ಐಪಿಎಲ್ ಹಿಟ್ಟರ್‌ಗಳ ಪಟ್ಟಿಯಲ್ಲಿ ಪ್ಯಾಟ್ ಕಮಿನ್ಸ್ ಗೆ ಸ್ಥಾನ

Update: 2021-04-23 04:02 GMT

ಮುಂಬೈ: ವಾಂಖೆಡೆ ಸ್ಟೇಡಿಯಂನ ಬ್ಯಾಟಿಂಗ್ ಸ್ವರ್ಗದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕೋಲ್ಕತಾ ನೈಟ್ ರೈಡರ್ಸ್ ಆಟಗಾರ ಪ್ಯಾಟ್ ಕಮಿನ್ಸ್ ಜೀವನಶ್ರೇಷ್ಠ ಟ್ವೆಂಟಿ-20 ಇನಿಂಗ್ಸ್ ಆಡಿದರು. ಈ ಮೂಲಕ ಐಪಿಎಲ್ ಹಿಟ್ಟರ್‌ಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಕಮಿನ್ಸ್ 34 ಎಸೆತಗಳಲ್ಲಿ 4 ಬೌಂಡರಿ ಹಾಗೂ 6 ಸಿಕ್ಸರ್‌ಗಳ ಸಹಿತ ವೈಯಕ್ತಿಕ ಶ್ರೇಷ್ಠ ಸ್ಕೋರ್(66 ರನ್)ಗಳಿಸಿದರು.

ಕಮಿನ್ಸ್ ಔಟಾಗದೆ 66 ರನ್ ಗಳಿಸಿದರು. ಕಮಿನ್ಸ್‌ಗೆ ಮತ್ತೊಂದು ಕಡೆಯಿಂದ ಸಹ ಆಟಗಾರರಿಂದ ಸರಿಯಾದ ಸಾಥ್ ಸಿಗದ ಕಾರಣ ಕೆಕೆಆರ್ ಇನ್ನೂ 5 ಎಸೆತಗಳ ಆಟ ಬಾಕಿ ಇರುವಾಗಲೇ 202 ರನ್‌ಗೆ ಆಲೌಟಾಗಿ 18 ರನ್ ಗಳಿಂದ ಸೋಲುಂಡಿತು.

 ಕಮಿನ್ಸ್ 66 ರನ್ ಗಳಿಸುವ ಹಾದಿಯಲ್ಲಿ ಚೆನ್ನೈನ ಸ್ಯಾಮ್ ಕರ್ರನ್ ಓವರ್‌ವೊಂದರಲ್ಲಿ 30 ರನ್ ಕಲೆ ಹಾಕಿ ಒಂದೇ ಓವರ್‌ನಲ್ಲಿ 30 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಐಪಿಎಲ್ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಈ ಪಟ್ಟಿಯಲ್ಲಿ ಒಂದೇ ಓವರ್‌ನಲ್ಲಿ 36 ರನ್ ಗಳಿಸಿದ ಕ್ರಿಸ್ ಗೇಲ್, 32 ರನ್ ಗಳಿಸಿರುವ ಸುರೇಶ್ ರೈನಾ, ಓವರ್‌ವೊಂದರಲ್ಲಿ ತಲಾ 30 ರನ್ ಗಳಿಸಿರುವ ವೀರೇಂದ್ರ ಸೆಹ್ವಾಗ್, ಶಾನ್ ಮಾರ್ಷ್, ರಾಹುಲ್ ತೆವಾಟಿಯಾ ಅವರಿದ್ದಾರೆ. ಇದೀಗ ಕಮಿನ್ಸ್ ಹೊಸ ಸೇರ್ಪಡೆಯಾಗಿದ್ದಾರೆ. ಗೇಲ್ ಎರಡು ಬಾರಿ ಓವರ್‌ವೊಂದರಲ್ಲಿ 30 ರನ್ ಕಲೆ ಹಾಕಿದ್ದಾರೆ.

ಆಸ್ಟ್ರೇಲಿಯದ ಆಲ್‌ರೌಂಡರ್ ಕಮಿನ್ಸ್ ಅವರು ಕರ್ರನ್ ಬೌಲಿಂಗ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಹಿತ ಒಟ್ಟು 4 ಸಿಕ್ಸರ್‌ಗಳನ್ನು ಸಿಡಿಸಿದರು. ಕಮಿನ್ಸ್ ಐಪಿಎಲ್‌ನಲ್ಲಿ ಎರಡನೇ ಬಾರಿ ಓವರ್‌ವೊಂದರಲ್ಲಿ 4 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. 2020ರ ಐಪಿಎಲ್‌ನಲ್ಲಿ ಜಸ್‌ಪ್ರಿತ್ ಬುಮ್ರಾ ಎಸೆದ ಓವರ್‌ವೊಂದರಲ್ಲಿ 4 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಕಮಿನ್ಸ್ ಐಪಿಎಲ್‌ನ ಓವರ್‌ವೊಂದರಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ 4 ಸಿಕ್ಸರ್‌ಗಳನ್ನು ಸಿಡಿಸಿರುವ ಮೂರನೇ ಬ್ಯಾಟ್ಸ್ ಮನ್ ಎನಿಸಿಕೊಂಡರು. ಐಪಿಎಲ್‌ನಲ್ಲಿ ಏಳು ಬಾರಿ ಈ ಸಾಧನೆ ಮಾಡಿದ ಏಕೈಕ ಆಟಗಾರ ಕ್ರಿಸ್ ಗೇಲ್. ಹಾರ್ದಿಕ್ ಪಾಂಡ್ಯ ಎರಡು ಬಾರಿ ಈ ಸಾಹಸ ಮಾಡಿದ್ದರು.

 ಕಮಿನ್ಸ್ ಅವರಿಗೆ ಬುಧವಾರ ಚೆನ್ನೈ ವಿರುದ್ಧ ಪಂದ್ಯವನ್ನು ಕೊನೆಯ ಎಸೆತದ ತನಕ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ವರುಣ್ ಚಕ್ರವರ್ತಿ ಹಾಗೂ ಪ್ರಸಿದ್ಧ ಕೃಷ್ಣ ರನ್ ಗಳಿಸುವ ಭರದಲ್ಲಿ ರನೌಟಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News