ತೇಜಸ್ವಿ ಸೂರ್ಯ ಎಫೆಕ್ಟ್:‌ ಉಗ್ರರೆಂಬ ಹಣೆಪಟ್ಟಿ, ಆಘಾತ, ಕಿರುಕುಳ ಮತ್ತು ಅಮಾನತು

Update: 2021-05-07 10:18 GMT

ಬೆಂಗಳೂರು : ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಬಿಬಿಎಂಪಿ ಬೆಡ್ ಬ್ಲಾಕಿಂಗ್ ದಂಧೆ ಕುರಿತಂತೆ ಆರೋಪ ಹೊರಿಸಿ ಬಿಬಿಎಂಪಿ ವಾರ್ ರೂಮ್‍ನಲ್ಲಿರುವ 17 ಮುಸ್ಲಿಂ ಉದ್ಯೋಗಿಗಳ ಹೆಸರುಗಳನ್ನು  ಹೇಳಿಕೊಂಡ ಕೆಲವೇ ನಿಮಿಷಗಳಲ್ಲಿ ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಆಯಿಷಾ ಶೇಖ್ ಎಂಬವರಿಗೆ ತನ್ನನ್ನು ರೋಗಿ ಎಂದು ಹೇಳಿಕೊಂಡ ವ್ಯಕ್ತಿಯಿಂದ ಕರೆ ಬಂದಿತ್ತು. ಆದರೆ ಆ ವ್ಯಕ್ತಿ ಕೇಳಿದ ಪ್ರಶ್ನೆ ಮಾತ್ರ ಭಿನ್ನವಾಗಿತ್ತು. "ನಿಮ್ಮ ಪಕ್ಕ ಕರೆ ಸ್ವೀಕರಿಸುವ ಮುಸ್ಲಿಂ ಸಿಬ್ಬಂದಿಯಿದ್ದಾರೆಯೇ? ಅವರು ಇನ್ನೂ ಎಷ್ಟು ಮಂದಿಯನ್ನು ಕೊಲ್ಲಲಿದ್ದಾರೆ?" ಎಂದು ಆತ ಕೇಳಿದ್ದ

ಬಿಬಿಎಂಪಿ ವಾರ್ ರೂಮಿಗೆ ನುಗ್ಗಿ 17 ಮಂದಿ ಅಲ್ಪಸಂಖ್ಯಾತ ಸಮುದಾಯದ ಸಿಬ್ಬಂದಿಗಳನ್ನು ಸಂಸದ ಓದಿ ಹೇಳಿದ ನಂತರ ಅವರೆಲ್ಲಾ ತಮ್ಮದಲ್ಲದ ತಪ್ಪಿಗೆ `ಉಗ್ರವಾದಿ'ಗಳೆಂಬ ಹಣೆಪಟ್ಟಿ ಹೊತ್ತುಕೊಳ್ಳುವಂತಾಗಿದೆಯಲ್ಲದೆ ಕಿರುಕುಳ ಹಾಗೂ ಬೆದರಿಕೆ ಸಂದೇಶಗಳನ್ನೂ  ಪಡೆಯುತ್ತಿದ್ದಾರೆ.

ಬಿಬಿಎಂಪಿ ದಕ್ಷಿಣ ವಲಯ ವಾರ್ ರೂಮ್‍ನಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಸೂರ್ಯ ಹೆಸರಿಸಿದ್ದ 17 ಮಂದಿಯ ಪೈಕಿ ಒಬ್ಬ ವ್ಯಕ್ತಿ ಮಾತ್ರ ಬೆಡ್ ಬ್ಲಾಕಿಂಗ್ ಕಾರ್ಯದಲ್ಲಿ ಸಂಸದರ ದಾಳಿಗಿಂತ ಆರು ದಿನಗಳ ಹಿಂದೆ ಕೆಲಸ ಮಾಡಿದ್ದರೆ ಉಳಿದವರು ಸಹಾಯವಾಣಿ ಹಾಗೂ ರೋಗಿಗಳ ವಿವರಗಳನ್ನು ಅಪ್ಲೋಡ್ ಮಾಡುವ ಕೆಲಸ ನಿರ್ವಹಿಸುತ್ತಿದ್ದರು.

