×
Ad

ಕೋವಿಡ್ ಲಸಿಕೆ ಹೆಸರಲ್ಲಿ ‘ಸಂಘಟಿತ ಲೂಟಿ’: ಏಕರೂಪದ ದರ ವಿಧಿಸುವಂತೆ ಆಗ್ರಹಿಸಿ ಬಾಂಬೆ ಹೈಕೋರ್ಟ್ ಗೆ ಮನವಿ ಸಲ್ಲಿಕೆ

Update: 2021-04-28 23:43 IST

ಮುಂಬೈ, ಎ. 28: ದೇಶಾದ್ಯಂತ ಕೋವಿಡ್-19 ಲಸಿಕೆಗಳಿಗೆ ಏಕರೂಪದ 150 ರೂಪಾಯಿ ದರ ವಿಧಿಸುವಂತೆ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡುವಂತೆ ಆಗ್ರಹಿಸಿ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಔಷಧ ಕಂಪೆನಿಗಳು ‘ಸಂಘಟಿತ ಲೂಟಿ’ಯಲ್ಲಿ ತೊಡಗಿವೆ ಎಂದು ದೂರುದಾರರಾದ ಮುಂಬೈ ಮೂಲದ ನ್ಯಾಯವಾದಿ ಫಯಾಝ್ ಖಾನ್ ಹಾಗೂ ಇತರ ಮೂವರು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. 

ಅಲ್ಲದೆ, ಸಾರ್ವಜನಿಕರ ಆರೋಗ್ಯ ರಕ್ಷಿಸಲು ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಆಗ್ರಹಿಸಿದ್ದಾರೆ. ಮೂಲಭೂತ ಹಕ್ಕಾದ ಸಮಾನತೆಯ ಖಾತರಿ ನೀಡಲು ಈ ಕ್ರಮ ಅಗತ್ಯವಾಗಿದೆ. ಅಲ್ಲದೆ ಔಷಧ ಕಂಪೆನಿಗಳ ಕೃಪೆಯಲ್ಲಿ ಬದುಕುವುದಕ್ಕೆ ದಾರಿ ಮಾಡಿಕೊಡಬಾರದು ಎಂದು ದೂರುದಾರರು ಹೇಳಿದ್ದಾರೆ. ಮನವಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಲ್ಲದೆ, ಎರಡು ಲಸಿಕೆ ಉತ್ಪಾದನಾ ಕಂಪೆನಿಗಳಾದ ಸಿರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಹಾಗೂ ಭಾರತ್ ಬಯೋಟೆಕ್ ಅನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. 

ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ-2005 ಹಾಗೂ ಅಗತ್ಯದ ಸರಕುಗಳ ಕಾಯ್ದೆಯ ಅಧಿಕಾರವನ್ನು ಬಳಸುವ ಮೂಲಕ ಕೋವಿಡ್-19 ಲಸಿಕೆ ಎಲ್ಲ ನಾಗರಿಕರಿಗೆ ಏಕರೂಪದ 150 ರೂಪಾಯಿ ದರದಲ್ಲಿ ಲಭ್ಯವಾಗಲು ಕ್ರಮ ಕೈಗೊಳ್ಳಬೇಕು. ಅಲ್ಲದೆ, ಎಲ್ಲರಿಗೂ ಲಸಿಕೆ ನೀಡುವ ಗುರಿ ಸಾಧಿಸಲು, ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಕಾಪಾಡಲು ಸಾರ್ವಭೌಮ ಅಧಿಕಾರವನ್ನು ಬಳಸಬೇಕು ಎಂದು ಮನವಿಯಲ್ಲಿ ಹೇಳಲಾಗಿದೆ. ಕೋವಿ ಶೀಲ್ಡ್ ಗೆ ರಾಜ್ಯಗಳಿಗೆ 400 ರೂಪಾಯಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 600 ದರ ವಿಧಿಸಿರುವುದು ಸೇರಿದಂತೆ ಸಿರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿ ಶೀಲ್ಡ್ ನ ವಿವಿಧ ದರಗಳ ಬಗ್ಗೆ ಮನವಿಯಲ್ಲಿ ವಿಸ್ತೃತ ವಿವರ ನೀಡಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News