ಏಕಸಂಸ್ಕೃತಿಯ ಹೇರಿಕೆಗೆ ಪ್ರಾದೇಶಿಕತೆಯ ಉತ್ತರ

Update: 2021-05-03 05:48 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಮೋದಿ ಮತ್ತು ಅಮಿತ್ ಶಾ ಅವರು ನೇರವಾಗಿ ಚುನಾವಣಾ ಪ್ರಚಾರಕ್ಕೆ ಇಳಿದ ಕಾರಣದಿಂದ ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಗೆ ಭಾರತದ ಸಾರ್ವತ್ರಿಕ ಚುನಾವಣೆಯ ಮಹತ್ವ ಬಂದು ಬಿಟ್ಟಿತ್ತು. ಕೊರೋನ ದೇಶವನ್ನು ಆಹುತಿ ತೆಗೆದುಕೊಳ್ಳುತ್ತಿರುವ ಹೊತ್ತಿನಲ್ಲಿ ದೇಶದ ಚಿಂತೆ ಬಿಟ್ಟು ಪ್ರಧಾನಿ ಮೋದಿಯವರು ಬಿಜೆಪಿಯ ಪ್ರಚಾರಕರ ಮಟ್ಟಕ್ಕೆ ಇಳಿದು ಪಶ್ಚಿಮಬಂಗಾಳಕ್ಕೆ ತಮ್ಮನ್ನು ಸೀಮಿತಗೊಳಿಸಿದ್ದರು. ಕೊರೋನ ವಿರುದ್ಧ ಹೋರಾಟಕ್ಕೆ ದೇಶವನ್ನು ಸಜ್ಜುಗೊಳಿಸಬೇಕಾಗಿದ್ದ ಅವರು, ಪಶ್ಚಿಮ ಬಂಗಾಳದ ಚುನಾವಣೆಯನ್ನು ಗೆಲ್ಲಲುಬಿಜೆಪಿಯನ್ನು ಸಜ್ಜುಗೊಳಿಸುವುದರಲ್ಲಿ ಮೈಮರೆತಿದ್ದರು. ಬೃಹತ್ ರ್ಯಾಲಿಗಳನ್ನು ಹಮ್ಮಿಕೊಳ್ಳುವ ಮೂಲಕ ಕೊರೋನದ ಸುರಕ್ಷಿತ ಅಂತರವನ್ನು ಉಲ್ಲಂಘಿಸುವಲ್ಲಿ ದೇಶಕ್ಕೆ ನೇತೃತ್ವ ಕೊಟ್ಟರು. ಚುನಾವಣೆಯ ಹಿನ್ನೆಲೆಯಲ್ಲಿ, ಕೊರೋನ ಮುಂಜಾಗ್ರತೆಯನ್ನೆಲ್ಲ ಬದಿಗಿಟ್ಟು ಕುಂಭಮೇಳದಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡಿದರು. ಪಶ್ಚಿಮಬಂಗಾಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲೇ ಬೇಕು ಎನ್ನುವ ಅವರ ಶತಾಯಗತಾಯ ಪ್ರಯತ್ನ ಎದ್ದು ಕಾಣುತ್ತಿತ್ತು.

