×
Ad

ಇಸ್ರೇಲ್ ಯಾತ್ರಾಸ್ಥಳದಲ್ಲಿ ಕಾಲ್ತುಳಿತದಿಂದ ಹಲವು ಮಂದಿ ಮೃತ್ಯು

Update: 2021-04-30 09:33 IST

ಮೆರೋನ್ (ಇಸ್ರೇಲ್), ಎ. 30: ಉತ್ತರ ಇಸ್ರೇಲ್ ನ  ಯಹೂದಿ ಯಾತ್ರಾಸ್ಥಳವೊಂದರಲ್ಲಿ ಶುಕ್ರವಾರ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಕನಿಷ್ಠ 44 ಮಂದಿ ಮೃತಪಟ್ಟಿದ್ದಾರೆ.

ಮೆರೋನ್ ನಗರದಲ್ಲಿರುವ ಎರಡನೇ ಶತಮಾನದ ಟಾಲ್ಮುಡಿಕ್ ಸಂತ ರಬ್ಬಿ ಶಿಮೋನ್ ಬರ್ ಯೊಚೈಯ ಪ್ರಸಿದ್ಧ ಗೋರಿ ಇರುವ ಸ್ಥಳದಲ್ಲಿ ರಾತ್ರಿ ಈ ದುರಂತ ಸಂಭವಿಸಿದೆ. ಇಲ್ಲಿ ಲಾಗ್ ಬವೊಮರ್ ರಜೆಯ ಸಂದರ್ಭದಲ್ಲಿ ಅತಿ ಸಂಪ್ರದಾಯವಾದಿ ಯಹೂದಿಯರು ಭಾರೀ ಸಂಖ್ಯೆಯಲ್ಲಿ ಸೇರುತ್ತಾರೆ.

ಈ ಯಾತ್ರೆಯನ್ನು ಕಳೆದ ವರ್ಷ ಕೊರೋನ ವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ನಿಷೇಧಿಸಲಾಗಿತ್ತು. ಈ ಬಾರಿ ದೇಶದಲ್ಲಿ ಎಲ್ಲರಿಗೂ ಯಶಸ್ವಿಯಾಗಿ ಲಸಿಕೆ ಹಾಕಿದ ಬಳಿಕ, ಬಹುತೇಕ ಎಲ್ಲ ಚಟುವಟಿಕೆಗಳು ಆರಂಭಗೊಂಡಿದ್ದವು. ಹಾಗಾಗಿ, ಈ ವರ್ಷ ಹಿಂದಿನದಕ್ಕಿಂತಲೂ ಹೆಚ್ಚಿನ ಉತ್ಸಾಹದಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ಇಸ್ರೇಲ್ ನಲ್ಲಿ ಕೊರೋನ ವೈರಸ್ ಸಾಂಕ್ರಾಮಿಕ ಸ್ಫೋಟಿಸಿದಂದಿನಿಂದ ಏರ್ಪಡಿಸಲಾದ ಅತಿ ದೊಡ್ಡ ಸಾರ್ವಜನಿಕ ಸಮಾವೇಶ ಅದಾಗಿತ್ತು. ಅಲ್ಲಿ ಮಕ್ಕಳು ಸೇರಿದಂತೆ ಪೊಲೀಸರು ಅನುಮತಿ ನೀಡಿರುವುದಕ್ಕಿಂತ ಮೂರು ಪಟ್ಟಿಗೂ ಅಧಿಕ ಜನರು ಪಾಲ್ಗೊಂಡಿದ್ದರು.
ಜನರು ಕುಳಿತಿದ್ದ ಸ್ಟೇಡಿಯಮ್ ಒಂದು ಕುಸಿದ ಬಳಿಕ ಜನರು ಗಾಬರಿಗೊಂಡು ಸುರಕ್ಷಿತ ಸ್ಥಳಗಳಿಗೆ ಧಾವಿಸಿದರು. ಆಗ ಕಾಲ್ತುಳಿತ ಸಂಭವಿಸಿತು.

ಪೊಲೀಸರು 10,000 ಜನರ ಸಮಾವೇಶಕ್ಕೆ ಅನುಮತಿ ನೀಡಿದ್ದರು. ಆದರೆ, ಅಲ್ಲಿ 30,000ಕ್ಕೂ ಅಧಿಕ ಮಂದಿ ಜಮಾಯಿಸಿದ್ದರು ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News