ಇಸ್ರೇಲ್ ದಾಳಿಗೆ ಫೆಲೆಸ್ತೀನ್ ಬಾಲಕ ಬಲಿ

Update: 2021-05-06 16:31 GMT

ರಮಲ್ಲಾ (ಫೆಲೆಸ್ತೀನ್), ಮೇ 6: ಆಕ್ರಮಿತ ಪಶ್ಚಿಮ ದಂಡೆಯ ನಗರ ನಬ್ಲೂಸ್‌ನಿಂದ ದಕ್ಷಿಣದಲ್ಲಿರುವ ಗ್ರಾಮವೊಂದರ ಮೇಲೆ ಬುಧವಾರ ಇಸ್ರೇಲಿ ಸೈನಿಕರು ನಡೆಸಿದ ದಾಳಿಯಲ್ಲಿ 16 ವರ್ಷದ ತರುಣ ಮೃತಪಟ್ಟಿದ್ದಾರೆ ಎಂದು ಫೆಲೆಸ್ತೀನ್ ಅಧಿಕಾರಿಗಳು ತಿಳಿಸಿದ್ದಾರೆ.

ಒದಾಲಾ ಗ್ರಾಮದ ಪ್ರವೇಶ ದ್ವಾರದ ಸಮೀಪದಲ್ಲಿದ್ದ ಮರದ ತೋಪೊಂದರಲ್ಲಿದ್ದ ಇಸ್ರೇಲಿ ಪಡೆಗಳು ಸಯೀದ್ ಉದೀಹ್ ಎಂಬ ಬಾಲಕನ ಬೆನ್ನಿಗೆ ಎರಡು ಬಾರಿ ಗುಂಡು ಹಾರಿಸಿದವು ಎಂದು ಡಿಫೆನ್ಸ್ ಫಾರ್ ಚಿಲ್ಡ್ರನ್ ಇಂಟರ್‌ನ್ಯಾಶನಲ್ ಫೆಲೆಸ್ತೀನ್ (ಡಿಸಿಐಪಿ) ಹೇಳಿದೆ. ಗಾಯಗೊಂಡ ಬಾಲಕನ ಸಮೀಪ ಆ್ಯಂಬುಲೆನ್ಸ್ ಹೋಗುವುದನ್ನು ಇಸ್ರೇಲಿ ಪಡೆಗಳು 15 ನಿಮಿಷಗಳ ಕಾಲ ತಡೆದವು. ಬಳಿಕ ಬಾಲಕನನ್ನು ನಬ್ಲೂಸ್‌ನಲ್ಲಿರುವ ರಫೀದಿಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಅದಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ಅದು ಹೇಳಿದೆ.

ಇಸ್ರೇಲಿ ಸೈನಿಕರು ತಮ್ಮ ದಿನಚರಿಯೆಂಬಂತೆ ಫೆಲೆಸ್ತೀನ್ ಮಕ್ಕಳನ್ನು ಶಿಕ್ಷೆಯ ಭಯವಿಲ್ಲದೆ ಕಾನೂನುಬಾಹಿರವಾಗಿ ಕೊಲ್ಲುತ್ತಿದ್ದಾರೆ. ಫೆಲೆಸ್ತೀನ್ ಮಕ್ಕಳು ಯಾವುದೇ ಬೆದರಿಕೆಯೊಡ್ಡದಿದ್ದರೂ ಅವರ ವಿರುದ್ಧ ಉದ್ದೇಶಪೂರ್ವಕವಾಗಿ ಮಾರಕ ಬಲಪ್ರಯೋಗವನ್ನು ಮಾಡಲಾಗುತ್ತಿದೆ ಎಂದು ಡಿಸಿಐಪಿಯಲ್ಲಿ ಅಕೌಂಟಬಿಲಿಟಿ ಪ್ರೋಗ್ರಾಮ್ ನಿರ್ದೇಶಕರಾಗಿರುವ ಅಯೀದ್ ಅಬು ಇಕ್‌ತೈಶ್ ಹೇಳುತ್ತಾರೆ.

ಇಸ್ರೇಲಿ ಪಡೆಗಳಿಗೆ ಶಿಕ್ಷೆಯಿಂದ ವಿನಾಯಿತಿ ನೀಡಿರುವುದರಿಂದ ಅವರಿಗೆ ಯಾವುದೇ ನಿರ್ಬಂಧವೂ ಇಲ್ಲ ಎಂದು ಅವರು ಹೇಳಿದರು.

ಬುಧವಾರ ನಡೆದ ಸಂಘರ್ಷದ ವೇಳೆ, ಇಸ್ರೇಲಿ ಸೈನಿಕರು ಇನ್ನೋರ್ವ ಫೆಲೆಸ್ತೀನ್ ವ್ಯಕ್ತಿಯ ಬೆನ್ನಿಗೆ ಗುಂಡು ಹಾರಿಸಿದ್ದಾರೆ. ಆ ವ್ಯಕ್ತಿಯು ಪ್ರಸಕ್ತ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಪಡೆಯುತ್ತಿದ್ದಾರೆ ಎಂದು ಫೆಲೆಸ್ತೀನ್ ಆರೋಗ್ಯ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News