ಕೊರೋನ ಹೊಡೆತದಿಂದ ತತ್ತರಿಸಿರುವ ಕರ್ನಾಟಕ

Update: 2021-04-28 07:06 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೊರೋನ ಹೊಡೆತದಿಂದ ಕರ್ನಾಟಕ ತತ್ತರಿಸಿ ಹೋಗಿದೆ. ಇಡೀ ಭಾರತವೇ ಈ ಸೋಂಕಿನಿಂದ ನಲುಗಿ ಹೋಗಿದ್ದರೂ, ಮಹಾರಾಷ್ಟ್ರ ಬಿಟ್ಟರೆ ಅತ್ಯಂತ ಆತಂಕದ ಸ್ಥಿತಿ ನಿರ್ಮಾಣವಾಗಿದ್ದು ಕರ್ನಾಟಕದಲ್ಲಿ. ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ. ರಾಜ್ಯದಲ್ಲಿ ನಿಮಿಷ ನಿಮಿಷಕ್ಕೆ ಈ ಮಾರಕ ವೈರಾಣು ಹಬ್ಬುತ್ತಲೇ ಇದೆ. ಈಗ ಪ್ರತಿದಿನ 30,000 ಗಡಿಯನ್ನು ದಾಟಿ ವ್ಯಾಪಿಸುತ್ತಲೇ ಇದೆ. ಇದರಲ್ಲಿ ಶೇ. ಎಪ್ಪತ್ತರಷ್ಟು ಸೋಂಕಿತರು ಬೆಂಗಳೂರಿನಲ್ಲಿದ್ದಾರೆ. ಇಡೀ ದೇಶದಲ್ಲೇ ಹೆಚ್ಚು ಸಕ್ರಿಯ ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿವೆ. ಈ ವೈರಾಣುವಿನೆದುರು ರಾಜ್ಯ ಸರಕಾರವೇ ಅಸಹಾಯಕವಾಗಿ ನಿಂತಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರವಿದ್ದರೂ ಕೇಂದ್ರದಿಂದ ನಿರೀಕ್ಷಿತ ಸಹಾಯ ಬರುತ್ತಿಲ್ಲ ಎಂಬುದು ಕಳವಳದ ಸಂಗತಿಯಾಗಿದೆ. ಇದು ಯಾರೋ ಪ್ರತಿಪಕ್ಷಗಳು ಮಾಡುವ ಟೀಕೆಯಲ್ಲ. ಸ್ವತಃ ಮುಖ್ಯಮಂತ್ರಿ ಯಡಿಯೂರಪ್ಪನವರೇ ‘‘ಕೇಂದ್ರದಿಂದ ಆಕ್ಸಿಜನ್ ಬರದಿದ್ದರೆ ರಾಜ್ಯದ ಆಸ್ಪತ್ರೆಗಳನ್ನು ಮುಚ್ಚಬೇಕಾಗುತ್ತದೆ’’ ಎಂಬ ಮಾತನ್ನು ಬಹಿರಂಗವಾಗಿ ಆಡಿದ್ದ್ದಾರೆ. ಒಕ್ಕೂಟ ವ್ಯವಸ್ಥೆಯೊಂದರಲ್ಲಿ ರಾಜ್ಯವೊಂದರ ಪರಿಸ್ಥಿತಿ ಇಷ್ಟು ಶೋಚನೀಯವಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ.

