ಜಿ.ವಿ. ಅವರ ‘ಇಗೋ ಕನ್ನಡ’: ಭಾಷೆಯ ಸದುಪಯೋಗಕ್ಕೆ ಒಂದು ಮಾರ್ಗದರ್ಶಿ

Update: 2021-04-19 19:30 GMT

ಕರ್ನಾಟಕದಲ್ಲಿ ‘ಪುರಂ’ಗಳು ಹೇಗೆ ಬಂದವು?
ಬೆಂಗಳೂರು ಮತ್ತು ಮೈಸೂರು ನಗರಗಳಿಗೆ ಮೊದಲ ಬಾರಿ ಹೋದಾಗ ಅಲ್ಲಿನ ಬಡಾವಣೆಗಳಾದ ಮಲ್ಲೇಶ್ವರಂ, ಶೇಷಾದ್ರಿಪುರಂ, ಜಯಲಕ್ಷ್ಮೀಪುರಂ, ಕೃಷ್ಣಮೂರ್ತಿಪುರಂ ಮುಂತಾದ ಹೆಸರುಗಳನ್ನು ನೋಡಿದೆ; ಮನಸ್ಸಿನಲ್ಲಿ ಪ್ರಶ್ನೆ ಮೂಡಿತ್ತು: ಕರ್ನಾಟಕದಲ್ಲಿ ಈ ತಮಿಳು ಹೆಸರುಗಳು ಹೇಗೆ ಬಂದವು ಎಂದು?
ಹೊಟೇಲುಗಳಲ್ಲಿ ‘ಜಹಾಂಗೀರಿ’ ಎಂಬ ಹೆಸರಿನ ಸಿಹಿತಿಂಡಿ ಕೇಳಿ ಆಶ್ಚರ್ಯಪಟ್ಟೆ-ಮೊಗಲರಾಜನ ಹೆಸರಿನ ತಿಂಡಿ ನಮ್ಮೂರಿಗೆ ಹೇಗೆ ಬಂತು ಎಂದು.

ನನ್ನ ಬಂಧು ಒಬ್ಬರ ಮಗನ ಹೆಸರು ಅಜಯ; ಹಿಂದೊಮ್ಮೆ ದೇಶದ ಪ್ರಧಾನ ಮಂತ್ರಿಯಾಗಿದ್ದ ವಿಶ್ವನಾಥ ಪ್ರತಾಪ ಸಿಂಹರ ಮಗನ ಹೆಸರು ಅಜೇಯ ಎಂದು. ಆಗ ಮನಸ್ಸಿನಲ್ಲಿ ಗೊಂದಲ ಹುಟ್ಟಿತು: ಈ ಎರಡರಲ್ಲಿ ಯಾವುದು ಸರಿ ಎಂದು?
ರಾಜಕೀಯದಲ್ಲಿ ಜಾತ್ಯಾತೀತ ಎಂಬ ಶಬ್ದ ಪ್ರಯೋಗವನ್ನು ನೋಡಿದ್ದೇನೆ; ಕೆಲವರು ಅದನ್ನು ಜಾತ್ಯತೀತ ಎಂದು ಪ್ರಯೋಗಿಸುತ್ತಾರೆ. ಯಾವುದು ಸರಿ? ಮಹಾಭಾರತದಲ್ಲಿ ಬರುವ ಹಿಡಿಂಬೆಯ ಮಗ ಘಟೋತ್ಕಚನೋ ಅಲ್ಲ ಘಟೋದ್ಗಜನೋ?

ಈ ತರದ ಅನೇಕ ಪ್ರಶ್ನೆಗಳು ನನ್ನನ್ನು ಆಗಾಗ ಕಾಡುತ್ತಿರುತ್ತವೆ. ಈ ಗೊಂದಲಗಳಿಗೆ ಪರಿಹಾರಗಳನ್ನು ಹುಡುಕುತ್ತಾ ಇದ್ದವನಿಗೆ ಜಿ.ವೆಂಕಟಸುಬ್ಬಯ್ಯ (ಜಿ.ವಿ.) ಅವರು ಬರೆದ ‘ಇಗೋ ಕನ್ನಡ’-ಸಾಮಾಜಿಕ ನಿಘಂಟು* ಕೈಗೆ ಸಿಕ್ಕಿತು. ಕನ್ನಡದ ಭಾಷೆಯ ಬಗ್ಗೆ ಅಭಿಮಾನವಿದ್ದವರೆಲ್ಲರೂ ಅವಶ್ಯವಾಗಿ ಹೊಂದಿರಬೇಕಾದ ಗ್ರಂಥ ಅದು.

