ನಾಯಕರಲ್ಲಿ ಬತ್ತಿ ಹೋಗಿರುವ ಮಾನವೀಯ ಆಕ್ಸಿಜನ್

Update: 2021-04-29 05:52 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕಟ್ಟುವುದಕ್ಕೆ ನೂರಾರು ವರ್ಷಗಳು ಬೇಕು, ಕೆಡಹುವುದಕ್ಕೆ ನಿಮಿಷ ಸಾಕು. 70 ವರ್ಷಗಳಿಂದ ಕಾಂಗ್ರೆಸ್ ಕಟ್ಟಿದ್ದನ್ನು ಮೋದಿ ನೇತೃತ್ವದ ಸರಕಾರ ಒಂದೊಂದಾಗಿ ಕೆಡಹುತ್ತಾ ಬಂದಾಗ, ಮೊದಲಿರುವುದಕ್ಕಿಂತ ಭವ್ಯವಾದುದೇನನ್ನೋ ಕಟ್ಟಲು ಹೊರಟಿದ್ದಾರೆ ಎಂದು ದೇಶದ ಜನರು ನಂಬಿದ್ದರು. ಆದುದರಿಂದಲೇ, ಮೊದಲ ಐದು ವರ್ಷಗಳಲ್ಲಿ ಆರ್ಥಿಕತೆ ಸಂಪೂರ್ಣ ನೆಲಕಚ್ಚಿದರೂ, ಮೋದಿಯವರಿಗೆ ಇನ್ನಷ್ಟು ಅವಕಾಶಗಳನ್ನು ನೀಡುವುದು ಅಗತ್ಯ ಎಂದು ಮತ್ತೆ ಅವರನ್ನೇ ಪ್ರಧಾನಿಯಾಗಿ ಆರಿಸಿದರು. ಕಾಂಗ್ರೆಸ್ ಯಾವುದನ್ನೆಲ್ಲ ಕಟ್ಟಿನಿಲ್ಲಿಸಿತ್ತೋ ಅವುಗಳನ್ನೆಲ್ಲ ಕುಟ್ಟಿ ಪುಡಿ ಮಾಡುವುದರಲ್ಲಿ ಮೋದಿ ನೇತೃತ್ವದ ಸರಕಾರ ಯಶಸ್ವಿಯಾಗಿದೆ ಎನ್ನುವುದರಲ್ಲಿ ಯಾರಿಗೂ ಈಗ ಅನುಮಾನ ಉಳಿದಿಲ್ಲ. ಆದರೆ, ಬದಲಿಗೆ ಆ ಜಾಗದಲ್ಲಿ ಏನನ್ನು ಕಟ್ಟಲು ಹೊರಟಿದ್ದಾರೆ ಎನ್ನುವುದು ಮಾತ್ರ ಜನರಿಗೆ ಇನ್ನೂ ಅರ್ಥವಾಗಿಲ್ಲ. ‘ದೇಶ ವಿಶ್ವಗುರುವಾಗುತ್ತಿದೆ’ ಎಂದು ಮಾಧ್ಯಮಗಳ ಮಾತುಗಳನ್ನು ನಂಬಿದ ಜನರ ಮುಂದೆ ವಾಸ್ತವ ದುತ್ತೆಂದು ಎರಗಿದೆ. ಕೊರೋನ ಎನ್ನುವ ಮಳೆ, ನೀಲಿ ನರಿಯ ಬಣ್ಣವನ್ನು ಕರಗಿಸಿದೆ. ಆದರೆ ಆ ಮಳೆ ಪ್ರವಾಹವಾಗಿ ಜನರು ಕೊಚ್ಚಿಕೊಂಡು ಹೋಗುತ್ತಿದ್ದಾರೆ. ‘ನೀಲಿ ನರಿ’ಯ ಕುರಿತಂತೆ ಮಾಧ್ಯಮಗಳು ಹಂಚಿದ ಕತೆಗಳನ್ನು ನಂಬಿ, ಅದರ ಕುರಿತಂತೆ ಅಗಾಧ ಭರವಸೆಯಿಟ್ಟವರು ಏಕಾಏಕಿ ಎದುರಾಗಿರುವ ಕಟು ಸತ್ಯವನ್ನು ಜೀರ್ಣಿಸಿಕೊಳ್ಳಲು ಕಷ್ಟ ಪಡುತ್ತಿದ್ದಾರೆ. ಇಂದು ಸರಕಾರ ‘ನಿಮ್ಮ ಪ್ರಾಣಕ್ಕೆ ನೀವೇ ಹೊಣೆ’ ಎಂದು ಘೋಷಿಸಿ ಬಿಟ್ಟಿದೆ.