ಬಂಗಾಳದಲ್ಲಿ ದೀದಿಯ ಎದುರು ಸ್ಪರ್ಧಿಸುತ್ತಿರುವುದು ಮೋದಿ ಎಂದು ಮಾಧ್ಯಮಗಳು ಬಿಂಬಿಸಿದ್ದವು. ಇವರ ಗೆಲುವಿಗೆ ಚುನಾವಣಾ ಆಯೋಗ ಸಹಿತ, ಎಲ್ಲ ತನಿಖಾ ಸಂಸ್ಥೆಗಳು ಶಕ್ತಿ ಮೀರಿ ದುಡಿದವು. ತೃಣ ಮೂಲ ಕಾಂಗ್ರೆಸ್‌ನೊಳಗಿನ ಶಾಸಕರು ಒಬ್ಬೊಬ್ಬರಾಗಿ ಪಕ್ಷ ತೊರೆದು ಬಿಜೆಪಿಯನ್ನು ಸೇರ ತೊಡಗಿದರು. ಮೋದಿಯವರ ಈ ಬೃಹತ್ ಅಕ್ಷೋಹಿಣಿ ಪಡೆಯ ವಿರುದ್ಧ ತೃಣಮೂಲ ಕಾಂಗ್ರೆಸ್‌ನ ನಾಯಕಿ ಮಮತಾ ಬ್ಯಾನರ್ಜಿ ಏಕಾಂಗಿಯಾಗಿ ಹೋರಾಡಿದರು. ಇದೀಗ ಮೋದಿಯವರ ಎಲ್ಲ ತಂತ್ರಗಳನ್ನು ವಿಫಲಗೊಳಿಸಿ, ಮಮತಾ ಬ್ಯಾನರ್ಜಿ ಕೇವಲ ಬಂಗಾಳವನ್ನಷ್ಟೇ ಅಲ್ಲ ದೇಶದ ಜನರ ಮನವನ್ನು ಗೆದ್ದಿದ್ದಾರೆ. ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ತಮಿಳು ನಾಡು, ಪಶ್ಚಿಮ ಬಂಗಾಳ, ಕೇರಳ ಈ ಮೂರೂ ರಾಜ್ಯಗಳನ್ನು ತನ್ನ ವಶ ಮಾಡಿಕೊಳ್ಳುವ ಆರೆಸ್ಸೆಸ್ ಮತ್ತು ಬಿಜೆಪಿಯ ತಂತ್ರ ಸಂಪೂರ್ಣ ವಿಫಲವಾಗಿದೆ. ಹಾಗೆಂದು ಬಿಜೆಪಿ ತನ್ನ ಪ್ರಯತ್ನದಲ್ಲಿ ಸಂಪೂರ್ಣ ಸೋತಿತು ಎನ್ನಲಾಗುವುದಿಲ್ಲ.

ಪಶ್ಚಿಮಬಂಗಾಳದಲ್ಲಿ ಅದು 70ಕ್ಕೂ ಅಧಿಕ ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಎರಡನೆಯ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಪ್ರಾದೇಶಿಕತೆ ಮತ್ತು ಕಮ್ಯುನಿಸಂ ಮೂಲಕ ತನ್ನದೇ ಆದ ಅಸ್ಮಿತೆಯನ್ನು ಹೊಂದಿದ್ದ ಪಶ್ಚಿಮಬಂಗಾಳದೊಳಗೆ ಮನುವಾದಿ ಜಿರಳೆ ತನ್ನ ಮೀಸೆಯನ್ನು ನುಗ್ಗಿಸಿದೆ. ಜೊತೆಗೆ, ಹಲವು ದಶಕಗಳ ಕಾಲ ಪಶ್ಚಿಮ ಬಂಗಾಳವನ್ನು ಆಳಿದ್ದ ಎಡ ಪಕ್ಷವನ್ನು ಬಿಜೆಪಿ ಮಕಾಡೆ ಮಲಗಿಸಿದೆ. ತೃಣಮೂಲ ಕಾಂಗ್ರೆಸ್-ಬಿಜೆಪಿ ನಡುವಿನ ಮಾಡು ಮಡಿ ಹೋರಾಟದಲ್ಲಿ ಮತದಾರರು ತೃಣಮೂಲ ಕಾಂಗ್ರೆಸ್ ಅಥವಾ ಅದರ ವಿರೋಧಿ ಪಕ್ಷವಾಗಿ ಒಡೆದ ಪರಿಣಾಮ ಇದು. ಜಾತ್ಯತೀತ ಮನಸ್ಸುಗಳು ಬಿಜೆಪಿಯನ್ನು ಸೋಲಿಸುವುದು ಗುರಿಯಾಗಿಸಿಕೊಂಡಿದ್ದರೆ, ಇತ್ತ ಮಮತಾಬ್ಯಾನರ್ಜಿ ಸರ್ವಾಧಿಕಾರಕ್ಕೆ ದಣಿದವರು ತೃಣಮೂಲವನ್ನು ಸೋಲಿಸುವುದನ್ನು ಗುರಿಯಾಗಿಸಿಕೊಂಡರು. ಈ ಚುನಾವಣೆಯಲ್ಲಿ ಯಾರು ಗೆಲ್ಲಬೇಕು ಎನ್ನುವುದಕ್ಕಿಂತ ಮುಖ್ಯವಾದದ್ದು, ಯಾರು ಸೋಲಬೇಕು ಎನ್ನುವುದು.