‘ಇಗೋ ಕನ್ನಡ’ದ ವೈಶಿಷ್ಟ್ಯ:

ನಾವು ಬಳಸುವ ಭಾಷೆ ಸಂವಹನಕ್ಕೆ ಒಂದು ಮಾಧ್ಯಮ. ಶಬ್ದಗಳ ಪ್ರಯೋಗ, ವ್ಯಾಕರಣದ ಉಪಯುಕ್ತತೆ, ಆಗಾಗ ಬಳಸುವ ನುಡಿಗಟ್ಟುಗಳ ಅರ್ಥ ಮುಂತಾದವುಗಳನ್ನು ಸರಿಯಾಗಿ ಅರಿತು ಪ್ರಯೋಗಿಸಿದರೆ ನಾವು ಏನನ್ನು ತಿಳಿಸಲು ಇಚ್ಛಿಸುತ್ತೇವೆಯೋ ಅದನ್ನು ಓದುವವರು ಅಥವಾ ಕೇಳುವವರು ಗ್ರಹಿಸಲು ಅನುಕೂಲವಾಗುತ್ತದೆ. ತಿಳಿದೋ, ತಿಳಿಯದೆಯೋ ನಾವು ಪ್ರಯೋಗದಲ್ಲಿ ತಪ್ಪುಮಾಡುತ್ತೇವೆ. ಆ ತಪ್ಪುಗಳಿಂದಾಗಿ ಸಂವಹನಕ್ಕೆ ವಿಘ್ನ ಬರುವುದು ಮಾತ್ರವಲ್ಲದೆ ಕೇಳುವವರಿಗೂ ಮಾತನಾಡುವವರಿಗೂ ಮುಜುಗರವಾಗುವ ಸಾಧ್ಯತೆ ಇದೆ.

ಕೆಲವೊಮ್ಮೆ ನಾವು ರೂಢಿಯಲ್ಲಿರುವ ಶಬ್ದ/ಹೆಸರುಗಳನ್ನು ತಪ್ಪಾಗಿ ಉಚ್ಚರಿಸುತ್ತೇವೆ, ವಿದ್ಯಾರ್ಥಿ ಶಬ್ದದ ಬದಲಿಗೆ ವಿಧ್ಯಾರ್ಥಿ, ಉಚ್ಚಾಟನೆ ಬದಲಿಗೆ ಉಚ್ಛಾಟನೆ ಎನ್ನುವುದನ್ನು ಕೇಳಿದಾಗ ನನಗೇ ಮುಜುಗರವಾಗುತ್ತಿತ್ತು. ಭಾಷೆಯ ಬಳಕೆಯಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಆಸಕ್ತ ಓದುಗರಲ್ಲಿ ಉಂಟಾಗುತ್ತಿದ್ದ ಸಂಶಯಗಳ ಪರಿಹಾರಕ್ಕೋಸ್ಕರ ಜಿ.ವಿ.ಯವರು ಅನೇಕ ವರ್ಷ ಪ್ರಜಾವಾಣಿಯಲ್ಲಿ ‘ಇಗೋ ಕನ್ನಡ’ ಹೆಸರಿನಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳನ್ನು ಸಂಪಾದಿಸಿ ಅದೇ ಹೆಸರಿನಲ್ಲಿ ಹೊರತಂದ ಒಂದು ಗ್ರಂಥ. ಪ್ರಾರಂಭದಲ್ಲಿ ಒಂದಾದ ಬಳಿಕ ಇನ್ನೊಂದು ಸಂಪುಟವಾಗಿ ಪ್ರಕಟವಾಯಿತು. ಆ ಬಳಿಕ ಮೂರನ್ನೂ ಒಟ್ಟಾಗಿಸಿ ಮತ್ತಷ್ಟು ಪರಿಶೋಧಿಸಿ ಸಂಯುಕ್ತ ಸಂಪುಟವಾಗಿ ಪ್ರಕಟಿಸಲಾಯಿತು.

