ಗೋಶಾಲೆಗಳ ಅನುದಾನಗಳು ಆಸ್ಪತ್ರೆಗಳ ಕಡೆಗೆ ಹರಿಯಲಿ

Update: 2021-04-30 05:57 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಕೋವಿಡ್ ಸಾವು-ನೋವುಗಳು ಉಲ್ಬಣಿಸುವುದಕ್ಕೂ, ಈ ದೇಶ ಆರ್ಥಿಕವಾಗಿ ನೆಲ ಕಚ್ಚಿರುವುದಕ್ಕೂ ನೇರ ಸಂಬಂಧವಿದೆ. ಕೊರೋನದಿಂದ ಲಾಕ್‌ಡೌನ್, ಲಾಕ್‌ಡೌನ್‌ನಿಂದ ಆರ್ಥಿಕ ಹಿಂಜರಿತ, ಆರ್ಥಿಕ ಹಿಂಜರಿತದಿಂದ ಆರೋಗ್ಯ ಕ್ಷೇತ್ರಕ್ಕೆ ಸೂಕ್ತ ಅನುದಾನಗಳಿಲ್ಲದೆ ಮತ್ತ್ತೆ ಕೊರೋನ ಸಾವು-ನೋವುಗಳ ಉಲ್ಬಣ, ಇದನ್ನು ತಡೆಯಲು ಮತ್ತೆ ಲಾಕ್‌ಡೌನ್...ಹೀಗೆ ದೇಶದ ಕೊರೋನ ಮತ್ತು ಆರ್ಥಿಕ ದುರಂತಗಳು ಒಂದನ್ನೊಂದು ಬೆನ್ನು ಹತ್ತಿಕೊಂಡಿವೆ. ಬಹುಶಃ ನೋಟು ನಿಷೇಧದಂತಹ ಅಪಕ್ವ ನಿರ್ಧಾರಗಳನ್ನು ಪ್ರಧಾನಿ ಮಾಡದೇ ಇದ್ದಿದ್ದರೆ, ಇಂದು ಈ ಆರ್ಥಿಕ ಹಿನ್ನಡೆಯನ್ನು ದೇಶ ತಾಳಿಕೊಳ್ಳುತ್ತಿತ್ತೋ ಏನೋ. ದೇಶಕ್ಕೆ ಕೊರೋನ ಕಾಲಿಡುವ ಮುನ್ನವೇ ಇಲ್ಲಿನ ಆರ್ಥಿಕತೆ ಕುಸಿದು ಬಿದ್ದಿತ್ತು. ಈ ಕಾರಣದಿಂದ ಕೊರೋನ ಮತ್ತು ಲಾಕ್‌ಡೌನ್‌ನ್ನು ಸಹಿಸಿಕೊಳ್ಳುವ ಶಕ್ತಿ ದೇಶಕ್ಕೆ ಇರಲಿಲ್ಲ. ಆದುದರಿಂದಲೇ, ಉಳಿದೆಲ್ಲ ದೇಶಗಳು ಕೊರೋನದ ಆಘಾತದಿಂದ ಒಂದೇ ವರ್ಷದಲ್ಲಿ ಚೇತರಿಸಿಕೊಂಡವು. ಆದರೆ ಭಾರತ ಮಾತ್ರ ಕೊರೋನ ಗಾಯಗಳನ್ನು ದೇಹಕ್ಕಿಡೀ ಹಂಚಿ, ಕಂಗಾಲಾಗಿ ಕೂತಿದೆ.

‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ’ ಎಂಬ ಮನಸ್ಥಿತಿಯೊಂದಿಗೆ, ತನ್ನದೇ ಭಾವಲೋಕದಲ್ಲಿ ಮೋದಿ ನೇತೃತ್ವದ ಸರಕಾರ ಇನ್ನೂ ವಿಹರಿಸುತ್ತಿದೆ. ಹಸಿವು, ಬಡತನ, ಅನಾರೋಗ್ಯ, ಅನಕ್ಷರತೆ ಇವೆಲ್ಲವುಗಳಿಂದ ಕಂಗೆಟ್ಟಿರುವ ದೇಶವನ್ನು ಮೇಲೆತ್ತಲು ಸರಕಾರ ವಿವಿಧ ರಾಜ್ಯಗಳಿಗೆ ಅನುದಾನಗಳನ್ನು ಬಿಡುಗಡೆ ಮಾಡಬೇಕಾಗಿದೆ. ಆದರೆ ಮೋದಿ ಸರಕಾರ ಇನ್ನೂ, ಬುಲೆಟ್ ಟ್ರೈನ್, ನೂತನ ಸಂಸತ್ ಭವನ ಕಟ್ಟಡ, ದುಬಾರಿ ಸ್ಮಾರಕಗಳ ಭ್ರಮೆಗಳಿಂದ ಹೊರಬಂದಿಲ್ಲ. ಅಧಿಕಾರಕ್ಕೇರಿದ ದಿನಗಳಿಂದ, ಅನುತ್ಪಾದಕ ಸ್ಮಾರಕಗಳಿಗೆ ಸಾವಿರಾರು ಕೋಟಿ ರೂಪಾಯಿಗಳನ್ನು ಸರಕಾರ ಸುರಿದ ಪರಿಣಾಮವಾಗಿ ಇಂದು ಜನರ ಮೂಲಭೂತ ಅಗತ್ಯಗಳಿಗೆ ಬೇಕಾದ ದುಡ್ಡಿಗಾಗಿ ಸರಕಾರ ಪರದಾಡಬೇಕಾಗಿದೆ.

ಸ್ಮಾರಕಗಳಿಗೆ ಸುರಿದ ಹಣವನ್ನು ಆಸ್ಪತ್ರೆಗಳಿಗೆ ಸುರಿದಿದ್ದರೆ, ಇಂದು ದೇಶ ಇಂತಹ ದಯನೀಯ ಸ್ಥಿತಿಗೆ ಬಂದು ನಿಲ್ಲುತ್ತಿರಲಿಲ್ಲ. ಸ್ಮಾರಕಗಳು ಆಕ್ಸಿಜನ್‌ಗಳನ್ನು ನೀಡುವುದಿಲ್ಲ, ಪ್ರತಿಮೆಗಳು ಜನರನ್ನು ಅನಾರೋಗ್ಯದಿಂದ ಉಳಿಸುವುದಿಲ್ಲ ಎನ್ನುವ ಕಟು ಸತ್ಯವನ್ನು ಕೊರೋನ ನಮಗೆ ಸಾರಿ ಸಾರಿ ಹೇಳುತ್ತಿದೆ. ಈ ದುರ್ಭರ ಸಮಯದಲ್ಲಿ ಜನರಿಂದ ತೀವ್ರವಾಗಿ ವಿರೋಧಿಸಲ್ಪಡುತ್ತಿದ್ದ ವಿವಾದಾತ್ಮಕ ಹಾಗೂ ದುಬಾರಿಯಾದ ಯೋಜನೆಗಳನ್ನು ನಿಲ್ಲಿಸಲು ಸರಕಾರಕ್ಕೆ ಇದು ಸಕಾಲವಾಗಿದೆ. ಆ ಹಣವನ್ನು ಜನರ ಮೂಲಭೂತ ಅಗತ್ಯಕ್ಕಾಗಿ ವ್ಯಯಿಸುವುದಕ್ಕೆ ಸರಕಾರ ಮುಂದಾಗಬೇಕಾಗಿದೆ. ಹೊಸದಿಲ್ಲಿಯಲ್ಲಿ ನೂತನ ಸಂಸತ್ ಭವನ ಕಟ್ಟಡ ನಿರ್ಮಾಣದ ‘ಸೆಂಟ್ರಲ್ ವಿಸ್ಟಾ ’ಯೋಜನೆಯ ಅಗತ್ಯವನ್ನು ಆರ್ಥಿಕ ತಜ್ಞರು ಬೇರೆ ಬೇರೆ ಸಂದರ್ಭಗಳಲ್ಲಿ ಪ್ರಶ್ನಿಸಿದ್ದರು. ದೇಶ ಆರ್ಥಿಕವಾಗಿ ಕಂಗೆಟ್ಟುಕೂತಿರುವಾಗ ಈ ಯೋಜನೆಗೆ ಹಣ ಸುರಿಯುವ ಅಗತ್ಯವಿದೆಯೇ ಎಂದು ಕೇಳಿದ್ದರು. ದೇಶ ರಾಷ್ಟ್ರೀಯ ವಿಪತ್ತನ್ನು ಎದುರಿಸುವ ಈ ಸಮಯದಲ್ಲಿ, ‘ಸೆಂಟ್ರಲ್ ವಿಸ್ಟಾ ’ ಯೋಜನೆಯನ್ನು ಕೈ ಬಿಟ್ಟದ್ದೇ ಆದರೆ, ಸಾವಿರಾರು ಕೋಟಿ ರೂ.ಗಳನ್ನು ತಕ್ಷಣವೇ ಉಳಿಸಬಹುದಾಗಿದೆ.

ಅಷ್ಟೇ ಅಲ್ಲ, ಈ ಮೂಲಕ ಸಾವಿರಾರು ಮರಗಳು, ಅಪಾರ ಕಟ್ಟಡಗಳ ಧ್ವಂಸ ಕಾರ್ಯವೂ ಸ್ಥಗಿತಗೊಳ್ಳಲಿದೆ. ವಿಶ್ವದ ಮುಂದೆ ತನ್ನ ಪ್ರತಿಷ್ಠೆಯನ್ನು ಪ್ರದರ್ಶಿಸುವುದಕ್ಕಾಗಿಯೇ ಘೋಷಣೆಯಾಗಿರುವ ಈ ಯೋಜನೆಯಿಂದ ಭಾರತಕ್ಕೆ ಯಾವ ಲಾಭವೂ ಇಲ್ಲ. ಕೊರೋನ ಮತ್ತು ಲಾಕ್‌ಡೌನ್‌ನಿಂದಾಗಿ ಆರ್ಥಿಕವಾಗಿ ದಯನೀಯ ಸ್ಥಿತಿ ತಲುಪಿರುವ ಭಾರತ, ಇಂತಹ ಯೋಜನೆಗಳಿಗೆ ಕೈ ಹಾಕಿದರೆ ವಿಶ್ವ ಅದನ್ನು ನೋಡಿ ವ್ಯಂಗ್ಯದಿಂದ ನಕ್ಕೀತೆ ಹೊರತು, ಪ್ರಶಂಸಿಸಲಾರದು. ಯಾಕೆಂದರೆ ಕೊರೋನ ಸಾವು-ನೋವುಗಳು ಈಗಾಗಲೇ ಭಾರತವನ್ನು ವಿಶ್ವದ ಮುಂದೆ ತಲೆತಗ್ಗಿಸುವಂತೆ ಮಾಡಿದೆ. ಹಾಗೆಯೇ ಅತ್ಯಂತ ವಿವಾದಾತ್ಮಕವಾದ ನದಿ ಜೋಡಣಾ ಯೋಜನೆಗಳನ್ನು ಈ ಸನ್ನಿವೇಶದಲ್ಲಿ ಕೈಬಿಡಬಹುದಾಗಿದೆ.