ಈ ಎರಡು ಪಕ್ಷಗಳ ನೇರಾನೇರ ಜಟಾಪಟಿಯಲ್ಲಿ ಎಡಪಕ್ಷಗಳು ತಮಗರಿವಿಲ್ಲದೆಯೇ ಸ್ಪರ್ಧೆಯಿಂದ ಹೊರಗುಳಿದಿದ್ದವು. ರಾಜಕೀಯ ಎದುರಾಳಿ ತೃಣಮೂಲ ಕಾಂಗ್ರೆಸ್‌ನ ಜೊತೆಗೆ ರಕ್ತಸಿಕ್ತ ರಾಜಕೀಯ ಸಂಘರ್ಷಗಳಿಂದ ಕಂಗೆಟ್ಟಿದ್ದ ಎಡಪಕ್ಷಗಳ ಕಾರ್ಯಕರ್ತರಿಗೆ ಬಿಜೆಪಿಯನ್ನು ಸೋಲಿಸುವುದಕ್ಕಿಂತಲೂ ತೃಣಮೂಲ ಕಾಂಗ್ರೆಸನ್ನು ಮಟ್ಟ ಹಾಕುವುದು ಮುಖ್ಯವಾಗಿತ್ತು. ಆದುದರಿಂದ, ಎಡ ಪಕ್ಷಗಳ ಕಾರ್ಯಕರ್ತರು ತಮ್ಮ ಪಕ್ಷವನ್ನು ಗೆಲ್ಲಿಸುವುದಕ್ಕಿಂತ ತೃಣಮೂಲ ಕಾಂಗ್ರೆಸ್‌ನ್ನು ಸೋಲಿಸುವುದಕ್ಕೆ ಆದ್ಯತೆಯನ್ನು ನೀಡಿದರು. ಅಂತಿಮವಾಗಿ ಎಡ ಪಕ್ಷಗಳಿರುವಲ್ಲೆಲ್ಲ ಬಿಜೆಪಿ ಹುಲುಸಾಗಿ ಹರಡಿತು. ಆದರೆ ಅದಾಗಲೇ ಸಿಎಎ ಕಾಯ್ದೆಯೂ ಸೇರಿದಂತೆ ಬಿಜೆಪಿಯ ದ್ವೇಷ ರಾಜಕಾರಣಗಳಿಂದ ತತ್ತರಿಸಿದ ಅಲ್ಪಸಂಖ್ಯಾತರು ಒಂದಾಗಿ ಬಿಜೆಪಿಯ ವಿರುದ್ಧ ಯಾರು ಗೆಲ್ಲುತ್ತಾರೆಯೋ ಅವರಿಗೆ ಮತಗಳನ್ನು ಚಲಾಯಿಸಿದರು. ಈ ಕಾರಣದಿಂದ ಜಾತ್ಯತೀತ ಮತಗಳು ಒಡೆಯುವುದು ತಪ್ಪಿತು. ಸಹಜವಾಗಿಯೇ ಕಾಂಗ್ರೆಸ್-ಎಡ ಪಕ್ಷಗಳು ಮೂಲೆಗುಂಪಾದವು.