ಅದು ಬರೇ ನಿಘಂಟು ಅಲ್ಲ, ಹೆಸರು ತಿಳಿಸುವಂತೆ ಒಂದು ಸಾಮಾಜಿಕ ನಿಘಂಟು. ಅವರೇ ತಮ್ಮ ಪೀಠಿಕೆಯಲ್ಲಿ ಹೇಳುವಂತೆ ನಾವು ಆರಿಸುವ ಶಬ್ದಗಳು, ಅವುಗಳ ವ್ಯತ್ಪತ್ತಿ, ಅರ್ಥವಿಸ್ತಾರ, ಶಬ್ದ ಸ್ವರೂಪ, ರೂಢಿಪ್ರಯೋಗ-ಇವುಗಳೂ ಸಾಮಾನ್ಯ ಜೀವನಕ್ಕೆ ಸಂಬಂಧಪಟ್ಟವು (ಪು.16). ಶಬ್ದಗಳಿಗೆ ವಿವರಣೆ ನೀಡುವಾಗ ಓದುಗರಿಗೆ ಮನದಟ್ಟಾಗಲು ಉದಾಹರಣೆ, ಪದದ ಹುಟ್ಟು, ಅದರ ಸರಿಯಾದ ಪ್ರಯೋಗ ಮುಂತಾದ ವಿಷಯಗಳ ಬಗ್ಗೆ ಅಗತ್ಯವಿದ್ದಲ್ಲಿ ವಿಸ್ತಾರವಾಗಿ, ಕೆಲವೊಮ್ಮೆ ಚುಟುಕಾಗಿ ಹೇಳಿ ನಮ್ಮ ಅರಿವು ವಿಸ್ತರಿಸುವಂತೆ ಮಾಡುತ್ತಾರೆ. ಗ್ರಂಥದ ಉಪಯೋಗದ ಕುರಿತಂತೆ ಆರಂಭದಲ್ಲಿ ಜಿ.ವಿ. ಕೊಟ್ಟ ಸುದೀರ್ಘವಾದ ಪೀಠಿಕೆಯೂ ಜ್ಞಾನದ ಒಂದು ಭಂಡಾರ ಅಂದರೆ ಉತ್ಪ್ರೇಕ್ಷೆಯಾಗಲಾರದು.

‘ಇಗೋ ಕನ್ನಡ’ವನ್ನು ಸಂದೇಹ ಬಂದಾಗ ಮಾತ್ರವಲ್ಲ, ಮನೋರಂಜನೆಗೆ, ಹೆಚ್ಚಿನ ಅರಿವಿಗೋಸ್ಕರವೂ ಮನೆಯಲ್ಲಿ ಚಾ ಹೀರುವಾಗ, ಮಧ್ಯಾಹ್ನ ಬರುವ ನಿದ್ರೆಯನ್ನು ಓಡಿಸಲು ನೋಡುತ್ತಿರುತ್ತೇನೆ. ಎಷ್ಟು ಉಪಯುಕ್ತ ಎಂಬುದಕ್ಕೆ ಕೆಲವು ಉದಾಹರಣೆಗಳನ್ನು ಇಲ್ಲಿ ಹೇಳಬಯಸುತ್ತೇನೆ. ಮೈಸೂರು, ಬೆಂಗಳೂರಿನ ‘ಪುರಂ’ ಬಗ್ಗೆ ಜಿ.ವಿ. ಹೇಳುತ್ತಾರೆ: ಈ ಶಬ್ದಗಳಿಗೆ ಅನುಸ್ವಾರ(ಂ) ಬೇಡ, ಇಲ್ಲಿ ಯಾವನೋ ತಮಿಳು ಅಧಿಕಾರಿ ಮಾಡಿದ ತಪ್ಪಿನಿಂದಾಗಿ ಈ ಶಬ್ದಗಳು ತಮಿಳು ಶಬ್ದಗಳಂತೆ ಆಗಿವೆ. ಜಹಾಂಗೀರಿ ಬಗ್ಗೆ ವಿವರಿಸುತ್ತಾ ‘ಇದು ಒಂದು ಸಿಹಿ ತಿಂಡಿ, ಪಾರಸಿ ಶಬ್ದ. ಜಹಾಂಗೀರ ಚಕ್ರವರ್ತಿಗೆ ಇಂತಹ ತಿನಿಸು ಇದೆ ಎನ್ನುವುದೇ ಗೊತ್ತಿರಲಿಲ್ಲ!’ ಎಂದು ಕಚಗುಳಿ ಇಡುತ್ತಾರೆ.