ಕೊರೋನ ಎರಡನೇ ಅಲೆ ಬಂದಿರುವುದು ಅನಿರೀಕ್ಷಿತವೇನಲ್ಲ. ಇದು ಬರುತ್ತದೆ, ಸರಕಾರ ಸಿದ್ಧತೆ ಮಾಡಿಕೊಳ್ಳಬೇಕೆಂದು ವೈದ್ಯಕೀಯ ತಜ್ಞರು ಮೊದಲೇ ಎಚ್ಚರಿಕೆ ನೀಡಿದ್ದರು. ಆದರೆ ಸರಕಾರ ಮಾತ್ರವಲ್ಲ ಜನರೂ ಎಚ್ಚೆತ್ತುಕೊಳ್ಳಲಿಲ್ಲ. ಈಗ ಪರಿಸ್ಥಿತಿ ಕೈ ಮೀರುತ್ತಿದೆ. ತರಾತುರಿಯಲ್ಲಿ ಮಾಡುತ್ತಿರುವ ರಾತ್ರಿ ಕರ್ಫ್ಯೂಗಳು, ವಾರಾಂತ್ಯದ ಕರ್ಫ್ಯೂಗಳಿಂದ ಅತಿ ವೇಗವಾಗಿ ಹಬ್ಬುತ್ತಿರುವ ಈ ಸುನಾಮಿ ಸ್ವರೂಪದ ಎರಡನೇ ಅಲೆಯನ್ನು ತಡೆದು ನಿಲ್ಲಿಸಲಾಗಲಿಲ್ಲ. ಕಳೆದ ವಾರ ದೇಶದ ರಾಜಧಾನಿ ದಿಲ್ಲಿಯ ನಂತರ ಮುಂಬೈ ಎರಡನೇ ಸ್ಥಾನದಲ್ಲಿತ್ತು. ಈಗ ಇತ್ತೀಚಿನ ಅಂಕಿಅಂಶಗಳ ಪ್ರಕಾರ ದೇಶದ ಹತ್ತು ಮಹಾನಗರಗಳಲ್ಲಿ ಮೊದಲ ಸ್ಥಾನದಲ್ಲಿ ದಿಲ್ಲಿ ಇದ್ದರೆ ಎರಡನೇ ಸ್ಥಾನದಲ್ಲಿ ಬೆಂಗಳೂರು ಇದೆ. ಬೆಂಗಳೂರಿನಲ್ಲಿ ಒಂದೂವರೆ ಲಕ್ಷದಷ್ಟು ಸಕ್ರಿಯ ಸೋಂಕಿತರಿದ್ದಾರೆ. ಇಷ್ಟು ಭಯಾನಕವಾಗಿ ಈ ವೈರಾಣು ಹಬ್ಬುತ್ತಿದ್ದರೂ ಅದಕ್ಕೆ ಸೂಕ್ತವಾದ ಚಿಕಿತ್ಸಾ ಸೌಕರ್ಯ ಬೆಂಗಳೂರಿನಲ್ಲಿ ಇಲ್ಲ. ಸಾರ್ವಜನಿಕ ವೈದ್ಯಕೀಯ ವ್ಯವಸ್ಥೆ ಇದನ್ನು ನಿಭಾಯಿಸುವ ಸ್ಥಿತಿಯಲ್ಲಿ ಇಲ್ಲ. ನಿಭಾಯಿಸುವ ರೀತಿಯಲ್ಲಿ ಅವುಗಳನ್ನು ನಮ್ಮ ಸರಕಾರ ಅಭಿವೃದ್ಧಿ ಪಡಿಸಿಲ್ಲ. ಹೀಗಾಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳಿಲ್ಲ. ಪ್ರಾಣ ಬಿಡುವವರನ್ನು ಬದುಕಿಸಲು ಪ್ರಾಣವಾಯು ವ್ಯವಸ್ಥೆ ಇಲ್ಲ. ಅಗತ್ಯದ ತುರ್ತು ಔಷಧಿಗಳ ಲಭ್ಯತೆಯಿಲ್ಲ. ಕೊರೋನ ಪರೀಕ್ಷೆ ಮಾಡಿಸಿದರೆ ಒಂದು ವಾರವಾದರೂ ವರದಿ ಬರುವುದಿಲ್ಲ. ಕೊರೋನದಿಂದ ಸಾವಿಗೀಡಾದವರ ಅಂತ್ಯಕ್ರಿಯೆಗೆ ಜಾಗವಿಲ್ಲ. ಈ ಸ್ಥಿತಿ ಬರಲು ಯಾರು ಕಾರಣ ಎಂದು ಮತ್ತೆ ಮತ್ತೆ ಚರ್ಚಿಸುವುದರಿಂದ ಇಂದಿನ ಗಂಭೀರ ಪರಿಸ್ಥಿತಿಯಲ್ಲಿ ಪ್ರಯೋಜನವೂ ಇಲ್ಲ.