ಅತ್ಯಂತ ಆಘಾತಕಾರಿ ಅಂಶವೆಂದರೆ, ಇಂದಿನ ದುರಂತಕ್ಕೆ ನಮ್ಮ ರಾಜಕೀಯ ನಾಯಕರು ಹೃದಯಹೀನರಾಗಿ, ಅಸೂಕ್ಷ್ಮರಾಗಿ ಪ್ರತಿಕ್ರಿಯಿಸುತ್ತಿರುವುದು. ಸರಕಾರ ಅಸಹಾಯಕವಾಗಿದೆ ಎನ್ನುವುದಕ್ಕಿಂತ, ಜನಸಾಮಾನ್ಯರ ಯೋಗಕ್ಷೇಮಗಳ ಕುರಿತಂತೆ ರಾಜಕೀಯ ನಾಯಕರು ಕಾಳಜಿಯನ್ನೇ ಹೊಂದಿಲ್ಲ ಎನ್ನುವುದನ್ನು ಇದು ಹೇಳುತ್ತಿದೆ. ಹೃದಯಶೂನ್ಯ ನಾಯಕರಿರುವ ದೇಶದಲ್ಲಿ ಕೊರೋನದಂತಹ ದುರಂತಗಳು ಆಕಸ್ಮಿಕವಾಗಿರುವುದಿಲ್ಲ. ಉತ್ತರ ಪ್ರದೇಶದಲ್ಲಿ ಆಕ್ಸಿಜನ್‌ಗಾಗಿ ಟ್ವಿಟರ್‌ನಲ್ಲಿ ಮನವಿ ಮಾಡಿದ ಒಂದೇ ಒಂದು ಕಾರಣಕ್ಕಾಗಿ ಆ ಯುವಕನ ಮೇಲೆ ಎನ್‌ಎಸ್‌ಎ ಕಾಯ್ದೆಯನ್ನು ಜಡಿಯಲಾಗಿದೆ. ಆಕ್ಸಿಜನ್‌ಗಾಗಿ ಮನವಿ ಮಾಡುವುದೇ ಅಪರಾಧ ಎನ್ನುವುದನ್ನು ಈ ಮೂಲಕ ಉತ್ತರ ಪ್ರದೇಶ ಸರಕಾರ ಘೋಷಿಸಿದಂತಾಗಿದೆ. ತನ್ನ ಅಜ್ಜನ ಸ್ಥಿತಿ ಗಂಭೀರವಾಗಿರುವುದರಿಂದ ಆತನಿಗೆ ತುರ್ತಾಗಿ ಆಕ್ಸಿಜನ್ ಸಿಲಿಂಡರ್ ಬೇಕಾಗಿದೆ ಎಂದು ಯುವಕ ಟ್ವಿಟರ್‌ನಲ್ಲಿ ಮನವಿ ಮಾಡಿದ್ದ. ಮಾತ್ರವಲ್ಲ, ಸರಕಾರದ ಗಮನವನ್ನೂ ಸೆಳೆದಿದ್ದ.

‘ರಾಜ್ಯದಲ್ಲಿ ಆಕ್ಸಿಜನ್‌ನ ಯಾವುದೇ ಕೊರತೆ ಇಲ್ಲ’ ಎನ್ನುವುದು ಮುಖ್ಯಮಂತ್ರಿ ಆದಿತ್ಯನಾಥ್‌ರ ಆದೇಶವಾಗಿದೆ. ಇದರ ವಿರುದ್ಧ ವದಂತಿಗಳನ್ನು ಹರಡಿದವರ ಮೇಲೆ ಗೂಂಡಾ ಕಾಯ್ದೆ, ಎನ್‌ಎಸ್‌ಎ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಈಗಾಗಲೇ ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ. ಯುವಕನ ಅಜ್ಜನಿಗೆ ಕೊರೋನ ಸೋಂಕು ಆಗಿಲ್ಲದೇ ಇರುವುದರಿಂದ ‘ಆತ ಸರಕಾರದ ಮಾನ ಮರ್ಯಾದೆ ಹರಾಜು ಮಾಡುವುದಕ್ಕಾಗಿಯೇ ವದಂತಿಗಳನ್ನು ಹರಡಿದ್ದಾನೆ’ ಎನ್ನುವುದು ಪೊಲೀಸರ ಅಭಿಪ್ರಾಯ. ದುರಂತವೆಂದರೆ, ಯುವಕನ ತಾತ ಆಕ್ಸಿಜನ್ ಇಲ್ಲದ ಕಾರಣದಿಂದ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿದ್ದಾರೆ. ಕೊರೋನ ಇಲ್ಲದೇ ಇದ್ದರೂ, ರೋಗಿಯನ್ನು ಉಳಿಸಲು ಆಕ್ಸಿಜನ್‌ನ ಅಗತ್ಯ ಬೀಳುತ್ತದೆ ಎನ್ನುವ ಸಾಮಾನ್ಯ ಜ್ಞಾನ ಪೊಲೀಸರಿಗೆ ಇದ್ದಿರಲಿಲ್ಲ. ಇಂದು ಉತ್ತರ ಪ್ರದೇಶದಲ್ಲಿ ಸಂತ್ರಸ್ತರು ‘ಆಕ್ಸಿಜನ್’ಗಾಗಿ ಬೇಡಿಕೆ ಇಡಲೂ ಭಯಪಡಬೇಕಾದಂತಹ ಸ್ಥಿತಿ ಇದೆ. ಕೊರೋನ ನಿರ್ವಹಣೆಯ ಕುರಿತಂತೆ ಸಂತ್ರಸ್ತರು ಸರಕಾರ ಮತ್ತು ಆಸ್ಪತ್ರೆಗಳ ವಿರುದ್ಧ ಯಾವುದೇ ದೂರುಗಳನ್ನು ನೀಡಿದರೂ ಅವರು ಜೈಲು ಸೇರಬೇಕಾದಂತಹ ಪರಿಸ್ಥಿತಿ ಉತ್ತರ ಪ್ರದೇಶದಲ್ಲಿದೆ. ಇಂತಹ ಅಮಾನವೀಯ ಮನಸ್ಥಿತಿಯ ನಾಯಕರಿಗೆ ಕರ್ನಾಟಕದಲ್ಲೂ ಕೊರತೆಯೇನಿಲ್ಲ.

ಇತ್ತೀಚೆಗೆ ಬಿಜೆಪಿಯ ಮಾಜಿ ಸಂಸದರೊಬ್ಬರು ‘‘ಯಾವುದೇ ಕಾರಣಕ್ಕೂ ಬಡವರಿಗೆ ಉಚಿತ ಅಕ್ಕಿಯನ್ನು ನೀಡಬಾರದು. ಅವರು ದುಡಿಯದೇ ಸೋಮಾರಿಗಳಾಗುತ್ತಾರೆ’’ ಎಂಬ ಹೇಳಿಕೆಯನ್ನು ನೀಡಿದರು. ಇಂದು ಕೊರೋನದಿಂದಷ್ಟೇ ಜನರು ಸಾಯುತ್ತಿಲ್ಲ. ಲಾಕ್‌ಡೌನ್‌ನಿಂದ ಸೃಷ್ಟಿಯಾದ ಬಡತನದ ಕಾರಣದಿಂದಲೂ ಸಾಯುತ್ತಿದ್ದಾರೆ. ದುಡಿಯುವುದಕ್ಕೆ ಕೆಲಸವೇ ಇಲ್ಲದೆ ನಿರುದ್ಯೋಗಿಗಳಾಗಿ, ರಸ್ತೆಯಲ್ಲಿ ಬಿದ್ದ ತರಕಾರಿಗಳನ್ನು ಹೆಕ್ಕಿ ತಿನ್ನುವಂತಹ ದಯನೀಯ ಸ್ಥಿತಿಗೆ ತಲುಪಿದ್ದಾರೆ. ಇಂತಹ ಹೊತ್ತಿನಲ್ಲೂ ಒಬ್ಬ ಮಾಜಿ ಸಂಸದ ‘ಬಡವರಿಗೆ ಉಚಿತ ಅಕ್ಕಿ ವಿತರಿಸಬೇಡಿ’ ಎಂಬ ಕರೆಯನ್ನು ನೀಡುತ್ತಾರೆ ಎಂದರೆ, ಈತನೊಳಗೆ ಕ್ರೌರ್ಯ ಅದೆಷ್ಟು ಮಡುಗಟ್ಟಿರಬೇಕು?. ಇಂತಹ ನಾಯಕರಿರುವ ನಾಡು, ದೇಶದಲ್ಲಿ ಜನರು ಮೃತದೇಹಗಳನ್ನು ಸುಡುವುದಕ್ಕೂ ಹೆಣಗಾಡಬೇಕಾದ ಸ್ಥಿತಿ ಬಂದರೆ ಅದರಲ್ಲಿ ಅಚ್ಚರಿಯೇನಿದೆ? ಈ ನಾಯಕನ ಕರೆ ಇಷ್ಟಕ್ಕೇ ಸೀಮಿತವಾಗಿಲ್ಲ.

‘ಆಕ್ಸಿಜನ್’ ಕುರಿತಂತೆಯೂ ಸಲಹೆ ನೀಡಿದ್ದಾರೆ. ‘ಮೂಗಿಗೆ ನಿಂಬೆ ರಸವನ್ನು ಹಾಕಿದರೆ ಆಕ್ಸಿಜನ್ ಉತ್ಪತ್ತಿಯಾಗುತ್ತದೆ’ ಎಂಬ ಹೇಳಿಕೆ ನೀಡಿ, ಆಕ್ಸಿಜನ್ ಕೊರತೆಯಿಂದ ಹಾಹಾಕಾರ ಎಬ್ಬಿಸುತ್ತಿರುವ ಜನರ ನೋವುಗಳನ್ನು, ದುಃಖವನ್ನು ಅಣಕಿಸಿದ್ದಾರೆ. ಮೂಗಿಗೆ ನಿಂಬೆರಸ ಹಾಕಿದರೆ ಆಕ್ಸಿಜನ್ ಉತ್ಪಾದನೆಯಾಗುತ್ತದೆ ಎನ್ನುವುದು ನಿಜವಾಗಿದ್ದರೆ, ವೈದ್ಯರು ಸುಮ್ಮನಿರುತ್ತಿದ್ದರೇ? ಇಷ್ಟೆಲ್ಲ ಸಾವುನೋವುಗಳು ಸಂಭವಿಸುವುದು ಸಾಧ್ಯವಿತ್ತೇ? ಗೋವು ಆಕ್ಸಿಜನ್ ಸೇವಿಸಿ, ಆಕ್ಸಿಜನ್‌ನ್ನು ಹೊರ ಬಿಡುತ್ತದೆ ಎನ್ನುವಷ್ಟೇ ಮೂರ್ಖತನದ ಹೇಳಿಕೆ ಇದು. ಜನರು ಆಕ್ಸಿಜನ್ ಕೊರತೆಯಿಂದ ಸಾಲು ಸಾಲಾಗಿ ಸಾಯುತ್ತಿರುವ ಹೊತ್ತಿನಲ್ಲಿ ಇಂತಹ ಹೇಳಿಕೆಯನ್ನು ನೀಡುತ್ತಾರೆ ಎಂದರೆ, ಇವರೆಷ್ಟು ಸಂವೇದನಾ ಹೀನರಾಗಿರಬೇಕು? ಈತನ ಮಾತುಗಳನ್ನು ಮಾಧ್ಯಮಗಳ ಮೂಲಕ ಓದಿ, ನಂಬಿ ಓರ್ವ ಶಿಕ್ಷಕ ಮೂಗಿಗೆ ನಿಂಬೆ ರಸ ಬಿಟ್ಟು ಅಸ್ವಸ್ಥನಾಗಿ ಮೃತಪಟ್ಟಿದ್ದಾರೆ. ಜನಸಾಮಾನ್ಯರನ್ನು ಹಾದಿ ತಪ್ಪಿಸಿ, ಅವರ ಸಾವಿಗೆ ಪರೋಕ್ಷ ಕಾರಣರಾದ ಈ ನಾಯಕನ ವಿರುದ್ಧ ಈವರೆಗೆ ಪೊಲೀಸರು ಯಾವುದೇ ಪ್ರಕರಣವನ್ನು ದಾಖಲಿಸಲಿಲ್ಲ ಎನ್ನುವುದು ಇನ್ನೊಂದು ವಿಶೇಷ.

 ಇತ್ತ ರಾಜ್ಯ ಸಚಿವರಾಗಿರುವ ಉಮೇಶ್ ಕತ್ತಿ, ಪಡಿತರವನ್ನು ಕಡಿತಗೊಳಿಸಿರುವ ಬಗ್ಗೆ ಪ್ರಶ್ನಿಸಿದ ಸಾರ್ವಜನಿಕನೊಬ್ಬನಿಗೆ ‘ನೀವು ಸಾಯುವುದೇ ಒಳ್ಳೆಯದು’ ಎಂದು ಸಲಹೆ ನೀಡಿದ್ದಾರೆ. ‘ನಾವೇನು ಹಸಿವಿನಿಂದ ಸಾಯಬೇಕೇ?’ ಎಂಬ ಪ್ರಶ್ನೆಗೆ ಸಚಿವ ಕತ್ತಿ ನೀಡಿದ ಉತ್ತರ ಇದು. ಅಷ್ಟೇ ಅಲ್ಲ, ಬಳಿಕ ಮಾಧ್ಯಮಗಳ ಮುಂದೆ ಈ ಉತ್ತರವನ್ನು ಸಮರ್ಥಿಸಿದ್ದಾರೆ. ಕೊರೋನಕ್ಕಿಂತಲೂ ಭೀಕರವಾದುದು ಲಾಕ್‌ಡೌನ್. ಕಾರ್ಮಿಕರೂ ಸೇರಿದಂತೆ ರಾಜ್ಯದ ಶೇ. 60ರಷ್ಟು ಜನರ ಕೆಲಸಗಳನ್ನು ಇದು ಕಿತ್ತುಕೊಂಡಿದೆ. ದೈನಂದಿನ ಕೂಲಿ ಕೆಲಸಗಳನ್ನು ಅವಲಂಬಿಸಿದವರಿಗೆ ಯಾವುದೇ ಆಯ್ಕೆಯಿಲ್ಲ.

