"ಮೋದಿಯನ್ನು ಸೋಲಿಸುವುದು ಹೇಗೆಂದು ನಾವು ತೋರಿಸಿದ್ದೇವೆ"

Update: 2021-05-06 14:26 GMT

ಕೋಲ್ಕತ್ತಾ, ಭಾರತ: ನಾನು ಭಾರತದ ಸಂಸತ್ತಿನ ಸದಸ್ಯೆ. ರವಿವಾರ ನಾನು ಪ್ರತಿನಿಧಿಸುವ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಪಕ್ಷ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪಕ್ಷವನ್ನು ಪಶ್ಚಿಮ ಬಂಗಾಳ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸೋಲಿಸಿದೆ. ಮೋದಿಯವರ ವಿಭಜನಕಾರಿ, ಸ್ತ್ರೀ ದ್ವೇಷಿ ರಾಜಕೀಯವನ್ನು ಹೇಗೆ ಸೋಲಿಸಬೇಕು ಎಂಬುದನ್ನು ನಮ್ಮ ಪಕ್ಷ ಮತ್ತು ನನ್ನ ನಾಯಕಿ ಹಾಗು ದೇಶದ ಏಕೈಕ ಮಹಿಳಾ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೋರಿಸಿದ್ದಾರೆ. 

ಪಶ್ಚಿಮ ಬಂಗಾಳದ 292 ಸ್ಥಾನಗಳ ಪೈಕಿ ಮೋದಿಯವರ ಬಿಜೆಪಿ 77 ಸ್ಥಾನಗಳನ್ನು ಗೆದ್ದಿದೆ. ನಾವು 213 ಸ್ಥಾನಗಳನ್ನು ಗೆದ್ದಿದ್ದೇವೆ. ಆದರೆ ಈ ಚುನಾವಣೆಯಲ್ಲಿ ನಾವು ಕೇವಲ ಒಂದು ಸರಕಾರ ರಚನೆಗಾಗಿ ಹೋರಾಡಿಲ್ಲ. ಅಲ್ಲಿ ನಾವು ಈ ದೇಶದ ಒಕ್ಕೂಟ ವ್ಯವಸ್ಥೆ ಹಾಗು  ಜಾತ್ಯತೀತ ಸ್ವರೂಪವನ್ನು ಸರ್ವನಾಶ ಮಾಡಿ ದೇಶವನ್ನು ಸರ್ವಾಧಿಕಾರಿ ಹಿಂದೂ ರಾಷ್ಟ್ರ ಮಾಡುವ ಮೋದಿಯವರ ಕೇಂದ್ರೀಕೃತ, ನಿರಂಕುಶ ಓಟದ ವಿರುದ್ಧ ಹೋರಾಡಿದ್ದೇವೆ. 

ನಮ್ಮ ದೇಶ ಈವರೆಗೆ ಅತ್ಯಂತ ಗೌರವದಿಂದ ಕಂಡು ನಂಬಿಕೊಂಡು ಬಂದಿದ್ದ ಎಲ್ಲ ಸಂಸ್ಥೆಗಳನ್ನು ಮೋದಿ ಮತ್ತು ದೇಶದ ಗೃಹ ಸಚಿವ ಅಮಿತ್ ಶಾ ಅತ್ಯಂತ ವ್ಯವಸ್ಥಿತವಾಗಿ  ಟೊಳ್ಳಾಗಿಸಿಬಿಟ್ಟಿದ್ದಾರೆ. ದೇಶದ ರಾಜ್ಯ ಹಾಗು ರಾಷ್ಟ್ರ್ರೀಯ ಚುನಾವಣೆಗಳನ್ನು ನಡೆಸಿಕೊಡುವ, ಸ್ವಾಯತ್ತ ಸಂಸ್ಥೆ ಎಂಬ ಹಣೆಪಟ್ಟಿ ಇರುವ ಚುನಾವಣಾ ಆಯೋಗವನ್ನು ಪಶ್ಚಿಮ ಬಂಗಾಳ ಚುನಾವಣೆಯ ಸಂದರ್ಭದಲ್ಲಿ ತಮ್ಮ ರಾಜಕೀಯ ಅಜೆಂಡಾಕ್ಕೆ ಬೇಕಾದಂತೆ ಕೆಲಸ ಮಾಡುವ ಅಟೆಂಡರ್ ನ ಹಂತಕ್ಕೆ ತಂದು ನಿಲ್ಲಿಸಿದ್ದನ್ನು ನಾನೇ ನೋಡಿದ್ದೇನೆ. 