ಕೆನ್-ಬೆಟ್ವಾ ನದಿ ಜೋಡಣಾ ಯೋಜನೆಗಾಗಿ 20 ಲಕ್ಷಕ್ಕೂ ಅಧಿಕ ಮರಗಳನ್ನು ಕಡಿಯಬೇಕಾಗುತ್ತದೆ ಹಾಗೂ ಈ ಯೋಜನೆಯಿಂದ ಲಭ್ಯವಾಗಲಿರುವ ಪ್ರಯೋಜನಗಳು ಕೂಡಾ ಸಂಪೂರ್ಣ ಶಂಕಾಸ್ಪದವಾಗಿವೆ. ಈ ಯೋಜನೆಯಿಂದಾಗಿ ಈಗಾಗಲೇ ತೀವ್ರವಾದ ನೀರಿನ ಕೊರತೆಯನ್ನು ಎದುರಿಸುತ್ತಿರುವ ಬುಂದೇಲ್‌ಖಂಡದಲ್ಲಿ ಪರಿಸ್ಥಿತಿ ಇನ್ನಷ್ಟು ಕಠಿಣವಾಗಲಿದೆಯೆಂದು ಇತ್ತೀಚಿನ ದಿನಗಳಲ್ಲಿ ಯೋಜನೆಯ ಕುರಿತಾಗಿ ನಡೆಸಲಾದ ಪರಾಮರ್ಶೆಗಳಲ್ಲಿ ಬೆಳಕಿಗೆ ಬಂದಿದೆ. ಹಿಮಾಚಲ ಪ್ರದೇಶದ ಲಾಹು-ಸ್ಪಿಟಿ ಪ್ರಾಂತದಲ್ಲಿರುವ ಹಲವಾರು ವಿವಾದಾಸ್ಪದ ಅಣೆಕಟ್ಟು ಯೋಜನೆಗಳನ್ನು ಬಲವಾದ ಸುರಕ್ಷತೆ, ಪರಿಸರ ಮತ್ತು ಸಾಮಾಜಿಕ ಕಾರಣಗಳಿಗಾಗಿ ವಿರೋಧಿಸಲಾಗುತ್ತಿದೆ. ಕೈಬಿಡಬಹುದಾದ ಯೋಜನೆಗಳ ಪಟ್ಟಿಯಲ್ಲಿ ಇವುಗಳಿಗೂ ಆದ್ಯತೆಯನ್ನು ನೀಡಬಹುದು. ಹಾಗೆಯೇ ಎಂದೂ ದೇಶದ ಜನರ ಮೂಲಭೂತ ಬೇಡಿಕೆಯಾಗಿರದ ಬುಲೆಟ್ ಟ್ರೈನ್ ಯೋಜನೆಯನ್ನು ಕೈ ಬಿಡುವುದೂ ದೇಶದ ಭವಿಷ್ಯದ ದೃಷ್ಟಿಯಿಂದ ಒಳಿತೇ ಆಗಿದೆ.

ಕೇವಲ ರಾಜಕೀಯ ಕಾರಣಕ್ಕಾಗಿ ಸರಕಾರ ಜಾರಿಗೊಳಿಸಿರುವ ‘ಜಾನುವಾರು ಮಾರಾಟ ನಿಷೇಧ ಕಾಯ್ದೆ’ ಅಥವಾ ‘ಗೋ ಹತ್ಯಾ’ ಕಾಯ್ದೆಯನ್ನು ಹಿಂಪಡೆಯುವುದಕ್ಕೆ ಇದು ಸಕಾಲ. ಈ ಕಾಯ್ದೆಯಿಂದಾಗಿ, ರೈತರು ತಾವು ಸಾಕಿದ ಅನುಪಯುಕ್ತ ಜಾನುವಾರುಗಳನ್ನು ಮಾರಾಟ ಮಾಡುವ ಹಕ್ಕನ್ನೇ ಕಳೆದುಕೊಂಡಿದ್ದಾರೆ. ಇದು ಅವರ ಆರ್ಥಿಕ ಬದುಕಿನ ಮೇಲೆ ತೀವ್ರ ದುಷ್ಪರಿಣಾಮವನ್ನು ಬೀರಿದೆ. ಅಷ್ಟೇ ಅಲ್ಲ, ಅನುಪಯುಕ್ತ ಜಾನುವಾರುಗಳನ್ನು ಸಾಕುವ ಭಾರವೂ ಅವರ ಮೇಲೆ ಬಿದ್ದಿದೆ. ಅಷ್ಟೇ ಅಲ್ಲ, ಗೋಶಾಲೆಗಳನ್ನು ತೆರೆಯುವ ಮೂಲಕ ಈ ಅನುಪಯುಕ್ತ ಜಾನುವಾರುಗಳನ್ನು ಸಾಕುವ ಹೊಣೆಯನ್ನು ಸರಕಾರ ಅನಗತ್ಯವಾಗಿ ಮೈಮೇಲೆ ಹೇರಿಕೊಂಡಿದೆ.