ಇಂತಹ ಸಂದರ್ಭದಲ್ಲಿ ಲಾಕ್‌ಡೌನ್ ಅಥವಾ ಕರ್ಫ್ಯೂ ವಿಧಿಸಿದ ಸರಕಾರವೇ ಅವರ ಯೋಗಕ್ಷೇಮಕ್ಕೆ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಹಸಿವಿನಿಂದಲೇ ಅವರು ಸಾಯಬೇಕಾಗುತ್ತದೆ. ಹತಾಶೆಗೊಂಡ ಸಾರ್ವಜನಿಕನೊಬ್ಬ ಸಚಿವರನ್ನು ತರಾಟೆಗೆ ತೆಗೆದುಕೊಂಡಾಗ, ಆತನಿಗೆ ಭರವಸೆ, ಆತ್ಮವಿಶ್ವಾಸವನ್ನು ತುಂಬುವುದು ಸಚಿವರಾಗಿ ಕತ್ತಿಯ ಕರ್ತವ್ಯವಾಗಿತ್ತು. ಆದರೆ ಕತ್ತಿಯ ಮಾತು, ಕತ್ತಿಗಿಂತಲೂ ಹರಿತವಾಗಿತ್ತು. ಅದು ಜನಸಾಮಾನ್ಯರ ಕತ್ತನ್ನೇ ಕುಯ್ಯುವಂತಿತ್ತು. ‘ಇನ್ನಷ್ಟು ಸ್ಮಶಾನಗಳಿಗೆ ವ್ಯವಸ್ಥೆ ಮಾಡುತ್ತೇವೆ’ ಎಂದು ಸಚಿವ ಆರ್. ಅಶೋಕ್ ಜನರಿಗೆ ಭರವಸೆ ನೀಡುತ್ತಾರೆ. ಅದರ ಅರ್ಥ, ಜನರನ್ನು ಉಳಿಸುವುದು ನಮ್ಮ ಕೈಯಲ್ಲಿ ಇಲ್ಲ ಎಂದಲ್ಲವೇ? ಜನರಿಗೆ ಬೇಕಾಗಿರುವುದು ಸ್ಮಶಾನವಲ್ಲ. ಆಸ್ಪತ್ರೆಗಳು ಮತ್ತು ಆಕ್ಸಿಜನ್‌ಗಳು. ಆದರೆ ಹೃದಯವೇ ಇಲ್ಲದ, ಜನಸಾಮಾನ್ಯರ ಸಂಕಟಗಳಿಗೆ ಸ್ಪಂದಿಸುವ ಯಾವುದೇ ಗುಣಗಳಿಲ್ಲದ ನಾಯಕರು ಜನರಿಗೆ ಸ್ಮಶಾನಗಳ ದಾರಿಯನ್ನಲ್ಲದೆ ಬದುಕಿನ ದಾರಿಯನ್ನು ತೋರಿಸಲಾರರು ಎನ್ನುವುದು ಈ ಕೊರೋನ ಸಂದರ್ಭದಲ್ಲಿ ಸಾಬೀತಾಗಿದೆ. ಮೊತ್ತ ಮೊದಲು ಆಳುವವರು ತಮ್ಮಿಳಗೆ ಬತ್ತಿ ಹೋಗುತ್ತಿರುವ ಮಾನವೀಯತೆಯ ಆಕ್ಸಿಜನ್‌ಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಆಗ ಜನಸಾಮಾನ್ಯರಿಗೆ ಆಕ್ಸಿಜನ್‌ಗಳನ್ನು ನೀಡುವ ಇಚ್ಛಾಶಕ್ತಿಯನ್ನು ಅವರು ಪಡೆದುಕೊಳ್ಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News