3 ಕೋಟಿ ಆರೋಗ್ಯ ಕಾರ್ಯಕರ್ತರ ಪೈಕಿ ಲಸಿಕೆ ಹಾಕಿಸಿಕೊಂಡವರೆಷ್ಟು ಗೊತ್ತೇ?

Update: 2021-04-19 06:16 GMT
ಸಾಂದರ್ಭಿಕ ಚಿತ್ರ (source: PTI)

ಹೊಸದಿಲ್ಲಿ, ಎ.19: ದೇಶದಲ್ಲಿ ಕೋವಿಡ್-19 ವಿರುದ್ಧದ ಸಮರದ ಅಂಗವಾಗಿ ಲಸಿಕಾ ಉತ್ಸವದಂಥ ಅಬ್ಬರದ ಲಸಿಕೆ ಅಭಿಯಾನ ನಡೆದ ಬಳಿಕವೂ ಮೂರು ಕೋಟಿ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಆರೊಗ್ಯ ಕಾರ್ಯಕರ್ತರ ಪೈಕಿ ಕೇವಲ 91 ಲಕ್ಷ ಮಂದಿಗೆ ಮಾತ್ರ ಕನಿಷ್ಠ ಮೊದಲ ಲಸಿಕಾ ಡೋಸ್ ನೀಡಲಾಗಿದೆ ಎನ್ನುವುದು ಸರ್ಕಾರದ ಅಂಕಿ ಅಂಶಗಳಿಂದ ತಿಳಿದುಬರುತ್ತದೆ. ಅಂದರೆ ಕೇವಲ 37% ಆರೋಗ್ಯ ಕಾರ್ಯಕರ್ತರು ಮಾತ್ರ ಇದುವರೆಗೆ ಲಸಿಕೆ ಪಡೆದಿದ್ದಾರೆ.

ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಿಕೆ ಜನವರಿ 16ರಂದು ಆರಂಭವಾಗಿದ್ದರೂ, ಇದುವರೆಗೆ ಸಾಧಿಸಿರುವ ಪ್ರಗತಿ ನಿರಾಶಾದಾಯಕ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ. 2.36 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಂಡಿದ್ದರು. ನೋಂದಾಯಿತ ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರ ಸಂಖ್ಯೆಯನ್ನಷ್ಟೇ ಪರಿಗಣಿಸಿದರೂ ಈ ಪ್ರಮಾಣ 47% ಮೀರುವುದಿಲ್ಲ. ಹಲವು ರಾಜ್ಯಗಳು ಈ ಆದ್ಯತಾ ವಲಯವನ್ನು ಕ್ರೋಢೀಕರಿಸಲು ಸಾಧ್ಯವಾಗದೇ ಇರುವುದರಿಂದ ನಿಧಾನ ಪ್ರಗತಿ ಕಂಡುಬಂದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಹಲವು ಮಂದಿ ಖ್ಯಾತ ವೈದ್ಯರು ಮತ್ತು ಗಣ್ಯರು ಲಸಿಕೆಯ ಸುರಕ್ಷತೆ, ಕ್ಷಮತೆ ಬಗ್ಗೆ ದೃಢೀಕರಿಸಿ ಆರೋಗ್ಯ ಸಚಿವಾಲಯ ವ್ಯಾಪಕ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡ ಹೊರತಾಗಿಯೂ ಲಸಿಕೆ ಪಡೆಯಲು ಜನತೆಯಲ್ಲಿ ಹಿಂಜರಿಕೆ ಕಂಡುಬರುತ್ತಿದೆ. ಹಲವು ಮಂದಿ ತಮಗೆ ಪ್ರತಿರೋಧ ಶಕ್ತಿ ಇರುವುದರಿಂದ ಸೋಂಕು ತಗಲದು ಎಂಬ ಭಾವನೆಯಲ್ಲಿದ್ದಾರೆ ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.

"ಲಸಿಕೆ ಪಡೆಯಲು ಆರೋಗ್ಯ ಕಾರ್ಯಕರ್ತರಲ್ಲೇ ಹಿಂಜರಿಕೆ ಇರುವುದಕ್ಕೆ ಯಾವ ಸಮರ್ಥನೆಯನ್ನೂ ನೀಡುವಂತಿಲ್ಲ. ಇವರಿಗೇ ಹಿಂಜರಿಕೆ ಇದ್ದರೆ, ವಿಸ್ತೃತ ಸಮಾಜದ ಮನವೊಲಿಸುವುದು ನಿಜಕ್ಕೂ ಅಸಾಧ್ಯ" ಎಂದು ಮಣಿಪಾಲ ಆಸ್ಪತ್ರೆಯ ಅಧ್ಯಕ್ಷ ಡಾ.ಸುದರ್ಶನ್ ಬಲ್ಲಾಳ್ ಹೇಳುತ್ತಾರೆ.

ರವಿವಾರದವರೆಗೆ ದೇಶದಲ್ಲಿ 12.26 ಕೊಟಿ ಡೋಸ್‌ಗಳನ್ನು ನೀಡಲಾಗಿದೆ. 45-60 ಲಕ್ಷ ವಯೋಮಿತಿಯ 10.8 ಲಕ್ಷ ಮಂದಿಗೆ ಹಾಗೂ 60 ವರ್ಷ ಮೇಲ್ಪಟ್ಟ 38.9 ಲಕ್ಷ ಮಂದಿಗೆ ಎರಡೂ ಡೋಸ್‌ಗಳನ್ನು ನೀಡಲಾಗಿದೆ. ಮಹಾರಾಷ್ಟ್ರ (1.21 ಕೋಟಿ), ಉತ್ತರ ಪ್ರದೇಶ (1.07 ಕೋಟಿ), ರಾಜಸ್ಥಾನ (1.06 ಕೋಟಿ) ಮತ್ತು ಗುಜರಾತ್ (1.03) ಕೋಟಿ ಮಾತ್ರ ಒಂದು ಕೋಟಿಗಿಂತ ಹೆಚ್ಚು ಡೋಸ್‌ಗಳನ್ನು ನೀಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News