ಭಾರತದಲ್ಲಿ ಕೋವಿಡ್ ಎರಡನೇ ಅಲೆ ವ್ಯಾಪಿಸುತ್ತಿರುವ ನಡುವೆಯೇ  ಪಶ್ಚಿಮ ಬಂಗಾಳಕ್ಕೆ ಮಾರ್ಚ್ 27 ರಿಂದ ಎಪ್ರಿಲ್ 29ರವರೆಗೆ ಎಂಟು ಹಂತಗಳಲ್ಲಿ ಮತದಾನ ನಡೆಯಲಿದೆ ಎಂದು  ಫೆಬ್ರವರಿ 26 ರಂದು ಚುನಾವಣಾ ಆಯೋಗ ಘೋಷಿಸಿತು. ಇನ್ನೂ ನಾಲ್ಕು ರಾಜ್ಯಗಳಿಗೆ ಇದೇ ಸಂದರ್ಭದಲ್ಲಿ ಚುನಾವಣೆ ಘೋಷಿಸಲಾಯಿತು. ಆದರೆ ಅಲ್ಲಿ ಒಂದು ಅಥವಾ ಎರಡು ಹಂತಗಳಲ್ಲಿ ಮತದಾನ ಮುಗಿಯುವಂತೆ ಮಾಡಲಾಗಿತ್ತು. 

ಪಶ್ಚಿಮ ಬಂಗಾಳಕ್ಕೆ ಹೀಗೆ ಎಂಟು ಹಂತಗಳಲ್ಲಿ ಮತದಾನ ಘೋಷಿಸುವ ಮೂಲಕ ರಾಜ್ಯದಲ್ಲಿ ಮೋದಿ ಬೇಕಾದಷ್ಟು ಚುನಾವಣಾ ಪ್ರಚಾರ ನಡೆಸಲು ಚುನಾವಣಾ ಆಯೋಗ ಅನುವು ಮಾಡಿ ಕೊಟ್ಟಿತು. ಭಾರತೀಯ ಚುನಾವಣೆಗಳೆಂದರೆ ಬಹಳ ಜೋರಾಗಿ, ಹಬ್ಬದಂತೆ ಜನಸ್ತೋಮ ಸೇರಿ ನಡೆಯುತ್ತವೆ. ಕೋವಿಡ್ ಎರಡನೇ ಅಲೆ ಬಹಳ ಅಪಾಯಕಾರಿಯಾಗಿ  ಹರಡುತ್ತಿರುವುದರಿಂದ ಕಡಿಮೆ ಹಂತಗಳಲ್ಲಿ ಮತದಾನ ಮುಗಿಸಿ ಎಂದು ನಮ್ಮ ಪಕ್ಷ ಆಯೋಗಕ್ಕೆ ಪ್ರತಿಭಟನೆ ಹಾಗು ಮನವಿ ಸಲ್ಲಿಸಿತು. ಆದರೆ ಆಯೋಗ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.  

