ಜೈಶ್ರೀರಾಮ್ ಘೋಷಣೆ ಕೂಗಲು ನಿರಾಕರಿಸಿದ ಬಾಲಕನಿಗೆ ಬಿಜೆಪಿ ಕಾರ್ಯಕರ್ತನಿಂದ ಥಳಿತ

Update: 2021-04-20 17:26 GMT

ಹೊಸದಿಲ್ಲಿ, ಎ.20: ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗದೆ ಇದ್ದುದಕ್ಕಾಗಿ ಹತ್ತು ವರ್ಷದ ಬಾಲಕನಿಗೆ ಬಿಜೆಪಿಯ ಕಾರ್ಯಕರ್ತನೊಬ್ಬ ಹಿಗ್ಗಾಮಗ್ಗಾ ಥಳಿಸಿದ ಘಟನೆ ಪಶ್ಚಿಮಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಮಂಗಳವಾರ ವರದಿಯಾಗಿದೆ. ನಾಡಿಯಾ ಜಿಲ್ಲೆಯ ಫುಲಿಯಾದಲ್ಲಿ ಬಿಜೆಪಿ ಕಾರ್ಯಕರ್ತ ಮಹಾದೇಬ್ ಪ್ರಾಮಾಣಿಕ್ ನಡೆಸುತ್ತಿರುವ ಚಹಾದಂಗಡಿಯ ಮುಂದೆ ನಾಲ್ಕನೆ ತರಗತಿಯ ವಿದ್ಯಾರ್ಥಿ ಮಹಾದೇವ್ ಶರ್ಮಾ ಹಾದುಹೋಗುತ್ತಿದ್ದಾಗ, ಆತನನ್ನು ಪ್ರಾಮಾಣಿಕ್ ಅಡ್ಡಗಟ್ಟಿದ್ದ.

ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಿರುವುದಕ್ಕಾಗಿ ಪ್ರಾಮಾಣಿಕ್ ಬಾಲಕನ ತಂದೆಯನ್ನು ಅವಾಚ್ಯವಾಗಿ ಬಯ್ಯತೊಡಗಿದನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆನಂತರ ಬಾಲಕನಿಗೆ ಬೆದರಿಕೆ ಹಾಕಿದ ಪ್ರಾಮಾಣಿಕ್, ‘ಜೈಶ್ರೀರಾಮ್’ ಘೋಷಣೆ ಕೂಗುವಂತೆ ಆತನನ್ನು ಒತ್ತಾಯಿಸಿದ್ದನೆನ್ನಲಾಗಿದೆ. ಬಾಲಕ ನಿರಾಕರಿಸಿದಾಗ ಆತನಿಗೆ ಪ್ರಾಮಾಣಿಕ್ ಹಿಗ್ಗಾಮಗ್ಗಾ ಥಳಿಸತೊಡಗಿದ. ಆಗ ಕೆಲವು ಗ್ರಾಮಸ್ಥರು ಧಾವಿಸಿ ಬಾಲಕನನ್ನು ಪಾರು ಮಾಡಿದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
 
ಹಲ್ಲೆಗೊಳಗಾದ ಬಾಲಕನ ತಂದೆ ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದು, ಟಿಎಂಸಿ ಪಕ್ಷದ ಬೆಂಬಲಿಗನಾಗಿದ್ದಾನೆ. ಎಪ್ರಿಲ್ 17ರ ಚುನಾವಣೆಯಲ್ಲಿ ಆತ ಟಿಎಂಸಿ ಪಕ್ಷದ ಪರವಾಗಿ ಸಕ್ರಿಯವಾಗಿ ಕೆಲಸ ಮಾಡಿದ್ದರಿಂದ ಪ್ರಾಮಾಣಿಕ್ನನ್ನು ಕೆರಳಿಸಿತ್ತೆಂದು ಸ್ಥಳೀಯರುಹೇಳುತ್ತಾರೆ. ಬಾಲಕನ ಮೇಲೆ ಹಲ್ಲೆ ನಡೆಸಿದ ಆರೋಪಿ ಪ್ರಾಮಾಣಿಕ್, ಸ್ಥಳೀಯ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಮಿತು ಪ್ರಾಮಾಣಿಕ್ ಅವರ ಪತಿ.

ಥಳಿತಕ್ಕೊಳಗಾದ ಬಾಲಕನ ಮುಖ,ತಲೆ ಹಾಗೂ ಬೆನ್ನಿನ ಮೇಲೆ ಗಾಯಗಳಾಗಿದ್ದು, ಆತನನ್ನು ರಾಣಾಘಾಟ್ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕ ಆಘಾತಕ್ಕೊಳಗಾಗಿದ್ದು, ಆತ ದೇಹಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆಯ ಬಳಿಕ ಉದ್ರಿಕ್ತರಾದ ಸ್ಥಳೀಯರು ಪ್ರಾಮಾಣಿಕ್ನನ್ನು ಥಳಿಸಿದ್ದಾರೆ ಹಾಗೂ ಕೆಲವು ಪ್ರತಿಭಟನಕಾರರು ಆತನ ಬಂಧನಕ್ಕೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ 12ರಲ್ಲಿ ರಸ್ತೆ ತಡೆ ನಡೆಸಿದರು. ಘಟನೆಯ ಬಳಿಕ ಪ್ರಾಮಾಣಿಕ್ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News