ಮೋದಿ ಸರಕಾರವು ಸರಕಾರದಂತೆ ಕೆಲಸ ಮಾಡಬೇಕೇ ಹೊರತು ವಾಟ್ಸ್ಆ್ಯಪ್ ಗ್ರೂಪ್‌ ನಂತಲ್ಲ

Update: 2021-05-07 17:19 GMT

ಹೊಸದಿಲ್ಲಿ,ಮೇ 7: ಕೋವಿಡ್-19 ಎರಡನೇ ಅಲೆಯನ್ನು ಕೇಂದ್ರದ ನರೇಂದ್ರ ಮೋದಿ ಸರಕಾರವು ನಿರ್ವಹಿಸುತ್ತಿರುವ ರೀತಿಯು ಹೆಚ್ಚಿನವರನ್ನು ಹತಾಶರನ್ನಾಗಿಸಿದೆ. ಆಕ್ಸಿಜನ್ ಬೆಡ್ಗಳು,ಐಸಿಯುಗಳು ಮತ್ತು ಇತರ ವೈದ್ಯಕೀಯ ಅಗತ್ಯಗಳಿಗಾಗಿ ಕೋವಿಡ್-19 ರೋಗಿಗಳ ಪರದಾಟ ಕಟ್ಟಾ ಬಿಜೆಪಿ ಬೆಂಬಲಿಗರೂ ಸರಕಾರದ ಬಗ್ಗೆ ಅಸಮಧಾನಗೊಳ್ಳುವಂತೆ ಮಾಡಿದೆ. ಮೋದಿ ಸರಕಾರವು ಒಂದು ಸರಕಾರದಂತೆ ಕೆಲಸ ಮಾಡಬೇಕೇ ಹೊರತು ವಾಟ್ಸ್ಆ್ಯಪ್ ಗ್ರೂಪ್ನಂತಲ್ಲ ಎಂದು ಅಂಕಣಕಾರರು ಮತ್ತು ಅಬ್ಸರ್ವರ್ ರೀಸರ್ಚ್ ಫೌಂಡೇಷನ್ ಫೆಲೋ ಆಗಿರುವ ಮಿಹಿರ ಸ್ವರೂಪ್ ಶರ್ಮಾ ಅವರು ndtv.comನಲ್ಲಿ ಬರೆದಿರುವ ಲೇಖನದಲ್ಲಿ ಹೇಳಿದ್ದಾರೆ.
  
ಪ್ರಚಾರಪ್ರಿಯ ಮೋದಿ ಸರಕಾರವು ಮಾಧ್ಯಮಗಳ ಹೆಡ್ಲೈನ್ಗಳ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದೆಯೇ ಹೊರತು ಆರ್ಥಿಕತೆಯ ಬಗ್ಗೆಯಲ್ಲ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಪತ್ರಕರ್ತ ಅರುಣ ಶೌರಿ ಹಿಂದೊಮ್ಮೆ ಹೇಳಿದ್ದರು. ಕಳೆದ ಕೆಲವು ವರ್ಷಗಳಲ್ಲಿಯ ಆರ್ಥಿಕ ಪ್ರಗತಿಯನ್ನು ನೋಡಿದರೆ ಶೌರಿಯವರ ಮಾತು ಸತ್ಯ ಎಂದು ಯಾರಿಗೂ ಅನಿಸುತ್ತದೆ ಎಂದಿರುವ ಶರ್ಮಾ,ಅಷ್ಟಕ್ಕೂ ಆರ್ಥಿಕತೆ ಎಂದರೇನು? ಅದು ಉದ್ಯೋಗಗಳು ಮತ್ತು ಜೀವನೋಪಾಯಗಳಷ್ಟೇ. ಅದು ಬದುಕು ಅಲ್ಲ. ಭೀಕರ ಸಾಂಕ್ರಾಮಿಕವು ಕಾಡುತ್ತಿರುವಾಗಲೂ ಮೋದಿ ಸರಕಾರವು ಭಾರತೀಯರ ಜೀವಗಳನ್ನು ರಕ್ಷಿಸುವ ಬದಲು ಮತ್ತೆ ಹೆಡ್ಲೈನ್ಗಳ ಬಗ್ಗೆಯೇ ಹೆಚ್ಚಿನ ಗಮನವನ್ನು ಹರಿಸುತ್ತದೆ ಎಂದು ಪ್ರಾಯಶಃ ಶೌರಿಯವರೂ ನಿರೀಕ್ಷಿಸಿರಲಿಕ್ಕಿಲ್ಲ ಎಂದಿದ್ದಾರೆ.
  
