×
Ad

ನಾಪತ್ತೆಯಾಗಿದ್ದ ತಮಿಳುನಾಡಿನ ಮೀನುಗಾರಿಕಾ ಬೋಟ್ ಪತ್ತೆ: 11 ಮೀನುಗಾರರ ರಕ್ಷಣೆ

Update: 2021-04-28 23:22 IST

ಹೊಸದಿಲ್ಲಿ, ಎ.28: ತಮಿಳುನಾಡಿನ ತೆಂಗಪಟ್ಟಣಂ ಮೀನುಗಾರಿಕೆ ಬಂದರಿನಿಂದ ಎ.6ರಂದು ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿದ್ದ ‘ಮರ್ಸಿಡಿಸ್’ ಎಂಬ ಮೀನುಗಾರಿಕಾ ಬೋಟ್ ಲಕ್ಷ ದ್ವೀಪದಿಂದ ಸುಮಾರು 200 ಮೈಲಿ ದೂರದಲ್ಲಿ ಪತ್ತೆಯಾಗಿದೆ ಎಂದು ಭಾರತೀಯ ಕೋಸ್ಟ್ ಗಾರ್ಡ್ ತಿಳಿಸಿದೆ.

‘ಮರ್ಸಿಡಿಸ್’ ಆಳ ಸಮುದ್ರದ ಮೀನುಗಾರಿಕೆಗಾಗಿ 11 ಸಿಬ್ಬಂದಿಯೊಂದಿಗೆ ಎ.6ರಂದು ತಮಿಳುನಾಡಿನ ತೆಂಗಪಟ್ಟಣಂ ಮೀನುಗಾರಿಕೆ ಬಂದರಿನಿಂದ ಪ್ರಯಾಣ ಬೆಳೆಸಿತ್ತು. ಕೇರಳದ ಪಶ್ಚಿಮಕ್ಕೆ 30 ದಿನಗಳ ಪ್ರಯಾಣಕ್ಕಾಗಿ ಹೊರಟಿದ್ದ ಈ ಬೋಟ್ ಇದ್ದಕ್ಕಿದಂತೆ ನಾಪತ್ತೆಯಾಗಿತ್ತು. ಈ ನಡುವೆ ಮರ್ಸಿಡಿಸ್‌ನ್ನೇ ಹೋಲುವ ಬೋಟ್‌ನ ಅವಶೇಷಗಳು ಬಂಗಾಳ ಕೊಲ್ಲಿಯಲ್ಲಿ, ಗೋವಾ ಕರಾವಳಿಯಿಂದ 110 ಕಿ.ಮೀ. ದೂರದ ಸಮುದ್ರದಲ್ಲಿ ಪತ್ತೆಯಾಗಿತ್ತು. ಹಾಗಾಗಿ ಮರ್ಸಿಡಿಸ್ ಮುಳುಗಿ ಅದರಲ್ಲಿದ್ದ ಎಲ್ಲ ಮೀನುಗಾರರು ಜಲಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿತ್ತು.

ಈ ನಡುವೆ ಕರಾವಳಿ ರಕ್ಷಣಾ ಪಡೆ (ಐಸಿಜಿ) ಮತ್ತು ಭಾರತೀಯ ನೌಕಾಪಡೆ ಸಾಗರದಲ್ಲಿ ಸತತ ಶೋಧ ನಡೆಸಿತ್ತು. ಇದೀಗ ಮರ್ಸಿಡಿಸ್ ಲಕ್ಷ ದ್ವೀಪದಿಂದ ಸುಮಾರು 200 ಮೈಲಿ ದೂರದಲ್ಲಿ ಪತ್ತೆಯಾಗಿದೆ.

ಹಡಗಿನಲ್ಲಿದ್ದ ಎಲ್ಲಾ ಮೀನುಗಾರರು ಸುರಕ್ಷಿತರಾಗಿದ್ದಾರೆ. ಅವರನ್ನ ದಡಕ್ಕೆ ತರಲಾಗುತ್ತಿದೆ. ಮೇ 3ರಂದು ಮರ್ಸಿಡಿಸ್’ ಸುರಕ್ಷಿತವಾಗಿ ತೀರಕ್ಕೆ ತಲುಪಬಹುದು ಎಂದು ಐಸಿಜಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News