ಬೆಂಗಳೂರು ಮಾತ್ರವಲ್ಲ ರಾಜ್ಯದ ಬೇರೆ ಜಿಲ್ಲೆಗಳ ಪರಿಸ್ಥಿತಿಯೂ ಆತಂಕಕಾರಿಯಾಗಿದೆ.ವಿಶೇಷವಾಗಿ ಅಕ್ಕಪಕ್ಕದ ರಾಜ್ಯಗಳ ಜೊತೆಗೆ ಗಡಿಯನ್ನು ಹಂಚಿಕೊಂಡಿರುವ ಕಲಬುರಗಿ, ಬೀದರ್, ರಾಯಚೂರು, ಮಂಗಳೂರು ಮುಂತಾದ ಜಿಲ್ಲೆಗಳಲ್ಲೂ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಮಹಾರಾಷ್ಟ್ರ ಮತ್ತು ತೆಲಂಗಾಣದ ಗಡಿಗೆ ಅಂಟಿಕೊಂಡಿರುವ ಕಲಬುರಗಿ ಯಂತಹ ಜಿಲ್ಲೆಯಲ್ಲಿ ನಿತ್ಯ 700 ಕೊರೋನ ಪ್ರಕರಣಗಳು ವರದಿಯಾಗುತ್ತಿವೆ. ಪ್ರತಿದಿನ ಐದಾರು ಜನರ ಸಾವು ಸಾಮಾನ್ಯವಾಗಿದೆ. ಇದಕ್ಕೆ ಆಯಾ ಜಿಲ್ಲೆಗಳ ಜಿಲ್ಲಾಡಳಿತದ ವೈಫಲ್ಯವೇ ಕಾರಣ. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಕೊರೋನ ಮೊದಲ ಅಲೆಯ ಹೊಡೆತದಿಂದ ತತ್ತರಿಸಿದ ಕಲಬುರಗಿ, ಬೀದರ್, ಬಿಜಾಪುರದಂತಹ ಜಿಲ್ಲೆಗಳಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಲ್ಲಿ ಜಿಲ್ಲಾಡಳಿತ ಎಡವಿದೆ. ಕಳೆದ ವರ್ಷ ಬೇರೆ ರಾಜ್ಯಗಳಿಂದ ಬಂದವರನ್ನು ಅದರಲ್ಲೂ ವಿಶೇಷವಾಗಿ ಮಹಾರಾಷ್ಟ್ರದಿಂದ ಬಂದವರನ್ನು ಚೆಕ್‌ಪೋಸ್ಟ್ ಗಳಲ್ಲಿ ತಡೆದು ತಪಾಸಣೆ ನಡೆಸಿ ಕ್ವಾರಂಟೈನ್ ಕೇಂದ್ರಗಳಿಗೆ ಕಳಿಸಲಾಗುತ್ತಿತ್ತು. ಅದರಲ್ಲಿ ಪಾಸಿಟಿವ್ ಬಂದವರನ್ನು ತಾಲೂಕು ಕೇಂದ್ರ ಹಾಗೂ ಜಿಲ್ಲೆಯ ವಿವಿಧೆಡೆ ಆರಂಭಿಸಲಾದ ಕೋವಿಡ್‌ಕೇರ್ ಕೇಂದ್ರಗಳಿಗೆ ದಾಖಲಿಸಲಾಗುತ್ತಿತ್ತು. ತೀವ್ರ ಅಸ್ವಸ್ಥರಾದವರನ್ನು ಆಯಾ ಜಿಲ್ಲೆಯ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತಿತ್ತು. ಆದರೆ ಈ ಬಾರಿ ಚೆಕ್‌ಪೋಸ್ಟ್ ಆರಂಭಿಸಿದರೂ ಕ್ವಾರಂಟೈನ್ ಕೇಂದ್ರಗಳನ್ನು ಆರಂಭಿಸುವ ಬಗ್ಗೆ ಯಾವ ಕ್ರಮಗಳನ್ನೂ ಕೈಗೊಳ್ಳಲಿಲ್ಲ. ಇದರ ಬಗ್ಗೆ ನೇರ ಮಾರ್ಗಸೂಚಿ ಇರಲಿಲ್ಲ. ಹೀಗಾಗಿ ಗಡಿ ದಾಟಿ ಬಂದವರು ಯಾವುದೇ ತಪಾಸಣೆ ಇಲ್ಲದೆ ನೇರವಾಗಿ ತಮ್ಮ ಊರುಗಳನ್ನು ಸೇರಿಕೊಂಡರು. ಹೀಗಾಗಿ ಕೊರೋನಕ್ಕೆ ಕಡಿವಾಣವೇ ಇಲ್ಲದಂತಾಗಿ ಸೋಂಕು ಹಬ್ಬುತ್ತಿದೆ.