 ಆದರೆ ಸಂಸದರ ಆರೋಪದ ನಂತರ ಎಲ್ಲಾ 17 ಮಂದಿಯನ್ನು ವಜಾಗೊಳಿಸಲಾಗಿದೆಯಲ್ಲದೆ ಮಂಗಳವಾರ ರಾತ್ರಿ ಅವರನ್ನು ಜಯನಗರ ಠಾಣೆಗೆ ಕರೆದೊಯ್ಯಲಾಗಿತ್ತು. "ನಮ್ಮನ್ನು ಪೊಲೀಸರು ರಾತ್ರಿ 10 ಗಂಟೆಗೆ ಕರೆದೊಯ್ದು  ಮುಂಜಾನೆ 3.30ಕ್ಕೆ ಬಿಡುಗಡೆಗೊಳಿಸಿದರು. ನಾವೇನೂ ತಪ್ಪು ಮಾಡಿಲ್ಲವೆಂದು ನಮಗೆ ಗೊತ್ತು, ಆದರೆ ನಮ್ಮ ಕುಟುಂಬದವರಿಗೆ ಏನೆಂದು ಹೇಳಲಿ, ನಮಗೆ ಬೆದರಿಕೆ ಕರೆಗಳೂ ಬರುತ್ತಿವೆ" ಎಂದು ಒಬ್ಬರು ಹೇಳಿದ್ದಾರೆ.

22 ರ ಹರೆಯದ ಬಿ.ಕಾಂ ಪದವೀಧರರಾದ ಅಮೀರ್‌ ಪಾಷಾ ಅವರನ್ನು ಎಪ್ರಿಲ್‌ 25ರಂದು ಕಾಲ್‌ ಸೆಂಟರ್‌ ಗೆ 13,500ರೂ. ವೇತನಕ್ಕೆ ನೇಮಕ ಮಾಡಲಾಗಿತ್ತು. "ನಾನು ಬಿ.ಕಾಂ ಅನ್ನು ಪೂರ್ಣಗೊಳಿಸಿದ್ದೇನೆ. ಲಾಕ್‌ ಡೌನ್‌ ಸಂದರ್ಭದಲ್ಲಿ ಸ್ಥಿರವಾದ ಉದ್ಯೋಗವನ್ನು ಹುಡುಕುವುದು ಬಿಟ್ಟು, ಇದು ಸಮಾಜಕ್ಕೆ ಸೇವೆ ಸಲ್ಲಿಸುವ ವಿಶೇಷ ಅನುಭವ ಪಡೆಯಲು ಸಹಕಾರಿಯಾಗುತ್ತದೆಂದು ನಾನು ಭಾವಿಸಿದೆ. ದಿನವೊಂದಕ್ಕೆ ನೂರರಿಂದ ಇನ್ನೂರು ಕರೆಗಳನ್ನು ಸ್ವೀಕರಿಸುತ್ತಿದ್ದೆ. ಹೆಚ್ಚಾಗಿ ಭಾವನಾತ್ಮಕ ಕರೆಗಳಾಗಿತ್ತು ಬರುತ್ತಿದ್ದುದು. ನಾನು ಆಮ್ಲಜನಮ ಮಟ್ಟದ ಕುರಿತು ಮಾಹಿತಿ ಪಡೆದು ಸಂಬಂಧಪಟ್ಟ ವೈದ್ಯರಿಗೆ ನೀಡುತ್ತಿದ್ದೆ ಅಷ್ಟೇ" ಎಂದು ಅವರು ಹೇಳುತ್ತಾರೆ.

ತಮ್ಮ ಕೃತ್ಯಕ್ಕಾಗಿ ಸಂಸದ ಹಾಗೂ ಅವರ ಜತೆ ಆಗಮಿಸಿದ್ದ ಶಾಸಕರು ಕ್ಷಮೆಯಾಚಿಸಬೇಕೆಂದು ಈ ಬಾಧಿತ ಉದ್ಯೋಗಿಗಳು ಆಗ್ರಹಿಸುತ್ತಿದ್ದಾರೆ.

ಈ 17 ಮಂದಿಯೂ ಯಾವುದೇ ತಪ್ಪು ಮಾಡಿಲ್ಲವೆಂದು ಸಿಸಿಬಿ ವರದಿ ಸಲ್ಲಿಕೆಯಾದ ನಂತರ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗುವುದು,' ಎಂದು ವಾರ್ ರೂಮಿಗೆ ಸಿಬ್ಬಂದಿ ನೇಮಕ ಮಾಡುವ ಕ್ರಿಸ್ಟಲ್ ಇನ್ಫೋಸಿಸ್ಟಮ್ಸ್ ಎಂಡ್ ಸರ್ವಿಸಸ್ ಸಂಸ್ಥೆಯ ಶಿವು ನಾಯ್ಕ್ ಹೇಳುತ್ತಾರೆ.

ಕೃಪೆ: deccanherald

Writer - ಚಿರಂಜೀವಿ ಕುಲಕರ್ಣಿ

contributor

Editor - ಚಿರಂಜೀವಿ ಕುಲಕರ್ಣಿ

contributor

Similar News