ಕೋವಿಡ್ ಲಸಿಕೆ: ಉರಿಯುವ ಮನೆಯ ಗಳ ಹಿರಿಯುವವರು

Update: 2021-05-01 09:08 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಲಸಿಕೆಗಳನ್ನು ದೇಶ ಇನ್ನೂ ಶೇ. 100ರಷ್ಟು ನಂಬಿಲ್ಲ. ಭಾರತೀಯ ಲಸಿಕೆಯ ತಯಾರಿಯ ಪ್ರಯೋಗ ಎಲ್ಲ ಹಂತಗಳನ್ನು ಮುಗಿಸಿಲ್ಲ ಎನ್ನುವ ಆರೋಪ ಲಸಿಕೆಯನ್ನು ಅನುಮಾನದಿಂದ ನೋಡುವಂತೆ ಮಾಡಿತು. ಇದರ ಬೆನ್ನಿಗೆ ಲಸಿಕೆ ತೆಗೆದುಕೊಂಡ ನಾಲ್ವರಲ್ಲಿ ಒಬ್ಬರ ಮೇಲೆ ಅದು ಪ್ರತಿಕೂಲ ಪರಿಣಾಮ ಬೀರಿರುವುದು ಜನರಲ್ಲಿ ಆತಂಕಗಳನ್ನು ಬಿತ್ತಿತು. ಆರೋಗ್ಯ ಸಿಬ್ಬಂದಿಯೇ ಲಸಿಕೆಗಳನ್ನು ಪಡೆದುಕೊಳ್ಳಲು ಹಿಂದೇಟು ಹಾಕಿರುವುದು ಜನರಲ್ಲಿ ಲಸಿಕೆಗಳ ಕುರಿತಂತೆ ಇನ್ನಷ್ಟು ಶಂಕೆಯನ್ನು ಬಿತ್ತಿತು. ಲಸಿಕೆ ಪಡೆದವರಲ್ಲಿ ಮತ್ತೆ ಕೊರೋನಾ ಪಾಸಿಟಿವ್ ಕಂಡು ಬಂದಿರುವುದು ಲಸಿಕೆ ಕುರಿತಂತೆ ಜನರು ಲಘುವಾಗಿ ಯೋಚಿಸುವಂತೆ ಮಾಡಿತು. ಆದರೆ ಈಗ ವ್ಯತಿರಿಕ್ತ ಪರಿಸ್ಥಿತಿ ನಿರ್ಮಾಣವಾಗಿದೆ.

ದೇಶಾದ್ಯಂತ ಕೊರೋನದಿಂದ ಸಂಭವಿಸುತ್ತಿರುವ ಸಾವುಗಳಿಗೆ ಹೆದರಿರುವ ಜನರು, ‘ಕೊರೋನದಿಂದ ಹೇಗೂ ಸಾಯಬೇಕಾಗಿರುವಾಗ ಲಸಿಕೆಯ ಪ್ರಯತ್ನವನ್ನೂ ಮಾಡಿ ನೋಡೋಣ’ ಎಂದು ಮಾನಸಿಕವಾಗಿ ಲಸಿಕೆ ಹಾಕಿಕೊಳ್ಳಲು ಸಿದ್ಧರಾಗಿದ್ದಾರೆ. ಲಸಿಕೆ ಶೇ. 70ರಷ್ಟು ಪರಿಣಾಮ ಬೀರುತ್ತದೆ ಮತ್ತು ಸಾವನ್ನು ತಡೆಯುತ್ತದೆ ಎನ್ನುವ ಭರವಸೆಯೂ ಅವರಿಗೆ ಲಸಿಕೆಯ ಕಡೆಗೆ ಮುಖ ಮಾಡುವಂತೆ ಮಾಡಿದೆ. ಕೊರೋನ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದಂತೆಯೇ ಲಸಿಕೆ ಸ್ವೀಕರಿಸುವವರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಆದರೆ, ಜನರ ಬೇಡಿಕೆಗೆ ಪೂರಕವಾಗಿ ಲಸಿಕೆಗಳು ಪೂರೈಕೆಯಾಗುತ್ತಿಲ್ಲ ಎಂದು ಇದೀಗ ಮಾಧ್ಯಮಗಳು ಬಿತ್ತರಿಸುತ್ತಿವೆ.

