ಮತ ಎಣಿಕೆ ಕೇಂದ್ರಗಳನ್ನು ಪ್ರವೇಶಿಸಲು ಅಭ್ಯರ್ಥಿಗಳಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ: ಚುನಾವಣಾ ಆಯೋಗ
ಹೊಸದಿಲ್ಲಿ,ಎ.28: ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಮೇ 2ರಂದು ನಡೆಯಲಿದೆ. ಅದಕ್ಕಾಗಿ ಪಶ್ಚಿಮ ಬಂಗಾಳ,ತಮಿಳುನಾಡು,ಕೇರಳ,ಅಸ್ಸಾಂ ಮತ್ತು ಪುದುಚೇರಿ ಸಜ್ಜಾಗುತ್ತಿದ್ದು,ನೆಗೆಟಿವ್ ಆರ್ಟಿ-ಪಿಸಿಆರ್ ಪರೀಕ್ಷಾ ವರದಿ ಅಥವಾ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣಪತ್ರವಿಲ್ಲದ ಅಭ್ಯರ್ಥಿಗಳು ಅಥವಾ ಏಜೆಂಟರಿಗೆ ಮತ ಎಣಿಕೆ ಕೇಂದ್ರಗಳನ್ನು ಪ್ರವೇಶಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಚುನಾವಣಾ ಆಯೋಗವು ಬುಧವಾರ ತಿಳಿಸಿದೆ.
ಪ.ಬಂಗಾಳದಲ್ಲಿ ವಿಧಾನ ಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಗುರುವಾರ ನಡೆಯಲಿದ್ದು,ಇತರ ರಾಜ್ಯಗಳಲ್ಲಿ ಮತದಾನ ಈಗಾಗಲೇ ನಡೆದಿದೆ.
ಮತ ಎಣಿಕೆ ಕೇಂದ್ರಗಳ ಹೊರಗೆ ಜನರು ಸೇರಲು ಅವಕಾಶ ನೀಡಲಾಗುವುದಿಲ್ಲ ಎಂದೂ ಆಯೋಗವು ತನ್ನ ಇತ್ತೀಚಿನ ಮಾರ್ಗಸೂಚಿಯಲ್ಲಿ ತಿಳಿಸಿದೆ. ಅಭ್ಯರ್ಥಿಗಳು ಮತ್ತು ಏಜೆಂಟರು ತಮ್ಮ ಕೋವಿಡ್ ನೆಗೆಟಿವ್ ವರದಿಗಳು ಅಥವಾ ಲಸಿಕೆ ಪ್ರಮಾಣಪತ್ರಗಳನ್ನು ಮತ ಎಣಿಕೆ ಆರಂಭಕ್ಕೆ ಮುನ್ನ 48 ಗಂಟೆಗಳಲ್ಲಿ ಸಲ್ಲಿಸಬೇಕು ಎಂದು ಅದು ತಿಳಿಸಿದೆ. ಮತ ಎಣಿಕೆ ಎಲ್ಲ ಕೇಂದ್ರಗಳಲ್ಲಿ ರವಿವಾರ ಬೆಳಿಗ್ಗೆ ಎಂಟು ಗಂಟೆಗೆ ಆರಂಭವಾಗಲಿದೆ.