ಉ.ಪ್ರದೇಶ:ಕಾಳಸಂತೆಯಲ್ಲಿ ರೆಮ್‌ಡಿಸಿವಿರ್ ಮಾರಾಟ ಮಾಡುವವರ ವಿರುದ್ಧ ಎನ್‌ಎಸ್‌ಎ ಹೇರಿಕೆಗೆ ಆದೇಶ

Update: 2021-04-21 15:58 GMT

ಲಕ್ನೋ,ಎ.21: ರೆಮ್‌ಡೆಸಿವಿರ್ ಮತ್ತು ಫಾಬಿಫ್ಲೂನಂತಹ ಔಷಧಿಗಳ ಕಾಳಸಂತೆಯಲ್ಲಿ ತೊಡಗಿರುವವರ ಮೇಲೆ ದಾಳಿಗಳನ್ನು ನಡೆಸುವಂತೆ ಮತ್ತು ಅವರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಹಾಗೂ ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಬುಧವಾರ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಇಲ್ಲಿ 11 ಹಿರಿಯ ಅಧಿಕಾರಿಗಳ ತನ್ನ ಮುಖ್ಯ ತಂಡದೊಂದಿಗೆ ಪುನರ್‌ಪರಿಶೀಲನಾ ಸಭೆಯನ್ನು ನಡೆಸಿದ ಅವರು,ರಾಜ್ಯದಲ್ಲಿ ಲಾಕ್‌ಡೌನ್ ಹೇರುವ ಯೋಜನೆ ಇಲ್ಲವೆಂದು ಪುನರುಚ್ಚರಿಸಿದರು.

ಆಮ್ಲಜನಕ ಟ್ಯಾಂಕರ್‌ಗಳಿಗೆ ಜಿಪಿಎಸ್ ಸಾಧನಗಳನ್ನು ಅಳವಡಿಸುವಂತೆ ಮತ್ತು ಆಮ್ಲಜನಕ ಸ್ಥಾವರಗಳಿಗೆ ಸಾಕಷ್ಟು ಭದ್ರತೆಯನ್ನು ಒದಗಿಸುವಂತೆಯೂ ಅವರು ಅಧಿಕಾರಿಗಳಿಗೆ ನಿರ್ದೇಶ ನೀಡಿದರು.

ಎಲ್ಲ ಆಮ್ಲಜನಕ ಸ್ಥಾವರಗಳು ಮತ್ತು ಮರುಭರ್ತಿ ಕೇಂದ್ರಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸುವಂತೆ ಹಾಗೂ ಆಮ್ಲಜನಕ ಪೂರೈಕೆಯು ಪಾರದರ್ಶಕ ರೀತಿಯಲ್ಲಿ ನಡೆಯುವಂತೆ ನೋಡಿಕೊಳ್ಳುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದರು.

ರೆಮ್‌ಡಿಸಿವಿರ್‌ನ ನಿರಂತರ ಪೂರೈಕೆಯನ್ನು ಖಚಿತಪಡಿಸಲು ಅವುಗಳ ತಯಾರಕರ ಮೇಲೆ ಪರಿಣಾಮಕಾರಿಯಾಗಿ ನಿಗಾಯಿರಿಸುವಂತೆಯೂ ಅವರು ತಿಳಿಸಿದರು.

ಮಂಗಳವಾರದಿಂದೀಚಿಗೆ ರಾಜ್ಯದಲ್ಲಿ 14,000ಕ್ಕೂ ಅಧಿಕ ಕೋವಿಡ್-19 ರೋಗಿಗಳು ಚೇತರಿಸಿಕೊಂಡಿರುವುದು ಒಳ್ಳೆಯ ಸುದ್ದಿಯಾಗಿದೆ ಎಂದ ಆದಿತ್ಯನಾಥ್, ಎಲ್ಲ ಮುನ್ನೆಚ್ಚರಿಕೆಗಳನ್ನು ವಹಿಸುವಂತೆ ಜನರನ್ನು ಕೋರಿಕೊಂಡರು. ರಾಜ್ಯದಲ್ಲಿ ಔಷಧಿಗಳು ಮತ್ತು ಆಮ್ಲಜನಕದ ಕೊರತೆಯಿಲ್ಲ ಎಂದು ಅವರು ಒತ್ತಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News