​ಕೊರೋನ: ಎಚ್ಚರ ತಪ್ಪಿದವರು ಯಾರು?

Update: 2021-04-21 04:44 GMT

‘‘ಜನರು ಎಚ್ಚರ ವಹಿಸಿದ್ದರೆ ಕೋವಿಡ್ ನಿಯಂತ್ರಣಕ್ಕೆ ಕಠಿಣ ಕ್ರಮದ ಅಗತ್ಯವೇ ಇರುತ್ತಿರಲಿಲ್ಲ’’ ಎಂದು ರಾಜ್ಯ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. ‘‘ಜನರು ಗುಂಪು ಸೇರುವುದರಿಂದ ಕೋವಿಡ್ ಹರಡುತ್ತಿದೆ. ಮನೆಯಿಂದ ಹೊರ ಬರಬೇಕಾದರೆ ಮಾಸ್ಕ್ ಧರಿಸಬೇಕು ಎಂಬುದನ್ನು ಜನರು ಅರಿತುಕೊಂಡಿದ್ದರೆ, ಇಂತಹ ಸಂಕಷ್ಟ, ಸಮಸ್ಯೆ ಎದುರಾಗುತ್ತಿರಲಿಲ್ಲ. ಆದರೆ ಜನರು ಅವುಗಳನ್ನು ಪಾಲಿಸದೇ ಇರದಿದ್ದುದರಿಂದ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯ ಎದುರಾಗಿದೆ’’ ಇಂತಹದೊಂದು ಹೇಳಿಕೆಯ ಮೂಲಕ ಸದ್ಯ ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳಿಗೆ ನಾವು ಹೊಣೆ ಅಲ್ಲ, ನೀವು ಎನ್ನುವುದನ್ನು ಅವರು ಜನತೆಗೆ ತಿವಿದು ಹೇಳಿದ್ದಾರೆ.

ಆದುದರಿಂದ ಈ ನಾಡಿನ ಜನರು ಕೊರೋನದಿಂದ ಎದುರಾಗಿರುವ ಹಾನಿಗಳಿಗಾಗಿ ಸರಕಾರವನ್ನು ದೂಷಿಸುವಂತಿಲ್ಲ. ಚುನಾವಣೆ, ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಸಹಸ್ರಾರು ಜನರನ್ನು ಸೇರಿಸಿದ ರಾಜಕಾರಣಿಗಳಿಗೂ ಕೊರೋನಕ್ಕೂ ಸಚಿವರ ಪ್ರಕಾರ ಯಾವುದೇ ಸಂಬಂಧವಿಲ್ಲ. ಉಪಚುನಾವಣೆಯ ಸಂದರ್ಭದಲ್ಲಿ ನಡೆದ ಸಭೆ, ಸಮಾವೇಶಗಳೆಲ್ಲವೂ ಜನಸಾಮಾನ್ಯರ ನೇತೃತ್ವದಲ್ಲಿ ನಡೆದಿದೆಯೇ ಹೊರತು, ರಾಜಕಾರಣಿಗಳಿಗೆ ಅಲ್ಲಿ ಯಾವ ಪಾತ್ರವೂ ಇರಲಿಲ್ಲ ಎಂದು ಅವರು ಸ್ಪಷ್ಟ ಪಡಿಸಿದಂತಾಗಿದೆ. ಕಳೆದ ವರ್ಷವೇ ‘ಫೆಬ್ರವರಿ ತಿಂಗಳಲ್ಲಿ ಮತ್ತೆ ಕೊರೋನ ಎರಡನೇ ಅಲೆ’ಯನ್ನು ಎದುರಿಸಬೇಕಾಗಬಹುದು ಎಂದು ವೈದ್ಯಕೀಯ ತಜ್ಞರು ಭವಿಷ್ಯ ನುಡಿದಿದ್ದರು. ಮೊದಲ ಅಲೆ, ಅನಿರೀಕ್ಷಿತವಾಗಿರುವುದರಿಂದ ಸರಕಾರಕ್ಕೆ ಮುಂಜಾಗ್ರತೆ ವಹಿಸಲು ಸಾಧ್ಯವಾಗಲಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳೋಣ. ಆದರೆ ಒಂದು ವರ್ಷ ಕಳೆದ ಬಳಿಕವೂ ಕೊರೋನ ವಿಷಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ವರ್ಷಕ್ಕಿಂತಲೂ ಕಳಪೆ ರೀತಿಯಲ್ಲಿ ಕೊರೋನವನ್ನು ನಿರ್ವಹಿಸಲಾಗುತ್ತಿದೆ. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಕಂಡ ಸಚಿವರು, ಇದೀಗ ಕೊರೋನಕ್ಕೆ ಜನರ ಬೇಜವಾಬ್ದಾರಿ ಕಾರಣ ಎಂದು ಹೇಳಿಕೆಯನ್ನು ನೀಡುತ್ತಿದ್ದಾರೆ.

