ವಲಸೆ ಕಾರ್ಮಿಕರಿಗೆ ವೇತನ ಪರಿಹಾರ ನೀಡುವಂತೆ ಕೇಂದ್ರ ಸರಕಾರಕ್ಕೆ ಆಗ್ರಹ

Update: 2021-05-05 18:09 GMT

ಹೊಸದಿಲ್ಲಿ, ಮೇ 5: ಕೊರೋನ ಬಿಕ್ಕಟ್ಟಿನ ನಡುವೆ ಸಿಲುಕಿರುವ ವಲಸೆ ಕಾರ್ಮಿಕರಿಗೆ ಹಾಗೂ ಆದ್ಯತಾ ಗುಂಪಿಗೆ ಮುಂದಿನ ಮೂರು ತಿಂಗಳಿಗೆ ತಲಾ 7 ಸಾವಿರ ರೂಪಾಯಿ ವೇತನ ಪರಿಹಾರ ನೀಡುವಂತೆ ಸ್ಟಾಂಡರ್ಡ್ ವರ್ಕರ್ಸ್ ಆ್ಯಕ್ಷನ್ ನೆಟ್ವರ್ಕ್ (ಎಸ್ಡಬ್ಲುಎಎನ್-ಸ್ವಾನ್) ಕೇಂದ್ರ ಸರಕಾರವನ್ನು ಆಗ್ರಹಿಸಿದೆ. 

ಮೇ 5ರಂದು ಬಿಡುಗಡೆಗೊಳಿಸಲಾದ ಪತ್ರಿಕಾ ಹೇಳಿಕೆಯಲ್ಲಿ ಸ್ವಾನ್, ಕೊರೋನ ವೈರಸ್ ಹರಡುತ್ತಿರುವುದನ್ನು ನಿಯಂತ್ರಿಸಲು ನಿರ್ಬಂಧಗಳನ್ನು ಹೇರುತ್ತಿರುವುದರಿಂದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಳ್ಳುತ್ತಿವೆ. ವಲಸೆ ಕಾರ್ಮಿಕರು ತೀವ್ರ ಬಾಧಿತರಾಗುತ್ತಾರೆ. ಆದುದರಿಂದ ಅವರಿಗೆ ನೆರವು ನೀಡಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಶಿಫಾರಸು ಮಾಡಿದೆ. 

ಭಾರತದಲ್ಲಿ ಕೊರೋನ ಸಾಂಕ್ರಾಮಿಕ ರೋಗ ಹರಡಿದ ಬಳಿಕ 2020ರಲ್ಲಿ ಸ್ವಯಂ ಸೇವಕರ ಗುಂಪು ಆರಂಭಿಸಿರುವ ಸಂಸ್ಥೆ ಸ್ವಾನ್. ನೀತಿ ಶಿಫಾರಸುಗಳನ್ನು ಸೂಚಿಸಲು ಹಾಗೂ ಕಾರ್ಮಿಕರ ಅನುಭವಗಳನ್ನು ದಾಖಲಿಸಲು ಈ ಸಂಸ್ಥೆಯನ್ನು ಆರಂಭಿಸಲಾಗಿತ್ತು. ವಲಸೆ ಕಾರ್ಮಿಕರಿಗೆ ನೆರವು ನೀಡುವ ತನ್ನ ವಿವಿಧ ಪ್ರಯತ್ನದಲ್ಲಿ ಸ್ವಾನ್ ಅಗತ್ಯ ಇರುವವರಿಗೆ ಸಣ್ಣ ನಗದನ್ನು ಕೂಡ ಒದಗಿಸುತ್ತಿದೆ. 

ವಲಸೆ ಕಾರ್ಮಿಕರು ಹಸಿವಿನಿಂದ ನರಳದಿರಲು ಸ್ವಾನ್ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (ಪಿಎಂಜಿಕೆಎವೈ)ಯ ಭಾಗವಾಗಿ ಉಚಿತ ಪಡಿತರ ನೀಡುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದೆ. ನಗರಗಳಿಗೆ ಕೆಲಸಕ್ಕೆ ವಲಸೆ ಬರುವ ಕಾರ್ಮಿಕರು ತಮ್ಮ ಪಡಿತರ ಚೀಟಿಯನ್ನು ತರುವುದಿಲ್ಲ. ಇದರಿಂದ ಅವರಿಗೆ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಆದುದರಿಂದ ಅವರು ಇರುವಲ್ಲೇ ಉಚಿತ ಪಡಿತರ ಒದಗಿಸುವಂತೆ ಸ್ವಾನ್ ಕೇಂದ್ರ ಸರಕಾರವನ್ನು ಆಗ್ರಹಿಸಿದೆ. ಲಾಕ್ಡೌನ್ ಹಾಗೂ ಕರ್ಫ್ಯೂ ಸಂದರ್ಭ ಉದ್ಯೋಗದಾತರು ಹಾಗೂ ಗುತ್ತಿಗೆದಾರರು ಕಾರ್ಮಿಕರಿಗೆ ವೇತನ ನೀಡುವಂತೆ ಆದೇಶ ನೀಡಲು ಸ್ವಾನ್ ಕೇಂದ್ರ ಕಾರ್ಮಿಕ ಸಚಿವಾಲಯವನ್ನು ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News