ಇತ್ತೀಚಿಗಷ್ಟೇ ಕೇಂದ್ರ ಸರಕಾರದ ಕುರಿತು ದೃಷ್ಟಿಕೋನಗಳನ್ನು ನಿಭಾಯಿಸಲು ಮತ್ತು ಸರಕಾರವು ಸಂವೇದನಾಶೀಲವಾಗಿದೆ, ಚುರುಕಾಗಿದೆ,ಪ್ರತಿಕಿಯಾತ್ಮಕವಾಗಿದೆ ಮತ್ತು ಕಠಿಣ ಪರಿಶ್ರಮಿಯಾಗಿದೆ ಎಂದು ಕಾಣುವಂತೆ ಧನಾತ್ಮಕ ವರ್ಚಸ್ಸನ್ನು ಸೃಷ್ಟಿಸಲು ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಕಾರ್ಯಾಗಾರದಲ್ಲಿ ಕೇಂದ್ರ ಸರಕಾರದ 300 ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು. 

ಅಧಿಕಾರಿಗಳಿಗೆ ಕೋವಿಡ್ ವಿರುದ್ಧ ಹೋರಾಟದ ಬಗ್ಗೆಯಲ್ಲ,ಮಾಧ್ಯಮಗಳಲ್ಲಿ ಸರಕಾರದ ಕುರಿತು ಧನಾತ್ಮಕ ವರದಿಗಳಾಗುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿತ್ತು. ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರು ಈ ಚರ್ಚೆಗಳ ನೇತೃತ್ವ ವಹಿಸಿದ್ದರು. ಇದು ಮಾತ್ರವಲ್ಲ,ಕೋವಿಡ್ ಎರಡನೇ ಅಲೆಯನ್ನು ನಿರ್ವಹಿಸುವಲ್ಲಿ ಸರಕಾರದ ಅದಕ್ಷತೆಯ ಬಗ್ಗೆ ವಿದೇಶಿ ಮಾಧ್ಯಮಗಳಲ್ಲಿಯ ‘ಏಕಪಕ್ಷೀಯ’ ವರದಿಗಳನ್ನು ಎದುರಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವರ ವಿದೇಶಗಳಲ್ಲಿಯ ಭಾರತೀಯ ರಾಯಭಾರಿಗಳಿಗೆ ಸೂಚಿಸಿದ್ದಾರೆ.

ತನ್ನ ಪರವಾದ ವರದಿಗಳು ಬರುವಂತೆ ಮಾಡಲು ತನ್ನ ಸ್ವಲ್ಪ ಸಮಯ ಮತ್ತು ಸಂಪನ್ಮೂಲಗಳನ್ನು ವಿನಿಯೋಜಿಸುವ ಹಕ್ಕು ಯಾವುದೇ ಸರಕಾರಕ್ಕಿದೆ. ಆದರೆ ಕೋವಿಡ್ ಪ್ರಕರಣಗಳು,ಸಾವುಗಳು ವ್ಯಾಪಕವಾಗಿರುವ ಈ ಸಮಯದಲ್ಲಿಯೂ ಸರಕಾರವು ತನ್ನ ನಿರ್ವಹಣೆಯ ಪರವಾದ ವರದಿಗಳ ಬಗ್ಗೆಯೇ ಹೆಚ್ಚಿನ ಗಮನ ಹರಿಸುತ್ತಿರುವುದಕ್ಕೆ ಯಾವುದೇ ಸಮರ್ಥನೆಯಿಲ್ಲ.

ಧನಾತ್ಮಕ ಕಾರ್ಯಗಳನ್ನು ಮಾಡಿದರೆ ಮಾಧ್ಯಮಗಳಲ್ಲಿ ಧನಾತ್ಮಕ ವರದಿಗಳು ಬರುತ್ತವೆ. ಆಮ್ಲಜನಕ,ಹಾಸಿಗೆಗಳು,ತಪ್ಪುಮಾಹಿತಿಗಳಂತಹ ನಿಜವಾದ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಸರಕಾರವು ತನ್ನ ಬಗ್ಗೆ ಧನಾತ್ಮಕ ವರದಿಗಳನ್ನು ನಿರೀಕ್ಷಿಸಬಹುದು. ಆದರೆ ಒಳ್ಳೆಯ ಕೆಲಸಗಳನ್ನು ಮಾಡುವ ಮೂಲಕ ಹೆಚ್ಚೆಚ್ಚು ಧನಾತ್ಮಕ ವರದಿಗಳು ಪ್ರಕಟವಾಗುವಂತೆ ಮಾಡಬಹುದು ಎನ್ನುವುದು ಈ ಮೋದಿ ಸರಕಾರಕ್ಕೆ ಹೊಳೆದಿರುವಂತೆ ಕಾಣುತ್ತಿಲ್ಲ.
 