ಸಚಿವ ಸುಧಾಕರ್ ಅವರ ಪ್ರಕಾರ, ಕುಂಭಮೇಳದಲ್ಲಿ ಜನರು ಸರಕಾರದ ಆದೇಶಗಳನ್ನು ಉಲ್ಲಂಘಿಸಿ ನೆರೆದರು. ಕುಂಭಮೇಳದಲ್ಲಿ ನೆರೆದ ಕೋಟ್ಯಂತರ ಜನರನ್ನು ಸಮರ್ಥಿಸುತ್ತಾ ಉತ್ತರಾಖಂಡ ಮುಖ್ಯಮಂತ್ರಿ ಹೇಳುತ್ತಾರೆ ‘‘ಕುಂಭಮೇಳದಲ್ಲಿ ಜನ ಸೇರುವುದರಿಂದ ಯಾವುದೇ ಸಮಸ್ಯೆಯುಂಟಾಗುವುದಿಲ್ಲ. ಇದು ಗಂಗಾ ನದಿ ತೀರದಲ್ಲಿ ನಡೆಯುತ್ತಿರುವುದರಿಂದ ಕೊರೋನ ಹರಡದಂತೆ ಗಂಗಾಮಾತೆ ರಕ್ಷಿಸುತ್ತಾಳೆ’’. ಈ ಮಾತುಗಳಲ್ಲಿ ಯಾವ ರೀತಿಯ ಜವಾಬ್ದಾರಿಯಿದೆ? ಈ ಮಾತನ್ನು ಎಷ್ಟು ಮಂದಿ ಬಿಜೆಪಿ ಮುಖಂಡರು ಖಂಡಿಸಿದರು? ಕೇಂದ್ರ ಮತ್ತು ರಾಜ್ಯ ಸರಕಾರಗಳ ನೇತೃತ್ವದಲ್ಲೇ ಕುಂಭ ಮೇಳ ನಡೆಯಿತು. ಕೊರೋನ ಕಾಲದಲ್ಲಿ ನರೇಂದ್ರ ಮೋದಿಯವರು ಹಮ್ಮಿಕೊಂಡ ‘ನಮಸ್ತೆ ಟ್ರಂಪ್’ ಸಮಾವೇಶಕ್ಕಿಂತಲೂ ಬೇಜವಾಬ್ದಾರಿತನದಿಂದ ಕೂಡಿತ್ತು ಕುಂಭಮೇಳ. ಯಾವಾಗ ಕುಂಭಮೇಳದಲ್ಲಿ ಕೊರೋನ ವ್ಯಾಪಕವಾಗುತ್ತಾ ಹೋಯಿತೋ, ಕೊನೆಯ ಕ್ಷಣದಲ್ಲಿ ಪ್ರಧಾನಿಯವರು ಕುಂಭಮೇಳವನ್ನು ಕೊನೆಗೊಳಿಸಲು ಕರೆ ನೀಡಿದರು. ಆದರೆ ಇದರಿಂದಲೂ ಪ್ರಧಾನಿಯವರು ಪಾಠವನ್ನು ಕಲಿಯಲಿಲ್ಲ. ಹೀಗೆ ಕರೆಕೊಟ್ಟ ಮರುದಿನವೇ ಪಶ್ಚಿಮಬಂಗಾಳದಲ್ಲಿ ಬೃಹತ್ ಸಮಾವೇಶವನ್ನು ಹಮ್ಮಿಕೊಂಡರು. ಅಷ್ಟೇ ಅಲ್ಲ, ಸೇರಿದ ಜನಸ್ತೋಮವನ್ನು ಕಂಡು ‘ಹೆಮ್ಮೆ’ ಪಟ್ಟುಕೊಂಡರು. ‘ಮೊದಲ ಬಾರಿಗೆ ಇಂತಹ ರ್ಯಾಲಿಗೆ ಸಾಕ್ಷಿಯಾಗುತ್ತಿದ್ದೇನೆ’ ಎಂದು ಆನಂದಬಾಷ್ಪವನ್ನು ಸುರಿಸಿದರು. ಸುರಕ್ಷತೆಯ ಅಂತರವನ್ನು ಗಾಳಿಗೆ ತೂರಿ ಇಷ್ಟೊಂದು ಪ್ರಮಾಣದ ಜನರನ್ನು ಸೇರಿಸಿದ ಪ್ರಧಾನಿಯನ್ನು ‘ಬೇಜವಾಬ್ದಾರಿ ನಾಯಕ’ ಎಂದು ಕರೆಯುವ ಎದೆಗಾರಿಕೆ ಸಚಿವ ಸುಧಾಕರ್ ಅವರಿಗೆ ಇದೆಯೇ?

ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯವರ ಆಪ್ತರಾಗಿರುವ, ಗೃಹಸಚಿವ ಅಮಿತ್ ಶಾ ಹೊಸ ವಾದವೊಂದನ್ನು ಮಂಡಿಸುತ್ತಾರೆ. ಅವರ ಪ್ರಕಾರ, ಚುನಾವಣಾ ರ್ಯಾಲಿಗಳಿಗೂ ಕೊರೋನಕ್ಕೂ ಯಾವುದೇ ಸಂಬಂಧವಿಲ್ಲ. ‘ಚುನಾವಣಾ ರ್ಯಾಲಿಗಳಿಂದ ಕೊರೋನ ಹರಡುವುದಿಲ್ಲ. ಚುನಾವಣೆ ನಡೆಯದ ಮಹಾರಾಷ್ಟ್ರದಲ್ಲಿ ಯಾಕೆ ಪ್ರಕರಣಗಳು ಹೆಚ್ಚುತ್ತಿವೆ?’’ ಎಂಬ ತರ್ಕವನ್ನು ಅವರು ಮುಂದಿಟ್ಟಿದ್ದಾರೆ. ಚುನಾವಣಾ ರ್ಯಾಲಿಗಳಲ್ಲಿ ಲಕ್ಷಾಂತರ ಜನರು ಸೇರಿದಾಗ ಅಲ್ಲಿ ಕೊರೋನ ಪರಸ್ಪರ ಹರಡುವುದಿಲ್ಲ ಎಂದಾದರೆ, ನಗರಗಳಲ್ಲಿ ದಿನದ ಕೂಳನ್ನು ಅರಸಿ ಜನಸಾಮಾನ್ಯರು ಓಡಾಡಿದಾಗ ಕೊರೋನ ಹೇಗೆ ಹರಡುತ್ತದೆ? ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕಾಗಿ ಸಹಸ್ರಾರು ಜನರನ್ನು ಸೇರಿಸುತ್ತಾ, ಅವರ ನಡುವೆ ಸುರಕ್ಷತಾ ನಿಯಮಗಳೆಲ್ಲವನ್ನೂ ಉಲ್ಲಂಘಿಸಿ ಓಡಾಡಬಹುದಾದರೆ, ಜನಸಾಮಾನ್ಯರು ತಮ್ಮ ಅಸ್ತಿತ್ವದ ಉಳಿವಿಗಾಗಿ ಉದ್ಯೋಗಕ್ಕೆ ತೆರಳಿದಾಗ ಅಪರಾಧಿಗಳು, ಬೇಜವಾಬ್ದಾರಿಗಳು ಆಗುವುದು ಹೇಗೆ? ಜನರನ್ನು ಬೇಜವಾಬ್ದಾರಿಗಳು ಎಂದು ದೂಷಿಸುವ ರಾಜ್ಯದ ಆರೋಗ್ಯ ಸಚಿವರಿಗೆ, ಈ ದೇಶದ ಗೃಹ ಸಚಿವರನ್ನೂ ಅದೇ ಪದವನ್ನು ಬಳಸಿ ದೂಷಿಸಲು ಸಾಧ್ಯವೇ? ಕುಂಭಮೇಳವೂ ಸೇರಿದಂತೆ ದೇಶಾದ್ಯಂತ ನಡೆಯುತ್ತಿರುವ ಧಾರ್ಮಿಕ ಉತ್ಸವಗಳ ಹಿಂದೆ ರಾಜಕಾರಣಿಗಳಿಲ್ಲವೇ? ದೇಶದಲ್ಲಿ ರಾಜಕೀಯ ಮತ್ತು ಧರ್ಮ ಒಂದೇ ನಾಣ್ಯದ ಮುಖಗಳಾಗಿರುವುದರಿಂದ, ಧಾರ್ಮಿಕ ಕಾರ್ಯಕ್ರಮವನ್ನೂ ಚುನಾವಣೆಯ ಭಾಗವಾಗಿ ಬಳಸಿಕೊಳ್ಳುತ್ತಿರುವುದರಿಂದ ಎಲ್ಲ ನಿರ್ಬಂಧಗಳನ್ನು ಉಲ್ಲಂಘಿಸಿ ಜಾತ್ರೆ, ಉತ್ಸವಗಳು ನಡೆಯುತ್ತಿವೆ. ಇತ್ತೀಚೆಗೆ ಉಡುಪಿಯ ಶಾಸಕರೊಬ್ಬರು ‘ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕು’ ಎಂದು ಬಹಿರಂಗವಾಗಿ ಸರಕಾರವನ್ನು ಒತ್ತಾಯಿಸಿದ್ದರು. ಕನಿಷ್ಠ ಆ ಶಾಸಕರನ್ನಾದರೂ ‘ಬೇಜವಾಬ್ದಾರಿ ಶಾಸಕ’ ಎಂದು ಟೀಕಿಸುವ ಧೈರ್ಯ ಸುಧಾಕರ್ ಅವರಿಗಿದೆಯೇ?

