ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಬಾಬರ್ ಆಝಮ್, ಫಾಖರ್ ಝಮಾನ್ ನಾಮನಿರ್ದೇಶನ

Update: 2021-05-05 08:17 GMT

ದುಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳಾದ ಬಾಬರ್ ಆಝಮ್ ಮತ್ತು ಫಾಖರ್ ಝಮಾನ್ ಅವರು ಎಪ್ರಿಲ್‌ನಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) 'ಪ್ಲೇಯರ್ ಆಫ್ ದಿ ಮಂತ್' ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಎಲ್ಲಾ ರೀತಿಯ ಅಂತರ್ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಂದ ಉತ್ತಮ ಪ್ರದರ್ಶನಗಳನ್ನು ಗುರುತಿಸಲು ಐಸಿಸಿ ಬುಧವಾರ ನಾಮನಿರ್ದೇಶಿತರನ್ನು ಪ್ರಕಟಿಸಿದೆ.

ಪುರುಷರ ವಿಭಾಗದಲ್ಲಿ ನಾಮನಿರ್ದೇಶನಗೊಂಡ ಇತರ ಆಟಗಾರರಲ್ಲಿ ಪಾಕಿಸ್ತಾನದ ಜೋಡಿಯಲ್ಲದೆ, ನೇಪಾಳ ಬ್ಯಾಟ್ಸ್‌ಮನ್ ಖುಷಲ್ ಭುರ್ಟೆಲ್ ಕೂಡ  ಇದ್ದಾರೆ ಎಂದು ಐಸಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ತಿಂಗಳು, ಪಾಕಿಸ್ತಾನ ನಾಯಕ ಬಾಬರ್ ಐಸಿಸಿ ಏಕದಿನ ಆಟಗಾರರ ಶ್ರೇಯಾಂಕದಲ್ಲಿ ನಂ .1 ಶ್ರೇಯಾಂಕಿತ ಬ್ಯಾಟ್ಸ್‌ಮನ್ ಆಗಿದ್ದರು, ಭಾರತದ ನಾಯಕ ವಿರಾಟ್ ಅವರನ್ನು ಅಗ್ರಸ್ಥಾನದಿಂದ ಕೆಳಗಿಳಿಸಿದ್ದರು.

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಬಾಬರ್  82 ಎಸೆತಗಳಲ್ಲಿ 94 ರನ್ ಗಳಿಸಿ 13 ರೇಟಿಂಗ್ ಪಾಯಿಂಟ್‌ಗಳನ್ನು ಪಡೆದಿದ್ದರು.

ದಕ್ಷಿಣ  ಆಫ್ರಿಕಾ ವಿರುದ್ಧದ ಟಿ- 20 ಸರಣಿಯ ಮೂರನೇ ಪಂದ್ಯದಲ್ಲಿ ಪಾಕಿಸ್ತಾನದ ಯಶಸ್ವಿ ಚೇಸ್‌ನಲ್ಲಿ ಬಾಬರ್ ಅವರು 59 ಎಸೆತಗಳಲ್ಲಿ 122 ರನ್ ಕೊಡುಗೆ  ನೀಡಿದ್ದರು. 

ಝಮಾನ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭರ್ಜರಿ 193 ರನ್  ಸೇರಿದಂತೆ ಎರಡು ಶತಕಗಳನ್ನು ಗಳಿಸಿದ್ದರು.

ಮತ್ತೊಂದೆಡೆ, ನೇಪಾಳದ ಖುಷಾಲ್ ನೆದರ್ಲ್ಯಾಂಡ್ಸ್ ಹಾಗೂ ಮಲೇಷ್ಯಾವನ್ನು ಒಳಗೊಂಡ ತ್ರಿಕೋನ ಸರಣಿಯಲ್ಲಿ  ಐದು ಪಂದ್ಯಗಳಲ್ಲಿ ನಾಲ್ಕು ಅರ್ಧಶತಕಗಳನ್ನು ಒಳಗೊಂಡಂತೆ ಒಟ್ಟು 278 ರನ್ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News