ಪ್ರಾದೇಶಿಕತೆಯ ಮೂಲಕ ಹಿಂದುತ್ವಕ್ಕೆ ದೊಡ್ಡ ಸವಾಲಾಗಿದ್ದ ಪ.ಬಂಗಾಳವನ್ನು ಗೆಲ್ಲುವುದು ಬಿಜೆಪಿಗೆ ಅತ್ಯಗತ್ಯವಾಗಿತ್ತು. ದಕ್ಷಿಣ ಭಾರತದಲ್ಲಿ ತಮಿಳುನಾಡು, ಕೇರಳ ಹೇಗೆ ಹಿಂದುತ್ವವಾದಕ್ಕೆ ಸವಾಲಾಗಿತ್ತೋ, ಅದೇ ರೀತಿಯಲ್ಲಿ ಪಶ್ಚಿಮ ಬಂಗಾಳವೂ ತೀವ್ರ ಪ್ರತಿರೋಧವನ್ನು ಒಡ್ಡುತ್ತಾ ಬಂದಿತ್ತು. ದೇಶದ ವೈವಿಧ್ಯತೆಗಳನ್ನು ಅಳಿಸಿ ಅಲ್ಲಿ ಏಕ ಸಂಸ್ಕೃತಿಯನ್ನು ಹೇರಬೇಕಾದರೆ ಬಂಗಾಳ, ತಮಿಳುನಾಡಿನಂತಹ ರಾಜ್ಯಗಳನ್ನು ಕೈವಶ ಮಾಡಿಕೊಳ್ಳುವುದು ಬಿಜೆಪಿಗೆ ಅನಿವಾರ್ಯವಾಗಿತ್ತು. ಆದುದರಿಂದಲೇ ಪ.ಬಂಗಾಳ, ತಮಿಳುನಾಡು ಮತ್ತು ಕೇರಳವನ್ನು ತನ್ನದಾಗಿಸುವುದಕ್ಕೆ ವಿಶೇಷ ಕಾರ್ಯತಂತ್ರವನ್ನು ರೂಪಿಸಿತ್ತು. ಆದರೆ ಚುನಾವಣೆಯಲ್ಲಿ ಭಾರೀ ಮುಖಭಂಗ ಅನುಭವಿಸುವ ಮೂಲಕ, ಅದರ ಸಂಚು ತಾತ್ಕಾಲಿಕವಾಗಿ ವಿಫಲವಾಗಿದೆ. ತಮಿಳುನಾಡಿನಲ್ಲಿ, ಎಡಿಎಂಕೆಯೊಳಗಿರುವ ದುರ್ಬಲ ನಾಯಕರನ್ನು ಬೆದರಿಸಿ ಇಡೀ ಪಕ್ಷವನ್ನು ಬಿಜೆಪಿ ತನ್ನ ಸೂತ್ರದ ಗೊಂಬೆಯಾಗಿಸಿ ಬಿಟ್ಟಿತ್ತು.