ಹೈನೋದ್ಯಮದೊಂದಿಗೆ ಯಾವ ಸಂಬಂಧವೂ ಇಲ್ಲದ ಈ ಗೋಶಾಲೆಗಳಿಗಾಗಿ ಸರಕಾರ ವ್ಯಯಿಸುವ ಕೋಟ್ಯಂತರ ಹಣವನ್ನು ಸರಕಾರಿ ಆಸ್ಪತ್ರೆಗಳಿಗಾಗಿ ವ್ಯಯಿಸಲು ಮುಂದಾಗಬೇಕಾಗಿದೆ. ಇದರಿಂದ ರೈತರು ತಮ್ಮಲ್ಲಿರುವ ಜಾನುವಾರುಗಳನ್ನು ಮಾರಿ ಆರ್ಥಿಕವಾಗಿ ಚೇತರಿಸಿಕೊಳ್ಳುವುದಕ್ಕೂ ಅನುಕೂಲವಾಗುತ್ತದೆ. ಜೊತೆಗೆ ಅಪೌಷ್ಟಿಕತೆಯ ಈ ಕಾಲದಲ್ಲಿ ಜನರ ಕೈಯಿಂದ ಕಿತ್ತುಕೊಳ್ಳಲ್ಪಟ್ಟ ಪೌಷ್ಟಿಕ ಆಹಾರ ಮತ್ತೆ ಜನರಿಗೆ ದೊರಕಿದಂತಾಗುತ್ತದೆ. ಮಾಂಸಾಹಾರ ಮತ್ತು ತರಕಾರಿ ಬೆಳೆಗಳ ಬೆಲೆಯೇರಿಕೆಗೂ ಇದು ಕಡಿವಾಣ ಹಾಕುತ್ತದೆ. ಬರೇ ಮತಗಳನ್ನಷ್ಟೇ ಉತ್ಪಾದನೆ ಮಾಡಬಲ್ಲ ಗೋಶಾಲೆ, ಸ್ಮಾರಕಗಳು, ಪ್ರತಿಮೆಗಳಂತಹ ಯೋಜನೆಗಳನ್ನು ಕೈ ಬಿಟ್ಟು ಆಸ್ಪತ್ರೆ, ವೆಂಟಿಲೇಟರ್, ಆಕ್ಸಿಜನ್, ಸರಕಾರಿ ಶಾಲೆಗಳು, ಬಿಸಿಯೂಟ ಮೊದಲಾದ ಯೋಜನೆಗಳ ಕಡೆಗೆ ಸರಕಾರ ಇನ್ನಾದರೂ ಗಮನ ನೀಡಬೇಕಾಗಿದೆ. ಆ ಮೂಲಕ ಮಾತ್ರ ಭಾರತ ಕೊರೋನ ಮತ್ತು ಲಾಕ್‌ಡೌನ್‌ಗಳಿಂದಾದ ನಷ್ಟವನ್ನು ಭವಿಷ್ಯದಲ್ಲಿ ತುಂಬಿಕೊಳ್ಳಲು ಸಾಧ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News