ಇರಾಕ್: ಆಸ್ಪತ್ರೆಯಲ್ಲಿ ಭೀಕರ ಅಗ್ನಿದುರಂತ; ಕನಿಷ್ಠ 82 ಮಂದಿ ಬಲಿ

Update: 2021-04-25 16:52 GMT

ಬಾಗ್ದಾದ್, ಎ.25: ಗಂಭೀರ ಸ್ಥಿತಿಯಲ್ಲಿರುವ ಹಲವಾರು ಕೋವಿಡ್-19 ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಇರಾಕ್ನ ಬಗ್ದಾದ್ ನಗರದ ಆಸ್ಪತ್ರೆಯೊಂದರಲ್ಲಿ ಶನಿವಾರ ರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಕನಿಷ್ಠ 82 ಮಂದಿ ಮೃತಪಟ್ಟಿದ್ದಾರೆ ಹಾಗೂ 110 ಮಂದಿ ಗಾಯಗೊಂಡಿದ್ದಾರೆ.

ಆಸ್ಪತ್ರೆಯ ಆಡಳಿತಾಧಿಕಾರಿಗಳ ನಿರ್ಲಕ್ಷವೇ ಅಗ್ನಿ ದುರಂತಕ್ಕೆ ಕಾರಣವೆಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. ಬಾಗ್ದಾದ್ ನ ಇಬ್ನ್ ಖತೀಬ್ ಆಸ್ಪತ್ರೆಯ ಲ್ಲಿ ಅಗ್ನಿ ದುರಂತ ಸಂಭವಿಸಿದೆ. ಆಸ್ಪತ್ರೆಯ ವಾರ್ಡ್ ಒಂದರಲ್ಲಿ ಆಮ್ಲಜನಕದ ಸಿಲಿಂರ್ ಸ್ಪೋಟಿಸಿದ್ದರಿಂದ ಕಟ್ಟಡಕ್ಕೆ ಬೆಂಕಿ ಹತ್ತಿಕೊಂಡಿತೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ ಸಂಭವಿಸಿದ ಬೆನ್ನಲ್ಲೇ ಇರಾಕ್ ಪ್ರಧಾನಿ ಮುಸ್ತಫಾ ಅಲ್ ಖದೀಮಿ ಅವರು ಆಸ್ಪತ್ರೆಯ ಪ್ರಮುಖ ಅಧಿಕಾರಿಗಳನ್ನು ಉಚ್ಚಾಟಿಸಿದ್ದಾರೆಂದು ವರದಿಗಳು ತಿಳಿಸಿವೆ.

ಬೆಂಕಿ ಅವಘಡದಿಂದ ಮೃತಪಟ್ಟವರಲ್ಲಿ ಕನಿಷ್ಠ 28 ರೋಗಿಗಳು ಕೊರೋನ ವೈರಸ್ ಸೋಂಕಿನ ತೀವ್ರ ಲಕ್ಷಣಗಳನ್ನು ಹೊಂದಿದ್ದು ಅವರನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿರಿಸಲಾಗಿತ್ತು. ಎಂದು ಇರಾಕ್ನ ಸ್ವತಂತ್ರ ಮಾನವಹಕ್ಕುಗಳ ಆಯೋಗದ ವಕ್ತಾರರು ತಿಳಿಸಿದ್ದಾರೆ.
 
ಆಸ್ಪತ್ಪರೆಯ ಕಟ್ಟಡದ ಎರಡನ ಮಹಡಿಯುದ್ದಕ್ಕೂ ಹರಡಿರುವ ಬೆಂಕಿಯ ಜ್ವಾಲೆಯನ್ನು ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿ ಹರಸಾಹಸಪಟ್ಟಿದ್ದು ರವಿವಾರ ಮುಂಜಾನೆಯ ವೇಳೆಗೆ ಬೆಂಕಿಯನ್ನು ನಂದಿಸುವಲ್ಲಿ ಸಫಲರಾದರು.
 
ಸ್ಥಳದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ರಕ್ಷಣಾ ತಂಡಗಳು ಹಲವಾರು ಮಂದಿ ಗಾಯಾಳುಗಳನ್ನು ಆ್ಯಂಬುಲೆನ್ಸ್ಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ಸಾಗಿಸಿದರು. ಅಗ್ನಿದುರಂತದ ಸ್ಥಳದಿಂದ ಸುಮಾರು 200 ಮಂದಿಯನ್ನು ರಕ್ಷಿಸಲಾಗಿದೆಯೆಂದದು ಆರೋಗ್ಯ ಸಚಿವಾಲಯ ತಿಳಿಸಿದೆ.

ಅಗ್ನಿ ಅನಾಹುತ ನಡೆದ ಕಟ್ಟಡದಲ್ಲಿ ಹಲವಾರು ಸುಟ್ಟು ಕರಕಲಾದ ಮೃತದೇಹಗಳು ಪತ್ತೆಯಾಗಿದ್ದು, ಅವುಗಳನ್ನು ಅರೆವೈದ್ಯಕೀಯ ಸಿಬ್ಬಂದಿ ಹೊರಗೆ ಸಾಗಿಸಿದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇರಾಕ್ನಲ್ಲಿ ಕೊರೋನ ಸಾಂಕ್ರಾಮಿಕದ ಎರಡನೆ ಅಲೆ ತೀವ್ರ ರೂಪ ಪಡೆದಿರುವ ಸಮಯದಲ್ಲೇ ಈ ಅಗ್ನಿ ದುರಂತ ಸಂಭವಿಸಿದೆ. ಆ ದೇಶದಲ್ಲಿ ಪ್ರಸಕ್ತ ದಿನಂಪ್ರತಿ ಸರಾಸರಿ 8 ಸಾವಿರ ಕೊರೋನ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗುತ್ತಿವೆ. ಇರಾಕ್ನಲ್ಲಿ ಈವರೆಗೆ ಸೋಂಕಿನಿಂದಾಗಿ ಕನಿಷ್ಠ 15,200 ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಕನಿಷ್ಠ 1 ಲಕ್ಷ ಸಕ್ರಿಯ ಪ್ರಕರಣಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News