ತಾಯಿ ಗುರುವಾರ ಮುಂಜಾನೆ 3:30ಕ್ಕೆ ಕೊರೋನ ವಿರುದ್ಧದ ಹೋರಾಟದಲ್ಲಿ ಜೀವ ಕಳೆದುಕೊಂಡರು. ಸರಕಾರಿ ಸ್ವಾಮ್ಯದ ಎಸ್‌ಎಸ್‌ಜಿ ಆಸ್ಪತ್ರೆಯ ದೇಹರಚನಾ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿಯಾಗಿರುವ ಶಿಲ್ಪಾ, ಕೇವಲ ಆರು ಗಂಟೆಯ ಅಂತರದಲ್ಲಿ ಮತ್ತೆ ಜೀವರಕ್ಷಣೆ ಕಾರ್ಯಕ್ಕೆ ಧುಮುಕಿದರು. 77 ವರ್ಷದ ತಾಯಿ ಕಾಂತಾ ಅಂಬಾಲಾಲ್ ಪಟೇಲ್ ಅವರ ಅಂತ್ಯಸಂಸ್ಕಾರ ನೆರವೇರಿಸಿದ ತಕ್ಷಣ ಮತ್ತೆ ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗೆ ಬರುವ ಮೂಲಕ ಕರ್ತವ್ಯಪ್ರಜ್ಞೆ ಮೆರೆದರು.

ಡಾ.ರಾಹುಲ್ ಪರ್ಮಾರ್ ಕೂಡಾ ತಮ್ಮ ತಾಯಿ ಕಾಂತಾ ಪರ್ಮಾರ್ (67) ಅವರನ್ನು ಕಳೆದುಕೊಂಡರು. ಕೋವಿಡ್ ನಿರ್ವಹಣೆಯ ನೋಡಲ್ ಅಧಿಕಾರಿಯಾಗಿ ಮತ್ತು ಮೃತದೇಹಗಳ ವಿಲೇವಾರಿ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಾ.ರಾಹುಲ್, ತಮ್ಮ ತಾಯಿಯ ಅಂತ್ಯಸಂಸ್ಕಾರ ನೆರವೇರಿಸಿ ನೇರವಾಗಿ ಕರ್ತವ್ಯಕ್ಕೆ ಮರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News