ಕೋವಿಡ್ ಲಸಿಕೆಗಳ ಪೇಟೆಂಟ್ ಮನ್ನಾ ಪ್ರಸ್ತಾವಕ್ಕೆ ಅಮೆರಿಕ ಬೆಂಬಲ

Update: 2021-05-06 16:11 GMT

ವಾಶಿಂಗ್ಟನ್, ಮೇ 6: ಕೋವಿಡ್-19 ಲಸಿಕೆಗಳಿಗೆ ನೀಡಲಾಗಿರುವ ಪೇಟೆಂಟ್ ರಕ್ಷಣೆಯಿಂದ ಜಾಗತಿಕ ವಿನಾಯಿತಿ ನೀಡುವ ಪ್ರಸ್ತಾವಕ್ಕೆ ಬೆಂಬಲ ನೀಡುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತ ಬುಧವಾರ ಘೋಷಿಸಿದೆ. ಇದರೊಂದಿಗೆ, ಜೀವರಕ್ಷಕ ಲಸಿಕೆಗಳನ್ನು ಪಡೆಯಲು ಹೆಣಗಾಡುತ್ತಿರುವ ಬಡ ರಾಷ್ಟ್ರಗಳ ಪಾಲಿಗೆ ಭರವಸೆಯ ಬೆಳಕೊಂದು ಮೂಡಿದಂತಾಗಿದೆ.

ಕೊರೋನ ವೈರಸ್ ಲಸಿಕೆಗಳನ್ನು ಉತ್ಪಾದಿಸಲು ಇನ್ನೂ ಹೆಚ್ಚಿನ ಔಷಧ ಉತ್ಪಾದಕರಿಗೆ ಅನುಮತಿ ನೀಡಬೇಕೆಂದು ಕೋರುವ ಅಭಿಯಾನದ ನೇತೃತ್ವವನ್ನು ಭಾರತ ವಹಿಸಿದೆ. ಈ ಸಂಬಂಧ ಭಾರತ ಮತ್ತು ದಕ್ಷಿಣ ಆಫ್ರಿಕಗಳು ವಿಶ್ವ ವ್ಯಾಪಾರ ಸಂಘಟನೆ (ಡಬ್ಲ್ಯುಟಿಒ)ಯಲ್ಲಿ ಪ್ರಸ್ತಾವಗಳನ್ನು ಸಲ್ಲಿಸಿವೆ. ಆದರೆ, ಬೃಹತ್ ಔಷಧ ತಯಾರಿಕಾ ಕಂಪೆನಿಗಳು ಈ ಪ್ರಸ್ತಾವವನ್ನು ವಿರೋಧಿಸುತ್ತಿವೆ.

ಉದ್ಯಮಗಳಿಗೆ ಬೌದ್ಧಿಕ ಆಸ್ತಿ ಹಕ್ಕುಗಳು ಮಹತ್ವದ್ದಾದರೂ, ಕೋವಿಡ್-19 ಲಸಿಕೆಗಳಿಗೆ ಈ ಹಕ್ಕುಗಳಿಂದ ವಿನಾಯಿತಿ ನೀಡುವುದನ್ನು ಅಮೆರಿಕ ಬೆಂಬಲಿಸುತ್ತದೆ. ಕೊರೋನ ವೈರಸ್ ಸಾಂಕ್ರಾಮಿಕವನ್ನು ಕೊನೆಗೊಳಿಸುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಕ್ಯಾತರೀನ್ ಟಾಯ್ ಹೇಳಿದರು.

ಇದು ಜಾಗತಿಕ ಆರೋಗ್ಯ ಬಿಕ್ಕಟ್ಟು. ಅಸಾಧಾರಣ ಸನ್ನಿವೇಶಗಳು ಅಸಾಧಾರಣ ನಿರ್ಧಾರಗಳಿಗೆ ಕಾರಣವಾಗುತ್ತವೆ ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಐತಿಹಾಸಿಕ ನಿರ್ಧಾರ: ಡಬ್ಲ್ಯುಎಚ್‌ಒ

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಮೇ 6: ಕೋವಿಡ್-19 ಲಸಿಕೆಗಳ ಪೇಟೆಂಟ್‌ಗಳಿಂದ ಜಾಗತಿಕ ವಿನಾಯಿತಿ ನೀಡುವ ಪ್ರಸ್ತಾವಕ್ಕೆ ಅಮೆರಿಕ ನೀಡಿರುವ ಬೆಂಬಲವನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಬುಧವಾರ ಶ್ಲಾಘಿಸಿದ್ದಾರೆ. ಇದು ಐತಿಹಾಸಿಕ ನಿರ್ಧಾರ ಎಂಬುದಾಗಿ ಅವರು ಬಣ್ಣಿಸಿದ್ದಾರೆ.

ಅಮೆರಿಕದ ಈ ನಿರ್ಧಾರವು ಲಸಿಕೆ ಸಮಾನತೆಯತ್ತ ಇಟ್ಟಿರುವ ಮಹತ್ವದ ಹೆಜ್ಜೆಯಾಗಿದೆ. ಈ ಅತ್ಯಂತ ಕಷ್ಟದ ಸಮಯದಲ್ಲಿ ಜಗತ್ತಿನಾದ್ಯಂತ ಇರುವ ಎಲ್ಲರ ಕಲ್ಯಾಣಕ್ಕೆ ಇದು ಆದ್ಯತೆ ನೀಡುತ್ತದೆ ಎಂಬುದಾಗಿ ಅವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News