ರೈತರಿಗೆ ಬೆಂಬಲಿಸಿ ಬಿಜೆಪಿ ತೊರೆದ ಪವನ್ ಬೆನಿವಾಲ್

Update: 2021-04-21 07:10 GMT
ಪವನ್ ಬೆನಿವಾಲ್(ಎಡದಿಂದ ಮೊದಲನೆಯವರು)

ಚಂಡಿಗಡ:  ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಪವನ್ ಬೆನಿವಾಲ್ ಮಂಗಳವಾರ ಪಕ್ಷ ತ್ಯಜಿಸುವುದಾಗಿ ಘೋಷಿಸಿದ್ದಾರೆ. ಸ್ಥಳೀಯ ಮುಖಂಡ ಬೆನಿವಾಲ್ ಅವರ ಈ ನಿರ್ಧಾರವು ಹರ್ಯಾಣದ ಸಿರ್ಸಾ ಜಿಲ್ಲೆಯಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಗಿ ಪರಿಣಮಿಸಿದೆ.

'ಇಂಡಿಯನ್ ಎಕ್ಸ್ ಪ್ರೆಸ್' ನೊಂದಿಗೆ ಮಾತನಾಡಿದ ಬೆನಿವಾಲ್, ಪ್ರಸ್ತುತ ರೈತರನ್ನು ನಿರ್ಲಕ್ಷಿಸಲಾಗುತ್ತಿರುವುದರಿಂದ ನಾನು ಅಸಮಾಧಾನ ಗೊಂಡಿದ್ದೇನೆ. ನನ್ನ ಪ್ರದೇಶದಲ್ಲಿ ಯಾವುದೇ ಮಹತ್ವದ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ.  ಈ ಸಂದರ್ಭದಲ್ಲಿ ನನಗೆ ಬಿಜೆಪಿಯಲ್ಲಿ ಉಸಿರುಗಟ್ಟಿದಂತಿದೆ. ಮೂರು ಕೃಷಿ ಕಾನೂನುಗಳ ಬಗ್ಗೆ ರೈತರಿಗೆ ತಿಳಿಸಲು ಬಿಜೆಪಿ ನಾಯಕತ್ವ ನನಗೆ ಹೇಳಿತ್ತು.ಆದರೆ ಈ ಕಾನೂನುಗಳ ಪ್ರಯೋಜನಗಳನ್ನು ಅರ್ಥ ಮಾಡಿಕೊಳ್ಳಲು ನನಗೆ ಸಾಧ್ಯವಾಗದಿದ್ದಾಗ ನಾನೇನು ಮಾಡಲಿ ಎಂದರು.

ಬೆನಿವಾಲ್ 2014ರ ವಿಧಾನಸಭಾ ಚುನಾವಣೆಗೆ ಮೊದಲು ಐಎನ್ ಎಲ್ ಡಿ ತೊರೆದು ಬಿಜೆಪಿ ಸೇರಿದ್ದರು. ಬಿಜೆಪಿ ಅಭ್ಯರ್ಥಿಯಾಗಿ 2014  ಹಾಗೂ 2019ರ ವಿಧಾನಸಭಾ ಚುನಾವಣೆಯಲ್ಲಿ ಐಎನ್ ಎಲ್ ಡಿಯ ಅಭಯ್ ಚೌಟಾಲ ವಿರುದ್ಧ ಎಲ್ಲೆನಾಬಾದ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಎರಡೂ ಚುನಾವಣೆಯಲ್ಲಿ ಸುಮಾರು 11,000 ಮತಗಳಿಂದ ಸೋತಿದ್ದರು. 2016ರಿಂದ 2019ರ ತನಕ ಹರ್ಯಾಣ ಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರು.

ಮುಂದಿನ ದಿನಗಳಲ್ಲಿ ಬೆನಿವಾಲ್ ಕಾಂಗ್ರೆಸ್ ಸೇರಬಹುದು ಎಂದು ಬೆನಿವಾಲ್ ಅವರ ಆಪ್ತ ಮೂಲಗಳು ಸುಳಿವು ನೀಡಿವೆ. ಫತೇಹಾಬಾದ್  ಮಾಜಿ ಶಾಸಕ ಬಲ್ವಾನ್ ಸಿಂಗ್ ಮಂಗಳವಾರ ಕಾಂಗ್ರೆಸ್ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News