ಟೊಮೆಟೊದ ಕುರಿತಾದ ವಿವರಣೆ ಹೀಗಿದೆ (ಪು.271). ‘ಅಮೆರಿಕದಲ್ಲಿ ಈ ಶಬ್ದವನ್ನು ಆಡುಭಾಷೆಯಲ್ಲಿ (slang) ಆಕರ್ಷಕ ಹುಡುಗಿ (attractive girl) ಎಂಬರ್ಥದಲ್ಲಿ ಉಪಯೋಗಿಸುತ್ತಾರೆ. ಇಂಗ್ಲೆಂಡಿನಲ್ಲಿ ಟೊಮೆಟೊಗೆ love apple ಎಂದೂ ಹೇಳುತ್ತಾರೆ. ನಮ್ಮಲ್ಲಿ ಸ್ತ್ರೀಯರ ಸೌಂದರ್ಯವರ್ಣನೆಗೆ ಹಳೆಯ ಕಾಲದ ತೊಂಡೆ ಹಣ್ಣೇ ಇನ್ನೂ ಅಧಿಕಾರದಲ್ಲಿದೆ. ಇದು ಆಕ್ರಮಣ ಯುಗ, ಯಾವಾಗ ಯಾರ ಸಿಂಹಾಸನ ಉರುಳಿ ಬೀಳುವುದೋ ಯಾರಿಗೆ ಗೊತ್ತು!’

ಅನ್ಯದೇಶ್ಯ ಶಬ್ದಗಳು: 
ಅವರ ಗ್ರಂಥದ ಒಂದು ವೈಶಿಷ್ಟ್ಯ ಅಂದರೆ, ಅನೇಕ ಭಾಷೆಗಳಿಂದ ಕನ್ನಡಕ್ಕೆ ಬಂದ ಶಬ್ದಗಳು ನಮ್ಮ ಶಬ್ದ ಭಂಡಾರವನ್ನು ಎಷ್ಟು ಶ್ರೀಮಂತಗೊಳಿಸಿವೆ ಎಂದು ಬೇರೆ ಬೇರೆ ಸಂದರ್ಭಗಳಲ್ಲಿ ವಿವರಿಸುತ್ತಾರೆ. ‘ಪಗಾರ’ ಮೂಲತಃ ಪೋರ್ಚುಗೀಸ್ paga ಶಬ್ದ, ಅದು ಮರಾಠಿಗೆ ಬಂದು ಅಲ್ಲಿಂದ ಕನ್ನಡಕ್ಕೆ ಬಂದಿದೆ, ಎನ್ನುತ್ತಾರೆ ಜಿ.ವಿ. ಹಾಗೆಯೇ ‘ಜಾನುವಾರು’ ಪಾರಸೀ ಭಾಷೆಯ ‘ಜಾನ್ ವರ್’ದಿಂದ ಬಂದುದು, ಅದು ಮರಾಠಿಯಲ್ಲಿ ಜನಾವರ್ ಆಗಿ ಕನ್ನಡದಲ್ಲಿ ಜಾನುವಾರು ಆಯಿತು. ಅದರ ಅರ್ಥ: ದನ, ಹಸುಕರು ಮುಂತಾದವು. ಹಾಗೆಯೇ ವಸಾಹತು ಎಂಬುದು ಅರಬಿ ಶಬ್ದ ಪುಸಅತ್‌ನಿಂದ ಬಂದಿದೆ (ಪು. 588).

