ಕೋವಿಡ್‌ ಭೀಕರತೆ: ಗಂಗಾನದಿಯ ತೀರದಲ್ಲಿ ತೇಲಿಕೊಂಡು ಬಂದ 40ಕ್ಕೂ ಹೆಚ್ಚು ಹೆಣಗಳ ಸಾಲು

Update: 2021-05-10 14:14 GMT

ಪಾಟ್ನಾ: ಭಾರತದಲ್ಲಿನ ಕೋವಿಡ್‌ ಬಿಕ್ಕಟ್ಟಿನ ಪರಿಣಾಮವನ್ನು ತೋರ್ಪಡಿಸುವಂತೆ ಕೆಲ ಭೀಕರ ದೃಶ್ಯಗಳು ಇಂದು ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿವೆ. ಬಿಹಾರದ ಬಕ್ಸಾರ್‌ ನಲ್ಲಿನ ಗಂಗಾನದಿಯ ತೀರದಲ್ಲಿ ಕೊಳೆತ ಮತ್ತು ಉಬ್ಬಿದ ದೇಹಗಳು ತೇಲಿಕೊಂಡು ಬಂದಿದ್ದು, ಈ ಆಘಾತಕಾರಿ ದೃಶ್ಯವನ್ನು ಕಂಡ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆಂದು ndtv.com ವರದಿ ಮಾಡಿದೆ. ಉತ್ತರಪ್ರದೇಶ ಮತ್ತು ಬಿಹಾರ ಗಡಿ ಪ್ರದೇಶದಲ್ಲಿ ಘಟನೆ ನಡೆದಿದೆ.

ಕೋವಿಡ್‌ ಸಂಬಂಧಿ ರೋಗಗಳಿಂದ ಮೃತಪಟ್ಟವರನ್ನು ಹೂಳಲು ಅಥವಾ ಅಂತ್ಯಸಂಸ್ಕಾರ ಮಾಡಲು ಜಾಗ ಸಿಗದೇ ನದಿಗಳಲ್ಲಿ ದೇಹಗಳನ್ನು ತೇಲಿ ಬಿಡಲಾಗಿದೆ ಎಂಬ ಆರೋಪಗಳು ವ್ಯಕ್ತವಾಗಿದೆ. ಈ ಕುರಿತಾದಂತೆ ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳು ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿವೆ.

ಸುಮಾರು 40ರಿಂದ 45 ಮೃತದೇಹಗಳು ತೇಲಿಕೊಂಡು ಬಂದಿವೆ ಎಂದು ಚೌಸಾ ಜಿಲ್ಲೆಯ ಅಧಿಕಾರಿ ಅಶೋಕ್‌ ಕುಮಾರ್‌ ತಿಳಿಸಿದ್ದಾರೆ. "ಶವಗಳನ್ನು ನದಿಗೆ ಎಸೆದಂತೆ ಕಾಣುತ್ತದೆ ಮತ್ತು 100ಕ್ಕೂ ಹೆಚ್ಚು ಮೃತದೇಹಗಳು ಬರುವ ಸಾಧ್ಯತೆಗಳಿವೆ " ಎಂದು ಅವರು ಹೇಳಿಕೆ ನೀಡಿದ್ದಾರೆ. ನಾವು ಶವಗಳನ್ನು ವಿಲೇವಾರಿ ಮಾಡುತ್ತಿದ್ದೇವೆ. ಇದು ಎಲ್ಲಿಂದ ಬಂದಿದೆ ಎಂದು ಬಾವು ತನಿಖೆ ಮಾಡಬೇಕಾಗಿದೆ. ಉತ್ತರಪ್ರದೇಶದ ಅಲಹಾಬಾದ್‌ ಅಥವಾ ವಾರಣಾಸಿಯಿಂದ ಬಂದಿರುವ ಸಾಧ್ಯತೆಗಳಿವೆ ಎಂದು ಮತ್ತೋರ್ವ ಅಧಿಕಾರಿ ಕೆ.ಕೆ ಉಪಾಧ್ಯಾಯ ತಿಳಿಸಿದ್ದಾರೆ.

ಮೃತದೇಹಗಳ ಬಳಿ ನಾಯಿಗಳು ಅಲೆದಾಡುತ್ತಿರುವುದು ಕಂಡು ಬಂದಿದ್ದು, ಸೋಂಕು ಉದ್ಭವವಾಗುವ ಭೀತಿಯಲ್ಲಿ ಸ್ಥಳೀಯ ನಿವಾಸಿಗಳಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News