ನಕಲಿ ರೆಮ್ಡೆಸಿವಿರ್‌ ಔಷಧಿ ಜಾಲ: ವಿಶ್ವ ಹಿಂದೂ ಪರಿಷತ್‌ ಅಧ್ಯಕ್ಷನ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲು

Update: 2021-05-10 12:28 GMT

ಜಬಲ್ಪುರ್: ನಕಲಿ ರೆಮ್ಡೆಸಿವಿರ್ ಔಷಧಿ ಜಾಲವೊಂದಕ್ಕೆ ಸಂಬಂಧಿಸಿದಂತೆ ಮಧ್ಯ ಪ್ರದೇಶದ ಜಬಲ್ಪುರ್ ಪೊಲೀಸರು  ವಿಶ್ವ ಹಿಂದು ಪರಿಷದ್‍ನ ಜಬಲ್ಪುರ್ ವಿಭಾಗದ ಅಧ್ಯಕ್ಷ ಸರಬ್ಜೀತ್ ಸಿಂಗ್ ಮೊಕ್ಕ ಎಂಬಾತನ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಔಷಧಿ ಜಾಲದ ಮುಖಾಂತರ ಒಂದು ಲಕ್ಷಕ್ಕೂ ಅಧಿಕ ಮಂದಿಗೆ ನಕಲಿ ರೆಮ್ಡೆಸಿವಿರ್ ಚುಚ್ಚುಮದ್ದುಗಳನ್ನು ಕೋವಿಡ್ ಸೋಂಕಿತರನ್ನು ಉಳಿಸಲು ಹೋರಾಡುತ್ತಿದ್ದ ಅವರ ಹತಾಶ ಕುಟುಂಬ ಸದಸ್ಯರಿಗೆ ಮಾರಾಟ ಮಾಡಲಾಗಿತ್ತೆಂದು ತಿಳಿದು ಬಂದಿದೆ.

ಇತರ ಇಬ್ಬರು ಆರೋಪಿಗಳನ್ನು ದೇವೇಂದರ್ ಚೌರಾಸಿಯಾ ಮತ್ತು ಸ್ವಪನ್ ಜೈನ್ ಎಂದು ಗುರುತಿಸಲಾಗಿದೆ. ಪ್ರಮುಖ ಆರೋಪಿ ಸರಬ್ಜೀತ್  ಸಿಟಿ ಹಾಸ್ಪಿಟಲ್ ಮಾಲಕನಾಗಿದ್ದರೆ ದೇವೇಂದ್ರ ಚೌರಾಸಿಯಾ ಆತನ ಮ್ಯಾನೇಜರ್ ಆಗಿದ್ದ. ಇನ್ನೊಬ್ಬ ಆರೋಪಿ ಸ್ವಪನ್ ಜೈನ್ ಫಾರ್ಮಾ ಕಂಪೆನಿಗಳ ಜತೆ ವ್ಯವಹರಿಸುವ ಕೆಲಸ ಮಾಡಿಕೊಂಡಿದ್ದ. ಸ್ವಪನ್ ಜೈನ್‍ ನನ್ನು ಸೂರತ್ ಪೊಲೀಸರು ಈಗಾಗಲೇ ಬಂಧಿಸಿದ್ದು ಸರಬ್ಜೀತ್ ಹಾಗೂ ಇನ್ನೊಬ್ಬಾತ ತಲೆಮರೆಸಿಕೊಂಡಿದ್ದಾರೆ.

ಮಧ್ಯ ಪ್ರದೇಶ ಸರಕಾರದ ಉನ್ನತ ಸಚಿವರೊಬ್ಬರ ಪುತ್ರನ ಜತೆ ಸರಬ್ಜೀತ್‍ನಿಗೆ ಸಂಪರ್ಕವಿತ್ತೆನ್ನಲಾಗಿದ್ದು ಆರೋಪಿಗಳು ಇಂದೋರ್ ನಿಂದ 500 ನಕಲಿ ರೆಮ್ಡೆಸೆವಿರ್ ಚುಚ್ಚುಮದ್ದು ಪಡೆದು ಅವುಗಳನ್ನು ಆಸ್ಪತ್ರೆಯಲ್ಲಿನ ರೋಗಿಗಳಿಗೆ ರೂ 35,000ದಿಂದ ರೂ 40,000ಕ್ಕೆ ಮಾರಾಟ ಮಾಡಿದ್ದರೆಂದು ಹೇಳಲಾಗಿದೆ.

ಉಪ್ಪು ಹಾಗೂ ಗ್ಲುಕೋಸ್ ಬಳಸಿ ಒಂದು ಲಕ್ಷ ನಕಲಿ ರೆಮ್ಡೆಸಿವಿರ್ ತಯಾರಿಸಿ ಅವುಗಳನ್ನು ಮಾರಾಟ ಮಾಡಿದ  ಜಾಲದ ಕುರಿತಂತೆ ಸಿಬಿಐ ತನಿಖೆಗೆ ಕಾಂಗ್ರೆಸ್ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News