ಇನ್ನೊಂದೆಡೆ ವಿನೋದಕ್ಕಾಗಿ ಉದಾಹರಿಸುತ್ತಾರೆ: ‘ಈ ಆಸಾಮಿ ಐನಾತಿ ಇಸಮ್ಮು. ಕಚೇರಿಯಲ್ಲಿ ಖಜಾಂಚಿ. ಕುರ್ಚಿಯಲ್ಲಿ ಕುಳಿತು ದೌಲತ್ ನಡೆಸುತ್ತಾನೆ. ಸಂಜೆ ತನ್ನ ಪಟಾಲಮ್ಮಿನೊಡನೆ ಬಂದು ಪಲಾವ್ ತಿಂದು ಶರಾಬ್ ಕುಡಿದು ಜರ್ಬಾಗಿ ನಿದ್ದೆ ಹೊಡೀತಾನೆ.’ ಕನ್ನಡದಂತೆ ಕಾಣುವ ಈ ವಾಕ್ಯಗಳಲ್ಲಿ 13 ಶಬ್ದಗಳು ಅನ್ಯದೇಶ್ಯಗಳು, 10 ನಿಜವಾದ ಕನ್ನಡ ಶಬ್ದಗಳು. ಅನ್ಯದೇಶ್ಯ ಶಬ್ದಗಳು ನಮ್ಮ ಭಾಷೆಗೆ ಎಷ್ಟು ಚೆನ್ನಾಗಿ ಹೊಂದಿಕೊಂಡಿವೆ ಎಂಬುದು ಗೊತ್ತಾಗುತ್ತದೆ, ಎನ್ನುತ್ತಾರೆ (ಪು.41).
‘ಪಟಾಲಂ’ ಹೇಗೆ ಬಂತು ಎಂಬ ಪ್ರಶ್ನೆಗೆ ಅವರು ನೀಡುವ ವಿವರಣೆ (ಪು.42) ಅವರ ಪಾಂಡಿತ್ಯಕ್ಕೆ ಒಂದು ಉದಾಹರಣೆ. ‘ಇದು ಇಂಗ್ಲಿಷ್ ಭಾಷೆಯ ಬೆಟಾಲಿಯನ್(battalion) ಎಂಬ ಶಬ್ದದಿಂದ ಬಂದದ್ದು. ಇಂಗ್ಲಿಷಿಗೆ ಇಟಾಲಿಯನ್ ಭಾಷೆಯಿಂದ ಬಂದದ್ದು. ಇಟಾಲಿಯನ್ ಭಾಷೆಯಲ್ಲಿ ಅದರ ಸ್ವರೂಪ ಬೆಟ್ಟಾಗ್ಲಿಯೋನ್(battaglione). ಇದು ಫ್ರೆಂಚ್ ಭಾಷೆಗೆ ಪ್ರಯಾಣಮಾಡಿ, ಇಂಗ್ಲೆಂಡಿಗೆ ಬಂದು ಕನ್ನಡಕ್ಕೆ ಬಂದಿದೆ. ಇದು ತಮಿಳಿನಲ್ಲಿ ಪಟ್ಟಾಳಮ್, ಮಲಯಾಳದಲ್ಲಿ ಪಟ್ಟಾಲನ್, ತುಳುವಿನಲ್ಲಿ ಪಟಾಲಂ, ತೆಲುಗಿನಲ್ಲಿ ಪಟಾಲಮು.’