ಒಂದು ವೇಳೆ ಎಡಿಎಂಕೆ ಗೆದ್ದರೂ ತಮಿಳುನಾಡನ್ನು ಪರೋಕ್ಷವಾಗಿ ದಿಲ್ಲಿಯಲ್ಲಿ ಕುಳಿತ ಬಿಜೆಪಿ ನಾಯಕರೇ ಆಳುತ್ತಿದ್ದರು. ಎಡಿಎಂಕೆಯನ್ನು ಬಳಸಿಕೊಂಡು ಬಿಜೆಪಿಯು ಚುನಾವಣಾ ಪ್ರಚಾರದಲ್ಲಿ ಪೆರಿಯಾರ್ ವಿರೋಧಿ, ದ್ರಾವಿಡ ವಿರೋಧಿ ಅಜೆಂಡಾಗಳನ್ನು ಬಹಿರಂಗವಾಗಿ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿತು. ತಮಿಳರ ಯಾವುದೇ ಅಸ್ಮಿತೆಗಳನ್ನು ಪ್ರತಿನಿಧಿಸದ, ಕೇಂದ್ರದ ಬಿಜೆಪಿ ನಾಯಕರ ಹಣ ಮತ್ತು ಇನ್ನಿತರ ಬೆದರಿಕೆಗಳಿಂದ ಬ್ಲಾಕ್‌ಮೇಲ್‌ಗೊಳಗಾಗಿರುವ ಬೆನ್ನು ಮೂಳೆಯಿಲ್ಲದ ದೊಡ್ಡ ಪಡೆಯೇ ಎಡಿಎಂಕೆಯೊಳಗಿತ್ತು. ಇದೆಲ್ಲವೂ ಡಿಎಂಕೆಗೆ ವರದಾನವಾಯಿತು. ಜೈಲಿನಿಂದ ಬಿಡುಗಡೆಯಾಗಿರುವ ಶಶಿಕಲಾ ಅವರು ರಾಜಕೀಯವಾಗಿ ಸಂಪೂರ್ಣ ದೂರವಿದ್ದರೂ, ಎಡಿಎಂಕೆಯೊಳಗಿರುವ ನಾಯಕರನ್ನು ಮಣಿಸುವಲ್ಲಿ ತನ್ನ ಆರ್ಥಿಕ ಬಲವನ್ನು ಡಿಎಂಕೆಗೆ ನೀಡಿದ್ದರು ಎನ್ನುವುದೂ ಬರೇ ವದಂತಿಯಲ್ಲ. ಡಿಎಂಕೆಯ ಗೆಲುವು ಭವಿಷ್ಯದಲ್ಲಿ ತಮಿಳುನಾಡಿನ ರಾಜಕೀಯಕ್ಕೆ ಹಲವು ತಿರುವುಗಳನ್ನು ನೀಡುವ ಸಾಧ್ಯತೆಗಳಿವೆ. ಮುಖ್ಯವಾಗಿ, ಎಡಿಎಂಕೆಯೊಳಗಿರುವ ನಾಯಕರೊಳಗಿನ ಭಿನ್ನಮತಗಳು ಶೀಘ್ರ ಸ್ಫೋಟಿಸುವ ಸಾಧ್ಯತೆಗಳಿವೆ. ಶಶಿಕಲಾ ಬಣ ಮತ್ತೆ ಪ್ರಬಲವಾಗಿ ಹೊರಹೊಮ್ಮಿದರೂ ಅಚ್ಚರಿಯಿಲ್ಲ.

ಇತ್ತ ಕೇರಳದಲ್ಲಿಯೂ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಕೇರಳವನ್ನು ಮಲತಾಯಿಯ ಮಗುವಂತೆಯೇ ನಡೆಸಿಕೊಂಡು ಬಂದ ಕೇಂದ್ರ ಸರಕಾರದ ವರ್ತನೆಗೆ ಅಲ್ಲಿಯ ಜನರು ಸರಿಯಾದ ಉತ್ತರವನ್ನು ನೀಡಿದ್ದಾರೆ. ಉತ್ತರಭಾರತದ ರಾಜ್ಯಗಳಿಗೆ ಹಲವು ಕ್ಷೇತ್ರಗಳಲ್ಲಿ ಮಾದರಿಯಾಗಿರುವ ಕೇರಳಕ್ಕೆ ಅಮಿತ್ ಶಾ ‘ಅಭಿವೃದ್ಧಿಯ ಪಾಠ’ ಬೋಧಿಸಲು ಹೊರಟಾಗ, ಅಲ್ಲಿನ ಜನ ಅದನ್ನು ವ್ಯಂಗ್ಯ ಮಾಡಿ ನಕ್ಕಿದ್ದರು. ಆ ಬಳಿಕ ಲವ್ ಜಿಹಾದ್, ಮತಾಂತರ ಕಾಯ್ದೆ ಮೊದಲಾದವುಗಳನ್ನು ಮುಂದಿಟ್ಟು ದ್ವೇಷ ರಾಜಕಾರಣಕ್ಕೆ ಇಳಿಯಿತು. ಮೆಟ್ರೋಮ್ಯಾನ್ ಬಿಜೆಪಿಯ ಪಾಲಿಗೆ ಸೂಪರ್ ಮ್ಯಾನ್ ಆಗಲಿಲ್ಲ. ಶಬರಿಮಲೆಯ ವಿಷಯವನ್ನು ಚುನಾವಣೆಯಲ್ಲಿ ಎಳೆ ತಂದಿತು. ಆದರೆ ಅದಾಗಲೇ ರಾಷ್ಟ್ರಮಟ್ಟದಲ್ಲಿ ಅಭಿವೃದ್ಧಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸಂಪೂರ್ಣ ವಿಫಲವಾಗಿರುವ ಮೋದಿಯವರ ಕೃತಕ ಮಾತುಗಳು ಪಿಣರಾಯಿ ಅವರ ಪ್ರಾಮಾಣಿಕ, ಜನಪರ ಆಡಳಿತದ ಮುಂದೆ ಸದ್ದು ಮಾಡಲೇ ಇಲ್ಲ.

ಪಿಣರಾಯಿರನ್ನು ಜೂದಾಸನಿಗೆ ಹೋಲಿಸಿದ ಬಿಜೆಪಿ, ಇದೀಗ ಜೂದಾಸನ ದುರಂತವನ್ನು ತನ್ನದಾಗಿಸಿಕೊಂಡಿದೆ. ಇತ್ತ ಅಸ್ಸಾಮಿನಲ್ಲಿ ಜನರೊಳಗಿರುವ ಎನ್‌ಆರ್‌ಸಿ ಕುರಿತ ಅಸಮಾಧಾನವನ್ನು ಚುನಾವಣೆಯಲ್ಲಿ ನಗದೀಕರಿಸಲು ಕಾಂಗ್ರೆಸ್ ಸಂಪೂರ್ಣ ವಿಫಲವಾಯಿತು. ಕೋಮುದ್ವೇಷದ ಮೂಲಕವೇ ಅಲ್ಲಿ ಬಿಜೆಪಿ ಮತ್ತೆ ಅಧಿಕಾರ ಹಿಡಿಯಿತು. ಆದರೆ ಕೇಂದ್ರದ ಕುರಿತಂತೆ ಅಸ್ಸಾಮಿನ ಜನರ ಒಳಗುದಿ ಬೂದಿ ಮುಚ್ಚಿದ ಕೆಂಡದಂತಿದೆ. ಅದು ಯಾವ ಸಂದರ್ಭದಲ್ಲೂ ಬಿಜೆಪಿಗೆ ಮುಳುವಾಗಬಹುದು. ಒಟ್ಟಿನಲ್ಲಿ, ಈ ಚುನಾವಣೆ ದೇಶದ ಬಹು ಸಂಸ್ಕೃತಿಯ ಗೆಲುವಾಗಿದೆ. ದ್ವೇಷ ಮತ್ತು ಹಿಂಸೆಯ ಮೂಲಕ ಹಿಂದುತ್ವ ವಾದ ಎನ್ನುವ ಏಕ ಸಂಸ್ಕೃತಿಯನ್ನು ಬಹುಸಂಸ್ಕೃತಿಯ ಮೇಲೆ ಹೇರುವ ಪ್ರಯತ್ನಕ್ಕೆ ಪ್ರಾದೇಶಿಕವಾದಗಳು ಸಮರ್ಥ ಉತ್ತರವನ್ನು ನೀಡಿವೆ. ಭಾರತದ ಭವಿಷ್ಯದ ಮಟ್ಟಿಗೆ ಇದೊಂದು ಆಶಾದಾಯಕ ಉತ್ತರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News