ಚೀನಾದಲ್ಲಿ ಸಾಲು ಸಾಲು ಕೊರೋನ ಸಾವುಗಳು ಸಂಭವಿಸುತ್ತಿದ್ದಾಗ ಯಾರು ‘ನಮಸ್ತೆ ಟ್ರಂಪ್’ ಕಾರ್ಯಕ್ರಮವನ್ನು ಹಾಕಿಕೊಂಡಿದ್ದರೊ ಅವರು ಬೇಜವಾಬ್ದಾರಿಗಳು. ವಿಶ್ವಸಂಸ್ಥೆ ಕೊರೋನ ಕುರಿತಂತೆ ಎಚ್ಚರಿಕೆ ನೀಡುತ್ತಿರುವ ಸಂದರ್ಭದಲ್ಲಿ ಅಂತರ್‌ರಾಷ್ಟ್ರೀಯ ವಿಮಾನಗಳಿಗೆ ಯಾವುದೇ ದಿಗ್ಬಂಧನ ವಿಧಿಸದೆ, ದಿಲ್ಲಿ ಗಲಭೆಯನ್ನು ಪ್ರಾಯೋಜಿಸುತ್ತಿದ್ದ ರಾಜಕೀಯ ನಾಯಕರು ಬೇಜವಾಬ್ದಾರಿಗಳು. ದಿಲ್ಲಿಯಲ್ಲಿ ತಬ್ಲೀಗಿ ಸಮಾವೇಶಕ್ಕೆ ಪೂರ್ಣ ಅವಕಾಶ ನೀಡಿ, ಅಂತಿಮವಾಗಿ ತಬ್ಬೀಗಿ ಸಮಾವೇಶದಿಂದ ಕೊರೋನ ಹರಡಿತು ಎಂದು ಬೊಬ್ಬಿಟ್ಟವರು ಬೇಜವಾಬ್ದಾರಿಗಳು. ಕೊರೋನ ಮೊದಲ ಅಲೆಯಿಂದ ಯಾವ ಪಾಠವನ್ನು ಕಲಿಯದೇ, ಈಗ ಮತ್ತೆ ಚುನಾವಣಾ ಮತ್ತು ಧಾರ್ಮಿಕ ಸಮಾವೇಶಗಳನ್ನು ಹಮ್ಮಿಕೊಂಡು ಕೊರೋನ ಉಲ್ಬಣವಾಗಲು ಕಾರಣರಾದವರು ಬೇಜವಾಬ್ದಾರಿಗಳು. ಒಂದು ವರ್ಷದ ಬಳಿಕವೂ ಕೊರೋನ ಎದುರಿಸಲು ಬೇಕಾದ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸದೇ ಸೀಡಿ ರಾಜಕಾರಣದಲ್ಲಿ ಕಾಲ ಕಳೆದವರು ಬೇಜವಾಬ್ದಾರಿಗಳು. ಕೊರೋನ ಎದುರಿಸಲು ಬಳಸಬೇಕಾದ ಹಣವನ್ನೂ ದೋಚಿ ನಕಲಿ ವೆಂಟಿಲೇಟರ್‌ಗಳನ್ನು ಹಂಚಿದವರು ಬೇಜವಾಬ್ದಾರಿಗಳು. ಖಾಸಗಿ ಆಸ್ಪತ್ರೆಗಳು ಜನಸಾಮಾನ್ಯರನ್ನು ದೋಚುವುದಕ್ಕೆ ಸರ್ವ ಅವಕಾಶವನ್ನು ನೀಡಿ, ಇದೀಗ ಅಳಿದುಳಿದ ತಮ್ಮ ಜೀವವನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಜನಸಾಮಾನ್ಯರ ಮೇಲೆ ಲಾಕ್‌ಡೌನ್ ಬೆದರಿಕೆಯೊಡ್ಡುತ್ತಿರುವವರು ಬೇಜವಾಬ್ದಾರಿಗಳು. ತಮ್ಮೆಲ್ಲ ಹುಳುಕುಗಳನ್ನು ಮುಚ್ಚಿಟ್ಟು, ಕೊರೋನಕ್ಕೆ ಜನರ ಬೇಜವಾಬ್ದಾರಿ ಕಾರಣ ಎಂದ ಸಚಿವ ಸುಧಾಕರ್ ಅವರು ಜನಸಾಮಾನ್ಯರ ಕ್ಷಮೆ ಯಾಚನೆ ಮಾಡಬೇಕಾಗಿದೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News