ಪ್ರಧಾನಿ ಮೋದಿ ಮತ್ತು ದೇಶದಲ್ಲಿ ದುರಂತ ನಿರ್ವಹಣೆ ಮಾಡುವ ಖಾತೆಯ ಹೊಣೆ ಹೊತ್ತ ಅಮಿತ್ ಶಾ ಪಶ್ಚಿಮ ಬಂಗಾಳದಲ್ಲಿ ಹಲವು ಚುನಾವಣಾ ಸಮಾವೇಶಗಳನ್ನು ನಡೆಸಿದರು. ಈ ಇಬ್ಬರೂ ಬಹಳಷ್ಟು ಬಾರಿ ಮಾಸ್ಕ್ ಧರಿಸದೆಯೇ ಈ ಸಮಾವೇಶಗಳಲ್ಲಿ ಭಾಗವಹಿಸಿ ಅಲ್ಲಿ ಸೇರಿರುವ ಸಾವಿರಾರು ಜನರು ಹಾಗು ಟಿವಿ ಮೂಲಕ ನೋಡುವ ಲಕ್ಷಾಂತರ ಜನರಿಗೆ ಅತ್ಯಂತ ಕೆಟ್ಟ ಮಾದರಿ ತೋರಿಸಿಕೊಟ್ಟರು. 

ಅದೇ ಸಂದರ್ಭದಲ್ಲಿ ಉತ್ತರಾಖಂಡ ರಾಜ್ಯದ ಹರಿದ್ವಾರದಲ್ಲಿ ಗಂಗಾನದಿಯಲ್ಲಿ ಪುಣ್ಯ ಸ್ನಾನಕ್ಕಾಗಿ ಲಕ್ಷಾಂತರ ಜನರು ಸೇರುವ ಕುಂಭ ಮೇಳವೂ ನಿರ್ವಿಘ್ನವಾಗಿ ನಡೆಯಿತು. ಇಂತಹ ಧಾರ್ಮಿಕ ಸಮಾವೇಶಗಳನ್ನು ತಡೆಯುವ ಯಾವ ಪ್ರಯತ್ನವನ್ನೂ ಮೋದಿ ಸರಕಾರ ಮಾಡಲಿಲ್ಲ.  

ಏಪ್ರಿಲ್ 17 ರಂದು ಭಾರತದಲ್ಲಿ ದಿನಕ್ಕೆ 2,50,000 ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗುತ್ತಿರುವಾಗ ಮೋದಿ ಬಹಳ ಮೃದುವಾಗಿ ಹಾಗು ಅಸ್ಪಷ್ಟವಾಗಿ ಕುಂಭ ಮೇಳಕ್ಕೆ ಬಂದ ಭಕ್ತರಲ್ಲಿ ಮನೆಗೆ ಹೋಗುವ ಬಗ್ಗೆ ಪರಿಗಣಿಸುವಂತೆ ಮತ್ತು ಮೇಳವನ್ನು ಸಾಂಕೇತಿಕವಾಗಿ ನಡೆಸು ವಂತೆ ಮನವಿ ಮಾಡಿದರು. ಆದರೆ ಅದೇ ದಿನ ಪಶ್ಚಿಮ ಬಂಗಾಳದಲ್ಲಿ 50,000ಕ್ಕೂ ಹೆಚ್ಚು ಜನ ಸೇರಿದ್ದ ಚುನಾವಣಾ ಪ್ರಚಾರ ಸಮಾವೇಶನ ದಲ್ಲಿ ಮೋದಿ ಭಾಗವಹಿಸಿದರು. "ನಾನು ಎಲ್ಲಿ ನೋಡಿದರೂ ಜನರೇ ಜನರು ಕಾಣಿಸುತ್ತಿದ್ದೀರಿ " ಎಂದವರು ಸಂಭ್ರಮಿಸಿದರು.  

ಈ ಚುನಾವಣೆ ಕೊರೊನ ವೈರಸ್ ಹರಡುವ ಸೂಪರ್ ಸ್ಪ್ರೆಡರ್ ಆಗಿ ಪರಿಣಮಿಸಿತ್ತು. ಎರಡನೇ ಅಲೆ ದೇಶದ ಅರೋಗ್ಯ ವ್ಯವಸ್ಥೆಯನ್ನು ಹೈರಣಾಗಿಸುತ್ತಿರುವಾಗಲೂ ಚುನಾವಣಾ ಆಯೋಗ ನಮ್ಮ ಮನವಿಯನ್ನು ಆಲಿಸಲೇ ಇಲ್ಲ. ಈ ಘೋರ ಕರ್ತವ್ಯ ಲೋಪವನ್ನು ನೋಡಿ ಮದ್ರಾಸ್ ಹೈಕೋರ್ಟ್ ಆಯೋಗದ ವಿರುದ್ಧ ಕೊಲೆ ಪ್ರಕರಣ ದಾಖಲಿಸುವ ಛೀಮಾರಿ ಹಾಕಬೇಕಾಯಿತು. 

