ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಭಾರತದ ಭೇಟಿ ರದ್ದು

Update: 2021-04-19 09:25 GMT

ಹೊಸದಿಲ್ಲಿ: ಭಾರತದಲ್ಲಿ ಕೊರೋನ ವೈರಸ್ ಸೋಂಕು ಉಲ್ಬಣವಾಗಿರುವ ಕಾರಣ ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್ ಅವರ ಮುಂದಿನ ವಾರದ ಭಾರತದ ಭೇಟಿ ರದ್ದುಗೊಂಡಿದೆ ಎಂದು ಬ್ರಿಟನ್ ಸರಕಾರವನ್ನು ಉಲ್ಲೇಖಿಸಿ ಸುದ್ದಿಸಂಸ್ಥೆ ಎಎಫ್ ಪಿ ವರದಿ ಮಾಡಿದೆ. 

ಈಗಿನ ಕೊರೋನವೈರಸ್ ಪರಿಸ್ಥಿತಿಯನ್ನು ಗಮನಿಸಿದರೆ ಪ್ರಧಾನಿ ಬೊರಿಸ್ ಜಾನ್ಸನ್ ಅವರು ಮುಂದಿನ ವಾರ(ಎ.25) ಭಾರತಕ್ಕೆ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ. ಬ್ರಿಟನ್ ಹಾಗೂ ಭಾರತದ ನಡುವಿನ ಭವಿಷ್ಯದ ಪಾಲುದಾರಿಕೆಗಾಗಿ ತಮ್ಮ ಮಹತ್ವಾಕಾಂಕ್ಷೆಯ ಯೋಜನೆಗಳನ್ನು  ಒಪ್ಪಿಕೊಳ್ಳಲು ಹಾಗೂ ಆರಂಭಿಸಲು ಈ ತಿಂಗಳ ಕೊನೆಯಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಜಾನ್ಸನ್ ಮಾತುಕತೆ ನಡೆಸಲಿದ್ದಾರೆ.  ಇಬ್ಬರು ನಿರಂತರವಾಗಿ ಸಂಪರ್ಕದಲ್ಲಿರುತ್ತಾರೆ.  ಈ ವರ್ಷಾಂತ್ಯದಲ್ಲಿ ವೈಯಕ್ತಿಕವಾಗಿ ಭೇಟಿಯಾಗಲು ಎದುರು ನೋಡುತ್ತಿದ್ದಾರ ಎಂದು ಭಾರತ ಹಾಗೂ ಬ್ರಿಟನ್ ಸರಕಾರ ಜಂಟಿ ಹೇಳಿಕೆಯೊಂದರಲ್ಲಿ ತಿಳಿಸಿವೆ.

ಜಾನ್ಸನ್ ಅವರು ಈ ಹಿಂದೆ ಬ್ರಿಟನ್ ನಲ್ಲಿ ಕೊರೋನ ವೈರಸ್ ಗಂಭೀರ ಸ್ವರೂಪದಲ್ಲಿದ್ದಾಗ ಜನವರಿ 26ರಂದು ಗಣರಾಜ್ಯೋತ್ಸವದಂದು ಭಾರತಕ್ಕೆ ಭೇಟಿ ನೀಡುವ ಕಾರ್ಯಕ್ರಮವನ್ನು ರದ್ದುಪಡಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News