ಸರಕಾರವು ಕೋವಿಡ್ ನ ಎರಡನೇ ಅಲೆ ಅಪ್ಪಳಿಸಲಿದೆ ಎನ್ನುವುದನ್ನು ಕಳೆದ ಕೆಲವು ತಿಂಗಳುಗಳಲ್ಲಿ ನಿರಾಕರಿಸುತ್ತಲೇ ಬಂದಿತ್ತು. ಅಲೆಯು ಗೋಚರವಾದಾಗಲೂ ಅದನ್ನು ಕಡೆಗಣಿಸಿತ್ತು. ಅಲೆಯು ತೀವ್ರಗೊಂಡಾಗ ಹೊಣೆಗಾರಿಕೆಯನ್ನು ರಾಜ್ಯ ಸರಕಾರಗಳಿಗೆ ದಾಟಿಸಿದೆ ಮತ್ತು ಇದೀಗ ತನ್ನನ್ನು ಟೀಕಿಸುವ ಸಾಮಾಜಿಕ ಮಾಧ್ಯಮಗಳಲ್ಲಿಯ ಸಂದೇಶಗಳನ್ನು ನಿಯಂತ್ರಿಸಲು ಮುಂದಾಗಿದೆ. ಇದೇನೂ ಅಚ್ಚರಿಯದಲ್ಲ,ಈ ಸರಕಾರವು ಕಳೆದ ಏಳು ವರ್ಷಗಳಿಂದಲೂ ಯಾವುದೇ ಪ್ರಮುಖ ಸಮಸ್ಯೆಯನ್ನು ಇದೇ ರೀತಿಯಲ್ಲಿ ನಿರ್ವಹಿಸುತ್ತಿದೆ. ಮಾರಣಾಂತಿಕ ವೈರಸ್ ಏಕೆ ಭಿನ್ನವಾಗಿರಬೇಕು?

ಎಲ್ಲ ಮಾರ್ಗಗಳೂ ಮುಚ್ಚಿದಾಗ ಸರಕಾರವು ‘ಇದು ಎಷ್ಟೆಂದರೂ ಸಾಂಕ್ರಾಮಿಕ ರೋಗ. ಮೋದಿ ಏನು ಮಾಡಲು ಸಾಧ್ಯ? ಧನಾತ್ಮಕ ಚಿಂತನೆಯನ್ನು ಮಾಡಿ. ನಿಮ್ಮ ಋಣಾತ್ಮಕತೆಯು ಜನರನ್ನು ಕೊಲ್ಲುತ್ತಿದೆ. ಈ ಸಲ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದು ಪ್ರಲಾಪಿಸುತ್ತಿದೆ. ಸರಕಾರದ ಈ ಪ್ರತಿಕ್ರಿಯೆ ಸಾಮಾಜಿಕ ಮಾಧ್ಯಮಗಳಿಗೆ ಸೂಕ್ತವಾಗಿರಬಹುದು,ಆದರೆ ಸರಕಾರವು ಹೀಗೆ ಬೆನ್ನು ತಿರುಗಿಸಲು ಸಾಧ್ಯವಿಲ್ಲ. ಅದು ಒಕ್ಕೂಟ ಸರಕಾರವಾಗಿದೆ,ವಾಟ್ಸ್ಆ್ಯಪ್ ಗ್ರೂಪ್ ಅಲ್ಲ. ಅದು ಸರಕಾರದಂತೆಯೇ ಕಾರ್ಯ ನಿರ್ವಹಿಸಬೇಕೇ ಹೊರತು ವಾಟ್ಸ್ಆ್ಯಪ್ ಗ್ರೂಪ್ನಂತಲ್ಲ ಎಂದು ಶರ್ಮಾ ಲೇಖನದಲ್ಲಿ ಕುಟುಕಿದ್ದಾರೆ.

ಕೃಪೆ: Ndtv.com

Writer - ಮಿಹಿರ ಸ್ವರೂಪ್ ಶರ್ಮಾ

contributor

Editor - ಮಿಹಿರ ಸ್ವರೂಪ್ ಶರ್ಮಾ

contributor

Similar News