ಧಾರ್ಮಿಕ ಸ್ವಾತಂತ್ರಗಳ ಉಲ್ಲಂಘನೆಗಾಗಿ ಭಾರತವನ್ನು ‘ನಿರ್ದಿಷ್ಟ ಕಳವಳದ ದೇಶ’ವೆಂದು ಗುರುತಿಸಬೇಕು

Update: 2021-04-22 17:59 GMT

ಹೊಸದಿಲ್ಲಿ,ಎ.22: ಕಳೆದ ವರ್ಷ (2020) ಧಾರ್ಮಿಕ ಸ್ವಾತಂತ್ರಗಳ ಅತ್ಯಂತ ಕೆಟ್ಟ ಉಲ್ಲಂಘನೆಗಳಿಗಾಗಿ ವಿದೇಶಾಂಗ ಇಲಾಖೆಯು ಭಾರತವನ್ನು ‘ನಿರ್ದಿಷ್ಟ ಕಳವಳದ ದೇಶಗಳ (ಸಿಪಿಸಿ) ’ ಪಟ್ಟಿಯಲ್ಲಿ ಸೇರಿಸಬೇಕು ಎಂದು ಸ್ವತಂತ್ರ ಉಭಯಪಕ್ಷೀಯ ಆಯೋಗವಾಗಿರುವ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ ಕುರಿತು ಅಮೆರಿಕದ ಆಯೋಗ (ಯುಎಸ್ಸಿಐಆರ್ಎಫ್)ವು ಸತತ ಎರಡನೇ ವರ್ಷ ಶಿಫಾರಸು ಮಾಡಿದೆ. 

ಯುಎಸ್ಸಿಐಆರ್ಎಫ್ನ 10 ಆಯುಕ್ತರ ಪೈಕಿ ಓರ್ವರು ಮಾತ್ರ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ಸ್ವಾತಂತ್ರದ ತೀವ್ರ ಉಲ್ಲಂಘನೆಗಳಿಗಾಗಿ ಭಾರತೀಯರು ಮತ್ತು ಭಾರತೀಯ ಸಂಸ್ಥೆಗಳ ಮೇಲೆ ಆಡಳಿತವು ನಿರ್ದೇಶಿತ ನಿರ್ಬಂಧಗಳನ್ನು ಹೇರಬೇಕು ಎಂದು ಯುಎಸ್ಸಿಐಆರ್ಎಫ್ ಶಿಫಾರಸು ಮಾಡಿದೆ.

ಕ್ವಾಡ್  ನಂತಹ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಅಂತರ-ಧರ್ಮೀಯ ಮಾತುಕತೆಗಳನ್ನು ಮತ್ತು ಎಲ್ಲ ಸಮುದಾಯಗಳ ಹಕ್ಕುಗಳನ್ನು ಉತ್ತೇಜಿಸುವಂತೆ ಇನ್ನೊಂದು ಶಿಫಾರಸನ್ನು ಯುಎಸ್ಸಿಐಆರ್ಎಫ್ ಆಡಳಿತಕ್ಕೆ ಮಾಡಿದೆ. ಅಮೆರಿಕ-ಭಾರತ ದ್ವಿಪಕ್ಷೀಯ ವಲಯದಲ್ಲಿ ಈ ವಿಷಯವನ್ನು ಎತ್ತುವಂತೆಯೂ ಅದು ಅಮೆರಿಕ ಕಾಂಗ್ರೆಸ್ಗೆ ಶಿಫಾರಸು ಮಾಡಿದೆ.

ಯುಎಸ್ಸಿಐಆರ್ಎಫ್ ಶಿಫಾರಸುಗಳನ್ನು ಒಪ್ಪಿಕೊಳ್ಳಬೇಕೆಂಬ ಬದ್ಧತೆ ಅಮರಿಕ ಸರಕಾರಕ್ಕೆ ಇಲ್ಲ ಮತ್ತು ಕಳೆದ ವರ್ಷದ ಭಾರತವನ್ನು ಸಿಪಿಸಿ ಪಟ್ಟಿಗೆ ಸೇರಿಸಬೇಕೆಂಬ ಅದರ ಶಿಫಾರಸನ್ನು ಟ್ರಂಪ್ ಆಡಳಿತವು ತಿರಸ್ಕರಿಸಿತ್ತು.
 
ಯುಎಸ್ಸಿಐಆರ್ಎಫ್ನ 2021ನೇ ಸಾಲಿನ ವರದಿಯಲ್ಲಿನ ಪ್ರಮುಖ ಕಳವಳಗಳಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯು ಸೇರಿದೆ. 2020ರ ದಿಲ್ಲಿ ದಂಗೆಗಳಲ್ಲಿ ಹಿಂದುತ್ವ ಗುಂಪುಗಳು ನಿರ್ಭೀತಿಯಿಂದ ಕಾರ್ಯಾಚರಿಸಿದ್ದವು ಮತ್ತು ಮುಸ್ಲಿಮರ ಮೇಲೆ ದಾಳಿಗಳನ್ನು ನಡೆಸಲು ಕ್ರೂರ ಬಲವನ್ನು ಬಳಸಿದ್ದವು ಎಂದು ವರದಿಯು ಹೇಳಿದೆ. ಅಸ್ಸಾಮಿನಲ್ಲಿ ಎನ್ಆರ್ಸಿ ಸೃಷ್ಟಿಸಿರುವ ಅವಾಂತರದಿಂದಾಗಿ ಲಕ್ಷಾಂತರ ಜನರು ವಿದೇಶಿಯರ ಪಟ್ಟಿಯಲ್ಲಿ ಸೇರಿರುವುದು, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿ ಅಂತರ-ಧರ್ಮೀಯ ಮದುವೆಗಳನ್ನು ನಿಷೇಧಿಸುವ ಪ್ರಯತ್ನಗಳು ಇತ್ಯಾದಿಗಳನ್ನು ವರದಿಯು ಪ್ರಸ್ತಾಪಿಸಿದೆ.
 
2020,ಮಾರ್ಚ್ನಲ್ಲಿ ದಿಲ್ಲಿಯ ನಿಝಾಮುದ್ದೀನ್ ಮರ್ಕಝ್ನಲ್ಲಿ ನಡೆದಿದ್ದ ತಬ್ಲೀಗಿ ಜಮಾಅತ್ ಸಮ್ಮೇಳನವನ್ನೂ ಪ್ರಸ್ತಾಪಿಸಿರುವ ವರದಿಯು,ಕೋವಿಡ್-19 ಸಾಂಕ್ರಾಮಿಕದ ಆರಂಭದಲ್ಲಿ ಸರಕಾರಿ ಅಧಿಕಾರಿಗಳಿಂದ ಸೇರಿದಂತೆ ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ತಪ್ಪು ಮಾಹಿತಿ ಅಭಿಯಾನ ಮತ್ತು ದ್ವೇಷ ಭಾಷಣಗಳು ಸಾಮಾನ್ಯವಾಗಿಬಿಟ್ಟಿದ್ದವು ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News