ಪರ್ಯಾಯ ಶಬ್ದಗಳಿಲ್ಲದಾಗ ಬಳಕೆಯಲ್ಲಿ ಬೇರೆ ಭಾಷೆಯ ಶಬ್ದಗಳನ್ನು ತುಸು ಬದಲಾಯಿಸಿ ಉಪಯೋಗಿಸಬೇಕೆಂದು ಅವರ ಸಲಹೆ. ಈಗ ಪ್ಲಾಸ್ಟಿಕ್ ಬಳಕೆಯ ಮೇಲೆ ನಿಷೇಧ ಹೇರಲಾಗುತ್ತಿದೆ, ಆದರೆ ಈ ಶಬ್ದ ಈಗ ಬಹಳಷ್ಟು ಬಳಕೆಯಲ್ಲಿದೆ. ಅದು ಇಂಗ್ಲಿಷ್ ಶಬ್ದವಲ್ಲವೇ? ಅದಕ್ಕೆ ಸರಿಯಾದ ಕನ್ನಡ ಶಬ್ದವೇನು? ಎಂಬ ಪ್ರಶ್ನೆಗೆ ಅವರ ಉತ್ತರ, ದಿನ ಬಳಕೆಯಿಂದಾಗಿ ಅದನ್ನು ನಾವು ಒಪ್ಪಿಕೊಳ್ಳಬೇಕು ಅನ್ನುತ್ತಾರೆ. ಅದಕ್ಕೆ ಪೂರಕವಾಗಿ ಸ್ಲೇಟು, ಕೋರ್ಟು, ರೈಲು ಇತ್ಯಾದಿ ಉದಾಹರಣೆಗಳನ್ನು ಹೇಳುತ್ತಾರೆ. ಸಾಮಾಜಿಕ ನಿಘಂಟು ಅಂದ ಮೇಲೆ ಕೆಲವು ಪ್ರಯೋಗಗಳ ಉಗಮ ಮತ್ತು ಅವುಗಳ ಸಮಕಾಲೀನತೆಯ ಬಗ್ಗೆಯೂ ಜಿ.ವಿ. ಅವರು ವಿವರಿಸುತ್ತಾರೆ. ಚತುರ್ವೇದಿ ಎಂಬ ಉಪನಾಮ ಉತ್ತರದಲ್ಲಿ ಬಳಕೆಯಲ್ಲಿದೆ. ಅದರ ಅರ್ಥ ಜ್ಞಾನವನ್ನು ತುಂಬಿಕೊಂಡಿರುವ, ನಾಲ್ಕು ವೇದಗಳನ್ನು ಬಲ್ಲ ಮಹಾ ವಿದ್ವಾಂಸ. ಈಗ ಅದು ವಂಶದ ಹೆಸರು, ವೇದಗಳು ಗೊತ್ತಿಲ್ಲದವರ ಬಗೆಗೂ ಅನ್ವಯವಾಗಿದೆ (ಪು.236).

ಅಬದ್ಧ ಮತ್ತು ತಪ್ಪು ಶಬ್ದಗಳು: 

ನಾವು ದಿನನಿತ್ಯವೂ ಬಳಸುವ ಅನೇಕ ಶಬ್ದಗಳು ಅಬದ್ಧ ಅಥವಾ ತಪ್ಪು ಎಂದು ತಾರ್ಕಿಕವಾಗಿ ಆ ಶಬ್ದಗಳ ಹುಟ್ಟು ಹೇಗೆ ಎಂದು ವಿವರಿಸಿ ನಮಗೆ ಗ್ರಂಥದ ಉದ್ದಕ್ಕೂ ಮನದಟ್ಟು ಮಾಡಲು ಪ್ರಯತ್ನಿಸುತ್ತಾರೆ. ಕೆಲವು ಉದಾಹರಣೆಗಳನ್ನು ಕೋಷ್ಟಕದಲ್ಲಿ ಕೊಡಲಾಗಿದೆ.

ಸ್ವಾರಸ್ಯಕರ ವಿವರಣೆ:

ಕುತೂಹಲವನ್ನು ಹೆಚ್ಚಿಸುವ ಮತ್ತು ಅರಿವನ್ನು ವಿಸ್ತರಿಸುವ ಗುಣ ಅವರ ಬರಹದ ಶೈಲಿಯಲ್ಲಿದೆ. ಪುರಾಣಗಳಿಂದ, ಬೇರೆ ಬೇರೆ ಭಾಷೆಗಳಿಂದ, ಅನೇಕ ಗ್ರಂಥಗಳಿಂದ ಉದ್ಧರಿಸಿದ ಶ್ಲೋಕಗಳು, ಪದ್ಯಗಳು, ನುಡಿಗಟ್ಟುಗಳನ್ನು ಉಪಯೋಗಿಸಿ ವಿವರಿಸುವ ಅವರ ಪರಿ ಅನನ್ಯವಾದುದು.
ಅವರ ವಿವರಣೆಗಳ ಸ್ವಾರಸ್ಯಕ್ಕೆ ಒಂದು ನಿದರ್ಶನ: ‘ನೀರೆ’ ಶಬ್ದದ ಬಗ್ಗೆ ಹೇಳುತ್ತಾ ಅದು ಸೌಂದರ್ಯದ ವಿಚಾರವಾದ ವಿವರಣೆ ಎಂದು ತಿಳಿಸಿ ಕವಿಗಳಿಗೂ, ಯುವಕರಿಗೂ ತುಂಬ ಪ್ರಿಯವಾದ ಶಬ್ದ ಎನ್ನುತ್ತಾರೆ ಜಿ.ವಿ. (ಪು.387).

