ಹೆಚ್ಚುವರಿ ಆ್ಯಸ್ಟ್ರಝೆನೆಕ ಲಸಿಕೆ ಭಾರತಕ್ಕೆ: ಅಮೆರಿಕ ಪರಿಶೀಲನೆ
ವಾಶಿಂಗ್ಟನ್, ಎ. 26: ತನ್ನಲ್ಲಿರುವ ಹೆಚ್ಚುವರಿ ಆ್ಯಸ್ಟ್ರಝೆನೆಕ ಲಸಿಕೆಗಳನ್ನು ಭಾರತಕ್ಕೆ ಕಳುಹಿಸುವ ಬಗ್ಗೆ ಅಮೆರಿಕವು ಪರಿಶೀಲನೆ ನಡೆಸಲಿದೆ ಎಂದು ಅಮೆರಿಕದ ಉನ್ನತ ಕೊರೋನ ವೈರಸ್ ಸಲಹೆಗಾರ ಆ್ಯಂತನಿ ಫೌಚಿ ರವಿವಾರ ಹೇಳಿದ್ದಾರೆ.
ಭಾರತದಲ್ಲಿ ಕೊರೋನ ವೈರಸ್ ಸೋಂಕಿತರ ಸಂಖ್ಯೆ ಅಗಾಧ ಪ್ರಮಾಣದಲ್ಲಿ ಏರುತ್ತಿರುವಾಗ ಅಮೆರಿಕದ ಕೊರೋನ ವೈರಸ್ ಲಸಿಕಾ ಡೋಸ್‌ಗಳ ಸಂಗ್ರಹವೂ ಬೆಳೆಯುತ್ತಿದೆ. ಈ ಬಗ್ಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಅಮೆರಿಕ ಈ ಕ್ರಮಕ್ಕೆ ಮುಂದಾಗಿದೆ.
‘‘ನಾವು ನಿಜವಾಗಿಯೂ ಈ ನಿಟ್ಟಿನಲ್ಲಿ ಹೆಚ್ಚಿನದನ್ನು ಮಾಡಬೇಕು. ಈ ವಿಷಯವನ್ನು ತಳ್ಳಿಬಿಡುವುದು ಸಾಧ್ಯವಿಲ್ಲ’’ ಎಂದು ಎಬಿಸಿ ಸುದ್ದಿ ವಾಹಿನಿಯ ‘ದಿಸ್ ವೀಕ್’ ಸುದ್ದಿ ಕಾರ್ಯಕ್ರಮದಲ್ಲಿ ಮಾತನಾಡಿದ ಫೌಚಿ ಹೇಳಿದರು.
ಅಮೆರಿಕದಲ್ಲಿ ಆ್ಯಸ್ಟ್ರಝೆನೆಕ ಲಸಿಕೆಯ ಸುಮಾರು ಮೂರು ಕೋಟಿ ಡೋಸ್‌ಗಳಿವೆ. ಅಮೆರಿಕದಲ್ಲಿ ಅವುಗಳನ್ನು ಬಳಸಲು ಅನುಮೋದನೆ ಸಿಕ್ಕಿಲ್ಲ.
‘‘ಅವುಗಳನ್ನು ಭಾರತಕ್ಕೆ ಕಳುಹಿಸುವ ಪ್ರಸ್ತಾವವು ಸಕ್ರಿಯ ಪರಿಶೀಲನೆಯಲ್ಲಿದೆ’’ ಎಂದು ಫೌಚಿ ಹೇಳಿದರು.