ಮೋದಿಯವರಿಗೆ ಭಾರತೀಯರ ಜೀವಕ್ಕಿಂತ ರಾಜಕೀಯ ಅಧಿಕಾರ ಮುಖ್ಯವಾಯಿತು. ದೇಶವನ್ನು ಭಾರೀ ದುರಂತದಿಂದ ತಪ್ಪಿಸಲು ಮೋದಿ ಹಾಗು ಅವರ ಸಂಪುಟ ದೇಶದ ಅರೋಗ್ಯ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮತ್ತು ರಾಜ್ಯ ಸರಕಾರಗಳ ಜೊತೆ ಸಮನ್ವಯ ಸಾಧಿಸಲು ಬಳಸಬೇಕಿದ್ದ ಎಪ್ರಿಲ್ ನ ಆ ಮಹತ್ವದ  ಮೊದಲ ಮೂರು ಮಹತ್ವದ ವಾರಗಳು ವ್ಯರ್ಥವಾಗಿ ಹೋದವು.  

ಇನ್ನು ಮೋದಿಯವರ ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರದಲ್ಲಿ ಅವರು ಪ್ರದರ್ಶಿಸಿದ ನಿರ್ಲಜ್ಜ ಸ್ತ್ರೀ ದ್ವೇಷ ಹಾಗು ವಿಷಕಾರಿ ಪುರುಷ ಪ್ರಧಾನ ಧೋರಣೆಗಾಗಿ ಭಾರತೀಯ ಮಹಿಳೆಯರು ಸದಾ ನೆನಪಿಟ್ಟುಕೊಳ್ಳುತ್ತಾರೆ. ಎಪ್ರಿಲ್ 1 ರಂದು ಹೌರಾ ಜಿಲ್ಲೆಯ ಉಲುಬೆರಿಯದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ನನ್ನ ಪಕ್ಷದ ನಾಯಕಿ ಹಾಗು ಪಶ್ಚಿಮ ಬಂಗಾಳದ ಜನರು ಪ್ರೀತಿಯಿಂದ ದೀದಿ ಎಂದು ಕರೆಯುವ ಮಮತಾ ಬ್ಯಾನರ್ಜಿ ಅವರನ್ನು ಮೋದಿ " ದೀದಿ ಓ ದೀದಿ " ಎಂದು ವ್ಯಂಗ್ಯವಾಗಿ ಕರೆದರು. ಅಲ್ಲಿದ್ದ ಸಾವಿರಾರು ಪುರುಷರು ಚಪ್ಪಾಳೆ ತಟ್ಟಿದರು. ಮುಂದೆ ಇತರ ಸಾರ್ವಜನಿಕ ಸಮಾವೇಶಗಳಲ್ಲೂ ಪ್ರಧಾನಿ ಮೋದಿ ಅದೇ ಧಾಟಿ ಹಾಗು ಪದಗಳನ್ನು ಮುಂದುವರಿಸಿದರು. 

