ಕೋವಿಡ್ ಆರ್ಭಟ, ಲಾಕ್ ಡೌನ್ ನಡುವೆಯೂ ಎಗ್ಗಿಲ್ಲದೆ ಸಾಗಿದೆ ಪ್ರಧಾನಿ ಮೋದಿ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ತ ಕಾಮಗಾರಿ

Update: 2021-04-28 10:25 GMT

ಹೊಸದಿಲ್ಲಿ:  ಕೋವಿಡ್ ಎರಡನೇ ಅಲೆಯಿಂದ ಇಡೀ ದೇಶವೇ ತತ್ತರಗೊಂಡಿರುವ ನಡುವೆ ಹಾಗೂ ರಾಜಧಾನಿ ದಿಲ್ಲಿಯಲ್ಲಿ  ಲಾಕ್ ಡೌನ್ ನಡುವೆಯೇ ನಗರದ ಹೃದಯಭಾಗದಲ್ಲಿ ರೂ 1,500 ಕೋಟಿ ವೆಚ್ಚದ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸೆಂಟ್ರಲ್ ವಿಸ್ತಾ ಯೋಜನೆ ಕಾಮಗಾರಿ ಭರದಿಂದ ಮುಂದುವರಿಯುತ್ತಿದೆ.

ದಿಲ್ಲಿಯಲ್ಲಿ ಲಾಕ್ ಡೌನ್ ಹೇರಲ್ಪಟ್ಟ ನಂತರ ಎಲ್ಲಾ ನಿರ್ಮಾಣ ಕಾರ್ಯಗಳು ಸ್ಥಗಿತಗೊಂಡಿವೆ. ಆದರೆ ನಿರ್ಮಾಣ ಕಾಮಗಾರಿಗಳನ್ನು 'ಅಗತ್ಯ ಸೇವೆಗಳ' ವ್ಯಾಪ್ತಿಯಲ್ಲಿ ತರುವ ಮೂಲಕ ಸರಕಾರ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ತಾಂತ್ರಿಕವಾಗಿ ಹೇಳುವುದಾದರೆ  ನಿರ್ಮಾಣ ಕಾಮಗಾರಿ ಸ್ಥಳದಲ್ಲಿಯೇ ಕಾರ್ಮಿಕರಿಗೆ ವಸತಿ ಸೌಲಭ್ಯವಿದ್ದಲ್ಲಿ ಮಾತ್ರ ಕಾಮಗಾರಿಗೆ ಅನುಮತಿಯಿದೆ ಆದರೆ ಹೊಸ ಸಂಸತ್ ಕಟ್ಟಡ ನಿರ್ಮಾಣವೂ ಒಳಗೊಂಡಿರುವ ಸೆಂಟ್ರಲ್ ವಿಸ್ತಾ ಯೋಜನೆಯ ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರಿಗೆ ವಸತಿ ಸೌಲಭ್ಯವಿಲ್ಲ ಎಂದು ತಿಳಿದು ಬಂದಿದೆ.

ಹೆಚ್ಚಿನ ಕಾರ್ಮಿಕರು ಸುಮಾರು 16 ಕಿಮೀ ದೂರದ ಕೀರ್ತಿನಗರ ಮತ್ತು ಸುತ್ತಮುತ್ತಲಿನ ಸ್ಥಳಗಳಿಂದ ಆಗಮಿಸುತ್ತಿದ್ದಾರೆ. ಪ್ರಧಾನಿ ಮೋದಿಯ ಮಹತ್ವಾಕಾಂಕ್ಷೆಯ ಈ ಯೋಜನೆ ಸಾಕಾರಗೊಳ್ಳಬೇಕೆಂಬ ಉದ್ದೇಶದಿಂದ ವಿಶೇಷ ಬಸ್ಸುಗಳ ಮೂಲಕ  ಕಾರ್ಮಿಕರನ್ನು ಸ್ಥಳಕ್ಕೆ ಕರೆತರಲಾಗುತ್ತಿದೆ ಎಂಬ ಮಾಹಿತಿಯೂ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News