ದೇಶ ವಿಪತ್ತಿನಲ್ಲಿರುವ ಈ ಹೊತ್ತಿನಲ್ಲಿ ಲಸಿಕೆಯನ್ನು ಉಚಿತವಾಗಿ ನೀಡುವುದು ಸರಕಾರದ ಹೊಣೆಯಾಗಿದೆ. ತಮ್ಮ ಪ್ರಜೆಗಳು ಲಸಿಕೆಗಳಿಗೆ ಹಣ ಪಾವತಿಸಲು ಸದೃಢರಾಗಿದ್ದರೂ, ಎಲ್ಲಾ ಪಾಶ್ಚಾತ್ಯ ದೇಶಗಳು ತಮ್ಮ ಪ್ರಜೆಗಳಿಗೆ ಉಚಿತವಾಗಿ ಲಸಿಕೆಯನ್ನು ನೀಡುತ್ತಿವೆ. ಆದರೆ ಭಾರತದಲ್ಲಿ ಲಸಿಕೆಗಳ ಹೆಸರಲ್ಲಿ ಹಣದ ಲೆಕ್ಕಾಚಾರಗಳು ನಡೆಯುತ್ತಿವೆ. ಸಾರ್ವಜನಿಕ ಆರೋಗ್ಯ ಹಾಗೂ ಜೀವವನ್ನು ಕಾಪಾಡುವ ಈ ಲಸಿಕೆಯನ್ನು ಸರಕಾರವು ಮಾರುಕಟ್ಟೆಯ ಸರಕೆಂಬಂತೆ ನೋಡತೊಡಗಿದೆೆ. ಇಲ್ಲಿ ಸ್ಪಷ್ಟವಾಗಿ ತಿಳಿದುಬರುವುದೇನೆಂದರೆ, ಸರಕಾರದ ಮಟ್ಟಿಗೆ ಮುಕ್ತ ಮಾರುಕಟ್ಟೆ ಸಿದ್ಧಾಂತವು ಜನರ ಪ್ರಾಣಗಳನ್ನು ಕಾಪಾಡುವುದಕ್ಕಿಂತ ಹೆಚ್ಚು ಮುಖ್ಯವಾದುದಾಗಿದೆ. ಆದುದರಿಂದಲೇ ಭಿನ್ನ ದರ ನಿಗದಿಯ ಕುರಿತಂತೆ ಸರಕಾರ ಇದುವರೆಗೆ ಯಾವುದೇ ವಿವರಣೆಯನ್ನು ನೀಡಿಲ್ಲ್ಲ. ನಮ್ಮ ಲಸಿಕೆ ಕಂಪೆನಿಗಳು ಲಸಿಕೆಯನ್ನು ಕನಿಷ್ಠ ಪಕ್ಷ ಉತ್ಪಾದನಾ ವೆಚ್ಚ ಹಾಗೂ ಶೇ.10ರಷ್ಟು ಸಾಮಾನ್ಯ ಲಾಭದೊಂದಿಗೆ ಒದಗಿಸಬೇಕಾದ ಸಂದರ್ಭ ಇದಾಗಿದೆ. ಆದರೆ ಅವು ತಮ್ಮ ಲಸಿಕೆಗಳಿಗೆ ಈಗ ವಿಧಿಸಿರುವ ದರವು ಬೆಚ್ಚಿಬೀಳಿಸುವಂತಿದೆ.

