ಹಾಸಿಗೆ ಸಿಗದೆ ಕೋವಿಡ್ ಸೋಂಕಿತೆ ಸಾವು: ಕುಟುಂಬದ ಸದಸ್ಯರಿಂದ ಆಸ್ಪತ್ರೆಯಲ್ಲಿ ದಾಂಧಲೆ
ಹೊಸದಿಲ್ಲಿ, ಎ. 28: ಹಾಸಿಗೆ ಸಿಗದೆ ಕೊರೋನ ಸೋಂಕಿಗೊಳಗಾದ ಮಹಿಳೆ ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಅವರ ಕುಟುಂಬದ ಸದಸ್ಯರು ದಕ್ಷಿಣ ದಿಲ್ಲಿಯ ಅಪೊಲೊ ಆಸ್ಪತ್ರೆಯಲ್ಲಿ ದಾಂಧಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದಾಗ್ಯೂ, ಈ ಘಟನೆಗೆ ಸಂಬಂಧಿಸಿ ಯಾವುದೇ ದೂರು ದಾಖಲಾಗಿಲ್ಲ ಎಂದು ಅವರು ಹೇಳಿದ್ದಾರೆ. ‘‘ಕೊರೋನ ಸೋಂಕಿನಿಂದ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಮಹಿಳೆಯನ್ನು ಮಂಗಳವಾರ ಬೆಳಗ್ಗೆ ತುರ್ತು ನಿಗಾ ಘಟಕಕ್ಕೆ ದಾಖಲಿಸಲಾಗಿತ್ತು. ವೈದ್ಯರ ತಂಡ ಕೂಡಲೇ ಅವರಿಗೆ ಅಗತ್ಯದ ವೈದ್ಯಕೀಯ ಸೇವೆ ಒದಗಿಸಿತ್ತು’’ ಎಂದು ಆಸ್ಪತ್ರೆಯ ವಕ್ತಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘‘ಹಾಸಿಗೆಯ ಕೊರತೆ ಇದ್ದುದರಿಂದ ಹಾಸಿಗೆ ಲಭ್ಯ ಇರುವ ಇನ್ನೊಂದು ಆಸ್ಪತ್ರೆಗೆ ಮಹಿಳೆಯನ್ನು ವರ್ಗಾಯಿಸುವಂತೆ ಕುಟುಂಬಕ್ಕೆ ಸಲಹೆ ನೀಡಲಾಗಿತ್ತು. ಆದರೆ, ಬೆಳಗ್ಗೆ 8 ಗಂಟೆಗೆ ಮಹಿಳೆ ಸಾವನ್ನಪ್ಪಿದರು. ಈ ಹಿನ್ನೆಲೆಯಲ್ಲಿ ಮಹಿಳೆಯ ಕುಟುಂಬದ ಸದಸ್ಯರು ದಾಂಧಲೆ ನಡೆಸಿದರು, ಆಸ್ಪತ್ರೆಯ ಸೊತ್ತಿಗೆ ಹಾನಿ ಉಂಟು ಮಾಡಿದರು ಹಾಗೂ ನಮ್ಮ ವೈದ್ಯರು ಸಿಬ್ಬಂದಿಗೆ ಹಲ್ಲೆ ನಡೆಸಿದರು’’ ಎಂದು ಹೇಳಿಕೆ ತಿಳಿಸಿದೆ.