ಲಡಾಖ್ ಬಿಕ್ಕಟ್ಟು:ಎರಡು ಸ್ಥಳಗಳಿಂದ ಸೇನೆಯ ಹಿಂದೆಗೆತಕ್ಕೆ ಚೀನಾ ನಕಾರ

Update: 2021-04-18 15:33 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಎ.18: ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿನ ಎರಡು ಸಂಘರ್ಷ ತಾಣಗಳಾದ ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾ ಪೋಸ್ಟ್‌ನಿಂದ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಚೀನಾ ನಿರಾಕರಿಸಿದೆ ಎಂದು ಆಂಗ್ಲ ಮಾಧ್ಯಮವೊಂದು ರವಿವಾರ ವರದಿ ಮಾಡಿದೆ.

ಎಪ್ರಿಲ್ ಆರಂಭದಲ್ಲಿ ನಡೆದಿದ್ದ 11ನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆಯಲ್ಲಿ ತಮ್ಮ ನಡುವಿನ ಬಾಕಿಯುಳಿದಿರುವ ವಿವಾದಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳಲು ಭಾರತ ಮತ್ತು ಚೀನಾ ಒಪ್ಪಿಕೊಂಡಿದ್ದವು. ಉಭಯ ದೇಶಗಳು ಲಡಾಖ್‌ನ ಪ್ಯಾಂಗಾಂಗ್ ತ್ಸೊ ಪ್ರದೇಶದಲ್ಲಿ ಸೈನಿಕರ ವಾಪಸಾತಿಯನ್ನು ಪೂರ್ಣಗೊಳಿಸಿವೆ. ಮಾತುಕತೆಗಳ ಸಂದರ್ಭದಲ್ಲಿ ಪೂರ್ವ ಲಡಾಖ್‌ನಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲು ಮತ್ತು ಯಾವುದೇ ಹೊಸ ಘಟನೆಗಳಿಗೆ ಅವಕಾಶ ನೀಡದಿರಲು ಉಭಯ ದೇಶಗಳು ಒಪ್ಪಿಕೊಂಡಿದ್ದವು. ಹೀಗಿದ್ದರೂ ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾ ಪೋಸ್ಟ್‌ನಿಂದ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಚೀನಾ ನಿರಾಕರಿಸಿದೆ.

ಇವರೆಡು ಸ್ಥಳಗಳಿಂದ ತನ್ನ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಚೀನಾ ಮೊದಲು ಒಪ್ಪಿಕೊಂಡಿತ್ತಾದರೂ ನಂತರ ಅದಕ್ಕೆ ನಿರಾಕರಿಸಿದೆ. ಭಾರತವು ಈಗ ತಾನೇನನ್ನು ಸಾಧಿಸಿದ್ದೇನೋ ಅಷ್ಟಕ್ಕೆ ತೃಪ್ತಿ ಪಟ್ಟುಕೊಳ್ಳಬೇಕು ಎಂದೂ ಚೀನಾ ಹೇಳಿದೆ ಎನ್ನಲಾಗಿದೆ.

15 ಮತ್ತು 17ಎ ಗಸ್ತುಕೇಂದ್ರಗಳಲ್ಲಿ ತನ್ನ ಸೈನಿಕರ ಸಂಖ್ಯೆಯನ್ನು ಚೀನಾ ಕಡಿಮೆಗೊಳಿಸಿದೆ ಎಂದು ಮಾತುಕತೆಗಳಲ್ಲಿ ಭಾಗಿಯಾಗಿದ್ದ ಮೂಲವೊಂದನ್ನು ಉಲ್ಲೇಖಿಸಿ ಆಂಗ್ಲ ಮಾಧ್ಯಮವು ವರದಿ ಮಾಡಿದೆ.

ಎಳ್ಳಷ್ಟೂ ಹೊಂದಾಣಿಕೆ ಮಾಡಿಕೊಳ್ಳದಿರುವ ಪೂರ್ವ ನಿರ್ಧಾರದೊಂದಿಗೆ ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆಗೆ ಆಗಮಿಸಿತ್ತು ಎಂದು ಅನಾಮಿಕ ಅಧಿಕಾರಿಗಳು ಕಳೆದ ವಾರ ತಿಳಿಸಿದ್ದರು. ಗೋಗ್ರಾ,ಹಾಟ್ ಸ್ಪ್ರಿಂಗ್ಸ್ ಮತ್ತು ಕೊಂಗ್ಕಾಗಳಲ್ಲಿ ತನ್ನ ಸೈನಿಕರ ಬೆಂಬಲಕ್ಕಾಗಿ ಲಾಜಿಸ್ಟಿಕ್ ಸೌಲಭ್ಯಗಳನ್ನು ಚೀನಾ ಹೊಂದಿದೆ. ಈ ಪ್ರದೇಶಗಳಲ್ಲಿ ವಾಯು ರಕ್ಷಣಾ ಘಟಕ ಮತ್ತು ಫಿರಂಗಿ ಬ್ರಿಗೇಡ್ ಕೂಡ ನೆಲೆಗೊಂಡಿವೆ ಎಂದು ವರದಿಯು ತಿಳಿಸಿದೆ. ತನ್ಮಧ್ಯೆ,ಡೆಸ್ಪಾಂಗ್ ಬಯಲಿನಲ್ಲಿಯ ಬಿಕ್ಕಟ್ಟಿನ ಕುರಿತು ನಿರ್ಧಾರಗಳು ಈಗಲೂ ಬಾಕಿಯಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News