ದೇಶದಲ್ಲಿ ಸತತ ಆರನೇ ದಿನ 3 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಕೊರೋನ ಸೋಂಕು

Update: 2021-04-27 03:48 GMT

ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ಎರಡನೇ ಅಲೆಯ ಅಬ್ಬರ ಮುಂದುವರಿದಿದ್ದು, ಸತತ ಆರನೇ ದಿನ ಮೂರು ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಕೊರೋನ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.

ಭಾರತದಲ್ಲಿ ಕೊರೋನ ಸೋಂಕು ಕಾಣಿಸಿಕೊಂಡ ಬಳಿಕ ಏಪ್ರಿಲ್ ತಿಂಗಳು ಅತ್ಯಂತ ಮಾರಕ ಎನಿಸಿಕೊಂಡಿದ್ದು, ಇಡೀ ತಿಂಗಳಲ್ಲಿ ದಾಖಲಾದ ಒಟ್ಟು ಸಾವಿನ ಪ್ರಕರಣಗಳಲ್ಲಿ ಅರ್ಧದಷ್ಟು ಕಳೆದ ಒಂದೇ ವಾರದಲ್ಲಿ ವರದಿಯಾಗಿವೆ. ವಾರಾಂತ್ಯದಲ್ಲಿ ಕಡಿಮೆ ಮಾದರಿಗಳ ಪರೀಕ್ಷೆ ನಡೆಸಿದ್ದರೂ, ಸೋಮವಾರ ದೇಶದ ಪಾಸಿಟಿವ್ ಪ್ರಕರಣಗಳ ಸಂಖ್ಯೆ 3.2 ಲಕ್ಷದಷ್ಟಿದೆ. ಸತತ ಏಳನೇ ದಿನ ಎರಡು ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿತರು ಜೀವ ಕಳೆದುಕೊಂಡಿದ್ದಾರೆ.

ಸೋಮವಾರ 2766 ಕೊರೋನ ಸೋಂಕಿತರು ಬಲಿಯಾಗಿದ್ದು, ಏಪ್ರಿಲ್ ತಿಂಗಳಲ್ಲಿ ಇದುವರೆಗೆ 34,595 ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ಈ ಪೈಕಿ 17333 ಸಾವು ಕಳೆದ ಏಳು ದಿನದಲ್ಲಿ ಸಂಭವಿಸಿದೆ. ತಿಂಗಳು ಕೊನೆಗೊಳ್ಳಲು ಇನ್ನೂ ನಾಲ್ಕು ದಿನ ಇರುವಾಗಲೇ, 2020ರ ಸೆಪ್ಟೆಂಬರ್‌ನ ದಾಖಲೆಯಾದ 33,230 ಸಾವುಗಳ ಸಂಖ್ಯೆಯನ್ನು ದಾಟಿದೆ.

ಮಾರ್ಚ್‌ನಲ್ಲಿ ದೇಶದಲ್ಲಿ 5656 ಕೋವಿಡ್ ಸಾವು ಸಂಭವಿಸಿದ್ದು, ಏಪ್ರಿಲ್‌ನಲ್ಲಿ ಈ ಪ್ರಮಾಣ ಆರು ಪಟ್ಟು ಹೆಚ್ಚಿದೆ. ಇದಕ್ಕೂ ಮುನ್ನ ಅತ್ಯಧಿಕ ಎಂದರೆ 33230 ಸಾವು ಸೆಪ್ಟೆಂಬರ್‌ನಲ್ಲಿ ಸಂಭವಿಸಿದ್ದರೆ, ಆಗಸ್ಟ್‌ನಲ್ಲಿ 28954 ಹಾಗೂ ಜುಲೈನಲ್ಲಿ 18676 ಸಾವು ಸಂಭವಿಸಿತ್ತು.

ಬ್ರೆಝಿಲ್‌ನಲ್ಲಿ ಒಂದು ತಿಂಗಳಲ್ಲಿ 75 ಸಾವಿರ ಸಾವು ಸಂಭವಿಸಿದ್ದನ್ನು ಹೊರತುಪಡಿಸಿದರೆ ಇಡೀ ವಿಶ್ವದಲ್ಲೇ ಒಂದು ತಿಂಗಳಲ್ಲಿ ಸಂಭವಿಸಿದ ಗರಿಷ್ಠ ಸಾವು ಇದಾಗಿದೆ. ಅಮೆರಿಕದಲ್ಲಿ ಏಪ್ರಿಲ್‌ನಲ್ಲಿ 21489 ಮಂದಿ ಜೀವ ಕಳೆದುಕೊಂಡಿದ್ದರು.

ವಾರಾಂತ್ಯದಲ್ಲಿ ಕಡಿಮೆ ಪರೀಕ್ಷೆಯ ಕಾರಣದಿಂದಾಗಿ ಮಹಾರಾಷ್ಟ್ರದಲ್ಲಿ ಹೊಸ ಪ್ರಕರಣಗಳ ಸಂಖ್ಯೆ 48700ಕ್ಕೆ ಇಳಿದಿದೆ. ರಾಜ್ಯದಲ್ಲಿ ಸೋಮವಾರ 524 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಕರ್ನಾಟಕ, ರಾಜಸ್ಥಾನ, ಪಶ್ಚಿಮ ಬಂಗಾಳ, ತಮಿಳುನಾಡು, ಛತ್ತೀಸ್‌ಗಢ, ಗುಜರಾತ್, ಮಧ್ಯಪ್ರದೇಶ, ಬಿಹಾರ ಮತ್ತು ಹರ್ಯಾಣದಲ್ಲಿ ಅತ್ಯಧಿಕ ಪ್ರಕರಣಗಳು ದಾಖಲಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News