ನನಗೆ ಆ ಧಾಟಿ ಹಾಗು ಪದಗಳು ಬೀದಿ ಬದಿಯಲ್ಲಿರುವ ಪುಂಡನೊಬ್ಬ ನಡೆದುಕೊಂಡು ಹೋಗುತ್ತಿರುವ ಹುಡುಗಿಯರನ್ನು ಕರೆದಂತೆಯೇ ಕೇಳಿಸಿತು. ಬಂಗಾಳಿ ಮಧ್ಯಮ ವರ್ಗಕ್ಕೆ ಇದು ಆಘಾತ ನೀಡಿತು. ತಾವು ಈವರೆಗೆ ಪಾಲಿಸಿಕೊಂಡು ಬಂದಿರುವ ಸಂವೇದನೆಗಳಿಗೆ ತೀರಾ ತದ್ವಿರುದ್ಧವಾದ ಇಂತಹ ವರ್ತನೆಗಳನ್ನು ಪ್ರೋತ್ಸಾಹಿಸುವ ವ್ಯಕ್ತಿಯ ಕೈಗೆ ರಾಜ್ಯವನ್ನು ಕೊಡುವ ಅಪಾಯದ ಅರಿವು ಅವರಿಗಾಯಿತು.  ರಾಜ್ಯದ 49.1% ಮತದಾರರಾಗಿರುವ ಮಹಿಳೆಯರಂತೂ ಮೋದಿ ಮಾತಿನ ಧಾಟಿ ನೋಡಿ ನಡುಗಿಬಿಟ್ಟರು. ಬಹುತೇಕ ಮಹಿಳೆಯರು ನಮ್ಮ ಪಕ್ಷಕ್ಕೆ ಮತ ನೀಡಿದರು. ಅಂತಹ ಸ್ತ್ರೀ ದ್ವೇಷಿ ರಾಜಕೀಯ ಗೆಲ್ಲಲು ಅವರು ಅವಕಾಶ ನೀಡಲಿಲ್ಲ.  

ಇನ್ನು ಸಂಸ್ಕೃತಿ ಕೂಡ ಬಹಳ ಮುಖ್ಯ. ಮೋದಿ ಮತ್ತು ಬಿಜೆಪಿ ಬಂಗಾಳಿ ಅಸ್ಮಿತೆಯನ್ನು ಹಿಂದೂ ಸಂಸ್ಕೃತಿ ಜೊತೆ ಸಮೀಕರಿಸಿ ಗೆಲ್ಲಬಹುದು ಎಂದುಕೊಂಡರು. ಬಂಗಾಳಿ ಸಂಸ್ಕೃತಿ ಎಂದರೆ ಏಕರೂಪದ್ದಲ್ಲ ಎಂಬುದು ಅವರಿಗೆ ಗೊತ್ತಾಗಲಿಲ್ಲ. ಅದು ಜಾತ್ಯತೀತತೆ, ಮಾಂಸಾಹಾರ ಹಾಗು ಪ್ರತಿರೋಧದ ಗಟ್ಟಿ ಪ್ರವೃತ್ತಿಗಳ ಮಿಶ್ರಣ ಎಂಬುದನ್ನು ತಿಳಿದುಕೊಳ್ಳುವಲ್ಲಿ ಅವರು ವಿಫಲರಾದರು.  

ನಮ್ಮಲ್ಲಿ ಇರುವ ಜೋಕು ಏನೆಂದರೆ ಆರಾಮ ಮನೋಸ್ಥಿತಿಯ ಮಧ್ಯಮ ವರ್ಗದ ಬಂಗಾಳಿಗಳಿಗೆ ಮಕ್ಕಳಿಗೆ ಶಿಕ್ಷಣ ಕೊಡುವುದು, ಶನಿವಾರ ಮ್ಯಾಟಿನಿ ಸಿನಿಮಾ ಷೋ ನೋಡುವುದು (ಶೋನಿ ಬಾರ್ ಇ ಮ್ಯಾಟಿನಿ) ಹಾಗು ರವಿವಾರ ಮಟನ್ ಕರಿ ಸವಿಯುವುದು ( ರೊಬಿ ಬಾರ್ ಇ ಮಂಗ್ಶೋ)  ಈ ಮೂರು ವಿಷಯ ಸಿಕ್ಕಿದರೆ ಅವರು ತೃಪ್ತರು. 