ಸರಕಾರಿ ಅಧಿಕಾರಿಗಳು ಮತ್ತು ಆಡಳಿತ ಯಂತ್ರ ಚುರುಕಾಗಬೇಕಾದರೆ ನಮ್ಮ ಜನಪ್ರತಿನಿಧಿಗಳು ಸದಾ ಕಾಲ ಆಡಳಿತ ಯಂತ್ರದ ಮೇಲೆ ನಿಗಾ ವಹಿಸಬೇಕು. ಆದರೆ ವಿಷಾದದ ಸಂಗತಿಯೆಂದರೆ ಜನಪ್ರತಿನಿಧಿಗಳು ಕೂಡ ಜವಾಬ್ದಾರಿಯಿಂದ ನಡೆದುಕೊಳ್ಳಲಿಲ್ಲ. ಮುನ್ನೆಚ್ಚರಿಕೆ ವಹಿಸಲಿಲ್ಲ. ರಾಜ್ಯದಲ್ಲಿ ನಡೆದ ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನ ಸಭಾ ಕ್ಷೇತ್ರಗಳ ಉಪಚುನಾವಣೆಗಳಲ್ಲಿ ಜನ ಪ್ರತಿನಿಧಿಗಳು ಅದರಲ್ಲೂ ಆಡಳಿತ ಪಕ್ಷದ ಮಂತ್ರಿ, ಶಾಸಕರು ಮುಳುಗಿ ಹೋಗಿದ್ದರು. ಇದನ್ನು ಬಿಟ್ಟರೆ ಆಡಳಿತ ಪಕ್ಷದಲ್ಲಿನ ಭಿನ್ನಮತ ವಿಶೇಷವಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರ ನಾಯಕತ್ವದ ವಿರುದ್ಧ ನಡೆಯುತ್ತಿರುವ ಬಂಡುಕೋರ ಚಟುವಟಿಕೆಗಳಲ್ಲಿ ಆಳುವ ಪಕ್ಷದ ಜನ ಪ್ರತಿನಿಧಿಗಳು ಮುಳುಗಿದ್ದರಿಂದ ಹಬ್ಬುತ್ತಿರುವ ಕೊರೋನದ ಬಗ್ಗೆ, ಅದು ಭಯಾನಕ ರೂಪ ತಾಳುವವರೆಗೆ ಎಚ್ಚರವೇ ಇರಲಿಲ್ಲ. ಇಂತಹ ಸಂಕಷ್ಟದ ಸನ್ನಿವೇಶದಲ್ಲಿ ನೆರವಿನ ಹಸ್ತ ಚಾಚ ಬೇಕಾದ ಕೇಂದ್ರ ಸರಕಾರ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಮಾತನ್ನು ಬಿಟ್ಟರೆ ಮತ್ತೇನನ್ನೂ ನೀಡಿಲ್ಲ. ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲಿನ ಹಣವನ್ನೂ ಬಿಡುಗಡೆ ಮಾಡಿಲ್ಲ.

