×
Ad

ಆಮ್ಲಜನಕಕ್ಕಾಗಿ ನೆರವು ಕೋರಿದ ಸುರೇಶ್ ರೈನಾಗೆ ಸೋನು ಸೂದ್ ಸಹಾಯಹಸ್ತ

Update: 2021-05-06 20:49 IST

ಹೊಸದಿಲ್ಲಿ: ಬಾಲಿವುಡ್ ನಟ ಸೋನು ಸೂದ್ ಅವರು  ಸಂಕಷ್ಟದಲ್ಲಿದ್ದ ಭಾರತದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಅವರ ರಕ್ಷಣೆಗೆ ಧಾವಿಸಿದ್ದಾರೆ. ಕೋವಿಡ್ -19 ನಿಂದ ಬಳಲುತ್ತಿರುವ 65ರ ವಯಸ್ಸಿನ ತನ್ನ ಚಿಕ್ಕಮ್ಮನಿಗೆ ಆಮ್ಲಜನಕಕ್ಕೆ ವ್ಯವಸ್ಥೆ ಮಾಡುವ ಮೂಲಕ ಸಹಾಯ ಮಾಡುವಂತೆ ರೈನಾ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಟ್ವಿಟರ್ ಮೂಲಕ ಒತ್ತಾಯಿಸಿದ್ದರು.

ಮೀರತ್‌ನಲ್ಲಿರುವ ನನ್ನ ಚಿಕ್ಕಮ್ಮನಿಗೆ ಆಮ್ಲಜನಕ ಸಿಲಿಂಡರ್‌ನ ತುರ್ತು ಅವಶ್ಯಕತೆ ಇದೆ. ಅವರಿಗೆ ವಯಸ್ಸು - 65 , ಶ್ವಾಸಕೋಶದ ಸೋಂಕಿನಿಂದ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ದಯವಿಟ್ಟು ಸಹಾಯ ಮಾಡಿ ಎಂದು ರೈನಾ  ಟ್ವೀಟ್ ಮಾಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರ ರೈನಾ ಅವರ ಕೋರಿಕೆಯನ್ನು ಗಮನಿಸಿದ ಸೋನು ಸೂದ್ "ಆಕ್ಸಿಜನ್ ಸಿಲಿಂಡರ್ 10 ನಿಮಿಷಗಳಲ್ಲಿ ತಲುಪುತ್ತದೆ" ಎಂದು ಉತ್ತರಿಸಿದರು.'ದಬಾಂಗ್' ಸ್ಟಾರ್  ಸೋನು, ವಿವರಗಳನ್ನು ಕಳುಹಿಸುವಂತೆ ರೈನಾರನ್ನು ಕೇಳಿಕೊಂಡರು.

ಸುರೇಶ್ ರೈನಾ ಅವರು 47ರ ವಯಸ್ಸಿನ ಸೋನು ಅವರ  "ತ್ವರಿತ" ಸಹಾಯಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಕೊರೋನವೈರಸ್ ಸಾಂಕ್ರಾಮಿಕದ ಎರಡನೇ ಅಲೆಯ ಸಂದರ್ಭದಲ್ಲೂ ಸೋನು ಸೂದ್ ಜನ ಸೇವೆಗೆ ನಿಂತಿದ್ದಾರೆ. ಪ್ರತಿದಿನ ತಮ್ಮ ಪ್ರತಿಷ್ಠಾನದ ಮೂಲಕ ನೂರಾರು ಜನರಿಗೆ ಸಹಾಯ ಮಾಡುತ್ತಿದ್ದಾರೆ. ಕೋವಿಡ್ -19 ನಿಂದ ಪೀಡಿತರಿಗೆ ಪ್ಲಾಸ್ಮಾ, ರೆಮ್‌ಡೆಸಿವಿರ್ ಚುಚ್ಚುಮದ್ದು, ಆಸ್ಪತ್ರೆ ಹಾಸಿಗೆಗಳು ಮತ್ತು ಆಮ್ಲಜನಕ ಸಿಲಿಂಡರ್‌ಗಳನ್ನು ಒದಗಿಸುವ ಮೂಲಕ ಅವರು ಸಹಾಯ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News