×
Ad

ಖಾಸಗಿ ವ್ಯಕ್ತಿಗಳಿಂದ ರೆಮ್ಡೆಸಿವಿರ್ ಖರೀದಿ ಹೇಗೆ ಸಾಧ್ಯ?: ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ಪ್ರಶ್ನೆ

Update: 2021-04-27 23:40 IST

ಮುಂಬೈ, ಎ.27: ಔಷಧ ಉತ್ಪಾದಕರು ತಮ್ಮ ಉತ್ಪನ್ನಗಳನ್ನು ಕೇಂದ್ರ ಸರಕಾರಕ್ಕೆ ಪೂರೈಸಬೇಕಿದ್ದು ಅಲ್ಲಿಂದ ರಾಜ್ಯ ಸರಕಾರಕ್ಕೆ ಹಂಚಿಕೆಯಾಗಬೇಕು. ಹೀಗಿರುವಾಗ ರೆಮ್ಡೆಸಿವಿರ್ ಮತ್ತಿತರ ಕೋವಿಡ್-19 ಔಷಧಗಳನ್ನು ಖಾಸಗಿ ವ್ಯಕ್ತಿಗಳು ಔಷಧ ಉತ್ಪಾದಕರಿಂದ ನೇರವಾಗಿ ಖರೀದಿಸಿ ವಿತರಿಸಲು ಹೇಗೆ ಸಾಧ್ಯ? ಎಂದು ಬಾಂಬೆ ಹೈಕೋರ್ಟ್ ಕೇಂದ್ರ ಸರಕಾರವನ್ನು ಮಂಗಳವಾರ ಪ್ರಶ್ನಿಸಿದೆ. 

ಮಹಾರಾಷ್ಟ್ರದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಅಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ ಎಂದು ದೂರಿ ಮತ್ತು ರೆಮ್ಡೆಸಿವಿರ್ ಹಾಗೂ ಆಮ್ಲಜನಕದ ಕೊರತೆಗೆ ಸಂಬಂಧಿಸಿ ಸೂಕ್ತ ನಿರ್ದೇಶನ ನೀಡಬೇಕೆಂದು ಕೋರಿ ನ್ಯಾಯವಾದಿ ಸ್ನೇಹಾ ಮರ್ಜಡಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭ ಮುಖ್ಯ ನ್ಯಾಯಾಧೀಶ ದೀಪಂಕರ್ ದತ್ತಾ ಮತ್ತು ನ್ಯಾಯಾಧೀಶ ಗಿರೀಶ್ ಎಸ್ ಕುಲಕರ್ಣಿ ಅವರಿದ್ದ ನ್ಯಾಯಪೀಠ ಈ ಪ್ರಶ್ನೆ ಎತ್ತಿದೆ. 

ಮಹಾರಾಷ್ಟ್ರದ ಅಹ್ಮದ್‌ ನಗರ ಸಂಸದ ಡಾ ಸುಜಯ್ ವಿಖೆ ಪಾಟೀಲ್ ಕಳೆದ ವಾರ ರೆಮ್ಡೆಸಿವಿರ್ ಲಸಿಕೆಯ 10,000 ಶೀಷೆಗಳನ್ನು ದಿಲ್ಲಿಯಿಂದ ಖರೀದಿಸಿ ಹಂಚಿದ್ದಾರೆ ಎಂಬ ದೂರಿನ ಕುರಿತೂ ಇದೇ ವೇಳೆ ಹೈಕೋರ್ಟ್ ಗಮನ ಹರಿಸಿತು. ಇದೇ ವಿಷಯದ ಬಗ್ಗೆ ಬಾಂಬೆಹೈಕೋರ್ಟ್ನ ಔರಂಗಾಬಾದ್ ಪೀಠ ಸೋಮವಾರ ವಿಚಾರಣೆ ನಡೆಸಿದೆ. ರೆಮ್ಡೆಸಿವಿರ್ ಲಸಿಕೆಯ 10,000 ಬಾಟಲಿಗಳನ್ನು ಬಾಡಿಗೆ ವಿಮಾನದ ಮೂಲಕ ದಿಲ್ಲಿಯಿಂದ ಸಾಗಿಸಲು ಹೇಗೆ ಸಾಧ್ಯವಾಗಿದೆ? ಇದು ವ್ಯಕ್ತಿಯೊಬ್ಬ ಖಾಸಗಿ ವಿತರಣೆ ಮಾಡಿದಂತೆ ಆಗಿಲ್ಲವೇ? ದಿಲ್ಲಿಯಲ್ಲೇ ತೀವ್ರ ಬಿಕ್ಕಟ್ಟು ಇದೆ. ಯಾರಿಗೆ ತುರ್ತು ಅಗತ್ಯವಿದೆಯೋ ಅವರಿಗೆ ಔಷಧಗಳು ಲಭಿಸಬೇಕೆಂದು ನಾವು ಬಯಸುತ್ತೇವೆ, ಕೆಲವರ ಕೈಗೆ ಮಾತ್ರ ಸಿಗುವುದಲ್ಲ’ ಎಂದು ನ್ಯಾ ಗಿರೀಶ್ ಕುಲಕರ್ಣಿ ಹೇಳಿದರು.

ಇಂತಹ ಪ್ರಕರಣಗಳು ಹಲವು ನಡೆದಿವೆ. ಇನ್ನು ಮುಂದೆ ಔಷಧ ಸಂಸ್ಥೆಗಳು ಖಾಸಗಿ ವ್ಯಕ್ತಿಗಳಿಗೆ ನೇರವಾಗಿ ಔಷಧ ಒದಗಿಸುವ ಪ್ರಕರಣ ಗಮನಕ್ಕೆ ಬಂದರೆ ಅಂತಹ ಸಂಸ್ಥೆಗಳ ವಿರುದ್ಧ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ನ್ಯಾಯಪೀಠ ಹೇಳಿದೆ. ಆಸ್ಪತ್ರೆಯಲ್ಲಿ ಕೋವಿಡ್ ರೋಗಿಗಳ ಹಾಸಿಗೆ ನಿರ್ವಹಣೆ ಕುರಿತ ಹೆಲ್ಪ್ ಲೈನ್ ನಂಬರ್ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬ ಮಾಹಿತಿ ನೀಡುವಂ‌ತೆ ನ್ಯಾಯಪೀಠ ಬೃಹನ್ಮುಂಬಯಿ ನಗರಪಾಲಿಕೆಗೆ ನಿರ್ದೇಶಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News