ಅದೇನೇ ಇರಲಿ ಕೊರೋನ ಪರಿಸ್ಥಿತಿ ಉಲ್ಬಣಿಸಿರುವ ಹಿನ್ನೆಲೆಯಲ್ಲಿ ಇನ್ನು ಎರಡು ವಾರ ಕಟ್ಟುನಿಟ್ಟಿನ ಕೊರೋನ ಕರ್ಫ್ಯೂ ಮುಂದುವರಿಸಲು ಸೋಮವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಬಹುಶಃ ಇದನ್ನು ಬಿಟ್ಟರೆ ಸರಕಾರಕ್ಕೆ ಬೇರೆ ಪರ್ಯಾಯವಿರಲಿಲ್ಲವೇನೊ. ಇಂತಹ ಗಂಭೀರ ಸನ್ನಿವೇಶದಲ್ಲಿ ರಾಜಕೀಯ ಮತ ಭೇದ ಬದಿಗಿಟ್ಟು ಈ ಮಾರಕ ವೈರಾಣುವಿನ ಅಪಾಯದಿಂದ ಪಾರಾಗಲು ಎಲ್ಲರೂ ಒಂದಾಗಿ ಶ್ರಮಿಸುವುದು ಅನಿವಾರ್ಯವಾಗಿದೆ. ಕೊರೋನ ಕರ್ಫ್ಯೂ ಮುಂದುವರಿಸುವ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳನ್ನು ಆರು ತಿಂಗಳ ಕಾಲ ಮುಂದೂಡಲು ಶಿಫಾರಸು ಮಾಡಿದ್ದು ಸರಿಯಾದ ಕ್ರಮವಾಗಿದೆ. ಹಾಗೆ ನೋಡಿದರೆ ಈ ಚುನಾವಣೆಗಳಿಗೆ ಅವಕಾಶ ನೀಡಿರುವ ಚುನಾವಣಾ ಆಯೋಗ ಕೊರೋನ ಎರಡನೇ ಅಲೆಗೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಒತ್ತಡಕ್ಕೆ ಮಣಿದ ಚುನಾವಣಾ ಆಯೋಗ ಐದು ರಾಜ್ಯ ವಿಧಾನಸಭಾ ಚುನಾವಣೆಗಳು ಸೇರಿ ಎಲ್ಲ ಚುನಾವಣೆಗಳನ್ನು ನಡೆಸುವ ತೀರ್ಮಾನ ಕೈಗೊಂಡಿದ್ದು ಎಲ್ಲರೂ ತಿಳಿದ ಸಂಗತಿಯಾಗಿದೆ.

ಕಠಿಣ ಕೊರೋನ ಕರ್ಫ್ಯೂ ಘೋಷಣೆ ಮಾಡಿದ ಸರಕಾರ ದುಡಿಯುವ ಬಡಜನರು ಹೇಗೆ ಬದುಕಬೇಕೆಂಬ ಬಗ್ಗೆ ಯೋಚಿಸಿಲ್ಲ. ದುಡಿಮೆ ಇಲ್ಲದಾಗ ಈ ಜನ ಬದುಕುವುದಾದರೂ ಹೇಗೆ? ಆದ್ದರಿಂದ ಸರಕಾರ ಎಲ್ಲ ಬಡವರಿಗೆ ಈ ಕರ್ಫ್ಯೂ ಮುಗಿಯುವವರೆಗಾದರೂ ಉಚಿತ ಆಹಾರ ಧಾನ್ಯ ಮತ್ತು ಹಣಕಾಸಿನ ನೆರವನ್ನು ಒದಗಿಸುವುದು ಸೂಕ್ತ. ನಮ್ಮನ್ನಾಳುವ ಸರಕಾರ ಕೊಂಚ ಮುನ್ನೆಚ್ಚರಿಕೆ ವಹಿಸಿದ್ದರೆ ಮತ್ತೆ ಕಠಿಣ ಕೊರೋನ ಕರ್ಫ್ಯೂ ಹೇರುವಂತಹ ಪರಿಸ್ಥಿತಿಗೆ ಬರುತ್ತಿರಲಿಲ್ಲ. ಆದರೆ ಅಧಿಕಾರದಲ್ಲಿರುವವರ ತಪ್ಪಿಗೆ ಕರ್ನಾಟಕದ ಜನಸಾಮಾನ್ಯರು ಬೆಲೆ ತೆರಬೇಕಾಗಿದೆ. ಏನೇ ಇರಲಿ ಕೊರೋನ ಮುಕ್ತರಾಗುವುದು ನಮ್ಮ ಮೊದಲ ಆದ್ಯತೆಯಾಗಿರಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News