‘ಏಳೇಳು ಜನ್ಮದ ಕಥೆ’ ಯ ಬಗ್ಗೆ ಓದುತ್ತಾ ಅಜ್ಜಿಕತೆಗಳು ನೆನಪಿಗೆ ಬಂದವು!: ‘ಮನೋರಂಜನೆಗಾಗಿ ನಮ್ಮ ಪೂರ್ವಿಕರು ಸೃಷ್ಟಿಸಿದ ಕಥೆಗಳಿಗಾಗಿ ರೂಪುಗೊಂಡ ಅನೇಕ ಏಳುಗಳಲ್ಲಿ ಒಂದು ಈ ಏಳು ಜನ್ಮ. ಇದನ್ನೇ ಒತ್ತಿ ಹೇಳಲು ಏಳೇಳು ಜನ್ಮವಾಯಿತು.. ಅಂದು ಆ ರಾಕ್ಷಸನಿಗೆ ಏಳು ಜನ್ಮ ತಳೆದು ಕೀಳು ಜನ್ಮವೆತ್ತಿದಾಕ್ಷಣ ಮೋಕ್ಷ ದೊರೆತರೆ ಇಂದಿನ ನಮ್ಮ ಜನಗಳಿಗೆ ಏಳೇಳು ಜನ್ಮ ಕಳೆದರೂ ಬುದ್ಧಿ ಬರುವುದಿಲ್ಲ’ (ಪು.23-24). ಸಂಸ್ಕೃತ ಸುಭಾಷಿತಗಳಲ್ಲಿ ವಿನೋದದ ನುಡಿಗಟ್ಟುಗಳಿವೆ. ‘ಅಹೋರೂಪಂ’ ಬಗ್ಗೆ ವಿವರಿಸುತ್ತಾ ಹೇಳುತ್ತಾರೆ: ‘ಇದು ಸಂಸ್ಕೃತದ ಒಂದು ಆಶ್ಚರ್ಯ ಸೂಚಕ ನುಡಿಗಟ್ಟು, ಅಷ್ಟೆ!. ಎಂಥ ಸೌಂದರ್ಯ ಎಂಬುದು ಅರ್ಥ. ಯಾವುದಾದರು ಒಂದು ಸಂದರ್ಭದಲ್ಲಿ ಇಂಥ ಉದ್ಗಾರವನ್ನು ಮಾಡಿದರೆ ಅದಕ್ಕೆ ಅರ್ಥವಿರುತ್ತದೆ. ಇಲ್ಲದಿದ್ದರೆ ಅದರಲ್ಲಿ ಸ್ವಾರಸ್ಯವಿರುವುದಿಲ್ಲ.’ ಆ ಸುಭಾಷಿತವನ್ನು ಅವರು ಉದ್ಧರಿಸುತ್ತಾರೆ:
ಉಷ್ಟ್ರಕಾಣಾಂ ವಿವಾಹೇಷು ಗಾರ್ದಭಾ ಏವ ಗಾಯಕಾಃ
ಪರಸ್ಪರಂ ಪ್ರಶಂಸಂತಿ ಅಹೋರೂಪಂ ಅಹೋ ಧ್ವನಿಃ

ಒಂಟೆಗಳ ಮದುವೆಯಲ್ಲಿ ಕತ್ತೆಗಳೇ ಸಂಗೀತಗಾರರು. ಅವರಿಬ್ಬರೂ ಪರಸ್ಪರ ಹೊಗಳುತ್ತಾರೆ. ಕತ್ತೆಗಳು ಒಂಟೆಗಳಿಗೆ ‘ಆಹಾ ಎಂಥಾ ಸೌಂದರ್ಯ’ ಎಂದರೆ ಒಂಟೆಗಳು ‘ಆಹಾ, ಎಂಥಾ ಶಾರೀರ, ಎಂಥಾ ಇಂಪಾದ ಧ್ವನಿ’ ಎಂದು ಕತ್ತೆಗಳನ್ನು ಹೊಗಳುತ್ತವಂತೆ.

