​ಮುನ್ನೆಚ್ಚರಿಕೆ ವಹಿಸಿದ್ದರೆ ಹೀಗಾಗುತ್ತಿರಲಿಲ್ಲ

Update: 2021-05-05 17:27 GMT

ಮಾನ್ಯರೇ,

ಇದುವರೆಗೆ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ತಮಿಳುನಾಡು, ಕೇರಳದಲ್ಲಿ ಕೊರೋನ ಸೋಂಕು ಅಬ್ಬರಿಸುತ್ತಿದ್ದರೂ ನಮ್ಮ ರಾಜ್ಯ ಸರಕಾರ ಯಾವುದೇ ರೀತಿಯಲ್ಲೂ ಮುನ್ನೆಚ್ಚರಿಕೆ ವಹಿಸದೆ ಜಾಣ ಕುರುಡು ಪ್ರದರ್ಶಿಸಿದ್ದೇ ರಾಜ್ಯದ ಇಂದಿನ ಈ ದುಸ್ಥಿತಿಗೆ ಕಾರಣ. ಲಕ್ಷಾಂತರ ಜನ ಸೇರಿಸಿ ಉಪಚುನಾವಣೆಗಳಿಗೆ ರ್ಯಾಲಿ ನಡೆಸಿದ್ದು, ಧಾರ್ಮಿಕ ಮೀಸಲಾತಿ ಸಮಾವೇಶಗಳು, ನೆರೆರಾಜ್ಯದಿಂದ ಬರುವವರಿಗೆಲ್ಲ ಯಾವುದೇ ಮುನ್ನೆಚ್ಚರಿಕೆ ವಹಿಸದೆ ಬರ ಮಾಡಿಕೊಂಡಿದ್ದು, ಇಂತಹ ಎಲ್ಲ ತಪ್ಪುಗಳ ಪರಿಣಾಮ ಇಂದು ರಾಜ್ಯ ಘನಘೋರ ಪರಿಸ್ಥಿತಿ ಎದುರಿಸುವಂತಾಗಿದೆ. ಈಗಂತೂ ಒಮ್ಮಿಂದೊಮ್ಮೆಲೇ ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಾಗಿ ನಿಗದಿತ ಸಮಯಕ್ಕೆ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ದಿನೇ ದಿನೇ ಅಮಾಯಕರ ಪ್ರಾಣ ಪಕ್ಷಿಗಳು ಹಾರಿ ಹೋಗುತ್ತಿವೆ. ಆಸ್ಪತ್ರೆಗಳಲ್ಲೂ ಪೂರ್ವ ಸಿದ್ಧತೆ ಇಲ್ಲದ ಪರಿಣಾಮ ಇಂದು ಬೆಡ್, ಆಕ್ಸಿಜನ್‌ಗಾಗಿ ಪರಿತಪಿಸುವಂತಾಗಿದೆ.

ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಳೆದ ಬಾರಿಯ ಕಹಿ ಅನುಭವದಿಂದ ಸ್ವಲ್ಪ ಮುನ್ನೆಚ್ಚರಿಕೆ ವಹಿಸಿದ್ದರೂ ರಾಜ್ಯಕ್ಕೆ ಮತ್ತೆ ನಿರ್ಬಂಧ ವಿಧಿಸುವಂತಹ ಪರಿಸ್ಥಿತಿ ಮತ್ತು ರಾಜ್ಯದಲ್ಲಿ ಸರಣಿ ಸಾವಿನ ಜಾತ್ರೆಯಂತಹ ದುಸ್ಥಿತಿ ಎದುರಾಗುತ್ತಿರಲಿಲ್ಲ, ಕೊರೋನ ಕರ್ಫ್ಯೂವಿನಿಂದಾಗಿ ಲಕ್ಷಾಂತರ ಜನ ನಗರಗಳನ್ನು ತೊರೆದು, ಉದ್ಯೋಗ ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ, ಈ ಹಿಂದೆಯೇ ತಜ್ಞರು ಕೊಟ್ಟಿದ್ದ ಎಚ್ಚರಿಕೆಯನ್ನು ಸಹ ಸರಕಾರ ಕಿವಿಗೊಡದೆ ಕೇವಲ ಚುನಾವಣೆಗಾಗಿ ನಿರ್ಲಕ್ಷಿಸಿದ್ದರಿಂದಾಗಿ ಇಂದು ಇಡೀ ಕರುನಾಡಿನ ಜನತೆ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ.

Writer - -ಮುರುಗೇಶ ಡಿ., ದಾವಣಗೆರೆ

contributor

Editor - -ಮುರುಗೇಶ ಡಿ., ದಾವಣಗೆರೆ

contributor

Similar News