ಬೇರೇನೂ ಬೇಡ. ನಾವು ಏನು ತಿನ್ನುತ್ತೇವೆ, ಏನನ್ನು ಇಷ್ಟಪಡುತ್ತೇವೆ ಮತ್ತು ಏನನ್ನು ಧರಿಸುತ್ತೇವೆ - ಇವುಗಳನ್ನು ನಿಯಂತ್ರಿಸಲು ಬಯಸುವವರನ್ನು ಬಂಗಾಳಿಗಳು ತಿರಸ್ಕರಿಸಿಬಿಡುತ್ತಾರೆ. ಬಂಗಾಳ ಪ್ರಯೋಗ ಮೂರು ವಿಷಯಗಳನ್ನು ಸ್ಪಷ್ಟಪಡಿಸಿದೆ. ಬಿಜೆಪಿಯನ್ನು ಸೋಲಿಸುವುದು ಅಸಾಧ್ಯವೇನಲ್ಲ. ಎಲ್ಲ ಭಾರತೀಯರು ಸರ್ವಾಧಿಕಾರಿ ಹಿಂದೂ ರಾಷ್ಟ್ರದ ಐಡಿಯಾವನ್ನು ಬಯಸುವುದಿಲ್ಲ. ಮೋದಿ ಮತ್ತು ಶಾ ಈಗಾಗಲೇ ಬಿಂಬಿಸಲಾದಂತೆ ಮಹಾ ಚುನಾವಣಾ ರಣತಂತ್ರಜ್ಞರೇನಲ್ಲ. ಅವರಲ್ಲಿ ಅದೆಷ್ಟೇ ದೊಡ್ಡ ಮೊತ್ತದ ದುಡ್ಡಿದ್ದರೂ, ಅವರು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಪ್ರತಿಸ್ಪರ್ಧಿಗಳ ವಿರುದ್ಧ ಅದೆಷ್ಟೇ ದುರುಪಯೋಗಪಡಿಸಿಕೊಂಡರೂ, ಈಗಿರುವ ಆರೋಪದಂತೆ ಇತರ ಪಕ್ಷಗಳ ನಾಯಕರನ್ನು ಅದೆಷ್ಟೇ ಖರೀದಿಸಿದರೂ ತಳಮಟ್ಟದಲ್ಲಿ ಬೇರು ಬಿಟ್ಟಿರುವ, ಜಾತ್ಯತೀತ ಹಾಗು ಎಲ್ಲರನ್ನೂ ಜೊತೆಗೆ ಕರೆದೊಯ್ಯುವ ಮೌಲ್ಯಗಳಿಗೆ ಗಟ್ಟಿಯಾಗಿ ಬದ್ಧವಾಗಿರುವ ಬಲಿಷ್ಠ ಪ್ರಾದೇಶಿಕ ಪಕ್ಷ ಅವರನ್ನು ಸೋಲಿಸಬಲ್ಲದು.  

ನಮಗೆ ಹಿಂದೂ ರಾಷ್ಟ್ರಕ್ಕಿಂತ ಹೆಚ್ಚು ಬೇಕಾಗಿರುವುದು ಆಕ್ಸಿಜನ್ ಸಿಲಿಂಡರ್ ಗಳು ಎಂದು  ಮೋದಿಯವರ ಬೆಂಬಲಿಗರಿಗೆ ಗೊತ್ತಾಗಲು ಇಷ್ಟು ದೊಡ್ಡ ಸಾಂಕ್ರಾಮಿಕ ದುರಂತ ಸ್ಪೋಟಿಸಬೇಕಾಯಿತು. ನಮಗೆ ಬೇಕಾಗಿರುವುದು ಅಪಾಯಕಾರಿ ಪುರುಷತ್ವ ಪ್ರದರ್ಶನ ಅಲ್ಲ ಎಂದು ಇಡೀ ಭಾರತಕ್ಕೆ ಪಶ್ಚಿಮ ಬಂಗಾಳ ಚುನಾವಣೆಯಿಂದ ಸಂದೇಶ ರವಾನೆಯಾಗಿದೆ. ಭಾರತದಲ್ಲಿ ನಾಯಕನಿಗೆ ಬೇಕಾಗಿರುವುದು ಹೃದಯ ಮತ್ತು ಬೆನ್ನುಮೂಳೆ ಮಾತ್ರ.

ಕೃಪೆ: www.nytimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News