ಸಂಸ್ಕೃತ ಸುಭಾಷಿತದಿಂದ ಅವರು ಇಂಗ್ಲಿಷಿನ ಒಂದು ಪ್ರಯೋಗಕ್ಕೆ ನಮ್ಮನ್ನು ಒಯ್ಯುತ್ತಾರೆ. ‘ಹೀಗೆ ಪರಸ್ಪರ ಹೊಗಳುವವರನ್ನು ಇಂಗ್ಲಿಷಿನಲ್ಲಿ MAS ಎಂಬ Acronym  ಅನ್ನು ಉಪಯೋಗಿಸಿ ಬಣ್ಣಿಸುತ್ತಾರೆ. MAS ಅಂದರೆ Mutual Admiration Society ಎಂದು ವಿವರಣೆ (ಪು.57-58).

ಗುಳಪಾವಟೆ:
‘ಗುಳಪಾವಟೆ’ ಎಂಬ ಸಿಹಿತಿಂಡಿ ಬಗ್ಗೆ ಜಿ.ವಿ.ಯರ ವಿವರಣೆ (ಪು.219) ಓದುವಾಗ ಬಾಯಲ್ಲಿ ನೀರೂರುತ್ತದೆ!
‘ಈ ತಿನಿಸನ್ನು ಬೆಲ್ಲದ ಪಾಕದಲ್ಲಿ ರವೆಯಿಂದ ತಯಾರು ಮಾಡುತ್ತಾರೆ. ಜತೆಗೆ ರುಚಿಗೆ ತಕ್ಕಂತೆ ತುಪ್ಪ, ಪಚ್ಚ್ಚೆಕರ್ಪೂರ, ಒಣದ್ರಾಕ್ಷಿ, ಗೋಡಂಬಿಗಳನ್ನು ಸೇರಿಸುತ್ತಾರೆ. ಇದು ಒಬ್ಬಟ್ಟಿನ ಹೂರಣದಂತೆ ತುಂಬ ಮೃದುವಾಗಿರುತ್ತದೆ.

ಗುಳಪಾವಟೆ ಎಂಬ ಶಬ್ದಕ್ಕೆ ಕೊನೆಯ ಪಕ್ಷ ಒಂದು ಶತಮಾನದ ಚರಿತ್ರೆಯಿದೆ. ಈ ಶತಮಾನದ ಪ್ರಾರಂಭದಲ್ಲಿ ನೆಂಟರು ಮನೆಗೆ ಹೋಗುವಾಗ ಜತೆಯಲ್ಲಿ ಒಯ್ಯುವ ಗುಳಪಾವಟೆಗೆ ಬಹಳ ಗೌರವದ ಸ್ಥಾನವಿದ್ದಿತೆಂಬುದನ್ನು ನಾನು ಸ್ಥಾಪಿಸಬಲ್ಲೆ. ಗುಳ=ಗುಡ. ಸಂಸ್ಕೃತದಲ್ಲಿ ಗುಡ ಎಂದರೆ ಬೆಲ್ಲ...
ಗುಳಪಾವಟೆ ತುಂಬ ರುಚಿಕರವಾದ ತಿಂಡಿ. ತಯಾರು ಮಾಡಿದ ಮೇಲೆ ಒಂದು ವಾರ ಇಟ್ಟಿರಬಹುದು. ಕೆಡದೆ ರುಚಿ ಹೆಚ್ಚುತ್ತಾ ಹೋಗುತ್ತದೆ. ಇದರ ಬಗ್ಗೆ ನ್ಯಾಯಾಲಯದಲ್ಲಿ ನಾನು ಸಾಕ್ಷಿ ನೀಡಬಲ್ಲೆ. ಇದರ ತಯಾರಿಕೆಯಲ್ಲಿ ನಮ್ಮ ಮುತ್ತಜ್ಜಿ authority ಆಗಿದ್ದರು.’

* ಇಗೋ ಕನ್ನಡ-ಸಾಮಾಜಿಕ ನಿಘಂಟು (ಸಂಯುಕ್ತ ಸಂಪುಟ), 2013; ಸಂಪಾದಕರು: ಜಿ. ವೆಂಕಟಸುಬ್ಬಯ್ಯ ಪ್ರ: ನವಕರ್ನಾಟಕ ಪ್ರಕಾಶನ, ಬೆಂಗಳೂರು, ಪುಟಗಳು: 750, ಬೆಲೆ ರೂ.650

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News