ಕೇಂದ್ರ ಸರಕಾರವು ತನ್ನ ಅವಶ್ಯಕತೆಗಳಿಗೆ ಅನುಗುಣವಾಗಿ ಲಸಿಕೆಯನ್ನು ಪ್ರತಿ ಡೋಸ್‌ಗೆ 150 ರೂ.ದರದಲ್ಲಿ ಖರೀದಿಸಿದರೂ ಲಸಿಕೆ ತಯಾರಿಕಾ ಕಂಪೆನಿಗೆ 19,500 ಕೋಟಿ ರೂ. ಲಾಭವಾಗಲಿದೆ. ಒಂದು ವೇಳೆ ಡೋಸ್‌ಗೆ 200 ರೂ.ನಂತೆ ಮಾರಾಟ ಮಾಡಿದರೂ ಕಂಪೆನಿಗೆ ಭರ್ಜರಿ ಲಾಭ ದೊರೆಯಲಿದೆ ಮತ್ತು ಇದು ಸಾರ್ವತ್ರಿಕ ರೋಗ ನಿರೋಧಕತೆ ಕಾರ್ಯಕ್ರಮದಡಿ ಕೇಂದ್ರ ಸರಕಾರವು ಸಂಪಾದಿಸಿರುವ ಅತ್ಯಂತ ದುಬಾರಿಯಾದ ಲಸಿಕೆಯೆನಿಸಿಕೊಳ್ಳಲಿದೆ. ಹೀಗಿದ್ದರೂ ಕೂಡಾ ಒಟ್ಟು 35 ಸಾವಿರ ಕೋಟಿ ರೂ. ವೌಲ್ಯದ ಲಸಿಕೆಯನ್ನು ಖರೀದಿಸಲು 2021-22ರ ಸಾಲಿನಲ್ಲಿ 26 ಸಾವಿರ ಕೋಟಿ ರೂ. ಯೋಜನಾ ಗಾತ್ರವನ್ನು ಕೇಂದ್ರ ಸರಕಾರ ಸಿದ್ಧಪಡಿಸಿದೆ.

ಪ್ರಸಕ್ತ ಲಸಿಕೆ ನೀತಿಯ ಪ್ರಕಾರ, ಕೇಂದ್ರ ಸರಕಾರವು ಲಸಿಕೆಗಾಗಿ ಸಾರ್ವಜನಿಕವಾಗಿ ಮಾಡಿದ ವೆಚ್ಚವು 7,500 ಕೋಟಿ ರೂ.ಗಳಾಗಿವೆ ಹಾಗೂ ಪ್ರತಿ ಲಸಿಕೆಗೆ ಸರಾಸರಿ 430 ರೂ.ಗಳಂತೆ ರಾಜ್ಯ ಸರಕಾರಗಳಿಂದ 34,400 ಕೋಟಿ ರೂ. ವೆಚ್ಚವಾಗಲಿದೆ. ಹೀಗೆ ಒಟ್ಟು 42 ಸಾವಿರ ಕೋಟಿ ಲಸಿಕೆಗಾಗಿ ವೆಚ್ಚವಾಗಲಿದೆ. ದೇಶದ ಆರ್ಥಿಕ ಸಂಕಷ್ಟ, ಸಾಲದ ಹೊರೆ ಇವೆಲ್ಲವನ್ನೂ ಗಮನಕ್ಕೆ ತೆಗೆದುಕೊಂಡಲ್ಲಿ, ಕೇಂದ್ರ ಸರಕಾರವು ತನ್ನ ಪ್ರಭಾವವನ್ನು ಬಳಸಿಕೊಂಡು ಮಾರುಕಟ್ಟೆಯ ಮೇಲೆ ಹತೋಟಿ ಸ್ಥಾಪಿಸಲು ಯಾಕೆ ಬಯಸುತ್ತಿಲ್ಲ ಹಾಗೂ ರಾಜ್ಯಗಳಿಗೆ ಅಪಾರವಾದ ನಷ್ಟವುಂಟಾಗಲು ಮತ್ತು ಲಸಿಕೆ ತಯಾರಕ ಕಂಪೆನಿಗಳು ಅಕ್ರಮವಾಗಿ ಲಾಭಗಳಿಸಲು ಯಾಕೆ ಅದು ಆಸ್ಪದ ನೀಡುತ್ತಿದೆ ಎಂಬುದು ಇನ್ನೂ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ. ಇದರ ಜೊತೆಗೆ ರಾಜ್ಯ ಸರಕಾರಗಳು ವಿವಿಧ ಸಂಸ್ಥೆಗಳ ಮೂಲಕ ಬಹುವಿಧದ ದರಗಳಲ್ಲಿ ಲಸಿಕೆಗಳನ್ನು ಖರೀದಿಸುತ್ತಿರುವುದು ಕಾಳಸಂತೆ ಮಾರಾಟ, ಲಸಿಕೆಯ ಅಕ್ರಮ ದಾಸ್ತಾನಿಗೆ ಹೇರಳ ಅವಕಾಶ ಮಾಡಿಕೊಡಲಿದೆ. ಇದರಿಂದಾಗಿ ಲಸಿಕೆಗಳ ಕೃತಕ ಅಭಾವ ಸೃಷ್ಟಿಯಾಗಿ ಅರಾಜಕತೆ ಸೃಷ್ಟಿಯಾಗಲಿದೆ.

45 ವರ್ಷಕ್ಕಿಂತ ಕೆಳ ವಯಸ್ಸಿನವರಿಗೆ ಲಸಿಕೆ ನೀಡುವ ಹೊಣೆಗಾರಿಕೆಯನ್ನು ರಾಜ್ಯಗಳಿಗೆ ವಹಿಸಿರುವುದು ಕೆಲವು ಕುತೂಹಲಕಾರಿ ಅಂಶಗಳ ಬಗ್ಗೆ ಬೆಳಕು ಚೆಲ್ಲಿದೆ. ಬಿಹಾರದಲ್ಲಿ ಈ ವಯೋಮಾನದ 4 ಕೋಟಿ ಜನರ ಪೈಕಿ ಶೇ.70ರಷ್ಟು ಮಂದಿಗೆ 6 ಕೋಟಿ ಡೋಸ್‌ಗಳ ಅಗತ್ಯವಿದೆ. ಕಡುಬಡವರೇ ಅಧಿಕ ಸಂಖ್ಯೆಯಲ್ಲಿರುವ ಬಿಹಾರ ರಾಜ್ಯದಲ್ಲಿ ಶೇ.10ರಷ್ಟು ಜನರು ಮಾತ್ರವೇ ಲಸಿಕೆಯನ್ನು ಖಾಸಗಿ ಮಾರುಕಟ್ಟೆಗಳಲ್ಲಿ ಖರೀದಿಸಲು ಶಕ್ತರಾಗಲಿದ್ದಾರೆ, ಹೀಗಾಗಿ ಲಸಿಕೆ ನೀಡಿಕೆಗೆ ರಾಜ್ಯಸರಕಾರಕ್ಕೆ ಏನಿಲ್ಲವೆಂದರೂ 2,580 ಕೋಟಿ ರೂ.ವ್ಯಯಿಸಬೇಕಾದ ಅಗತ್ಯವಿದೆ. ಬಿಹಾರ ಈಗಾಗಲೇ ಸಾರ್ವಜನಿಕ ಆರೋಗ್ಯದ ಮೇಲೆ ಅತ್ಯಂತ ಕಡಿಮೆ ಮೊತ್ತ ಖರ್ಚು ಮಾಡುವ ರಾಜ್ಯವೆನಿಸಿದೆ. 2018-19ರ ಸಾಲಿನಲ್ಲಿ ಬಿಹಾರ ಸಾರ್ವಜನಿಕ ಆರೋಗ್ಯದ ಮೇಲೆ ತಲವಾರು 616 ರೂ. ವೆಚ್ಚ ಮಾಡಿದೆ. ಇದೇ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯದ ಮೇಲಿನ ರಾಷ್ಟ್ರೀಯ ತಲಾವಾರು ವೆಚ್ಚ 1,148 ಆಗಿದೆ.

ಬಿಹಾರ ದೇಶದಲ್ಲೇ ಶಿಶು ಮರಣ ಪ್ರಮಾಣ ಅತ್ಯಧಿಕವಾಗಿರುವ ರಾಜ್ಯವಾಗಿದೆ. ಅಲ್ಲಿ ಪ್ರತಿ 1 ಲಕ್ಷ ಜನನಗಳಿಗೆ 139 ಶಿಶುಗಳು ಸಾವನ್ನಪ್ಪುತ್ತಿವೆ. ಶೇ.40ರಷ್ಟು ಶಿಶುಗಳು ಕುಂಠಿತ ಬೆಳವಣಿಗೆಯನ್ನು ಹೊಂದಿವೆ. ಆ ರಾಜ್ಯದಲ್ಲಿ ಪ್ರತಿ 37,288 ಮಂದಿಗೆ ಓರ್ವ ಸರಕಾರಿ ವೈದ್ಯನಿದ್ದಾನೆ. ಬಿಹಾರವು ಅತ್ಯಧಿಕ ಸಂಖ್ಯೆಯ ವಲಸಿಗರ ತವರು ರಾಜ್ಯ ಕೂಡಾ ಆಗಿದ್ದು, ಕೋವಿಡ್-19ರಿಂದಾಗಿ ಅವರ ಅದಾಯಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಪ್ರಸಕ್ತ ಸನ್ನಿವೇಶದಲ್ಲಿ ಬಿಹಾರಕ್ಕೆ ಅದರ ಮೂಲಭೂತ ಅವಶ್ಯಕತೆಗಳಿಗೆ ಸ್ಪಂದಿಸಲು ಹೆಚ್ಚು ಸಂಪನ್ಮೂಲಗಳೊಂದಿಗೆ ನೆರವಾಗುವ ಬದಲು ಕೇಂದ್ರ ಸರಕಾರವು ಲಸಿಕೆಗಳ ಖರೀದಿಗಾಗಿ 2,580 ಕೋಟಿ ರೂ. ಖರ್ಚು ಮಾಡುವಂತೆ ರಾಜ್ಯ ಸರಕಾರದ ಮೇಲೆ ಒತ್ತಡ ಹೇರುತ್ತಿದೆ.

ಕೋವಿಡ್-19 ಲಸಿಕೆಗಳನ್ನು ಖರೀದಿಸಲು ಕೇಂದ್ರ ಹಾಗೂ ರಾಜ್ಯಗಳಿಗೆ ವಿಭಿನ್ನ ದರ ನಿಗದಿಪಡಿಸುವ ಮೂಲಕ ಭಾರತ ಸರಕಾರವು ರಾಜ್ಯಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಬಡರಾಜ್ಯಗಳಿಗೆ ತಮ್ಮ ಅದಾಯದ ದೊಡ್ಡ ಪಾಲನ್ನು ಲಸಿಕೆ ಖರೀದಿಗಾಗಿ ಖರ್ಚು ಮಾಡಬೇಕಾದ ಅನಿವಾರ್ಯತೆಯುಂಟಾಗಿದೆ. ಫಾರ್ಮಾ ಕಂಪೆನಿಗಳು ಹೇಳಿದ ಬೆಲೆಗೆ ಲಸಿಕೆಯನ್ನು ಖರೀದಿಸುವಂತಹ ಪರಿಸ್ಥಿತಿಯನ್ನು ರಾಜ್ಯ ಸರಕಾರ ಎದುರಿಸುತ್ತಿದೆ. ಇದೇ ವೇಳೆ ಫಾರ್ಮಾ ಕಂಪೆನಿಗಳು ತಮಗಿಷ್ಟ ಬಂದ ಹಾಗೆ ಲಸಿಕೆಗಳಿಗೆ ದುಬಾರಿ ದರವಿಧಿಸಿ ಲಾಭ ಮಾಡಿಕೊಳ್ಳುತ್ತಿವೆ. ಲಸಿಕೆ ಖರೀದಿಯಲ್ಲಿ ರಾಜ್ಯಗಳ ನಡುವೆಯೂ ಅಸಮಾನತೆ ಇರುವುದು ಒಂದೆಡೆಯಾದರೆ, ಕೆಲವು ರಾಜ್ಯಗಳು 45 ವರ್ಷಕ್ಕಿಂತ ಕೆಳಗಿನವರಿಗೆ ಲಸಿಕೆಗೆ ಶುಲ್ಕ ವಿಧಿಸುವ ಬಗ್ಗೆ ಚಿಂತಿಸುತ್ತಿವೆ.

