ಬಿಜೆಪಿ ಸೋಲಿನ ಕುರಿತು ಪೋಸ್ಟ್ ಮಾಡಿದ್ದಕ್ಕೆ ಕೇರಳದ ಪ್ರಸಿದ್ಧ ಕವಿಯ ಖಾತೆಯನ್ನು ಬ್ಲಾಕ್ ಮಾಡಿದ ಫೇಸ್ ಬುಕ್
ತಿರುವನಂತಪುರಂ: ರಾಜ್ಯದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಸೋಲಿನ ವಿಡಿಯೋವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಕೇರಳ ಮೂಲದ ಪ್ರಸಿದ್ಧ ಕವಿ ಸಸಚ್ಚಿದಾನಂದನ್ ರನ್ನು 24 ಗಂಟೆಗಳ ಕಾಲ ಫೇಸ್‌ಬುಕ್‌ನಿಂದ ನಿರ್ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.
ವಾಟ್ಸಾಪ್ ಫಾರ್ವಾಡ್ ಆಗಿ ಬಂದ ವ್ಯಂಗ್ಯ ವೀಡಿಯೋವೊಂದನ್ನು ಅವರು ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಅವರ ಖಾತೆಯನ್ನು ನಿರ್ಬಂಧಿಸಲಾಗಿದೆ. ಈ ಘಟನೆಯ ಹಿಂದೆ ನಮ್ಮ ಯಾವುದೇ ಕೈವಾಡವಿಲ್ಲ ಎಂದು ಕೇರಳ ಬಿಜೆಪಿ ಹೇಳಿಕೆ ನೀಡಿದೆ.
"ಕೇರಳದಲ್ಲಿ ಬಿಜೆಪಿ ಸೋಲಿನ ಕುರಿತಾದಂತೆ ನಾನು ವ್ಯಂಗ್ಯ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದ ಕಾರಣ ನನ್ನನ್ನು ನಿರ್ಬಂಧಿಸಲಾಗಿತ್ತು. ಸೋಲಿನ ಬಳಿಕ ತನ್ನ ಸೈನಿಕರನ್ನುದ್ದೇಶಿಸಿ ಮಾತನಾಡುತ್ತಿರುವ ಹಿಟ್ಲರ್ ನ ಕ್ಲಿಪ್ ಗೆ ಮಲಯಾಳಂ ಆಡಿಯೋ ಸೇರಿಸಿ ಕೇರಳದ ಹಿರಿಯ ಬಿಜೆಪಿ ನಾಯಕರನ್ನುದ್ದೇಶಿಸಿ ಅಮಿತ್ ಶಾ ಮಾತನಾಡುತ್ತಿರುವಂತೆ ವ್ಯಂಗ್ಯ ಮಾಡಲಾಗಿತ್ತು. ಈ ವೀಡಿಯೋ ನಿಂದನಾತ್ಮಕವಾಗಿರಲಿಲ್ಲ. ಕೇವಲ ವ್ಯಂಗ್ಯವಾಗಿತ್ತು" ಎಂದು ಸಚ್ಚಿದಾನಂದನ್ ಹೇಳಿಕೆ ನೀಡಿದ್ದಾರೆ.
"ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡಬೇಕೆಂದು ನಾನು ಹಾಕಿದ್ದ ಪೋಸ್ಟ್ ಗೆ ಎಪ್ರಿಲ್ ೨೧ರಂದು ನನಗೆ ಫೇಸ್ ಬುಕ್ ನಿಂದ ಎಚ್ಚರಿಕೆ ಬಂದಿತ್ತು. ಭಾರತವು ಫೇಸ್ಬುಕ್ ನ ಅತಿದೊಡಟ್ಡ ಗ್ರಾಹಕನಾಗಿದೆ. ಬಿಜೆಪಿಗೆ ಅತಿದೊಡ್ಡ ಐಟಿ ಸೆಲ್ ಇದೆ. ಅವರು ನಮ್ಮನ್ನು ಗಮನಿಸುತ್ತಿರಬೇಕು ಮತ್ತು ಕೆಲವರು ಅವರ ಮೇಲೆ ಪ್ರಭಾವ ಬೀರುತ್ತಿರಬೇಕು. ಇದು ಖಂಡಿತಾ ವಾಕ್ ಸ್ವಾತಂತ್ರ್ಯದ ನಿಗ್ರಹವಾಗಿದೆ ಮತ್ತು ಇದು ತೀವ್ರ ದಬ್ಬಾಳಿಕೆಯಾಗಿದೆ ಎಂದು ಅವರು ಹೇಳಿದ್ದಾಗಿ Ndtv.com ವರದಿ ಮಾಡಿದೆ.