ಹಾಗಾದಲ್ಲಿ ಆರ್ಥಿಕ ಸಾಮರ್ಥ್ಯ ಹೊಂದಿರುವವರಿಗೆ ಮಾತ್ರ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯಗುತ್ತದೆ. ಹಲವಾರು ಬಡಕುಟುಂಬಗಳು ಲಸಿಕೆಗಳನ್ನು ಖರೀದಿಸಲು ಹಣಕ್ಕಾಗಿ ಪರದಾಡುವಂತಹ ಪರಿಸ್ಥಿತಿಯುಂಟಾಗಬಹುದು. ಆರ್ಥಿಕ ಕಾರಣದಿಂದ ಬಡವರ್ಗ ಲಸಿಕೆ ಹಾಕಿಸಿಕೊಳ್ಳುವಲ್ಲಿ ವಿಫಲವಾದರೆ, ಲಸಿಕೆ ಹಾಕಿಸಿಕೊಳ್ಳುವ ಉದ್ದೇಶವೇ ವಿಫಲವಾಗಲಿದೆ. ಕೊರೋನ ಈ ಬಡವರ್ಗಗಳ ಮೂಲಕ ಮತ್ತೆ ಮಧ್ಯಮ, ಮೇಲ್ಮಧ್ಯಮ ವರ್ಗಗಳನ್ನು ಆವರಿಸಿಕೊಳ್ಳಲಿದೆ. ಕೇಂದ್ರ ಸರಕಾರವು ಮಾರುಕಟ್ಟೆಯ ನಿಯಂತ್ರಣಕ್ಕೆ ತನಗಿರುವ ಅಧಿಕಾರವನ್ನು ಬಳಸಿಕೊಂಡು ಲಸಿಕೆಗಳನ್ನು ಯೋಗ್ಯಬೆಲೆಗೆ ಖರೀದಿಸಿ, ಅದನ್ನು ಜನರಿಗೆ ಉಚಿತವಾಗಿ ವಿತರಿಸಬೇಕಾಗಿದೆ. ಕೋವಿಡ್-19 ಆಘಾತದಿಂದ ತತ್ತರಿಸಿರುವ ಜನತೆಯಲ್ಲಿ ಭರವಸೆಯನ್ನು ಮರಳಿ ಮೂಡಿಸಲು ಕೇಂದ್ರ ಸರಕಾರ ಮಾಡಬೇಕಾದ ಕನಿಷ್ಠ ಕೆಲಸ ಇದಾಗಿದೆ. ಉರಿಯುವ ಮನೆಯ ಗಳ ಹಿರಿಯುವುದಕ್ಕೆ ಮುಂದಾಗಿರುವ ಕಾರ್ಪೊರೇಟ್ ಔಷಧಿ ಕಂಪೆನಿಗಳಿಗೆ ಕಡಿವಾಣ ತೊಡಿಸದೇ ಇದ್ದರೆ, ಕೊರೋನವನ್ನು ತಡೆಯುವ ಸರಕಾರದ ಯೋಜನೆ ಯಶಸ್ವಿಯಾಗುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News